ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಜರಾತ್‌ ಫಲಿತಾಂಶದಲ್ಲಿದೆ ಇಬ್ಬರಿಗೂ ಎಚ್ಚರಿಕೆಯ ಪಾಠ

Last Updated 18 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಹಿಮಾಚಲ ಪ್ರದೇಶದಲ್ಲಿ ನಿರಾಯಾಸ ಜಯ ಸಾಧಿಸಿದ ಬಿಜೆಪಿ, ಗುಜರಾತನ್ನು ಉಳಿಸಿಕೊಳ್ಳಲು ಬಹಳಷ್ಟು ಬೆವರು ಸುರಿಸಬೇಕಾಯಿತು ಎಂಬುದನ್ನು ಎರಡೂ ರಾಜ್ಯಗಳ ವಿಧಾನಸಭೆ ಚುನಾವಣಾ ಫಲಿತಾಂಶ ಬಿಚ್ಚಿಟ್ಟಿದೆ. ಹಿಮಾಚಲದಲ್ಲಿ ಅಧಿಕಾರ ನಡೆಸುತ್ತಿದ್ದ ಕಾಂಗ್ರೆಸ್‌ನ ಸೋಲಿನ ಬಗ್ಗೆ ಅಂತಹ ಅನುಮಾನಗಳೇನೂ ಇರಲಿಲ್ಲ. ಆದರೆ ಗುಜರಾತ್‌ನಲ್ಲಿ ಬಿಜೆಪಿ ಮತ್ತೆ ಅಧಿಕಾರ ಉಳಿಸಿಕೊಳ್ಳಲಿದೆ ಎಂದು ಮತಗಟ್ಟೆ ಸಮೀಕ್ಷೆಗಳು ಹೇಳಿದರೂ ಸಂದೇಹಗಳು ಇದ್ದೇ ಇದ್ದವು. 22 ವರ್ಷ ನಿರಂತರವಾಗಿ ಅಧಿಕಾರದ ಚುಕ್ಕಾಣಿ ಹಿಡಿದ ಯಾವುದೇ ಪಕ್ಷಕ್ಕೆ ಆಡಳಿತ ವಿರೋಧಿ ಅಲೆ ಕಾಡುವುದು ಸ್ವಾಭಾವಿಕ. ಅದಕ್ಕೆ ಬಿಜೆಪಿಯೂ ಹೊರತಲ್ಲ. ಅದಕ್ಕಿಂತ ಹೆಚ್ಚಾಗಿ, ಎರಡು ವರ್ಷಗಳ ಹಿಂದೆ ಅಲ್ಲಿ ದೊಡ್ಡ ಪ್ರಮಾಣದಲ್ಲಿ ನಡೆದ ಪಾಟೀದಾರ್‌ ಮೀಸಲಾತಿ ಚಳವಳಿಯು ಬಿಜೆಪಿಯ ಸಾಂಪ್ರದಾಯಿಕ ಮತದ ಬುಟ್ಟಿಯನ್ನೇ ಅಲುಗಾಡಿಸಿತ್ತು. ಬಿಜೆಪಿಯ ಕಟ್ಟಾ ಬೆಂಬಲಿಗ ವ್ಯಾಪಾರಿ ಸಮೂಹವಂತೂ ಹೊಸ ತೆರಿಗೆ ಪದ್ಧತಿಯಾದ ಜಿಎಸ್‌ಟಿ ಬಗ್ಗೆ ತೀವ್ರ ಅಸಮಾಧಾನಗೊಂಡಿತ್ತು. ನೋಟು ರದ್ದತಿಯ ಬಿಸಿ, ಹೆಚ್ಚುತ್ತಿದ್ದ ನಿರುದ್ಯೋಗ ಸಮಸ್ಯೆಯಿಂದ ಯುವ ಸಮೂಹದಲ್ಲಿ ಆತಂಕ, ಕೃಷಿ ಕ್ಷೇತ್ರದ ಸಂಕಷ್ಟಗಳು, ನರೇಂದ್ರ ಮೋದಿ ಅವರು ರಾಷ್ಟ್ರ ರಾಜಕಾರಣಕ್ಕೆ ಹೋದ ನಂತರ ರಾಜ್ಯದಲ್ಲಿ ಪ್ರಭಾವಿ ನಾಯಕತ್ವದ ಕೊರತೆ ಬಿಜೆಪಿಗೆ ಪ್ರತಿಕೂಲವಾಗಿದ್ದವು.

ಇದೇ ವೇಳೆ ಹೊಸ ಉತ್ಸಾಹ, ಹುರುಪಿನಿಂದ ಪ್ರಚಾರ ಕಣಕ್ಕೆ ಇಳಿದ ರಾಹುಲ್‌ ಗಾಂಧಿ ಅವರು ಪಾಟೀದಾರ್‌ ಮುಖಂಡ ಹಾರ್ದಿಕ್‌ ಪಟೇಲ್‌, ಒಬಿಸಿ ಮುಖಂಡ ಅಲ್ಪೇಶ್‌ ಠಾಕೂರ್‌ ಮತ್ತು ದಲಿತ ಮುಖಂಡ ಜಿಗ್ನೇಶ್‌ ಮೇವಾನಿ ಅವರನ್ನು ತಮ್ಮೆಡೆ ಸೆಳೆಯುವಲ್ಲಿ ಸಫಲರಾದರು. ಹೊಸದಾಗಿ ಜಾತಿ ಸಮೀಕರಣ ಮಾಡಿದರು. ನಿರಂತರ ಸೋಲಿನಿಂದ ಬಸವಳಿದಿದ್ದ ಅಲ್ಲಿನ ಕಾಂಗ್ರೆಸ್ಸಿನಲ್ಲಿ ಹೊಸ ಆಶಾಭಾವ ಗರಿಗೆದರುವಂತೆ ಮಾಡುವಲ್ಲಿ ಸಫಲರಾದರು. ಅದರ ಫಲವೇ, ಸೋಲಿನಲ್ಲೂ ಕಾಂಗ್ರೆಸ್‌ನ ಸ್ಥಿತಿಯ ಗಣನೀಯ ಸುಧಾರಣೆ. ಆದರೆ ಕಾಂಗ್ರೆಸ್‌ನ ಮತ ಪ್ರಮಾಣ, ಸ್ಥಾನ ಗಳಿಕೆ ಹೆಚ್ಚಿದರೂ ಅಧಿಕಾರ ದಕ್ಕಲಿಲ್ಲ. ಇದಕ್ಕೆ ಮುಖ್ಯವಾದ ಕಾರಣ, ಆಡಳಿತ ವಿರೋಧಿ ಅಲೆಯನ್ನು ಸರಿಯಾಗಿ ಬಳಸಿಕೊಳ್ಳುವಲ್ಲಿ ಮತ್ತು ಸ್ಥಳಿಯ ನಾಯಕತ್ವವನ್ನು ಬೆಳೆಸಿ ಮತದಾರರ ಮುಂದಿಡಲು ಕಾಂಗ್ರೆಸ್ ವಿಫಲವಾಗಿದ್ದು. ಈ ಚುನಾವಣೆ ಮೋದಿ ಮತ್ತು ರಾಹುಲ್‌ ನಡುವಿನ ಜಿದ್ದಾಜಿದ್ದಿ ಎಂಬಂತೆ ಬಿಂಬಿತವಾಯಿತು. ಮೊದಲ ಹಂತದ ಚುನಾವಣಾ ಪ್ರಚಾರ ಸಭೆಗಳಲ್ಲಿ ‘ವಂಶಾಡಳಿತ ವಿರೋಧ ಮತ್ತು ವಿಕಾಸದ ನಡುವೆ ಆಯ್ಕೆ’ ಎನ್ನುವುದು ಮೋದಿ ಅವರ ಭಾಷಣದ ತಿರುಳಾಗಿತ್ತು. ಇದು ಫಲ ಕೊಡುವುದಿಲ್ಲ ಎಂದು ಅರಿವಾಗುತ್ತಿದ್ದಂತೆ ಎರಡನೇ ಹಂತದಲ್ಲಿ ಇದನ್ನು ಪಕ್ಕಕ್ಕಿಟ್ಟರು.

‘ಗುಜರಾತ್‌ನ ಗೌರವ, ಗುಜರಾತ್‌ ಚುನಾವಣೆಯಲ್ಲಿ ಪಾಕಿಸ್ತಾನ ಹಸ್ತಕ್ಷೇಪ ಮಾಡುತ್ತಿದೆ’ ಎಂಬ ಭಾವನಾತ್ಮಕ ವಿಷಯಗಳನ್ನು ಮುನ್ನೆಲೆಗೆ ತಂದರು. ಮೋದಿ– ರಾಹುಲ್‌ ಮಧ್ಯೆ ಗುಜರಾತ್‌ ಮತದಾರರು ತಮ್ಮದೇ ರಾಜ್ಯದವರಾದ ಮೋದಿಯವರನ್ನೇ ಆಯ್ಕೆ ಮಾಡಿಕೊಂಡಿದ್ದು ಸಹಜ. ಇಲ್ಲಿ ಒಂದು ಕುತೂಹಲಕಾರಿ ವಿದ್ಯಮಾನವನ್ನೂ ಗಮನಿಸಬೇಕಿದೆ. 2002ರಿಂದ ಈಚಿಗಿನ ಎಲ್ಲ ಚುನಾವಣೆಗಳಲ್ಲಿ ಬಿಜೆಪಿಯ ಮತ ಗಳಿಕೆ– ಸ್ಥಾನ ಗಳಿಕೆ ಎರಡೂ ಇಳಿಮುಖವಾಗುತ್ತಲೇ ಬಂದಿದ್ದರೂ ಈ ಸಲ ಮತ ಗಳಿಕೆ ಪ್ರಮಾಣ ಏರಿಕೆಯಾಗಿದೆ; ಸ್ಥಾನ ಕಡಿಮೆಯಾಗಿದೆ. ಜಾತಿ ಸಮೀಕರಣವನ್ನು ಬದಲಿಸಿ ಅಧಿಕಾರವನ್ನು ಹಾಗೂ ಹೀಗೂ ಉಳಿಸಿಕೊಂಡಿದೆ. ಪ್ರತಿಕೂಲ ಅಂಶಗಳೇ ಹೆಚ್ಚಿದ್ದರೂ ಅದನ್ನು ಮೆಟ್ಟಿ ನಿಂತು ಸತತ ಆರನೇ ಸಲವೂ ಪಕ್ಷ ಅಧಿಕಾರಕ್ಕೆ ಬರುವಂತೆ ಮಾಡುವಲ್ಲಿ ಮೋದಿ ಸಫಲರಾಗಿದ್ದಾರೆ. ತನ್ನನ್ನು ನಿರ್ಲಕ್ಷಿಸಲಾಗದು ಎಂದು ರಾಹುಲ್‌ ಸಾಬೀತು ಮಾಡಿದ್ದಾರೆ. ಇವರೆಡೂ ದೊಡ್ಡ ಸಾಧನೆ.

ಆದರೆ ರಾಜಕಾರಣದಲ್ಲಿ ಅಧಿಕಾರ ಎನ್ನುವುದು ಬ್ರಹ್ಮಾಸ್ತ್ರದಂತೆ. ಅದಿಲ್ಲದೇ ಹೋದರೆ ಪಕ್ಷ ಕಟ್ಟುವುದು, ಕಾರ್ಯಕರ್ತರನ್ನು ಹಿಡಿದಿಟ್ಟುಕೊಳ್ಳುವುದು ಕಷ್ಟ. ಅದನ್ನು ಕಾಂಗ್ರೆಸ್‌ ಹೇಗೆ ನಿಭಾಯಿಸುತ್ತದೆ ಎನ್ನುವುದು ಮುಖ್ಯ. ಏಕೆಂದರೆ ಕೇಂದ್ರದಲ್ಲಿ ಮತ್ತು 19 ರಾಜ್ಯಗಳಲ್ಲಿ ಬಿಜೆಪಿ ನೇರವಾಗಿ ಅಧಿಕಾರದಲ್ಲಿದೆ. 29 ರಾಜ್ಯಗಳ ಪೈಕಿ ಕಾಂಗ್ರೆಸ್‌ನ ಆಡಳಿತ ಕರ್ನಾಟಕ, ಪಂಜಾಬ್‌, ಮೇಘಾಲಯ, ಮಿಜೋರಾಂಗೆ ಸೀಮಿತವಾಗಿದೆ. ಕರ್ನಾಟಕ ವಿಧಾನಸಭೆ ಅವಧಿ ಇನ್ನು ಐದು ತಿಂಗಳಲ್ಲಿ, ಲೋಕಸಭೆ ಅವಧಿ 18 ತಿಂಗಳಲ್ಲಿ ಮುಗಿಯಲಿದೆ. ಇವುಗಳ ಮೇಲೆ ಗುಜರಾತ್‌ ಫಲಿತಾಂಶದ ಛಾಯೆ ಇದ್ದೇ ಇರುತ್ತದೆ. ಅದೇ ಕಾರಣಕ್ಕಾಗಿ, ಬೇರೆ ಯಾವುದೇ ರಾಜ್ಯ ವಿಧಾನಸಭಾ ಚುನಾವಣೆಗೂ ಗುಜರಾತ್‌ ಚುನಾವಣೆಯಷ್ಟು ಮಹತ್ವ ಸಿಕ್ಕಿರಲಿಲ್ಲ. ಏಕೆಂದರೆ ಇದು ಮತದಾರರ ಮನದಿಂಗಿತದ ದಿಕ್ಸೂಚಿ ಎಂದೇ ತಿಳಿಯಲಾಗಿತ್ತು. ಜನ ತೀರ್ಪು ಕೊಟ್ಟಿದ್ದಾರೆ. ಅದರಲ್ಲಿ ಬಿಜೆಪಿಗೂ ಬಹಳಷ್ಟು ಎಚ್ಚರಿಕೆಯ ಪಾಠಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT