ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಟಸ್ಥವಾದ ಶುದ್ಧ ಕುಡಿಯುವ ನೀರಿನ ಘಟಕ

Last Updated 18 ಡಿಸೆಂಬರ್ 2017, 4:42 IST
ಅಕ್ಷರ ಗಾತ್ರ

ಬಿ.ಸಿ. ಮೋಹನ್ ಕುಮಾರ್

ನಾಗಮಂಗಲ: ಕಳೆದ 8 ತಿಂಗಳ ಹಿಂದಷ್ಟೇ ಶಾಸಕ ಎನ್. ಚಲುವರಾಯಸ್ವಾಮಿ ಚಾಲನೆ ನೀಡಿದ್ದ ಶುದ್ಧ ಕುಡಿಯುವ ನೀರಿನ ಘಟಕ ಸ್ಥಗಿತಗೊಂಡಿದೆ. ಸೂಕ್ತ ನಿರ್ವಹಣೆ ಕೊರತೆಯಿಂದಾಗಿ ಶುದ್ಧ ನೀರು ಕೊಡಬೇಕಾಗಿದ್ದ ಘಟಕ ತಟಸ್ಥವಾಗಿ ನಿಂತಿದೆ.

ತಾಲ್ಲೂಕು ಕೇಂದ್ರಕ್ಕೆ ಕೇವಲ 2 ಕಿ.ಮೀ ದೂರಲ್ಲಿರುವ, ಬೀದರ್– ಚಾಮರಾಜನಗರ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ, ಅಂಚೆ ಚಿಟ್ಟನಹಳ್ಳಿ ಗ್ರಾಮ ಪಂಚಾಯಿತಿ ಸೇರಿದ ತೊಳಲಿ ಗ್ರಾಮದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕದ ಪರಿಸ್ಥಿತಿ ಇದು. ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಹೇಗೆ ಹಳ್ಳ ಹಿಡಿದಿದೆ ಎಂಬುದಕ್ಕೆ ಇದು ಸೂಕ್ತ ಉದಾಹರಣೆ.

ಕೆಆರ್ ಡಿಎಲ್ ನಿರ್ಮಿಸಿ ಅಂಚೆಚಿಟ್ಟಣಹಳ್ಳಿ ಗ್ರಾಮ ಪಂಚಾಯಿತಿಗೆ ಘಟಕವನ್ನು ಹಸ್ತಾಂತರಿಸಲಾಗಿತ್ತು. ಆದರೆ ಗ್ರಾಮ ಪಂಚಾಯಿತಿ ಮತ್ತು ಘಟಕದ ನಿರ್ವಹಣೆ ಮಾಡಬೇಕಾದ ಏಜೆನ್ಸಿ ಮತ್ತು ಅದರ ಮೇಲುಸ್ತುವಾರಿ ಮಾಡಬೇಕಾದ ಕೆಆರ್ ಡಿಎಲ್ ತನ್ನ ಜವಾಬ್ದಾರಿಯಿಂದ ನುಣುಚಿಕೊಂಡ ಪರಿಣಾಮ ಶುದ್ಧ ಕುಡಿಯುವ ನೀರನ್ನು ಒದಗಿಸಬೇಕಾದ ಘಟಕ ದನ, ಎಮ್ಮೆಗಳನ್ನು ಕಟ್ಟಲು ಮತ್ತು ಬಟ್ಟೆಗಳನ್ನು ಒಣಗಿಹಾಕಲು ಅವಕಾಶ ಮಾಡಿಕೊಟ್ಟಿದೆ.

ಸುಮಾರು 120 ಮನೆಗಳಿರುವ 530 ಜನಸಂಖ್ಯೆಯಿರುವ ತೊಳಲಿ ಗ್ರಾಮದಲ್ಲಿ ಕುಡಿಯುವ ನೀರಿನ ಮಿನಿ ಟ್ಯಾಂಕ್ ಗಳಿವೆ, ಘಟಕದ ಪಕ್ಕದಲ್ಲಿಯೇ ಇರುವ ಟ್ಯಾಂಕ್ ನಿಂದಲೇ ನೀರು ಪೂರೈಕೆಯಾಗುತ್ತದೆ. ಅದರ ಪಕ್ಕದಲ್ಲಿಯೇ ಇರುವ ಶುದ್ಧ ನೀರಿನ ಘಟಕ ಕೇವಲ ಪ್ರಾತ್ಯಕ್ಷಿಕೆಗೆ ಇಟ್ಟಿರುವಂತೆ ಕಾಣುತ್ತಿದೆ.

‘ಶುದ್ಧ ನೀರು ಘಟಕ ನಿರ್ಮಿಸಿದ ದಿನದಿಂದ ಒಂದು ದಿನವೂ ನೀರು ಬಂದಿಲ್ಲ’ ಎಂದು ಗ್ರಾಮಸ್ಥ ಶಿವಲಿಂಗಯ್ಯ ಆರೋಪಿಸುತ್ತಾರೆ. ‘ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು’ ಎಂದು ಕೆಆರ್ ಡಿ ಎಲ್ ಸಹಾಯಕ ಎಂಜಿನಿಯರ್ ಸೋಮಶೇಖರ್ ಹೇಳುತ್ತಾರೆ. ‘ನನಗೆ ಇದೂವರೆಗೆ ಯಾವುದೇ ಮಾಹಿತಿ ಇರಲಿಲ್ಲ. ಪಿಡಿಒ ಅವರನ್ನು ಸಂಪರ್ಕಿಸಿ ಅದರ ಸ್ಥಿತಿಯನ್ನು ತಿಳಿಯುತ್ತೇನೆ’ ಎಂದು ತಾಲ್ಲೂಕು ಪಂಚಾಯಿತಿ ಪ್ರಭಾರ ಕಾರ್ಯನಿರ್ವಹಣಾಧಿಕಾರಿ ಶಾಂತಾ ಹೇಳಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT