4

ಸ್ವಾತಂತ್ರ್ಯಚಳವಳಿಯಲ್ಲಿ ಉತ್ಸಾಹ ಇತ್ತು

Published:
Updated:
ಸ್ವಾತಂತ್ರ್ಯಚಳವಳಿಯಲ್ಲಿ ಉತ್ಸಾಹ ಇತ್ತು

ಉಡುಪಿ: ಹೈದರಾಬಾದ್ ಪ್ರದೇಶವನ್ನು ಭಾರತದೊಂದಿಗೆ ವಿಲೀನಗೊಳಿಸುವಲ್ಲಿ ಸರ್ದಾರ್ ವಲ್ಲಭಬಾಯಿ ಪಟೇಲ್ ಪಾತ್ರ ಪ್ರಧಾನವಾಗಿದೆ ಎಂದು ಪರ್ಯಾಯ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ತಿಳಿಸಿದರು.

ಉಡುಪಿ ಶ್ರೀಕೃಷ್ಣಮಠ, ಪರ್ಯಾಯ ಪೇಜಾವರ ಮಠದ ಸಹಯೋಗದಲ್ಲಿ ಭಾನುವಾರ ಪತ್ರಕರ್ತ ಎಂ.ವಿ. ಹೆಗ್ಡೆ ವಿರಚಿತ ಹೈದರಾಬಾದ್ ಪ್ರದೇಶ ನಿಜಾಮನಿಂದ ಮುಕ್ತಿಗೊಂಡು ಭಾರತದೊಂದಿಗೆ ವಿಲೀನವಾದ ಘಟನೆ ಆಧರಿಸಿದ ‘ಹೈದರಾಬಾದ್ ವಿಜಯ’ ಯಕ್ಷಗಾನ ತಾಳಮದ್ದಳೆ 70 ವರ್ಷಗಳ ಬಳಿಕ ರಾಜಾಂಗಣದಲ್ಲಿ ಆಯೋಜಿದ್ದ ತಾಳಮದ್ದಳೆ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಜವಹಾರಲಾಲ್ ನೆಹರೂ ಅವರಿಗೆ ದೇಶದ ಮೇಲೆ ಅಪಾರ ಭಕ್ತಿ ಇದ್ದರೂ, ವಿದೇಶಗಳಿಂದ ಅಪಪ್ರಚಾರವಾಗಿ ಬಿಡುತ್ತದೆ ಎಂಭ ಕಾರಣಕ್ಕೆ ಭಯದಿಂದ ಹೋರಾಟದಿಂದ ಹಿಂದೆ ಉಳಿದಿದ್ದರು. ಆದರೆ, ಪಟೇಲರು ವಿಜಯವಾಡ, ಸೋಲಾಪುರ ಮತ್ತು ಹೊಸಪೇಟೆಗೆ ಸೈನ್ಯ ಕಳುಹಿಸಿ ಹೈದರಾಬಾದ್‌ಅನ್ನು ವಿಲೀನಗೊ ಳಿಸುವಲ್ಲಿ ಯಶಸ್ವಿ ಯಾಗಿದ್ದರು ಎಂದು ಅವರು ಹೇಳಿದರು.

‘ಸ್ವಾತಂತ್ರ್ಯ ಹೋರಾಟ ಸಂದರ್ಭದಲ್ಲಿ ಗಾಂಧೀಜಿ ಅವರನ್ನು ಬಂಧಿಸಲಾಗಿತ್ತು. ಇದನ್ನು ಪ್ರತಿಭಟಿಸಿ ಉಡುಪಿ ಮೆರವಣಿಗೆಯಲ್ಗಿ ನಾನು ಭಾಗವಹಿಸಬೇಕೆಂಬ ಆಸೆ ಇತ್ತು. ಆದರೆ ಸ್ವಾಮೀಜಿಗಳು ಹಾಗೆಲ್ಲ ಚಳವಳಿಗಳಲ್ಲಿ ಭಾಗವಹಿಸುವಂತಿಲ್ಲ ಎಂದು ಹಿರಿಯರು ಹೇಳಿದ ಕಾರಣ ನನಗೆ ಚಳವಳಿಯಲ್ಲಿ ಭಾಗವಹಿಸಲು ಆಗಲಿಲ್ಲ’ ಎಂದು ಅವರು ಹೇಳಿದರು.

‘ಅಂದು ವಿದ್ಯಾರ್ಥಿಗಳು, ಯುವಕರು ಸ್ವಾತಂತ್ರ್ಯ ಚಳವಳಿಯಲ್ಲಿ ಉತ್ಸಾಹದಿಂದ ಭಾಗವಹಿಸುತ್ತಿದ್ದರು. ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿಲ್ಲವೆಂದು ಅವಮಾನ ಕಾಡುತ್ತಿತು. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ದಿನದಂದು ಮಧ್ಯ ರಾತ್ರಿ 12 ಗಂಟೆಗೆ ರಥಬೀದಿಯಲ್ಲಿ ಧ್ವಜಾರೋಹಣ ಮಾಡಲಾಗಿತ್ತು. ಆದರಲ್ಲಿ ನಾನೂ ಕೂಡಾ ಪಾಲ್ಗೊಂಡಿದ್ದೆ’ ಎಂದರು.

ಅಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಡಾ. ಎಂ. ಮೋಹನ್ ಆಳ್ವ, ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆ, ಡಾ. ವೈ. ಸನತ್ ಹೆಗ್ಡೆ, ಕಾರ್ಯಕ್ರಮ ಸಂಯೋಜಕ ಸುಧಾಕರ ಆಚಾರ್ಯ, ಸುರೇಶ್ ಹೆಗ್ಡೆ, ಭುವನ್ ಪ್ರಸಾದ್ ಹೆಗ್ಡೆ ಇದ್ದರು.

ಕುಂಬ್ಳೆ ಸುಂದರ್ ರಾವ್, ಪ್ರೊ. ಎಂ.ಎಲ್. ಸಾಮಗ, ಡಾ. ಪಾದೇಕಲ್ಲು ವಿಷ್ಣುಭಟ್, ಪ್ರೊ. ನಾರಾಯಣ ಹೆಗಡೆ, ಸದಾಶಿವ ಆಳ್ವ, ಅಪ್ಪು ನಾಯಕ್ ಆತ್ರಾಡಿ, ರಮಣ ಆಚಾರ್ಯ ಮತ್ತು ಪ್ರಶಾಂತ್ ಬೇಳೂರು ಅರ್ಥಧಾರಿಗಳಾಗಿ ಸಹಕರಿಸಿದರು. ಹಿಮ್ಮೇಳದಲ್ಲಿ ಭಾಗವತ ಪಟ್ಲ ಸತೀಶ್ ಶೆಟ್ಟಿ, ಪದ್ಮನಾಭ ಉಪಾಧ್ಯಾಯ, ಚೈತನ್ಯಕೃಷ್ಣ ಪದ್ಯಾಣ ಸಹಕಾರ ನೀಡಿದರು.

‘ಭಾರತ ಒಗ್ಗೂಡಿಸಿದ್ದು ಬ್ರಿಟಿಷರು’

ವಿದೇಶಿಗರ ಆಕ್ರಮಣದಿಂದ ಛಿದ್ರವಾಗಿ ಹೋಗುತ್ತಿದ್ದ ಭಾರತವನ್ನು ಒಗ್ಗೂಡಿಸಿದ್ದು ಬ್ರಿಟಿಷರು. ಹಾಗೆಯೇ ಇಡೀ ದೇಶದಲ್ಲಿ ತಮ್ಮ ಅಧಿಪತ್ಯ ಸ್ಥಾಪಿಸಿ ಭಾರತೀಯರ ಮೇಲೆ ದಬ್ಬಾಳಿಕೆ ಮಾಡಲು ಆರಂಭಿಸಿದಾಗ ಜನರೆಲ್ಲ ಒಂದಾಗಿ ಬ್ರಿಟಿಷರನ್ನು ದ್ವೇಷಿಸಲು ಪ್ರಾರಂಭಿಸಿದರು.

ಈ ಮೂಲಕ ಭಾರತೀಯರಲ್ಲಿ ರಾಷ್ಟ್ರ ಜಾಗೃತಿ, ರಾಷ್ಟ್ರ ಪ್ರೇಮವನ್ನೂ ಮೂಡಿಸಲು ಬ್ರಿಟಿಷರು ಕಾರಣಕರ್ತರಾಗಿದ್ದರು ಎಂದು ಶ್ರೀಕ್ಷೇತ್ರ ಕಟೀಲು ದೇವಳದ ಅರ್ಚಕ ಹರಿನಾರಾಯಣದಾಸ ಅಸ್ರಣ್ಣ ಹೇಳಿದರು.

* * 

ನನಗೆ 18 ವರ್ಷ ಇರುವಾಗ ಶ್ರೀ ಕೃಷ್ಣಮಠದ ಭೋಜನ ಶಾಲೆಯಲ್ಲಿ ‘ಹೈದರಾಬಾದ್ ವಿಜಯ’ ಯಕ್ಷಗಾನ ತಾಳಮದ್ದಳೆ ಪ್ರದರ್ಶನಗೊಂಡಿತ್ತು.

ವಿಶ್ವೇಶತೀರ್ಥ ಸ್ವಾಮೀಜಿ, ಪರ್ಯಾಯ ಪೇಜಾವರ ಮಠ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry