7

ಜೀವಜಲಕ್ಕೆ ತತ್ವಾರ: ಸ್ಥಳೀಯರ ಬದುಕು ನರಕ ಸದೃಶ

Published:
Updated:
ಜೀವಜಲಕ್ಕೆ ತತ್ವಾರ: ಸ್ಥಳೀಯರ ಬದುಕು ನರಕ ಸದೃಶ

ಕೋಲಾರ: ಜೀವಜಲಕ್ಕೆ ತತ್ವಾರ.. ಕಣ್ಣು ಹಾಯಿಸಿದಲ್ಲೆಲ್ಲಾ ಕಸದ ರಾಶಿ.. ಚರಂಡಿ ತುಂಬಿ ರಸ್ತೆಗೆ ಹರಿಯುತ್ತಿರುವ ಕೊಳಚೆ ನೀರು.. ವಿಲೇವಾರಿಯಾಗದೆ ದುರ್ನಾತ ಬೀರುತ್ತಿರುವ ತ್ಯಾಜ್ಯ.. ಹಾದಿ ಬೀದಿಯಲ್ಲಿ ನಾಯಿಗಳ ಕಾಟ..

ಇದು ನಗರದ 17 ಮತ್ತು 18ನೇ ವಾರ್ಡ್‌ಗಳ ವ್ಯಾಪ್ತಿಯ ಬಡಾವಣೆಗಳ ದುಸ್ಥಿತಿ. ಶಹಿನ್‌ಷಾ ನಗರ, ಜಮಾಲ್‌ ನಗರ, ಸುಲ್ತಾನ್‌ ತಿಪ್ಪಸಂದ್ರ, ಅನ್ಸಾರ್‌ ನಗರ, ಮಹಾಲಕ್ಷ್ಮಿ ಲೇಔಟ್‌, ಉಸ್ಮಾನ್‌ ನಗರ ಬಡಾವಣೆ ಒಳಗೊಂಡಿರುವ ಈ ವಾರ್ಡ್‌ಗಳ ಜನಸಂಖ್ಯೆ 35 ಸಾವಿರದ ಗಡಿ ದಾಟಿ ಬೆಳೆದಿದೆ.

ಎರಡೂ ವಾರ್ಡ್‌ಗಳಿಂದ ಸುಮಾರು 7 ಸಾವಿರ ಮನೆಗಳಿದ್ದು, ಕಸ, ಚರಂಡಿ, ನೀರು, ಬೀದಿ ದೀಪ, ರಸ್ತೆ, ಸ್ವಚ್ಛತೆ ಹೀಗೆ ಪಟ್ಟಿ ಮಾಡಿದರೆ ಸಮಸ್ಯೆಗಳ ಸರಮಾಲೆಯೇ ಇಲ್ಲಿದೆ. ಮೂಲಸೌಕರ್ಯ ಸಮಸ್ಯೆ ನಡುವೆ ಬದುಕು ಸಾಗಿಸುತ್ತಿರುವ ಸ್ಥಳೀಯರ ಗೋಳು ಹೇಳತೀರದು. ವಾರ್ಡ್‌ಗಳ ವ್ಯಾಪ್ತಿ ವಿಸ್ತಾರವಾದಂತೆ ಸಮಸ್ಯೆಗಳು ಗಂಭೀರವಾಗುತ್ತಿವೆ.

ನಗರಸಭೆ ಆಡಳಿತ ಯಂತ್ರವು ವಾರ್ಡ್‌ಗಳ ಅಭಿವೃದ್ಧಿಯನ್ನು ಸಂಪೂರ್ಣ ನಿರ್ಲಕ್ಷಿಸಿದ್ದು, ಸ್ಥಳೀಯರ ಅಳಲು ಕೇಳುವವರಿಲ್ಲ. ನಗರದ ಇತರೆ ವಾರ್ಡ್‌ಗಳಂತೆ ಈ ವಾರ್ಡ್‌ಗಳಲ್ಲೂ ನೀರಿನ ಸಮಸ್ಯೆ ಗಂಭೀರವಾಗಿದೆ. ಎರಡು ವಾರ್ಡ್‌ಗಳಿಂದ 21 ಕೊಳವೆ ಬಾವಿಗಳಿದ್ದು, ಈ ಪೈಕಿ 12 ಮಾತ್ರ ಕಾರ್ಯ ನಿರ್ವಹಿಸುತ್ತಿವೆ. ಉಳಿದ 9 ಕೊಳವೆ ಬಾವಿಗಳಲ್ಲಿ ನೀರು ಲಭ್ಯವಿದ್ದರೂ ಪಂಪ್‌ ಮತ್ತು ಮೋಟರ್‌ ಅಳವಡಿಸಿಲ್ಲ.

ಕೆಲವೆಡೆ ಪೈಪ್‌ಲೈನ್‌ ಇಲ್ಲದ ಕಾರಣ ಅಲ್ಲಿನ ಮನೆಗಳಿಗೆ ಟ್ಯಾಂಕರ್‌ ಮೂಲಕ ಉಚಿತವಾಗಿ ನೀರು ಪೂರೈಸಲಾಗುತ್ತಿತ್ತು. ಆದರೆ, 20 ದಿನಗಳಿಂದ ಟ್ಯಾಂಕರ್‌ ನೀರು ಪೂರೈಕೆ ಸ್ಥಗಿತಗೊಳಿಸಲಾಗಿದೆ. ಹೀಗಾಗಿ ನೀರಿನ ಸಮಸ್ಯೆ ತಾರಕಕ್ಕೇರಿದ್ದು, ಸ್ಥಳೀಯರು ಹಣ ಕೊಟ್ಟು ನೀರು ಖರೀದಿಸುವಂತಾಗಿದೆ. ಕುಡಿಯುವ ನೀರಿಗೆ ಪ್ರತಿ ಬಿಂದಿಗೆಗೆ ₹ 10 ಹಾಗೂ ಗೃಹ ಬಳಕೆ ಉದ್ದೇಶದ ನೀರಿಗೆ ಟ್ಯಾಂಕರ್‌ ಲೋಡ್‌ಗೆ ₹ 500 ಇದೆ.

ನಗರದಲ್ಲಿ ಇತ್ತೀಚೆಗೆ ಉತ್ತಮ ಮಳೆಯಾಗಿ ಕೊಳವೆ ಬಾವಿಗಳಲ್ಲಿ ಅಂತರ್ಜಲ ಮಟ್ಟ ಸುಧಾರಿಸಿದ್ದರೂ ಈ ವಾರ್ಡ್‌ಗಳ ನಿವಾಸಿಗಳಿಗೆ ನೀರಿನ ಬವಣೆ ತಪ್ಪಿಲ್ಲ. ನೀರು ಲಭ್ಯವಿರುವ ಕೊಳವೆ ಬಾವಿಗಳಿಗೆ ಪಂಪ್‌ ಮತ್ತು ಮೋಟರ್‌ ಅಳವಡಿಸುವಂತೆ ವಾರ್ಡ್‌ನ ಸದಸ್ಯರು ಹಾಗೂ ಸ್ಥಳೀಯರು ಅಧಿಕಾರಿಗಳಿಗೆ ನಾಲ್ಕೈದು ತಿಂಗಳಿಂದ ಮನವಿ ಮಾಡುತ್ತಿದ್ದಾರೆ. ಆದರೆ, ಅವರ ಕೂಗು ಅರಣ್ಯರೋದನವಾಗಿದೆ.

ಕಸದ ದುರ್ನಾತ: ವಾರ್ಡ್‌ಗಳ ವ್ಯಾಪ್ತಿಯಲ್ಲಿ ತ್ಯಾಜ್ಯ ಸಂಗ್ರಹಣೆ ಪ್ರಕ್ರಿಯೆ ಹಳಿ ತಪ್ಪಿದ್ದು, ನೈರ್ಮಲ್ಯ ಸಮಸ್ಯೆ ಎದುರಾಗಿದೆ. ಪೌರ ಕಾರ್ಮಿಕರು ಮನೆಗಳ ಬಳಿ ಬಂದು ಕಸ ಸಂಗ್ರಹಿಸುತ್ತಿಲ್ಲ. ವಾರ್ಡ್‌ಗಳಲ್ಲಿ ತ್ಯಾಜ್ಯ ಸಂಗ್ರಹಣಾ ತೊಟ್ಟಿಗಳನ್ನು ನಿರ್ಮಿಸಿಲ್ಲ.

ಹೀಗಾಗಿ ಸ್ಥಳೀಯರು ರಸ್ತೆಗಳ ಬದಿಯಲ್ಲಿ ಹಾಗೂ ಖಾಲಿ ನಿವೇಶನಗಳಲ್ಲಿ ತ್ಯಾಜ್ಯ ವಿಲೇವಾರಿ ಮಾಡುತ್ತಿದ್ದು, ಕಸ ರಾಶಿಯಾಗಿ ಬೆಳೆದಿದೆ. ಪೌರ ಕಾರ್ಮಿಕರು ಆ ಕಸ ವಿಲೇವಾರಿ ಮಾಡದೆ ಕೈಚೆಲ್ಲಿದ್ದಾರೆ. ಕಸದ ರಾಶಿಗೆ ಚರಂಡಿ ನೀರು ಸೇರಿ ತ್ಯಾಜ್ಯ ಸ್ಥಳದಲ್ಲೇ ಕೊಳೆತು ದುರ್ನಾತ ಬೀರುತ್ತಿದೆ.

ಕೊಳೆಗೇರಿಯಾದ ಬಡಾವಣೆ: ವಾರ್ಡ್‌ಗಳ ಕೆಲವೆಡೆ ಒಳಚರಂಡಿ ವ್ಯವಸ್ಥೆ (ಯುಜಿಡಿ) ಇಲ್ಲ. ಆ ಭಾಗದ ಮನೆಗಳ ಶೌಚಾಲಯಗಳನ್ನು ಚರಂಡಿಗೆ ಸಂಪರ್ಕಿಸಲಾಗಿದೆ. ಶೌಚಾಲಯಗಳಿಂದ ಬರುವ ಮಲಮೂತ್ರ ಚರಂಡಿಯಲ್ಲೇ ಸಾಗಬೇಕಿದೆ. ಆದರೆ, ಹಲವು ತಿಂಗಳಿಂದ ಚರಂಡಿಗಳನ್ನು ಸ್ವಚ್ಛಗೊಳಿಸಿಲ್ಲ. ಇದರಿಂದ ಚರಂಡಿಗಳು ಕಟ್ಟಿಕೊಂಡು ಬಡಾವಣೆಗಳು ಕೊಳೆಗೇರಿಯಂತಾಗಿವೆ. ಚರಂಡಿಯಲ್ಲಿನ ಮಲಮೂತ್ರ ಹಾಗೂ ಕೊಳಚೆ ನೀರಿನಿಂದ ಸೊಳ್ಳೆ, ನೊಣ, ಹಂದಿ, ಬೀದಿ ನಾಯಿ ಕಾಟ ಹೆಚ್ಚಿದ್ದು, ಸ್ಥಳೀಯರಲ್ಲಿ ಸಾಂಕ್ರಾಮಿಕ ರೋಗ ಭೀತಿ ಮನೆ ಮಾಡಿದೆ.

ಮತ್ತೊಂದೆಡೆ ಮ್ಯಾನ್‌ಹೋಲ್‌ ಮತ್ತು ಯುಜಿಡಿ ಪೈಪ್‌ಗಳು ಹಾಳಾಗಿದ್ದು, ಮನೆಗಳ ನಲ್ಲಿಗಳಲ್ಲಿ ಚರಂಡಿ ಹಾಗೂ ಮ್ಯಾನ್‌ಹೋಲ್‌ನ ಕೊಳಚೆ ನೀರು ಬರುತ್ತಿದೆ. ಮ್ಯಾನ್‌ಹೋಲ್‌ ಮುಚ್ಚಳಗಳು ಹಾಳಾಗಿ ವರ್ಷವೇ ಕಳೆದರೂ ಅವುಗಳನ್ನು ಬದಲಿಸಿಲ್ಲ. ಒಟ್ಟಾರೆ ಮೂಲಸೌಕರ್ಯ ಸಮಸ್ಯೆಯಿಂದ ಸ್ಥಳೀಯರ ಬದುಕು ನರಕ ಸದೃಶವಾಗಿದೆ.

*  * 

ನಗರಸಭೆ ಅಧ್ಯಕ್ಷರು ಹಾಗೂ ಅಧಿಕಾರಿಗಳು ವಾರ್ಡ್‌ನ ಅಭಿವೃದ್ಧಿ ವಿಷಯದಲ್ಲಿ ತಾರತಮ್ಯ ಮಾಡುತ್ತಿದ್ದಾರೆ. ಅಭಿವೃದ್ಧಿ ಕಾರ್ಯ ಕುಂಠಿತವಾಗಿದೆ

ಅಫ್ರೋಜ್‌ ಪಾಷಾ, 17ನೇ ವಾರ್ಡ್‌ ಸದಸ್ಯ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry