7

ಹೊಗೆ ತಪಾಸಣೆ ಕೇಂದ್ರಗಳಲ್ಲಿ ಅಕ್ರಮ: ನಿರ್ದಾಕ್ಷಿಣ್ಯ ಕ್ರಮ ಅಗತ್ಯ

Published:
Updated:
ಹೊಗೆ ತಪಾಸಣೆ ಕೇಂದ್ರಗಳಲ್ಲಿ ಅಕ್ರಮ: ನಿರ್ದಾಕ್ಷಿಣ್ಯ ಕ್ರಮ ಅಗತ್ಯ

ಮಾಲಿನ್ಯದ ಹಾವಳಿ ನಮ್ಮ ಆರೋಗ್ಯವನ್ನು ಹಾಳು ಮಾಡುತ್ತಿದೆ. ಬದುಕಿಗೆ ಕಂಟಕವಾಗಿದೆ. ಹೀಗಾಗಿಯೇ ವಾಯು ಮಾಲಿನ್ಯ, ಜಲ ಮಾಲಿನ್ಯ ನಿಯಂತ್ರಿಸುವ ಕ್ರಮಗಳು ಈಗ ಆದ್ಯತೆಯ ವಿಷಯಗಳಾಗಿವೆ. ಚೀನಾದ ಬೀಜಿಂಗ್‌ನಲ್ಲಿ ಮತ್ತು ನಮ್ಮದೇ ದೇಶದ ದೆಹಲಿಯಲ್ಲಿ ವಾಯು ಮಾಲಿನ್ಯದಿಂದ ಆಗಿರುವ ಮತ್ತು ಆಗುತ್ತಿರುವ ದುಷ್ಪರಿಣಾಮಗಳು ನಮ್ಮ ಕಣ್ಣ ಮುಂದೆಯೇ ಇವೆ. ವಾಯು ಮಾಲಿನ್ಯಕ್ಕೆ ವಾಹನಗಳ ಕೊಡುಗೆಯೇ ದೊಡ್ಡದು. ಹೀಗಾಗಿ, ವಾಹನಗಳು ಹೊರಹೊಮ್ಮಿಸುವ ಹೊಗೆಯ ಮೇಲೆ ನಿಗಾ ಮತ್ತು ನಿಯಂತ್ರಣ ಕ್ರಮಗಳನ್ನು ಕಾನೂನಿನಲ್ಲಿಯೇ ಸೇರ್ಪಡೆ ಮಾಡಲಾಗಿದೆ. ವಾಹನಗಳಿಗೆ ವಾಯು ಮಾಲಿನ್ಯ ನಿಯಂತ್ರಣ ಪ್ರಮಾಣ ಪತ್ರಗಳನ್ನು ಕಡ್ಡಾಯಗೊಳಿಸಲಾಗಿದೆ. ಹೊಗೆ ತಪಾಸಣೆ ಮಾಡಿ ಪ್ರಮಾಣ ಪತ್ರ ನೀಡುವ ಹೊಣೆಯನ್ನು ಖಾಸಗಿ ಕೇಂದ್ರಗಳಿಗೂ ಕೊಡಲಾಗಿದೆ. ಆದರೆ, ಬೇಲಿಯೇ ಎದ್ದು ಹೊಲ ಮೇಯ್ದಂತೆ ಎನ್ನುವ ಗಾದೆಯಂತೆ ಅನೇಕ ಖಾಸಗಿ ಕೇಂದ್ರಗಳು ಅಕ್ರಮದಲ್ಲಿ ತೊಡಗಿವೆ. ವಾಹನಗಳು ಹೊರ ಬಿಡುವ ಹೊಗೆಯನ್ನು ಆಧುನಿಕ ಸಾಧನಗಳ ಸಹಾಯದಿಂದ ಅಳೆದು ಪ್ರಮಾಣಪತ್ರ ನೀಡುವ ಕೇಂದ್ರಗಳ ಪೈಕಿ 77 ಕಡೆ ಅವ್ಯವಹಾರ ನಡೆದಿದೆ ಎಂಬುದನ್ನು ಸಾರಿಗೆ ಅಧಿಕಾರಿಗಳು ಕೊನೆಗೂ ಪತ್ತೆ ಹಚ್ಚಿದ್ದಾರೆ.

ಈ ಕೇಂದ್ರಗಳು ಜುಜುಬಿ ಹಣದಾಸೆಗಾಗಿ ಮಾಡುತ್ತಿರುವ ಅನಾಹುತ ಅಷ್ಟಿಷ್ಟಲ್ಲ. ಇವು ತಪಾಸಣಾ ನಿಯಮಾವಳಿಗಳನ್ನು ಗಾಳಿಗೆ ತೂರಿವೆ. ನಿಗದಿಗಿಂತ ಹೆಚ್ಚು ಹೊಗೆ ಸೂಸುವ ವಾಹನಗಳಿಗೂ ‘ಹೊಗೆ ಪ್ರಮಾಣ ನಿಗದಿತ ಮಿತಿಯ ಒಳಗೆ ಇದೆ’ ಎಂಬ ಪ್ರಮಾಣಪತ್ರ ವಿತರಿಸಿವೆ. ಖಾಸಗಿ ಕೇಂದ್ರಗಳಷ್ಟೇ ಅಲ್ಲದೆ ಸರ್ಕಾರಿ ಒಡೆತನದಲ್ಲಿರುವ ರಾಜ್ಯ ರಸ್ತೆ ಸಾರಿಗೆ ನಿಗಮಗಳಿಗೆ ಸೇರಿದ ಹೊಗೆ ತಪಾಸಣಾ ಕೇಂದ್ರಗಳೂ ಅಕ್ರಮ ಮಾರ್ಗ ತುಳಿದಿವೆ ಎನ್ನುವುದಂತೂ ಆಘಾತಕಾರಿ ಮತ್ತು ಖಂಡನೀಯ. ಮಿತಿಗಿಂತ ಹೆಚ್ಚು ಹೊಗೆ ಬಿಡುವ ಬಸ್‌ಗಳಿಗೆ ಇವು ಸುಳ್ಳು ಪ್ರಮಾಣಪತ್ರ ವಿತರಿಸಿ ಓಡಿಸುತ್ತಿದ್ದವು ಎನ್ನುವುದು ಸಾರಿಗೆ ಇಲಾಖೆ ಅಧಿಕಾರಿಗಳ ತಪಾಸಣೆಯಿಂದ ಈಗ ದೃಢಪಟ್ಟಿದೆ. ವಿಪರೀತ ಹೊಗೆ ಬಿಡುವ ಸರ್ಕಾರಿ ಬಸ್‌ಗಳು ರಸ್ತೆ ಮೇಲೆ ಸಂಚರಿಸುತ್ತಿರುವುದರ ರಹಸ್ಯ ಏನು ಎನ್ನುವುದು ಇದರಿಂದ ಜಗಜ್ಜಾಹೀರಾಗಿದೆ. ಸಾರಿಗೆ ಸಂಸ್ಥೆಯೇ ಇರಲಿ ಅಥವಾ ಖಾಸಗಿಯವರೇ ಇರಲಿ... ತಪ್ಪು ಮಾಡಿದ ಹೊಗೆ ತಪಾಸಣಾ ಕೇಂದ್ರಗಳು ಯಾರಿಗೇ ಸೇರಿದ್ದರೂ ಅವನ್ನು ಸುಮ್ಮನೆ ಬಿಡಬಾರದು. ಬರೀ ₹ 10 ಸಾವಿರ ದಂಡ ಹಾಕಿದರೆ ಸಾಲದು. ವಾಯು ಮಾಲಿನ್ಯ ಹೆಚ್ಚಳಕ್ಕೆ ಕಾರಣವಾಗಿದ್ದಕ್ಕಾಗಿ, ಇವುಗಳನ್ನು ನಿರ್ವಹಣೆ ಮಾಡುವವರ ಮೇಲೂ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಇವು ಮಾಡಿದ್ದು ವಂಚನೆಗಿಂತಲೂ ಘೋರವಾದ ಅಪರಾಧ. ಏಕೆಂದರೆ ಮಾಲಿನ್ಯ ಹೆಚ್ಚಾದರೆ ಅದರ ಪರಿಣಾಮ ಎಲ್ಲರ ಮೇಲೂ ಆಗುತ್ತದೆ.

ಹೊಗೆ ತಪಾಸಣಾ ಕೇಂದ್ರಗಳಿಗೆ ಪರವಾನಗಿ ಕೊಡುವುದು ಸಾರಿಗೆ ಇಲಾಖೆ. ಈ ಕೇಂದ್ರಗಳು ಸರಿಯಾಗಿ ಕೆಲಸ ಮಾಡುತ್ತಿವೆಯೋ ಇಲ್ಲವೋ ಎಂದು ಅದು ಕಾಲಕಾಲಕ್ಕೆ ತಪಾಸಣೆ ಮಾಡುವುದರ ಜತೆಗೆ ದಿಢೀರ್‌ ತಪಾಸಣೆಯನ್ನೂ ಕೈಗೊಳ್ಳಬೇಕು. ಮಾಲಿನ್ಯ ನಿಯಂತ್ರಣ ಮಂಡಳಿಗೂ ಈ ವಿಷಯದಲ್ಲಿ ಕೆಲವು ಅಧಿಕಾರ ಕೊಡಬೇಕು. ಅಕ್ಟೋಬರ್‌ ಅಂತ್ಯದವರೆಗೆ ರಾಜ್ಯದಲ್ಲಿ 1.87 ಕೋಟಿಗೂ ಹೆಚ್ಚು ವಾಹನಗಳಿದ್ದವು. ಇವಕ್ಕೆ ತಕ್ಕಂತೆ ಹೊಗೆ ತಪಾಸಣೆ ಕೇಂದ್ರಗಳಿಲ್ಲ. ಆ ಕೊರತೆ ಸರಿಪಡಿಸಬೇಕು. ರಸ್ತೆ ಮೇಲೆ ಸಂಚರಿಸುವ ವಾಹನಗಳಲ್ಲಿ ಹೊಗೆ ತಪಾಸಣೆ ಪ್ರಮಾಣಪತ್ರ ಇದೆಯೇ ಎಂಬುದನ್ನು ಪರಿಶೀಲಿಸುವ ವ್ಯವಸ್ಥೆ ಇನ್ನಷ್ಟು ಬಿಗಿಯಾಗಬೇಕು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry