7

ಕಾಯಿಪಲ್ಲೆ–ಸೊಪ್ಪು ಅಗ್ಗ; ಬೆಳೆಗಾರ ಹೈರಾಣ

Published:
Updated:
ಕಾಯಿಪಲ್ಲೆ–ಸೊಪ್ಪು ಅಗ್ಗ; ಬೆಳೆಗಾರ ಹೈರಾಣ

ವಿಜಯಪುರ: ವಿಜಯಪುರದಲ್ಲಿನ ಭಾನುವಾರದ ಕಾಯಿಪಲ್ಲೆ ಬಜಾರ್‌ ನಲ್ಲಿ ಇದೀಗ ಸಸ್ತಾ ದರ. ತರಕಾರಿ–ಸೊಪ್ಪಿನ ಬೆಲೆ ಕುಸಿದಿದೆ. ಉಳ್ಳಾಗಡ್ಡಿ ಸೇರಿದಂತೆ ಒಂದೆರೆಡು ಕಾಯಿಪಲ್ಲ್ಯೆ ಧಾರಣೆ ಹೊರತುಪಡಿಸಿದರೆ, ಉಳಿದೆಲ್ಲವೂ ಅಗ್ಗ.

ಬಜಾರ್‌ನ ಉದ್ದಗಲಕ್ಕೂ ಗೊಣಗುತ್ತಾ, ಚೌಕಾಶಿ ಮಾಡುತ್ತಾ ಖರೀದಿ ನಡೆಸುತ್ತಿದ್ದ ಗ್ರಾಹಕರು ಇದೀಗ ಬಿಂದಾಸ್‌ ಬಿಕರಿ ನಡೆಸಿದ್ದಾರೆ. ಗಿರಾಕಿ ಕೇಳುವ ಮುನ್ನವೇ ರೈತ ವ್ಯಾಪಾರಿಗಳು ಕಡಿಮೆ ಧಾರಣೆ ಕೂಗಿ ತಮ್ಮತ್ತ ಆಕರ್ಷಿಸಿದರು.

ಒಂದು ಕೆ.ಜಿ.ಗೆ ₹ 4–5 ಧಾರಣೆ ಕಡಿಮೆ ಕೂಗಿ ಗ್ರಾಹಕರನ್ನು ತಮ್ಮತ್ತ ಸೆಳೆಯಲು ದರ ಪೈಪೋಟಿ ನಡೆಸಿದ್ದು ಭಾನುವಾರದ ಬಜಾರ್‌ನಲ್ಲಿ ಗೋಚರಿಸಿತು. ಬಹುತೇಕ ವ್ಯಾಪಾರಿಗಳು ರೈತರೇ ಆಗಿರುವುದರಿಂದ ಲಾಭದ ನಿರೀಕ್ಷೆ ಬಿಟ್ಟು, ಕಡಿಮೆ ಧಾರಣೆಗೆ ಸೊಪ್ಪು–ತರಕಾರಿ ಮಾರಿದರು.

‘ಬೇಸಿಗೆ, ಮಳೆಗಾಲದ ಆರಂಭದಲ್ಲೂ ತರಕಾರಿ ಧಾರಣೆ ಬಲು ತುಟ್ಟಿಯಿತ್ತು. ಪಾವ್‌ ಕಿಲೋ ಖರೀದಿಸಲು ಚಿಂತಿ ಮಾಡಬೇಕಿತ್ತು. ಇದೀಗ ಎಲ್ಲವೂ ಸಸ್ತಾ. ವಿಪರೀತ ಮಾಲು ರೈತರಿಂದ ಮಾರುಕಟ್ಟೆ ಪ್ರವೇಶಿಸಿದೆ. ಖರೀದಿಸುವವರೆಗೆ ಅಗ್ಗವಾಗಿದೆ. ದೊರೆತ ಒಳ್ಳೆಯ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುತ್ತಿದ್ದೇವೆ. ಭರ್ಜರಿ ಬಿಕರಿ ನಡೆಸಿದ್ದೇವೆ’ ಎಂದು ಗ್ರಾಹಕ ಶ್ರೀಕಾಂತ ಪನಾಳಕರ ತಿಳಿಸಿದರು.

ಹೊಡೆತ: ‘25 ಕಿ.ಮೀ. ದೂರದಲ್ಲಿ ಕೊಳವೆಬಾವಿ ಆಶ್ರಿತ ನೀರಾವರಿಯಲ್ಲಿ ಕಾಯಿಪಲ್ಲ್ಯೆ–ತಪ್ಪಲ ಪಲ್ಲ್ಯೆ ಬೆಳೆ ದಿದ್ದೇವೆ. ಮಾರಾಟಕ್ಕೆ ನಾವೇ ಹೊತ್ತು ತಂದೀವಿ. ಬಜಾರ್‌ಗೆ ಬೇಕಾದಷ್ಟು ಮಾಲು ಬಂದೈತಿ. ಆದ್ರೇ ಕೊಳ್ಳೋರೇ ಇಲ್ಲದಂಗಾಗೈತಿ.

ಬೇಡಿಕೆಗೆ ಹೆಚ್ಚು ಮಾಲು ಮಾರುಕಟ್ಟೆ ಪ್ರವೇಶಿಸಿರುವುದರಿಂದ ಧಾರಣೆ ನೆಲಕಚ್ಚಿದೆ. ರೈತ ಬೆಳೆಗಾರ, ಮಾರಾಟಗಾರ ಇದರಿಂದ ತತ್ತರಿಸಿದ್ದಾನೆ. ದೂರದಿಂದ ಬಂದ ಬಾಡಿಗೆಯೂ ಹುಟ್ಟದಾಗಿದೆ’ ಎಂದು ತಿಡಗುಂದಿಯ ಸಿದ್ದನಗೌಡ ಬಿರಾದಾರ ಬೇಸರ ವ್ಯಕ್ತಪಡಿಸಿದರು.

‘ಮೈಕೊರೆವ ಚಳಿಯನ್ನು ಲೆಕ್ಕಿಸದೆ ನಸುಕಿನಲ್ಲೇ ದೂರದ ಊರಿಂದ ವ್ಯಾಪಾರಕ್ಕೆಂದು ಬಂದಿದ್ದೀವಿ. ಹಗಲಿರುಳು ಮೈಮುರ್ದು ದುಡಿದ ಶ್ರಮಕ್ಕೆ ಪ್ರತಿಫಲ ದೊರಕದಾಗಿದೆ. ಬೀಜ, ನಮ್ಮ ಕೂಲಿ ರೊಕ್ಕಾನೂ ಹುಟ್ತಿಲ್ಲ. ನಮ್ಮ ಸಮಸ್ಯೆಗೆ ಪರಿಹಾರವೇ ಇಲ್ಲದಂಗಾಗಿದೆ.

ಗ್ರಾಹಕರು ಕೇಳಿದ ಬೆಲೆಗೆ ಮಾರಬೇಕು. ಇಲ್ಲದಿದ್ರಾ ರಸ್ತೆ ಬದಿ ಬಿಸಾಕಿ ಹೋಗಬೇಕು. ಎಷ್ಟ್‌ ಸಿಗುತ್ತೆ ಅಷ್ಟಾದ್ರೂ ಸಿಗಲಿ ಅಂತ ವ್ಯಾಪಾರ ಮಾಡಕ್ಕತ್ವೀನಿ’ ಎಂದು ಮಖಣಾಪುರದ ರೈತ ವ್ಯಾಪಾರಿ ಮಹಾದೇವ ಒಡೆಯರ ಹೇಳಿದರು.

ಟೊಮೆಟೊ ಅಗ್ಗ

ಉಳ್ಳಾಗಡ್ಡಿ, ಡಬ್ಬು ಮೆಣಸಿನಕಾಯಿ, ಹಿರೇಕಾಯಿ ಧಾರಣೆ ಗಗನಮುಖಿಯಾಗಿದ್ದರೆ, ಟೊಮೆಟೊ ಸೊಪ್ಪು ಅಗ್ಗವಾಗಿದೆ. ಉಳ್ಳಾಗಡ್ಡಿ ಒಂದು ಕೆ.ಜಿ.ಗೆ ₹ 50–60, ಗಜ್ಜರಿ–30, ಬದನೆಕಾಯಿ–40, ಸೌತೆಕಾಯಿ–40, ಹಿರೇಕಾಯಿ 60–70, ಟೊಮೆಟೊ–10, ಆಲೂಗಡ್ಡೆ–10, ಜವಳಿಕಾಯಿ–40, ಅವರೆಕಾಯಿ–10, ಮೆಣಸಿನಕಾಯಿ–40, ಕೋಸು ಒಂದಕ್ಕೆ ₹ 10, ಹೂಕೋಸು ₹ 10ರಿಂದ 20, ಮೆಂತ್ಯೆ, ಕೊತ್ತಂಬರಿ, ಸಬ್ಬಸಿಗೆ ತಲಾ ₹ 10ಕ್ಕೆ ನಾಲ್ಕು ಕಟ್ಟು, ಪಾಲಕ್‌ ಒಂದು ಕಂತೆಗೆ ₹ 10, ಮೂಲಗಿ ₹ 10ಕ್ಕೆ ಐದರಂತೆ ಬಿಕರಿಯಾದವು.

* * 

ಬಿತ್ತಿದ ಬೀಜದ ರೊಕ್ಕ ಹುಟ್ತಿಲ್ಲ. ಈ ಬಾರಿ ಸೊಪ್ಪು ಕೈಸುಟ್ಟಿದೆ. ಕೇಳೋರೇ ಇಲ್ಲವಾಗಿದ್ದಾರೆ. ದೂರದಿಂದ ಬಂದ ತಪ್ಪಿಗೆ ಸಿಕ್ಕಷ್ಟು ಬೆಲೆಗೆ ಮಾರಾಟ ಮಾಡ್ತಿದ್ದೇವೆ

ಮಹಾದೇವ ಒಡೆಯರ, ಸೊಪ್ಪು ಬೆಳೆಗಾರ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry