7

ವಿಜಯಪುರದ ಯುದ್ಧತೋಪುಗಳು

Published:
Updated:
ವಿಜಯಪುರದ ಯುದ್ಧತೋಪುಗಳು

ಅಂದು ಶತ್ರುಗಳನ್ನು ಹೆಡೆಮುರಿ ಕಟ್ಟಲು ನಾಡಿನ ರಕ್ಷಣೆಗೆ ಆ ಆಯುಧಗಳು ಸನ್ನದ್ಧವಾಗಿದ್ದವು. ಮದ್ದುಗುಂಡುಗಳನ್ನು ನುಂಗುತ್ತ; ಬೆಂಕಿಯನ್ನು ಉಗುಳುತ್ತ ವೈರಿಗಳನ್ನು ನಡುಗಿಸುತ್ತಿದ್ದವು. ಕೋಟೆಯ ಮೇಲೆ ಕಾವಲು ಕಾಯುತ್ತ; ಯುದ್ಧಭೂಮಿಯಲ್ಲಿ ಸುಲ್ತಾನನನ್ನು ರಕ್ಷಿಸುತ್ತ ಪ್ರಾಣವನ್ನು ಪಣವಾಗಿಟ್ಟು ಹೋರಾಡುವ ಸೈನಿಕರಿಗೆ ಆತ್ಮಬಲ ನೀಡುತ್ತಿದ್ದವು. ಅಂದಿನ ಯುದ್ಧಗಳಲ್ಲಿ ಐತಿಹಾಸಿಕ ಪಾತ್ರ ವಹಿಸಿದ ಕುರುಹುಗಳಾಗಿ ಇಂದಿಗೂ ಉಳಿದುಕೊಂಡಿವೆ ಯುದ್ಧತೋಪುಗಳು ಎನ್ನುವ ಆ ಆಯುಧಗಳು. ಗೊತ್ತೆ? ಇಲ್ಲಿಯಂತಹ ತೋಪುಗಳು ದೇಶದ ಬೇರೆಲ್ಲಿಯೂ ನಿರ್ಮಾಣವಾಗಿಲ್ಲ.

ವಿಜಯಪುರಕ್ಕೆ ಬಂದ ಪ್ರವಾಸಿಗರನ್ನು ಗೋಳಗುಮ್ಮಟ ಹಾಗೂ ದಕ್ಷಿಣ ಭಾರತದ ತಾಜ್‌ಮಹಲ್ ಎಂದು ಕರೆಸಿಕೊಳ್ಳುವ ‘ಇಬ್ರಾಹಿಂ ರೋಜಾ’ ತಮ್ಮತ್ತ ಕೈಬೀಸಿ ಕರೆಯುತ್ತವೆ. ಆದರೆ, ಅಂದಿನ ಹೋರಾಟದ ಹಾದಿಯಲ್ಲಿ ನಿರ್ಮಾಣವಾದ ತೋಪುಗಳಲ್ಲಿ ಕೆಲವು ಅನಾಥವಾಗಿದ್ದು, ಅಜ್ಞಾತವಾಸ ಅನುಭವಿಸುತ್ತಿವೆ. ವಿಜಯಪುರದ ಈ ವಿಶಿಷ್ಟ ತೋಪುಗಳಿಗೆ ಒಂದು ಸುತ್ತು ಹಾಕಿಬರೋಣ ಬನ್ನಿ.

ಮಲಿಕ್‌-ಮೈದಾನ್ ತೋಪು

ಬೆಳಗಾವಿ ರಸ್ತೆಯಲ್ಲಿರುವ ಕೋಟೆಗೋಡೆ ಮೇಲಿನ ಶೇರ್‌ಜಿ ಬುರುಜ್‌ನ ಮೇಲಿದೆ ಮಲಿಕ್‌-ಮೈದಾನ್ ತೋಪು. ಅಹ್ಮದ್‍ನಗರದ ರಾಜಕುಮಾರಿ ಚಾಂದ್‍ಬೀಬಿ, ಆದಿಲ್‍ಶಾಹಿ ಮನೆತನದ ಸೊಸೆಯಾಗಿ ಬರುವ ಸಂದರ್ಭದಲ್ಲಿ ಇದನ್ನು ವರದಕ್ಷಿಣೆಯ ರೂಪದಲ್ಲಿ ತೆಗೆದುಕೊಂಡು ಬಂದಿದ್ದಳು ಎನ್ನುವ ಮಾಹಿತಿಯಿದೆ. ಇದನ್ನು ಹಸನ್ ರೂಮಿ ಎಂಬಾತ ಪಂಚಲೋಹದಲ್ಲಿ ನಿರ್ಮಾಣ ಮಾಡಿದ್ದು, ಇಂದಿಗೂ ಹೊಚ್ಚ ಹೊಸದರಂತೆ ಫಳ ಫಳ ಹೊಳೆಯುತ್ತದೆ.

ಸುಮಾರು 55 ಟನ್‍ಗಳಷ್ಟು ಭಾರವಿರುವ ಈ ತೋಪನ್ನು ತಾಳಿಕೋಟಿ ಕದನದಲ್ಲಿ ವಿಜಯನಗರ ಅರಸರ ವಿರುದ್ಧ ರಕ್ಕಸಗಿ ತಂಗಡಗಿಯಲ್ಲಿ ಬಳಸಲಾಗಿತ್ತು ಎಂಬುದು ಇತಿಹಾಸದ ಪುಟಗಳಿಂದ ತಿಳಿದುಬರುತ್ತದೆ. ನಂತರ ಬ್ರಿಟಿಷರು ಇದನ್ನು ತಮ್ಮ ದೇಶಕ್ಕೆ ತೆಗೆದುಕೊಂಡು ಹೋಗುವುದಕ್ಕೆ ಪ್ರಯತ್ನಿಸಿದ್ದರು. ಆದರೆ, ಇದರ ಭಾರಕ್ಕೆ ಬೆಂಡಾದ ಪರಂಗಿಯವರು ಈ ಫಿರಂಗಿಯನ್ನು ಇಲ್ಲಿಯೇ ಬಿಟ್ಟುಹೋದರು.

ಮುಸ್ತಫಾಬಾದ್ ತೋಪು

ವಿಜಯಪುರದ ಎರಡನೇ ದೊಡ್ಡ ತೋಪು ಎಂದರೆ ಅದು ಮುಸ್ತಫಾಬಾದ್ ತೋಪು. ಇದನ್ನು ಅಲ್ಲಾಪುರ ದ್ವಾರಬಾಗಿಲಿನ ಮೇಲಿರುವ ಫರಂಗಿ ಬುರ್ಜ್‌ ಮೇಲಿರಿಸಲಾಗಿತ್ತು. ಆದರೆ, ಕೋಟೆ ಮೇಲಿನ ಉಪ್ಪರಿಗೆಯಿಂದ ಅದೀಗ ಕುಸಿದು ತಿಪ್ಪೆಯಲ್ಲಿ ಬಿದ್ದಿದೆ. 1597ರಲ್ಲಿ ಎರಡನೇ ಇಬ್ರಾಹಿಂ ಆದಿಲ್‍ಶಾಹಿ ಕಾಲದಲ್ಲಿ ನಿರ್ಮಾಣವಾದ ಈ ತೋಪು ಸುಮಾರು 12.2 ಅಡಿ ಉದ್ದವಾಗಿದೆ. ಅದನ್ನು ಸಂರಕ್ಷಿಸಿ ಬೇರೆಲ್ಲಾದರೂ ಇಟ್ಟರೆ ಪ್ರವಾಸಿಗರನ್ನು ಆಕರ್ಷಿಸಬಹುದಾಗಿದೆ.

ಅಲಿಬುರುಜ್‌ ತೋಪು

ಗೋಳಗುಮ್ಮಟದ ಹಿಂದಿನ ಭಾಗದಲ್ಲಿರುವ ಕೋಟೆಯ ಪಹರೆ ಸ್ಥಳದ ಮೇಲೆ ಈ ತೋಪನ್ನು ಇಡಲಾಗಿದೆ. ನಾಲ್ಕೂ ದಿಕ್ಕುಗಳಿಂದ ಆಕ್ರಮಣ ಮಾಡಲು ಹೊಂಚುತ್ತಿದ್ದ ಸೈನಿಕರನ್ನು ಹೊಡೆದುರುಳಿಸಲು ಅದನ್ನು ನಿಲ್ಲಿಸಲಾಗಿತ್ತು.

ಹೀಗಾಗಿ ವಿಜಯಪುರ ಕೋಟೆಯ ನಾಲ್ಕೂ ದಿಕ್ಕುಗಳಲ್ಲಿ ಇಂತಹ ತೋಪುಗಳು ಇದ್ದವು. ಸುಮಾರು 22 ಅಡಿ ಉದ್ದದ ಈ ತೋಪು ಇಂದಿಗೂ ಕೋಟೆಯ ಮೇಲೆಯೇ ವಾಸ್ತವ್ಯ ಹೂಡಿದೆ. ಆದರೆ ಸಾರ್ವಜನಿಕರ ದರ್ಶನಕ್ಕೆ ಮಾತ್ರ ಅವಕಾಶವಿಲ್ಲದಂತೆ ಅಜ್ಞಾತವಾಸ ಅನುಭವಿಸುತ್ತಿದೆ. ಇದನ್ನು ವೀಕ್ಷಿಸುವುದು ಅಷ್ಟು ಸುಲಭವಾಗಿಲ್ಲ.

ಇದನ್ನು ನೋಡಬೇಕೆಂದರೆ ಸರ್ಕಸ್‌ ಮಾದರಿಯಲ್ಲಿ ಕೋಟೆ ಏರಿ ಹೋಗಬೇಕಿದೆ. ಈ ತೋಪಿಗೆ ಅಜ್ಞಾತವಾಸದಿಂದ ಮುಕ್ತಿ ಬೇಕಿದೆ.

ಲಂಡಾ ಕಸಬ್ ತೋಪು

ನಗರದ ಒಳಭಾಗದಲ್ಲಿರುವ ಕೋಟೆಯ ಮೇಲೆ ಒಂದು ಸಣ್ಣ ಹಾಗೂ ಒಂದು ದೊಡ್ಡ ತೋಪನ್ನು ಇಡಲಾಗಿದೆ. ಕೋಟೆಯ ಮೇಲೆ ಅನಾಥವಾಗಿ ಬಿದ್ದಿರುವ ಈ ತೋಪುಗಳು ಸದ್ಯ ತಮಗೆ ಒದಗಿರುವ ದುಸ್ಥಿತಿ ನೆನೆಯುತ್ತ ಮಳೆ, ಗಾಳಿ, ಚಳಿಯಿಂದ ರಕ್ಷಣೆ ಬೇಡುತ್ತ ಬಿದ್ದುಕೊಂಡು ಪ್ರವಾಸಿಗರಿಗೆ ಕಾಣದಂತೆ ಉಳಿದುಬಿಟ್ಟಿವೆ.

ಉಪ್ಪಲಿ ಬುರುಜ್‌ ತೋಪು

ನಗರದ ಹೃದಯಭಾಗದಲ್ಲಿ ನಿರ್ಮಾಣ ಮಾಡಲಾಗಿರುವ ಉಪ್ಪಲಿ ಬುರುಜಿನ ಮೇಲೆ ಅಂದಿನ ರೌದ್ರನರ್ತನವನ್ನು ಮುಗಿಸಿ ಶಾಂತವಾಗಿ ಮಲಗಿರುವ ತೋಪುಗಳೇ ಅಲಿಬುರುಜ್‌ ತೋಪುಗಳು. ಅತ್ಯಂತ ಉದ್ದನೆಯ ಎರಡು ತೋಪುಗಳು (30 ಅಡಿ ಹಾಗೂ 28 ಅಡಿ) ಅಲ್ಲಿ ನೆಲೆಗೊಂಡಿವೆ. ಅಂದು ರಾಜ್ಯವನ್ನು ಕಾವಲು ಕಾಯ್ದು ನಾಡನ್ನು ರಕ್ಷಿಸಿದ ಕಥೆಯನ್ನು ಅವುಗಳು ಹೇಳುತ್ತಿವೆ. ನಗರ ವೀಕ್ಷಣೆಗೆ ಬರುವವರನ್ನು ಆತ್ಮೀಯತೆಯಿಂದ ಬರಮಾಡಿಕೊಳ್ಳುತ್ತವೆ. ತಳವೂರಿದ ಸ್ಥಳದಲ್ಲಿ ಸುಮ್ಮನೇ ಕುಳಿತು ಪ್ರವಾಸಿಗರನ್ನು ಆಕರ್ಷಿಸುತ್ತಿವೆ.

ಕಣ್ಸೆಳೆಯುವ ಸಣ್ಣ ತೋಪುಗಳು

ದೊಡ್ಡ ದೊಡ್ಡ ತೋಪುಗಳು ಇತಿಹಾಸದ ದರ್ಶನ ಮಾಡಿಸುತ್ತಿದ್ದರೆ, ಇನ್ನುಳಿದ ಸಣ್ಣ ಸಣ್ಣ ತೋಪುಗಳು ಗೋಳಗುಮ್ಮಟದ ಎದುರಿರುವ ವಸ್ತು ಸಂಗ್ರಹಾಲಯದ ಮುಂದೆ ವಿರಾಜಮಾನವಾಗಿವೆ. ಯುದ್ಧದ ನೆನಪುಗಳನ್ನು ಮೆಲುಕು ಹಾಕುತ್ತ ನೋಡುಗರನ್ನು ಆಕರ್ಷಿಸುತ್ತಿವೆ. ಸುಮಾರು ಆರು ಸಣ್ಣ ಸಣ್ಣ ತೋಪುಗಳಿದ್ದು ವಿಜಯಪುರದ ಆದಿಲ್‍ಶಾಹಿಗಳ ಸಾಮ್ರಾಜ್ಯ ನಿರ್ಮಾಣದಲ್ಲಿ ತಮ್ಮ ಪಾತ್ರಗಳು ಏನು ಎಂಬುದನ್ನು ಬಂದ ಎಲ್ಲರಿಗೂ ಇಂದಿಗೂ ಸಾರಿ ಸಾರಿ ಹೇಳುತ್ತವೆ.

ಹಿಂದೆ ಹೋರಾಟದ ಹಾದಿಯಲ್ಲಾದ ಸಾವು ನೋವುಗಳಿಗೆ ಈ ಕುರುಹುಗಳು ಇಂದಿಗೂ ಸಾಕ್ಷಿಯನ್ನು ಒದಗಿಸುತ್ತಿವೆ. ಅಂದು ನೆತ್ತರ ಹರಿಸಿದ ತೋಪುಗಳು ಇಂದು ಇತಿಹಾಸವನ್ನರಿಯದ ಜನರ ಕೈಲಿ ಸಿಕ್ಕು ತತ್ತರಿಸುತ್ತ ಮಲಗಿವೆ. ಯುದ್ಧಭೂಮಿಯಲ್ಲಿ ಭೋರ್ಗರೆಯುತ್ತ ಬೆಂಕಿ ಉಗುಳಿದ್ದ ಅವುಗಳು ಈಗ ಶಾಂತವಾಗಿ ಮಲಗಿ ಎಲ್ಲರನ್ನೂ ಆಕರ್ಷಿಸುತ್ತಿವೆ. ಅಲ್ಲೊಂದು, ಇಲ್ಲೊಂದು ಬಿಡಿಬಿಡಿಯಾಗಿರುವ ಅವೆಲ್ಲವುಗಳೂ ಒಂದೆಡೆಯೇ ನೋಡಲು ಸಿಕ್ಕರೆ ಚೆನ್ನ ಎನ್ನುವುದು ಇತಿಹಾಸಪ್ರಿಯರ ಆಶಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry