ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಾರ್ಮಿಕರ ಒಗ್ಗಟ್ಟು ಮುರಿಯಲು ಯತ್ನ’

Last Updated 18 ಡಿಸೆಂಬರ್ 2017, 4:28 IST
ಅಕ್ಷರ ಗಾತ್ರ

ಮಂಗಳೂರು: ದೇಶದಲ್ಲಿ ಈಗ ಜಾರಿಯಲ್ಲಿರುವ ಪ್ರಬಲ ಕಾರ್ಮಿಕ ಕಾಯ್ದೆಗಳ ಬದಲಿಗೆ ‘ಕಾರ್ಮಿಕ ಕಲ್ಯಾಣ ಕಾಯ್ದೆ’ ಎಂಬ ಹೊಸ ಕಾನೂನು ಜಾರಿಗೊಳಿಸುವ ಮೂಲಕ ಕಾರ್ಮಿಕರ ಒಗ್ಗಟ್ಟನ್ನು ಮುರಿಯಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಸಿಪಿಎಂ ರಾಜ್ಯ ಮಂಡಳಿ ಕಾರ್ಯದರ್ಶಿ ಜಿ.ವಿ.ಶ್ರೀರಾಮ ರೆಡ್ಡಿ ಆರೋಪಿಸಿದರು.

ನಗರದ ಬೋಳಾರದ ಎ.ಕೆ.ಜಿ. ಭವನದಲ್ಲಿ ಭಾನುವಾರ ನಡೆದ 22ನೇ ಸಿಪಿಎಂ ದಕ್ಷಿಣ ಕನ್ನಡ ಜಿಲ್ಲಾ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು,  ‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಸಿದ್ಧಪಡಿಸಿರುವ ಕಾರ್ಮಿಕ ಕಲ್ಯಾಣ ಮಸೂದೆಯು ಕಾರ್ಮಿಕರು ಸಂಘಟಿತರಾಗುವುದನ್ನು ಮತ್ತು ಹೋರಾಟ ನಡೆಸುವುದನ್ನು ಹತ್ತಿಕ್ಕುವ ಉದ್ದೇಶವನ್ನು ಹೊಂದಿದೆ. ಇಂತಹ ಕೆಟ್ಟ ಕಾನೂನನ್ನು ಒಗ್ಗಟ್ಟಿನಿಂದ ವಿರೋಧಿಸಬೇಕಿದೆ’ ಎಂದು ಸಲಹೆ ನೀಡಿದರು.

ಭಾರತವು ಸಾವಿರಾರು ಜಾತಿಗಳು ಮತ್ತು ನೂರಾರು ಭಾಷೆಯ ಜನರನ್ನು ಹೊಂದಿರುವ ದೇಶ. ಇಲ್ಲಿ ನಾಲ್ಕು ಧರ್ಮಗಳು ಜನ್ಮ ತಳೆದಿವೆ. ಬಹುತ್ವಕ್ಕೆ ಹೆಸರಾದ ಈ ನೆಲದಲ್ಲಿ ಹಿಂದುತ್ವದ ಹೆಸರಿನಲ್ಲಿ ಏಕ ಸಂಸ್ಕೃತಿಯನ್ನು ಹೇರಲು ಸಂಘ ಪರಿವಾರ ಹವಣಿಸುತ್ತಿದೆ. ಇದಕ್ಕಾಗಿಯೇ ಜಾತ್ಯತೀತ ಮೌಲ್ಯಗಳನ್ನು ನಾಶಪಡಿಸುವ ಕೆಲಸ ಅವ್ಯಾಹತವಾಗಿ ನಡೆಯುತ್ತಿದೆ ಎಂದು ದೂರಿದರು.

ರಾಜ್ಯದಲ್ಲಿ ಬಿಜೆಪಿಯ ಪರಿವರ್ತನಾ ಯಾತ್ರೆ ವಿಫಲವಾಗಿರುವುದರಿಂದ ಕೋಮುದ್ವೇಷ ಹಬ್ಬಿಸಿ, ಬೆಂಕಿಹಚ್ಚಲು ಯತ್ನಿಸುತ್ತಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದಿರುವ ಘಟನೆಗಳು ಈ ಕಾರ್ಯತಂತ್ರದ ಭಾಗವೇ ಆಗಿವೆ. ಕೇಂದ್ರದ ಸಚಿವರೇ ಆಡುತ್ತಿರುವ ಮಾತುಗಳನ್ನು ಗಮನಿಸಿದರೆ ಇದು ಸ್ಪಷ್ಟವಾಗುತ್ತದೆ. ಇದೇ ಉದ್ದೇಶಕ್ಕಾಗಿ ಸಂಘ ಪರಿವಾರದ 25 ಸಾವಿರ ಮಂದಿ ಕಾರ್ಯಕರ್ತರನ್ನು ರಾಜ್ಯಕ್ಕೆ ಕಳುಹಿಸ ಲಾಗಿದೆ ಎಂಬ ಮಾಹಿತಿಯೂ ಗುಪ್ತಚರ ಇಲಾಖೆ ಅಧಿಕಾರಿಗಳಿಂದ ಲಭ್ಯವಾಗಿದೆ ಎಂದು ಹೇಳಿದರು.

ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್‌ ಕೋಮುವಾದಿ ಶಕ್ತಿಗಳನ್ನು ಎದುರಿಸುವಲ್ಲಿ ವಿಫಲವಾಗಿದೆ. ರಾಜ್ಯ ದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್‌ ಪಕ್ಷ ಇಲ್ಲಿ ಕೋಮುವಾದಿ ಶಕ್ತಿಗಳನ್ನು ಮಟ್ಟ ಹಾಕುವಲ್ಲಿ ಸಫಲವಾಗಿಲ್ಲ. ದೇಶದಲ್ಲಿ ಪ್ರಜಾಪ್ರಭುತ್ವ ಮತ್ತು ಬಹುತ್ವವನ್ನು ಉಳಿಸಲು ಎಲ್ಲ ಜಾತ್ಯತೀತ ಪಕ್ಷಗಳು ಎಡ ಪಕ್ಷಗಳ ಜೊತೆ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾ ರವು ಜನರಿಗೆ ಅರಿವಾಗದಂತೆ ದೇಶವನ್ನು ನವ ಉದಾರೀಕರಣಕ್ಕೆ ಒಪ್ಪಿಸುತ್ತಿದೆ. ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ದೇಶದಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಿವೆ. ಈ ಅವಧಿಯಲ್ಲಿ 1.60 ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಂಪತ್ತಿನ ಹಂಚಿಕೆಯಲ್ಲಿ ಅಸಮಾನತೆ ಹೆಚ್ಚುತ್ತಲೇ ಇದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಿಪಿಎಂ ರಾಜ್ಯ ಮಂಡಳಿ ಸದಸ್ಯ ಕೆ.ಆರ್‌.ಶ್ರೀಯಾನ್‌ ಮಾತನಾಡಿ, ‘ಕೇಂದ್ರ ಸರ್ಕಾರವು ದೇಶದ ಎಲ್ಲ ಜನರ ಮೇಲೆ ಹಿಂದುತ್ವವನ್ನು ಹೇರುವ ಗುಪ್ತ ಕಾರ್ಯಸೂಚಿಯೊಂದಿಗೆ ಕೆಲಸ ಮಾಡುತ್ತಿದೆ. ಸಂಘ ಪರಿ ವಾರ ಕೇಂದ್ರ ಸರ್ಕಾರವನ್ನು ಈ ಕೆಲಸಕ್ಕೆ ಬಳಸಿಕೊಳ್ಳುತ್ತಿದೆ’ ಎಂದು ಆರೋಪಿಸಿದರು.

ನರೇಂದ್ರ ಮೋದಿ ಲೋಕಸಭಾ ಚುನಾವಣೆಗೂ ಮುನ್ನ ನೀಡಿದ್ದ ಭರವಸೆಗಳನ್ನು ಈಡೇರಿಸುವಲ್ಲಿ ಸಂಪೂರ್ಣ ವಿಫಲವಾಗಿದ್ದಾರೆ. ವಿದೇಶದಲ್ಲಿರುವ ಕಪ್ಪು ಹಣ ವಾಪಸು ತರುವುದು, ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿ ಸೇರಿದಂತೆ ಬಹುತೇಕ ಭರವಸೆಗಳತ್ತ ಪ್ರಧಾನಿ ಕಣ್ಣೆತ್ತಿಯೂ ನೋಡಿಲ್ಲ ಎಂದರು.

ಸಿಪಿಎಂ ದಕ್ಷಿಣ ಕನ್ನಡ ಜಿಲ್ಲಾ ಮಂಡಳಿ ಕಾರ್ಯದರ್ಶಿ ವಸಂತ ಆಚಾರಿ ಪ್ರಸ್ತಾವಿಕವಾಗಿ ಮಾತನಾ ಡಿದರು. ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಯಾದವ ಶೆಟ್ಟಿ, ಜೆ.ಬಾಲಕೃಷ್ಣ ಶೆಟ್ಟಿ, ಯು.ಬಿ.ಲೋಕಯ್ಯ, ಸುನೀಲ್‌ಕುಮಾರ್ ಬಜಾಲ್, ಕೃಷ್ಣಪ್ಪ ಸಾಲ್ಯಾನ್, ಪದ್ಮಾವತಿ ಶೆಟ್ಟಿ ವೇದಿಕೆಯಲ್ಲಿದ್ದರು. ಸಮಾರಂಭಕ್ಕೂ ಮೊದಲು ಸಿಪಿಎಂ ಹಿರಿಯ ಮುಖಂಡ ಬಿ.ವಾಸು ಗಟ್ಟಿ ಪಕ್ಷದ ಧ್ವಜಾರೋಹಣ ನೆರವೇರಿಸಿದರು.

ಕೋಮುವಾದಿಗಳ ವಿರುದ್ಧ ನಿರ್ಣಯ

ಜಿಲ್ಲೆಯಲ್ಲಿ ಮತೀಯ ದ್ವೇಷದಲ್ಲಿ ನಡೆಯುತ್ತಿರುವ ಅಹಿತಕರ ಘಟನೆಗಳ ಕುರಿತು ಸಮ್ಮೇಳನದ ಮೊದಲ ದಿನ ಚರ್ಚೆ ನಡೆಯಿತು. ಜಿಲ್ಲೆಯಲ್ಲಿ ಕೋಮುವಾದಿ ಶಕ್ತಿಗಳನ್ನು ಸೋಲಿಸಿ ಜಾತ್ಯತೀತ ಶಕ್ತಿಗಳನ್ನು ಬಲಪಡಿಸಬೇಕು ಮತ್ತು ಸೌಹಾರ್ದ ಸ್ಥಾಪನೆಗೆ ನಿರಂತರ ಪ್ರಯತ್ನ ಮಾಡಬೇಕು ಎಂಬ ನಿರ್ಣಯ ಕೈಗೊಳ್ಳಲಾಯಿತು.

ರಾಜ್ಯದಲ್ಲಿ ತೊಗರಿಗೆ ಬೆಲೆ ಇಲ್ಲ. ಆದರೆ ಕೇಂದ್ರ ದಕ್ಷಿಣ ಆಫ್ರಿಕಾದಿಂದ ತೊಗರಿ ಆಮದು ಮಾಡಿಕೊಳ್ಳಲು ಅದಾನಿ ಕಂಪೆನಿಗೆ ಗುತ್ತಿಗೆ ನೀಡಿದೆ
ಜಿ.ವಿ.ಶ್ರೀರಾಮರೆಡ್ಡಿ, ಸಿಪಿಎಂ ರಾಜ್ಯ ಮಂಡಳಿ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT