7

'ಚಕ್ರವರ್ತಿ'ಯನ್ನು ಸೋಲಿಸಿ ಜನ ನಾಯಕನಾಗಿ ಹೊರಹೊಮ್ಮಿದ ವಡಗಾಮ್‍ನ ಜಿಗ್ನೇಶ್ ಮೇವಾನಿ

Published:
Updated:
'ಚಕ್ರವರ್ತಿ'ಯನ್ನು ಸೋಲಿಸಿ ಜನ ನಾಯಕನಾಗಿ ಹೊರಹೊಮ್ಮಿದ ವಡಗಾಮ್‍ನ ಜಿಗ್ನೇಶ್ ಮೇವಾನಿ

ವಡ್‍ಗಾಮ್(ಗುಜರಾತ್ ): ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟೂರು ವಡನಗರ. ಅಲ್ಲಿಂದ 40 ಕಿಮೀ ದೂರದಲ್ಲಿ ಇರುವ ಊರು ವಡಗಾಮ್. ಗುಜರಾತ್ ಎಂದರೆ ಮೋದಿ. ಅಲ್ಲಿ ಏನಿದ್ದರೂ ಮೋದಿ ಹವಾ. ಈ ಹವಾದ ನಡುವೆ ಎದ್ದು ಬಂದ ದಲಿತ ನಾಯಕ ಜಿಗ್ನೇಶ್ ಮೇವಾನಿ.

ಒಂದೆರಡು  ವರ್ಷಗಳ ಹಿಂದೆ ಗೂಗಲ್‍ನಲ್ಲಿ ಹುಡುಕಿದರೂ ಮೇವಾನಿ ಎಂದರೆ ಯಾರು ಎಂಬುದು ಗೊತ್ತಿರಲಿಲ್ಲ. ಆದರೆ 2016ರ ಆಗಸ್ಟ್ ತಿಂಗಳಲ್ಲಿ ಗುಜರಾತಿನಲ್ಲಿ ನಡೆದ ದಲಿತ ಹೋರಾಟ ಜಿಗ್ನೇಶ್ ಮೇವಾನಿಯನ್ನು ಜನನಾಯಕನಾಗುವಂತೆ ಮಾಡಿತು. ಗಿರ್ ಸೋಮನಾಥ ಜಿಲ್ಲೆಯ ಅತ್ಯಂತ ಹಿಂದುಳಿದ ಪ್ರದೇಶವಾದ ಉನಾದಲ್ಲಿ ದಲಿತರ ಮೇಲೆ ಗೋರಕ್ಷಕರು ಹಲ್ಲೆ ನಡೆಸಿದ ನಂತರ 2016ರ ಆಗಸ್ಟ್ 15ರಿಂದ ಅಹಮದಾಬಾದ್ ನಿಂದ ಉನಾದವರೆಗೆ ‘ದಲಿತ ಅಸ್ಮಿತಾ ರ‍್ಯಾಲಿ’ ನಡೆಸಿದ ಜಿಗ್ನೇಶ್ ಮೇವಾನಿ ಆಮೇಲೆ ತಮ್ಮ ಹೋರಾಟಗಳಿಗೆ ಮತ್ತಷ್ಟು  ಶಕ್ತಿ ತುಂಬುತ್ತಾ ಬಂದರು.

ಗುಜರಾತ್ ಚುನಾವಣಾ ಫಲಿತಾಂಶದ ಬಗ್ಗೆ ಚರ್ಚೆ ನಡೆಯುತ್ತಿರುವ ಈ ಹೊತ್ತಲ್ಲಿ ಜಿಗ್ನೇಶ್ ಮೇವಾನಿ ಎಂಬ ಈ ಯುವ ನಾಯಕನ ಹೆಸರು ಟ್ವಿಟರ್‍‍ನಲ್ಲಿ ಟ್ರೆಂಡ್ ಆಗುತ್ತಿದೆ. ಗುಜರಾತಿನ ಮುಖ್ಯಮಂತ್ರಿಯ ಹೆಸರಿಗಿಂತಲೂ ಹೆಚ್ಚು ಬಾರಿ ಜಿಗ್ನೇಶ್ ಹೆಸರು ಟ್ರೆಂಡ್ ಆಗಿದ್ದು, ಜಿಗ್ನೇಶ್ ಗೆಲುವು ರಾಜಕಾರಣದಲ್ಲಿನ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿದೆ.

ಮೆಹಸಾನ ಜಿಲ್ಲೆಯ ಮೆವು ಗ್ರಾಮದವರಾದ ಮೇವಾನಿ ಹುಟ್ಟಿದ್ದು ಬೆಳೆದಿದ್ದು ಎಲ್ಲ ಅಹಮದಾಬಾದ್ ನಲ್ಲಿ. ಕಾನೂನು ಪದವಿಯ ಜೊತೆ ಪತ್ರಿಕೋದ್ಯಮ ಡಿಪ್ಲೊಮಾ ಮುಗಿಸಿರುವ ಅವರು ಕೆಲವು ಕಾಲ ಅಹಮದಾಬಾದ್ ನ ‘ಅಭಿಯಾನ್’ ಪತ್ರಿಕೆಯಲ್ಲಿ ಕೆಲಸ ಮಾಡಿದ್ದರು. ಇದೇ ಮೊದಲ ಬಾರಿಗೆ ಚುನಾವಣಾ ಕಣಕ್ಕಿಳಿದಿದ್ದ ಮೇವಾನಿಗೆ ಕಾಂಗ್ರೆಸ್ ಪಕ್ಷ ಬೆಂಬಲವಾಗಿ ನಿಂತಿತ್ತು.

ವಡಗಾಮ್ ಪರಿಶಿಷ್ಟ ಜಾತಿಯವರಿಗೆ ಮೀಸಲು ಕ್ಷೇತ್ರ. 2012ರಲ್ಲಿ ಇಲ್ಲಿ ಕಾಂಗ್ರೆಸ್ ನ ಮಣಿಲಾಲ್ ವಘೇಲಾ ಗೆದ್ದಿದ್ದರು. ಅಂದು ಈ ಕ್ಷೇತ್ರದಲ್ಲಿ ವಘೇಲಾ 90375 ಮತ ಗಳಿಸಿ ವಿಜಯ ಗಳಿಸಿದ್ದರೆ, ಈ ಬಾರಿ ಮೇವಾನಿ 95 ,497 ಮತಗಳನ್ನು ಗಳಿಸಿ ಗೆಲುವು ಸಾಧಿಸಿದ್ದಾರೆ.

ಇಲ್ಲಿ ಜಿಗ್ನೇಶ್‍ಗೆ ಪೈಪೋಟಿ ನೀಡಿದ್ದು ಬಿಜೆಪಿ ಅಭ್ಯರ್ಥಿ ವಿಜಯ್ ಚಕ್ರವರ್ತಿ. ನಾಲ್ಕು ವರ್ಷದ ಹಿಂದೆ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ್ದ ಚಕ್ರವರ್ತಿ ಇಲ್ಲಿ ಗಳಿಸಿದ್ದು 75, 801 ಮತಗಳು. ಇದರ ಮಧ್ಯೆ ಬಿಎಸ್‍ಪಿ ಅಭ್ಯರ್ಥಿ ಜಾದವ್ ಪುಷ್ಪಬೇನ್ ರಾಜೇಶ್‍ಬಾಯಿ ಅವರಿಗೆ ಸಿಕ್ಕಿದ ಮತಗಳು1263. ದಲಿತ ನಾಯಕರಾಗಿದ್ದ  ಮೇವಾನಿಗೆ ಸಿಗವು ಮತಗಳನ್ನು ಒಡೆಯಲು ಬಿಜೆಪಿ ಶತಾಯಗತಾಯ ಪ್ರಯತ್ನಿಸಿದ್ದರೂ ಇಲ್ಲಿ ಅದು ಸಫಲವಾಗಿಲ್ಲ.;

ಚುನಾವಣಾ ಕಣಕ್ಕೆ ಜಿಗ್ನೇಶ್ ಧುಮುಕಿದಾಗ, ತಮಗೆ ಯಾವುದೇ ಪಕ್ಷದ ಬೆಂಬಲ ಅಗತ್ಯವಿಲ್ಲ. ಬಿಜೆಪಿಯನ್ನು ಸೋಲಿಸುವುದೇ ನನ್ನ ಪ್ರಧಾನ ಗುರಿ ಎಂದು ಜಿಗ್ನೇಶ್ ಮೇವಾನಿ ಹೇಳಿದ್ದರು. ಈಗ ಜನರು ಅವರ ಕೈ ಹಿಡಿದಿದ್ದಾರೆ. ‘ವಡಗಾಮ್ ನ ಬಾಲಕ (ಜಿಗ್ನೇಶ್ ಮೇವಾನಿ) ವಡನಗರದ ಮನುಷ್ಯ (ನರೇಂದ್ರ ಮೋದಿ) ಅವರನ್ನು ಸೋಲಿಸುತ್ತಾರೆ’ ಎಂಬ ಭವಿಷ್ಯ ನುಡಿ ಇಲ್ಲಿ ಸತ್ಯವಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry