7

ಇಲ್ಲಿ ತಂಗುದಾಣಗಳಿಲ್ಲದೆ ನಿತ್ಯ ಯಾತನೆ

Published:
Updated:
ಇಲ್ಲಿ ತಂಗುದಾಣಗಳಿಲ್ಲದೆ ನಿತ್ಯ ಯಾತನೆ

ಜಯಸಿಂಹ

ಪಾವಗಡ: ಆಂಧ್ರ ಪ್ರದೇಶ- ರಾಜ್ಯದ ಪ್ರಮುಖ ಪ್ರದೇಶಗಳ ನಡುವೆ ಜಂಕ್ಷನ್ ನಂತಿರುವ ಪಟ್ಟಣದಲ್ಲಿ ಸಾರ್ವಜನಿಕ ಶೌಚಾಲಯ, ತಂಗುದಾಣಗಳಿಲ್ಲದೆ ಸಾರ್ವಜನಿಕರು ನಿತ್ಯ ಯಾತನೆ ಅನುಭವಿಸಬೇಕಿದೆ.

ಆಂಧ್ರದ ಪೆನುಗೊಂಡ, ಹಿಂದೂಪುರ, ಕಲ್ಯಾಣದುರ್ಗ, ಅಮರಾಪುರ, ಮಡಕಶಿರಾ, ರಾಜ್ಯದ ಬೆಂಗಳೂರು, ತುಮಕೂರು, ಬಳ್ಳಾರಿ, ಚಿತ್ರದುರ್ಗ, ಚಳ್ಳಕೆರೆ, ಹಿರಿಯೂರು ಇತ್ಯಾದಿ ಪ್ರದೇಶಗಳ ನಡುವೆ ಕೊಂಡಿಯಂತೆ ಕಾರ್ಯ ನಿರ್ವಹಿಸುವ ಪಟ್ಟಣಕ್ಕೆ ನಿತ್ಯ ಸಹಸ್ರಾರು ಪ್ರಯಾಣಿಕರು ಬಂದು ಹೋಗುತ್ತಾರೆ. ಆದರೆ ಸಾಕಷ್ಟು ಶೌಚಾಲಯ, ತಂಗುದಾಣಗಳಿಲ್ಲದೆ ಪ್ರಯಾಣಿಕರು ಸಮಸ್ಯೆ ಎದುರಿಸುತ್ತಿದ್ದಾರೆ.

ಬಸ್ ನಿಲ್ದಾಣ, ಶನಿದೇಗುಲದ ಪಕ್ಕದಲ್ಲಿರುವ ಸಾರ್ವಜನಿಕ ಶೌಚಾಲಯಗಳು ಮಾತ್ರ ಜನರಿಗೆ ಆಸರೆಯಾಗಿವೆ. ಆದರೆ ತಹಶೀಲ್ದಾರ್ ಕಚೇರಿ ಹಿಂಭಾಗದಲ್ಲಿ ನಿರ್ಮಿಸಲಾದ ಶೌಚಾಲಯ ಆರಂಭದಿಂದಲೂ ನಿರ್ವಹಣೆ ಕಾಣದೆ ನಿರುಪಯುಕ್ತವಾಗಿದೆ. ಪೊಲೀಸ್ ಠಾಣೆ, ಉಪ ಖಜಾನೆ, ಆಹಾರ ಇಲಾಖೆ, ಕಂದಾಯ ಇಲಾಖೆಗೆ ಬರುವ ಜನರು ಶೌಚಾಲಯಕ್ಕಾಗಿ ಕಟ್ಟಡದ ಗೋಡೆ, ಗಿಡ– ಗಂಟೆಗಳ ಮರೆಗೆ ಹೋಗುವುದು ಅನಿವಾರ್ಯ. ಕಚೇರಿಗಳಿಗೆ ಬರುವ ಮಹಿಳೆಯರ ಸ್ಥಿತಿ ಕಷ್ಟಕರ.

ತಹಶೀಲ್ದಾರ್ ಕಚೇರಿ ಅಲ್ಲದೆ, ಪ್ರತಿ ಸೋಮವಾರ ಸಂತೆ ನಡೆಯುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ತಾಲ್ಲೂಕು ಪಂಚಾಯಿತಿ, ಗುರುಭವನ, ಸರ್ಕಾರಿ ಆಸ್ಪತ್ರೆಗಳಲ್ಲಿಯೂ ಸಮರ್ಪಕ ಶೌಚಾಲಯಗಳಿಲ್ಲ. ಕಚೇರಿ, ಅಂಗಡಿ ಮಳಿಗೆಗಳಲ್ಲಿನ ಸಿಬ್ಬಂದಿಯೂ ಶೌಚಾಲಯಗಳಿಲ್ಲದೆ ಸಾಕಷ್ಟು ಸಮಸ್ಯೆ ಎದುರಿಸಬೇಕಿದೆ.

ಪಟ್ಟಣದ ನಾಗರಕಟ್ಟೆ, ಗುರುಭವನ ಸಂಕೀರ್ಣ, ಸರ್ಕಾರಿ ಆಸ್ಪತ್ರೆ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ಸಾರ್ವಜನಿಕ ಶೌಚಾಲಯಗಳ ತುರ್ತು ಇದೆ. ಪುರಸಭೆ ಅಧಿಕಾರಿಗಳು ಶೌಚಾಲಯಗಳನ್ನು ನಿರ್ಮಿಸುವತ್ತ ಗಮನಹರಿಸಬೇಕು. ತಹಶೀಲ್ದಾರ್ ಕಚೇರಿ ಆವರಣದಲ್ಲಿ ನಿರ್ಮಿಸಿರುವ ಶೌಚಾಲಯವನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂಬುದು ಸಾರ್ವಜನಿಕರ ಒತ್ತಾಸೆ.

ಪಟ್ಟಣ ವ್ಯಾಪ್ತಿಯ ಸಮುದಾಯ ಶೌಚಾಲಯಗಳ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. 23 ವಾರ್ಡ್‌ಗಳ ಪೈಕಿ ಕೇವಲ 11 ವಾರ್ಡ್‌ಗಳಲ್ಲಿ ಸಾಮೂಹಿಕ ಶೌಚಾಲಯಗಳಿವೆ. ಅವುಗಳಲ್ಲಿ 4 ಮಾತ್ರ ಬಳಕೆಗೆ ಯೋಗ್ಯವಾಗಿದೆ. ಉಳಿದ 7 ಶೌಚಾಲಯಗಳು ನೀರಿನ ಸಮಸ್ಯೆ, ಅಸಮರ್ಪಕ ನಿರ್ವಹಣೆಯಿಂದ ಬಳಕೆಗೆ ಬಾರದ ಸ್ಥಿತಿ ತಲುಪಿವೆ. ರೊಪ್ಪ, ಕುರುಬರ ಬೀದಿ, ಗುಟ್ಟಹಳ್ಳಿ, ಶಿರಾ ರಸ್ತೆಯಲ್ಲಿರುವ ಶೌಚಾಲಯಗಳಿಗೂ ನೀರು ಸರಬರಾಜಾಗುತ್ತಿಲ್ಲ. ಹೀಗಾಗಿ ನೀರಿನೊಂದಿಗೆ ಶೌಚಾಲಯಕ್ಕೆ ಹೋಗಬೇಕಾದ ಅನಿವಾರ್ಯತೆ ಇದೆ.

ಪಟ್ಟಣದ ಬಸ್ ನಿಲ್ದಾಣ ಹೊರತುಪಡಿಸಿ ಆಯಕಟ್ಟಿನ ಪ್ರದೇಶಗಳಲ್ಲಿ ತಂಗುದಾಣಗಳಿಲ್ಲ. ಅಗತ್ಯವಿಲ್ಲದೆಡೆ ರಸ್ತೆ ವಿಸ್ತರಣೆ ಕೆಲಸ ಮಾಡುತ್ತಿರುವ ಕೆಶಿಪ್ ಸಂಸ್ಥೆಯವರು ತಂಗುದಾಣ ನಿರ್ಮಿಸಿದ್ದಾರೆ. ಸರ್ಕಾರಿ ಆಸ್ಪತ್ರೆ ಮುಂಭಾಗ, ಶನಿ ದೇಗುಲ ವೃತ್ತ, ನಾಗರಕಟ್ಟೆ ಬಳಿ ಪ್ರಯಾಣಿಕರು ರಸ್ತೆಯಲ್ಲಿ ನಿಂತು ಬಸ್‌ಗಳಿಗಾಗಿ ಕಾಯಬೇಕಿದೆ.

ತಂಗುದಾಣ ನಿರ್ಮಿಸಿ

ಸೋಲಾರ್ ಪಾರ್ಕ್ ನಿರ್ಮಾಣವಾಗುತ್ತಿರುವ ತಾಲ್ಲೂಕಿಗೆ ವಿದೇಶಿಗರು ಬಂದು ಹೋಗುತ್ತಿದ್ದಾರೆ. ದೇಶದಲ್ಲಿಯೇ ಹೆಸರುವಾಸಿ ಪಡೆದಿರುವ ತಾಲ್ಲೂಕು ಕೇಂದ್ರದಲ್ಲಿ ಶೌಚಾಲಯಗಳು, ತಂಗುದಾಣಗಳು ಇಲ್ಲದಿರುವುದು ನಾಚಿಕೆಗೇಡಿನ ಸಂಗತಿ. ಅಧಿಕಾರಿಗಳು ತುರ್ತಾಗಿ ಮೂಲ ಸೌಕರ್ಯ ಕಲ್ಪಿಸುವತ್ತ ಗಮನಹರಿಸಬೇಕು.

ಕೆ.ಎಸ್.ಪವನ್ ಕುಮಾರ್, ಪಾವಗಡ

* *

ಸಮೀಕ್ಷೆ ನಡೆಸಿ ಅಗತ್ಯವಿರುವಲ್ಲಿ ಹೊಸದಾಗಿ ಸಾರ್ವಜನಿಕ, ಸಮುದಾಯ ಶೌಚಾಲಯ ನಿರ್ಮಿಸಲಾಗುವುದು. 15 ದಿನಗಳೊಳಗಾಗಿ ಬಳಕೆಗೆ ಬಾರದ ಶೌಚಾಲಯಗಳನ್ನು ದುರಸ್ತಿಪಡಿಸಲು ಕ್ರಮ ತೆಗೆದುಕೊಳ್ಳಲಾಗುವುದು.

ನವೀನ್ ಚಂದ್ರ, ಮುಖ್ಯಾಧಿಕಾರಿ, ಪುರಸಭೆ

ಅಂಕಿ– ಅಂಶ

ಪಟ್ಟಣದ ಜನಸಂಖ್ಯೆ-28,086

ಪಟ್ಟಣದಲ್ಲಿರುವ ಸಾರ್ವಜನಿಕ ಶೌಚಾಲಯಗಳು 3

ಸಮುದಾಯ ಶೌಚಾಲಯಗಳು 11

ಬಳಕೆಗೆ ಬಾರದ ಸಮುದಾಯ ಶೌಚಾಲಯಗಳು 7

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry