7

ಬಯಲು ಶೌಚಾಲಯಕ್ಕೆ ಮುಕ್ತಿ ಸಿಗಲಿ

Published:
Updated:
ಬಯಲು ಶೌಚಾಲಯಕ್ಕೆ ಮುಕ್ತಿ ಸಿಗಲಿ

ಯಾದಗಿರಿ: ಸೂರ್ಯ ಮುಳುಗು ವುದನ್ನೇ ಕಾಯುತ್ತಾರೆ. ಕತ್ತಲಿಗಾಗಿ ತಡಬಡಿಸುವ ಅವರು ನಗರದ ಮಧ್ಯ ಭಾಗದಲ್ಲಿನ ಬೃಹತ್‌ ಕಾಂಪೌಂಡಿನತ್ತ ಹೆಜ್ಜೆ ಹಾಕುತ್ತಾರೆ. ನಿಧಾನವಾಗಿ ಗಾಢ ಕತ್ತಲೆಯಲ್ಲಿ ಕಣ್ಮರೆಯಾಗುತ್ತಾರೆ. ನಂತರ ನಿಡುಸುಯ್ದು ಕಾಂಪೌಂಡಿನಿಂದ ಹೊರಬರುತ್ತಾರೆ! ನಗರದ ‘ಬಂಡಿಗೇರಾ’ ಬಡಾವಣೆಯ ಮಹಿಳೆಯರ ದೈನಂದಿನ ಸ್ಥಿತಿ ಇದು.

‘ಬಂಡಿಗೇರಾ’ ನಗರದ ಹೃದಯ ಭಾಗದಲ್ಲಿರುವ ಪ್ರಮುಖ ವಾರ್ಡ್‌. ಮಧ್ಯಮ ಹಾಗೂ ಬಡತನ ರೇಖೆಗಿಂತಲೂ ಕೆಳವರ್ಗದ ಜನರೇ ಇಲ್ಲಿ ಹೆಚ್ಚಿದ್ದಾರೆ. ನಗರ ಬೆಳೆಯುವುದಕ್ಕಿಂತಲೂ ಮುಂಚೆ ಜಾಲಿಗಿಡಗಳಿಂದ ತುಂಬಿದ್ದ ‘ಬಂಡಿಗೇರಾ’ ಬಯಲು ಶೌಚಾಲಯ ಪ್ರದೇಶವಾಗಿತ್ತು. ಈಗ ಇಲ್ಲಿ ನೆಲೆಸಿರುವ ಬಹುತೇಕ ಕುಟುಂಬಗಳು ಬಯಲು ಶೌಚಾಲಯವನ್ನೇ ಅವಲಂಬಿಸಿವೆ. ಮಹಿಳೆಯರಿಗಾಗಿ ಮಾತ್ರ ಸಾಮೂಹಿಕ ಶೌಚಾಲಯ ನಿರ್ಮಿಸಿದ್ದಾರೆ. ಇದನ್ನು ಎಷ್ಟು ವರ್ಷಗಳ ಹಿಂದೆ ನಿರ್ಮಿಸಲಾಗಿದೆ ಎಂದು ಹುಡುಕುತ್ತಾ ಹೋದರೆ ಮುನ್ಸಿಪಾಲಿಟಿ ಇದ್ದ ಸಂದರ್ಭದಲ್ಲಿ ನಿರ್ಮಿಸಿರಬಹುದು ಎಂದು ಅಲ್ಲಿನ ಹಿರಿಯರು ಹೇಳುತ್ತಾರೆ!

‘ಹಲವು ವರ್ಷಗಳ ಹಿಂದಿನ ಮಾತು. ಬಯಲು ಶೌಚಾಲಯಕ್ಕೆ ಹೋದ ಮಹಿಳೆಯರಿಗೆ ಹಂದಿ ಹಾವಳಿ ಹೆಚ್ಚಿತ್ತು. ಹಂದಿಗಳ ದಂಡು ಮಹಿಳೆಯರ ಮೇಲೆ ಆಕ್ರಮಣ ಮಾಡುತ್ತಿದ್ದವು. ಹಂದಿಗಳ ಕಾಟ ಸ್ಥಳೀಯ ಸಂಸ್ಥೆಯವರೆಗೂ ದೂರು ತಂದಿತು. ಹಂದಿಗಳ ಕಡಿವಾಣಕ್ಕೆ ಮಹಿಳೆಯರು ದೊಡ್ಡ ಹೋರಾಟ ನಡೆಸುವಂತಾಯಿತು.

ಹಂದಿಗಳಿಂದ ಮಹಿಳೆಯರಿಗೆ ಮುಕ್ತಿ ಕೊಡಿಸಲು ಆಗ ಇದ್ದ ಸ್ಥಳೀಯ ಸಂಸ್ಥೆ ಹೊರವಲಯದಲ್ಲಿ ಮಹಿಳೆಯರಿಗಾಗಿ ಸಾಮೂಹಿಕ ಶೌಚಾಲಯ ನಿರ್ಮಿಸಿದೆ. ಶೌಚಾಲಯ ಹೊರ ವಲಯದಲ್ಲಿ ಇದ್ದ ಕಾರಣ ಮಹಿಳೆಯರು ಸಾಮೂಹಿಕ ಶೌಚಾಲಯವನ್ನು ಹಗಲಿನಲ್ಲಿಯೇ ಮಹಿಳೆಯರು ಬಳಸುತ್ತಿದ್ದರು. ಈಗ ನಗರ ಬೆಳೆದಂತೆಲ್ಲಾ ಶೌಚಾಲಯ ನಗರದ ಹೃದಯ ಭಾಗಕ್ಕೆ ಬಂದಿದೆ’ ಎನ್ನುತ್ತಾರೆ ನಗರಸಭೆ ಸದಸ್ಯ ಮರೆಪ್ಪ ಚಟ್ಟರ್‌ಕರ್.

‘ರಿಯಲ್‌ ಎಸ್ಟೇಟ್‌ ಉತ್ತುಂಗ ಕಾಲದ ಸಂದರ್ಭದಲ್ಲಿ ‘ಬಂಡಿಗೇರಾ’ ಕಿಷ್ಕಿಂಧೆಯಾಗಿ ಮಾರ್ಪಟ್ಟಿದೆ. ಈಗ ಅಲ್ಲಿ ಜನಸಂಚಾರ ಹೆಚ್ಚಿದೆ. ಇದರಿಂದ ಮಹಿಳೆಯರ ಶೌಚಾಲಯ ಸ್ಥಿತಿ ದೈನೇಸಿಯಾಗಿದೆ’ ಎನ್ನುತ್ತಾರೆ ಅಲ್ಲಿನ ನಿವಾಸಿಗಳು.

ವೈಯಕ್ತಿಕ ಶೌಚಾಲಯಗಳೇಕಿಲ್ಲ?

ನಗರದ ಬಂಡಿಗೇರಾ, ಕೊರಟಗೆರಾ ವಾಡ, ಕೋಲಿವಾಡ, ಮದನಪುರ ಗಲ್ಲಿ.. ಹೀಗೆ ಹಳೆ ನಗರಗಳು ಸಂಪೂರ್ಣ ಬೆಟ್ಟ ಪ್ರದೇಶದಲ್ಲಿವೆ. ಬಂಡೆಗಲ್ಲಿನ ಭೂಮಿ ಇಲ್ಲಿರುವುದರಿಂದ ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕೆ ಗುಂಡಿ ಅಗೆಯಲು ಆಗುವುದಿಲ್ಲ.

ಈ ಕಾರಣದಿಂದಾಗಿ ವೈಯಕ್ತಿಕ ಶೌಚಾಲಯ ಯೋಜನೆಗಳು ಬಂಡಿಗೇರಾದಲ್ಲಿ ಸಫಲವಾಗಿಲ್ಲ. ಶೌಚಾಲಯ ನಿರ್ಮಿಸಿಕೊಳ್ಳುವ ಇಚ್ಛೆ ಇದ್ದರೂ ಅವಕಾಶ ಇಲ್ಲದಂತಾಗಿದೆ. ಒಳಚರಂಡಿ ನಿರ್ಮಾಣ ಬೆಟ್ಟ ಪ್ರದೇಶದಲ್ಲಿ ಅಸಾಧ್ಯ ಎನ್ನುವ ಕಾರಣಕ್ಕೆ ನಗರಸಭೆ ಯೋಜನೆಯನ್ನೇ ಕೈಬಿಟ್ಟಿದೆ. ಒಳ ಚರಂಡಿ ವ್ಯವಸ್ಥೆಯಿಂದಲೇ ಈ ಸಮಸ್ಯೆಗೆ ಪರಿಹಾರ ಸಾಧ್ಯ ಎಂದು ಬಂಡಿಗೇರಾ (7ನೇ ವಾರ್ಡ್‌) ಪ್ರತಿನಿಧಿಸುವ ನಗರಸಭೆ ಸದಸ್ಯೆ ನಾಗರತ್ನಾ ಅನಪೂರ ಹೇಳುತ್ತಾರೆ.

* * 

ಬಂಡಿಗೇರಾ ಭಾಗದ ಭೂಮಿ ಸಂಪೂರ್ಣ ಬಂಡೆಗಲ್ಲಿನಿಂದ ಆವೃತವಾಗಿದೆ. ಇಲ್ಲಿ ಒಳ ಚರಂಡಿ ಅಸಾಧ್ಯ. ಮುಂದೇನು ಎಂಬ ಬಗ್ಗೆ ನಗರಸಭೆ ಚಿಂತನೆ ನಡೆಸಿದೆ

ಲಲಿತಾ ಅನಪೂರ

ಅಧ್ಯಕ್ಷೆ, ನಗರಸಭೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry