7

ಬರೀದ್‌ಶಾಹಿ ಉದ್ಯಾನಕ್ಕಾಗಿ ಹಗ್ಗ ಜಗ್ಗಾಟ

Published:
Updated:
ಬರೀದ್‌ಶಾಹಿ ಉದ್ಯಾನಕ್ಕಾಗಿ ಹಗ್ಗ ಜಗ್ಗಾಟ

ಬೀದರ್: ಇಲ್ಲಿಯ ಕೇಂದ್ರ ಬಸ್‌ ನಿಲ್ದಾಣದ ಸಮೀಪ ನಿರ್ಮಿಸಿರುವ ಬರೀದ್‌ಶಾಹಿ ಉದ್ಯಾನಕ್ಕೆ ಬರುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿರುವ ಪ್ರಯುಕ್ತ ಆದಾಯದಲ್ಲೂ ಏರಿಕೆ ಕಂಡು ಬಂದಿದೆ. ಇದೇ ಕಾರಣಕ್ಕಾಗಿಯೇ ಉದ್ಯಾನದ ಮೇಲೆ ಹಕ್ಕು ಸಾಧಿಸಲು ಜಿಲ್ಲಾ ಆಡಳಿತ ಹಾಗೂ ಭಾರತೀಯ ಸರ್ವೇಕ್ಷಣಾ ಇಲಾಖೆಯ ಮಧ್ಯೆ ಹಗ್ಗ ಜಗ್ಗಾಟ ಆರಂಭವಾಗಿದೆ.

ಬರೀದ್‌ಶಾಹಿ ಗೋರಿಗಳು ಇರುವ ಕಾರಣಕ್ಕೆ ಇಲ್ಲಿಯ ಪ್ರದೇಶವನ್ನು ಸ್ಮಶಾನದ ಸ್ಥಳವೆಂದೇ ಗುರುತಿಸಲಾಗಿತ್ತು. ಹೀಗಾಗಿ ಸ್ಮಾರಕಗಳು ಪಾಳು ಬಿದ್ದಿದ್ದವು. 25 ವರ್ಷಗಳ ಹಿಂದೆ ಜಿಲ್ಲಾ ಆಡಳಿತ ಉದ್ಯಾನ ಅಭಿವೃದ್ಧಿ ಪಡಿಸಿ ನಿರ್ವಹಣೆಗೆ ತೋಟಗಾರಿಕೆ ಇಲಾಖೆಗೆ ಒಪ್ಪಿಸಿದ ನಂತರ ಉದ್ಯಾನದಿಂದ ಉತ್ತಮ ಆದಾಯ ಬರುತ್ತಿದೆ.

ಉದ್ಯಾನದ ಪ್ರವೇಶ ದ್ವಾರವನ್ನು ಆಕರ್ಷಣೀಯಗೊಳಿಸಲಾಗಿದೆ. ಉದ್ಯಾನದೊಳಗೆ ದೇಸಿ ಸಂಸ್ಕೃತಿ ಹಾಗೂ ಸಂಪ್ರದಾಯವನ್ನು ಬಿಂಬಿಸುವ ಪ್ರತಿಕೃತಿಗಳನ್ನು ನಿರ್ಮಿಸಲಾಗಿದೆ. ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ರೈತರು, ಕುರಿಗಾಹಿ, ದೇಸಿ ಜಾನುವಾರು, ಕುರಿ, ನಾಯಿ ಪ್ರತಿಮೆ ಗಳನ್ನು ನಿರ್ಮಿಸಲಾಗಿದೆ. ಟೈಲ್ಸ್‌ ಬಳಸಿ ನಿರ್ಮಿಸಿರುವ ಆಸನಗಳು, ಕಾರಂಜಿ, ಅಲಂಕಾರಿಕ ಪುಷ್ಪ, ಸಸ್ಯಗಳು ಹಾಗೂ ಚಿಂಕೆಗಳ ಪ್ರತಿಕೃತಿಗಳು ಪ್ರೇಕ್ಷಕರ ಗಮನ ಸೆಳೆಯುತ್ತಿವೆ.

ಯೋಗ, ವ್ಯಾಯಾಮ ಮಾಡುವವರಿಗೆ ಬೆಳಗಿನ ಜಾವ ಉಚಿತ ಪ್ರವೇಶ ಇದೆ. 9 ಗಂಟೆಯ ನಂತರ ಉದ್ಯಾನ ವೀಕ್ಷಣೆಗೆ ₹ 5 ಶುಲ್ಕ ಪಡೆಯಲಾಗುತ್ತಿದೆ. ಉದ್ಯಾನ ನಿರ್ವಹಣೆಗೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಕಾವಲುಗಾರರನ್ನು ನೇಮಕ ಮಾಡಲಾಗಿದೆ. ಬಣ್ಣದ ವಿದ್ಯುತ್‌ ದೀಪಗಳನ್ನು ಅಳವಡಿಸಿ ರಾತ್ರಿ ವೇಳೆಯಲ್ಲಿ ಉದ್ಯಾನ ಇನ್ನಷ್ಟು ಅಂದವಾಗಿ ಕಾಣುವಂತೆ ವ್ಯವಸ್ಥೆ ಮಾಡಲಾಗಿದೆ.

ಭೂಗಳ್ಳರ ಹಾವಳಿ ಹೆಚ್ಚಾಗಿದ್ದ ಸಂದರ್ಭದಲ್ಲಿ ಎಎಸ್‌ಐಗೆ ಸೇರಿದ ಜಾಗ ಅತಿಕ್ರಮಣಕ್ಕೆ ಒಳಗಾಗಬಾರದು ಎನ್ನುವ ಉದ್ದೇಶದಿಂದ 1989ರಲ್ಲಿ ಜಿಲ್ಲಾಧಿಕಾರಿಯಾಗಿದ್ದ ಸಂದೀಪ ದವೆ ಅವರ ಅವಧಿಯಲ್ಲಿ ಜಿಲ್ಲಾ ಆಡಳಿತ ಬರೀದ್‌ಶಾಹಿ ಸ್ಮಾರಕಗಳ ಸುತ್ತ ಆವರಣ ಗೋಡೆ ನಿರ್ಮಿಸಲಾಯಿತು. ಸಾಮಾಜಿಕ ಅರಣ್ಯ ಇಲಾಖೆ ಸಸಿಗಳನ್ನು ನೆಟ್ಟು ಬೆಳೆಸಿತು. ನಂತರ ಅಲ್ಲಿ ಉದ್ಯಾನ ನಿರ್ಮಿಸಿ ನಿರ್ವಹಣೆಗಾಗಿ ತೋಟಗಾರಿಕೆ ಇಲಾಖೆಗೆ ಕೊಡಲಾಗಿದೆ. ಉದ್ಯಾನ ಅಭಿವೃದ್ಧಿಯಲ್ಲಿ ಹಿಂದೆ ಜಿಲ್ಲಾಧಿಕಾರಿಗಳಾಗಿದ್ದ ಹರ್ಷ ಗುಪ್ತ ಹಾಗೂ ಅನುರಾಗ ತಿವಾರಿ ಅವರ ಪಾತ್ರವೂ ಇದೆ. ಇಷ್ಟೆಲ್ಲ ಇದ್ದರೂ ಜಿಲ್ಲಾ ಆಡಳಿತವು ಎಎಸ್‌ಐನೊಂದಿಗೆ ಅಧಿಕೃತವಾಗಿ ಒಪ್ಪಂದ ಮಾಡಿ ಕೊಂಡಿರುವ ದಾಖಲೆಗಳು ಲಭ್ಯ ಇಲ್ಲ. ಹೀಗಾಗಿ ಗೊಂದಲ ಶುರುವಾಗಿದೆ.

‘ಬರೀದ್‌ಶಾಹಿ ಸ್ಮಾರಕಗಳು ಭಾರತೀಯ ಸರ್ವೇಕ್ಷಣಾ ಇಲಾಖೆಗೆ ಸೇರಿವೆ. ಉದ್ಯಾನ ನಿರ್ಮಿಸಿ ಅಭಿವೃದ್ಧಿ ಪಡಿಸಿರುವ ಬಗೆಗೆ ನಮ್ಮ ತಕರಾರು ಇಲ್ಲ. ಸ್ಮಾರಕಗಳಿಗೆ ಡ್ರಿಲ್‌ ಹಾಕಿ ಅಲ್ಲಲ್ಲಿ ವಿದ್ಯುತ್‌ ದೀಪಗಳನ್ನು ಅಳವಡಿಸಲಾಗಿದೆ. ಇದರಿಂದ ಅವುಗಳಿಗೆ ಧಕ್ಕೆ ಆಗುತ್ತಿದೆ. ಅಷ್ಟೇ ಅಲ್ಲ ನಮ್ಮ ಸ್ಮಾರಕಗಳು ಇರುವ ಸ್ಥಳದಲ್ಲಿ ಪ್ರವಾಸಿಗರಿಂದ ಶುಲ್ಕ ಪಡೆಯಲು ಅವಕಾಶ ಇಲ್ಲ. ಆದರೆ ಉದ್ಯಾನ ವೀಕ್ಷಣೆ ಸಾರ್ವಜನಿಕರಿಂದ ಶುಲ್ಕ ಪಡೆಯಲಾಗುತ್ತಿದೆ’ ಎಂದು ಎಎಸ್‌ಐನ ಸಹಾಯಕ ಸಂರಕ್ಷಣಾಧಿಕಾರಿ ವಿನಾಯಕ ಶಿರಹಟ್ಟಿ ಹೇಳುತ್ತಾರೆ.

‘ಬರೀದ್‌ಶಾಹಿ ಉದ್ಯಾನ ಎಎಸ್‌ಐ ಅಧೀನಕ್ಕೆ ನೀಡುವಂತೆ ಎಎಸ್‌ಐ ಧಾರವಾಡ ವಲಯದ ಅಧೀಕ್ಷಕ 2015, 2016ರಲ್ಲಿ ಜಿಲ್ಲಾ ಆಡಳಿತಕ್ಕೆ ಪತ್ರ ಬರೆದಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲೂ ಮನವಿ ಮಾಡಲಾಗಿದೆ. ಕಲಬುರ್ಗಿಯ ಪ್ರಾದೇಶಿಕ ಆಯುಕ್ತ ಹರ್ಷ ಗುಪ್ತ   ಬೀದರ್‌ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅವರಿಗೆ ಮಾಹಿತಿ ನೀಡಲಾಗಿದೆ. ಆದರೆ ಜಿಲ್ಲಾ ಆಡಳಿತದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ’ ಎನ್ನುತ್ತಾರೆ.

‘ಜಿಲ್ಲಾ ಆಡಳಿತದ ಸೂಚನೆಯಂತೆ ಉದ್ಯಾನ ನಿರ್ವಹಣೆ ಮಾಡಲಾಗುತ್ತಿದೆ. ಉದ್ಯಾನ ಮೇಲುಸ್ತುವಾರಿಗೆ ಒಬ್ಬ ತಾಂತ್ರಿಕ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಅದನ್ನು ಬಿಟ್ಟರೆ ನಮ್ಮ ಇಲಾಖೆಯ ಪಾತ್ರ ಏನೂ ಇಲ್ಲ’ ಎನ್ನುತ್ತಾರೆ ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಬಿ.ಎಂ.ಬಾವಗೆ.

‘ಬರೀದ್‌ಶಾಹಿ ಉದ್ಯಾನ ಬಿಟ್ಟರೆ ಜಿಲ್ಲೆಯಲ್ಲಿ ಒಂದೇ ಒಂದು ಉತ್ತಮವಾದ ಉದ್ಯಾನ ಇಲ್ಲ. ನಗರದ ಮುಲ್ತಾನಿ ಪಾಷಾ ದರ್ಗಾ ಸಮೀಪ ನಿರ್ಮಿಸಿದ್ದ ಪಬ್ಲಿಕ್‌ ಗಾರ್ಡನ್‌ಗೆ ಉಚಿತ ಪ್ರವೇಶ ಕಲ್ಪಿಸಿದ ನಂತರ ನಿರ್ವಹಣೆಗೆ ಹಣ ಇಲ್ಲದೆ ಹಾಳಾಯಿತು. ಬರೀದ್‌ಶಾಹಿ ಉದ್ಯಾನಕ್ಕೆ ಉಚಿತ ಪ್ರವೇಶ ಕಲ್ಪಿಸಿದರೆ ಅದೇ ಸ್ಥಿತಿ ನಿರ್ಮಾಣವಾಗಲಿದೆ. ಧೂಮಪಾನ ಮಾಡುವವರು ಇಲ್ಲಿಗೆ ಬರಲಿದ್ದಾರೆ. ವ್ಯಸನಿಗಳು ಮದ್ಯ ಸೇವಿಸಿ ಇಲ್ಲಿನ ಹುಲ್ಲು ಹಾಸಿನ ಮೇಲೆ ಉರುಳಾಡಿದರೂ ಅಚ್ಚರಿ ಇಲ್ಲ. ಹೀಗಾಗಿ ನಿರ್ವಹಣೆಗೆ ಕನಿಷ್ಠ ₹5 ಪಡೆಯುವುದು ತಪ್ಪಲ್ಲ. ಉದ್ಯಾನ, ಜಿಲ್ಲಾ ಆಡಳಿತದ ಅಧೀನದಲ್ಲಿರಲಿ ಅಥವಾ ಎಎಸ್‌ಐ ಬಳಿ ಇರಲಿ ನಿರ್ವಹಣೆ ಸರಿಯಾಗಿರಬೇಕು’ ಎಂದು ಟೀಮ್‌ ಯುವಾ ಸದಸ್ಯ ನಾಗನಾಥ ಪಾಟೀಲ ಹೇಳುತ್ತಾರೆ.

ಬೀದರ್ ಕೋಟೆ, ಬರೀದ್‌ಶಾಹಿ ಸ್ಮಾರಕ ಹಾಗೂ ಅಷ್ಟೂರಿನ ಗೋರಿಗಳು ಎಎಸ್‌ಐಗೆ ಸೇರಿವೆ. ನಿಯಮ ಪ್ರಕಾರ ಪ್ರೇಕ್ಷಕರಿಂದ ಟಿಕೆಟ್‌ ಪಡೆಯುವಂತಿಲ್ಲ.

ವಿನಾಯಕ ಶಿರಹಟ್ಟಿ ಸಹಾಯಕ ಸಂರಕ್ಷಣಾಧಿಕಾರಿ,ಎಎಸ್‌ಐ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry