7

ಮೈಲು ಬರೀ ಆರು; ಕೃಷಿಪಾಠ ನೂರಾರು

Published:
Updated:
ಮೈಲು ಬರೀ ಆರು; ಕೃಷಿಪಾಠ ನೂರಾರು

ಕುಡಿಯಕ್ಕೆ ನೀರು ಕೇಳಿದ್ರೆ ಬೊಗಸೆ ತುಂಬಾ ನೀಡಬೇಕು. ಹಸಿದವರಿಗೆ ಹಣ್ಣು ಕೊಟ್ಟರೆ ಹೊಟ್ಟೆ ತುಂಬ್ತು ಕಣವ್ವ ಅನ್ನೋ ವರೆಗೂ ಕೊಡಬೇಕು. ಈ ತಾಯಿ ನಮ್ಮನ್ನೇನು ಕೈಬಿಟ್ಟಿಲ್ಲ. ಮಗಿನಂಗೆ ನೋಡ್ತಾಳೆ. ಅದಕ್ಕೆ ನಾವು ಯಾವತ್ತೂ ಲೆಕ್ಕ ಇಡದೆ, ದುಡ್ಡು ಇಸ್ಕಳ್ಳದ್ಹಂಗೆ ಬಂದವರಿಗೆ ಹಣ್ಣು ಕೊಡ್ತೀವಿ...’

ಕೊರಟಗೆರೆ ತಾಲ್ಲೂಕಿನ ನಂದಿಹಳ್ಳಿಯ ರಂಗಮ್ಮ ಹಲಸಿನ ಮರದ ಕೆಳಗೆ ಈ ಮಾತು ಹೇಳುತ್ತಿದ್ದರೆ, ಮರದಲ್ಲಿ ಅಕಾಲಿಕ ವಾಗಿ (ಅನ್‌ಸೀಸನ್) ಬೆಳೆದಿರುವ ಹಲಸಿನ ಕಾಯಿಗಳು ತೂಗುತ್ತಿದ್ದವು.

‘ಈ ತಾಯಿ ನಮ್ಮನ್ನೇನು ಕೈಬಿಟ್ಟಿಲ್ಲ’ ಎನ್ನುವ ರಂಗಮ್ಮನ ಭೂಮಿ ಪ್ರೀತಿಯ ಮಾತನ್ನು ತೋವಿನಕೆರೆ ಹೋಬಳಿಯ ಪ್ರತಿ ಹಳ್ಳಿಯಲ್ಲಿಯೂ ಕೇಳಬಹುದು.

ಹೋಬಳಿಯನ್ನು ‘ಕೃಷಿ ಅಧ್ಯಯನದ ಕಣಜ’ ಎಂದರೆ ಅತಿಶಯವಾಗದು. ದಾಸನಕುಂಟೆ, ಮಣುವಿನಕುರ್ಕೆ, ಬಂಡೆ ಹಳ್ಳಿ, ಜುಂಜುರಾಮನಹಳ್ಳಿ, ಉಪ್ಪಾರಪಾಳ್ಯ, ಕುರುಬರಪಾಳ್ಯ, ಸಿವಿಡಿ ಪಾಳ್ಯ, ತೋವಿನಕೆರೆ, ಜೋನಿಗರಹಳ್ಳಿ, ನಂದಿಹಳ್ಳಿ, ಕಬ್ಬಿಗೆರೆ, ಚಿಕ್ಕಣ್ಣನಹಳ್ಳಿ, ಅಜ್ಜೇನಹಳ್ಳಿ, ಸೂರೇನಹಳ್ಳಿ, ಗೊಲ್ಲರಹಟ್ಟಿ... ಹೀಗೆ ಹಲವು ಹಳ್ಳಿಗಳಲ್ಲಿ ಕೃಷಿ ಅಧ್ಯಯನಕ್ಕೆ ಉತ್ತಮ ಪ್ರಾತ್ಯಕ್ಷಿಕೆಯ ತಾಕುಗಳು ಕಾಣುತ್ತವೆ. ಕೃಷಿ ಸಾಧಕರ ಚಿತ್ರಗಳು ತೆರೆದುಕೊಳ್ಳುತ್ತವೆ.

ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ರೈತರನ್ನು, ಮಹಿಳೆ ಯರನ್ನು ಕೃಷಿ ಪ್ರವಾಸಕ್ಕಾಗಿ ಇಲ್ಲಿಗೆ ಕರೆತರುತ್ತದೆ. ಬೆಂಗಳೂರಿನ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ (ಜಿಕೆವಿಕೆ) ಸಂಶೋಧಕರು, ವಿದ್ಯಾರ್ಥಿಗಳಿಗೆ ತೋವಿನಕೆರೆ ಅಧ್ಯಯನದ ಸ್ಥಳವಾಗಿಯೇ ಗುರುತಾಗಿದೆ.

‘ಆರ್ಥಿಕ ದೃಢತೆಗೆ ಮಿಶ್ರ ಬೆಳೆ ಬೆಳೆಯಿರಿ, ಸಮಗ್ರ ಕೃಷಿ ಮಾಡಿ’ ಎಂದು ಒತ್ತಿ ಹೇಳುವ ಅಗತ್ಯ ಇಲ್ಲಿ ಇಲ್ಲವೇ ಇಲ್ಲ. ಮಿಶ್ರಬೆಳೆ ಪ್ರತಿ ರೈತರ ಕೃಷಿಯ ಭಾಗವಾಗಿದೆ. ‘ಪ್ರಗತಿಪರ’ ರೈತ ಎನ್ನುವ ವಿಶೇಷಣ ಇಲ್ಲದೆ ತಮ್ಮಷ್ಟಕ್ಕೆ ಕೆಲಸ ಮಾಡುವ ರೈತರನ್ನು ಮಾತಿಗೆ ಎಳೆದರೆ ಮಿಶ್ರ ಬೇಸಾಯ, ಆರ್ಥಿಕ ಸ್ವಾವಲಂಬನೆ, ಹೊಸ ತಳಿ, ಮಾರುಕಟ್ಟೆ, ಹೊಸ ಕೃಷಿ ವಿಧಾನಗಳ ಬಗ್ಗೆ ಮಾತು ಬಿಚ್ಚಿಕೊಳ್ಳುತ್ತದೆ.

ತೋವಿನಕೆರೆಯ ಜಯಪದ್ಮಮ್ಮ ಅವರ ಶೂನ್ಯ ಬಂಡವಾಳದ ತೋಟ, ಕಬ್ಬಿಗೆರೆ ಜವರೇಗೌಡರ ಕೃಷಿ ಉಪಕರಣ, ನಂದಿಹಳ್ಳಿಯ ನೀಲಕಂಠಮೂರ್ತಿ ಅವರ ಓದೇಕರ್ ಫಾರಂ, ವಿಜಯ ಕುಮಾರ್ ಅವರ ನಂದಿಫಾರಂ, ಅಕಾಲಿಕವಾಗಿ ಹಣ್ಣು ಬಿಡುವ ಹಲಸಿನಮರ, ಜೋನಿಗರಹಳ್ಳಿಯ ಹೂವಿನ ಬೇಸಾಯ, ಗೊಲ್ಲರ ಹಟ್ಟಿಯ ರೈತರು ಬೆಳೆಯುವ ಸಿರಿ ಧಾನ್ಯ... ಹೀಗೆ ಹುಡುಕಿದಷ್ಟೂ ಮಾದರಿ ತೋಟಗಳು ಇವೆ.

ಜಯಪದ್ಮಮ್ಮ ಅವರ ತೋಟದಲ್ಲಿಯೇ 100ಕ್ಕೂ ಹೆಚ್ಚು ರೈತ ಕಾರ್ಯಾಗಾರಗಳು ಜರುಗಿವೆ. ಅವರು ಗೊಬ್ಬರ ಗಿಡ, ಜತ್ರೋಪ, ಆಡು ಮುಟ್ಟದ ಸೊಪ್ಪು, ಬಿದಿರು, ಬೇವಿನ ಗಿಡ ದಿಂದ ತೋಟಕ್ಕೆ ಜೀವಂತ ಬೇಲಿ ನಿರ್ಮಿಸಿರುವುದು ವಿಶೇಷ.

ಜಿಕೆವಿಕೆ ಪ್ರವೇಶ: 2014 ಮತ್ತು 2016ರಲ್ಲಿ ಜಿಕೆವಿಕೆಯ ಬಿಎಸ್ಸಿ ಕೃಷಿ, ಬಿಎಸ್ಸಿ ಮಾರುಕಟ್ಟೆ ಮತ್ತು ಬಿಎಸ್ಸಿ ಕೃಷಿ ಸಾಧನ– ಸಲಕರಣೆ ವಿಭಾಗದ 20 ವಿದ್ಯಾರ್ಥಿಗಳು ‘ರಾಷ್ಟ್ರೀಯ ಕೃಷಿ ಕಾರ್ಯಾನುಭವ ಯೋಜನೆ’ಯಡಿ ಹೋಬಳಿಯಲ್ಲಿ 90 ದಿನ ಅಧ್ಯಯನ ಕೈಗೊಂಡಿದ್ದರು. ಇಲ್ಲಿನ ಬಹುತೇಕ ರೈತರಿಗೆ ಜಿಕೆವಿಕೆ ಸಂಪರ್ಕ ಇದೆ. ಕೃಷಿ ಪದವಿಗೆ (ಬಿಎಸ್ಸಿ ಅಗ್ರಿ) ಸೇರಲು ಬಯಸುವ ವಿದ್ಯಾರ್ಥಿಗಳು ಪ್ರಾಯೋಗಿಕ ಪರೀಕ್ಷೆ ತಯಾರಿಗೆ ಈ ಗ್ರಾಮಗಳಿಗೆ ಭೇಟಿ ನೀಡುವರು.

ಹುಣಸೆ ಎನ್ನುವ ಬಂಗಾರ: ಹೋಬಳಿಯ ರೈತರಿಗೆ ಹುಣಸೆ ಬರದಲ್ಲಿಯೂ ಗೆಲುವು ನೀಡುವ ಬಂಗಾರದ ಬೆಳೆ. ಯಾವ ಹಳ್ಳಿಗೆ ಹೋದರೂ ಹುಣಸೆ ಮರಗಳ ಸಾಲು ಸಾಲು ಕಣ್ಣಿಗೆ ರಾಚುತ್ತದೆ. ರಸ್ತೆ ಬದಿ, ಹೊಲಗಳ ಸಾಲುಗಳಲ್ಲಿ, ತೋಟ, ಮನೆಯ ಹಿತ್ತಿಲಿನಲ್ಲಿ ಹುಣಸೆ ಕಾಣಸಿಗುತ್ತದೆ. ಈ ಹಿಂದೆ ‘ತೋವಿನಕೆರೆ ಹುಣಸೆ’ ಎಂದು ಬ್ರ್ಯಾಂಡ್ ಸೃಷ್ಟಿಸುವ ಪ್ರಯತ್ನ ಸಹ ನಡೆದಿತ್ತು. ಕಳೆದ ವರ್ಷ ಹೋಬಳಿ ಯಲ್ಲಿ ₹ 7 ಕೋಟಿಗೂ ಹೆಚ್ಚು ಹುಣಸೆ ವಹಿವಾಟು ನಡೆದಿದೆ ಎನ್ನುವ ಅಂದಾಜು ಇದೆ.

ಅಜ್ಜೇನಹಳ್ಳಿಯ ಮುದ್ದಲಿಂಗಪ್ಪ ಅವರ ಕುಟುಂಬ 500ಕ್ಕೂ ಹೆಚ್ಚು ಹುಣಸೆ ಮರಗಳನ್ನು ಹೊಂದಿದೆ. ‘ನಮ್ಮ ತಂದೆ ಮತ್ತು ಅಜ್ಜ ಇಬ್ಬರೂ ಸೇರಿ ಇಷ್ಟು ಮರ ಬೆಳೆಸಿದ್ದಾರೆ. ನಾವೀಗ ಬೇರೆಯಾಗಿದ್ದೇವೆ. ನನ್ನ ಪಾಲಿಗೆ 60 ಮರಗಳು ಬಂದಿವೆ. ಹುಣಸೆಯೇ ನಮ್ಮ ಕುಟುಂಬಕ್ಕೆ ಆಧಾರ’ ಎಂದರು ಚಂದ್ರಮೌಳಿ. ‘ಹುಣಸೆ ವಹಿವಾಟು ನೋಡಬೇಕು ಎಂದರೆ ಜನವರಿ ಕೊನೆಗೆ ಬನ್ನಿ’ ಎಂದು ಆಹ್ವಾನ ನೀಡಿದವರು ಜುಂಜುರಾಮನಹಳ್ಳಿಯ ಜನಾರ್ದನಯ್ಯ.

ಬಹುತೇಕ ಕುಟುಂಬಗಳ ಕೃಷಿಯಲ್ಲಿ ಮಹಿಳೆಯರದ್ದು ಪ್ರಧಾನ ಪಾತ್ರ. ಹೈನುಗಾರಿಕೆ ಮತ್ತು ಹೂವಿನ ಬೇಸಾಯದ ಹಣ ಮಹಿಳೆಯರಿಗೆ ಸೇರಿದ್ದು. ಬೆಳಿಗ್ಗೆ ಹೂವು ಬಿಡಿಸಿದರೆ ಮಧ್ಯಾಹ್ನ ಅಡಿಕೆ ಸುಲಿಯುವುದು, ಹೂ ಕಟ್ಟುವ ಚಟುವಟಿಕೆಗಳಲ್ಲಿ ತೊಡಗುವರು. ಹೂ ಕಟ್ಟುವ ಕಸುಬು ಮಾಡಿಯೇ ಹಲವು ಕುಟುಂಬಗಳು ಜೀವನ ಸಾಗಿಸುತ್ತಿವೆ. ಬಡವನಹಳ್ಳಿಯಲ್ಲಿ ನಿತ್ಯ ಹೂವಿನ ವ್ಯಾಪಾರ ನಡೆಯುತ್ತದೆ.

‘120 ಗುಣಿ ಕಾಕಡಾ ಇದೆ. ನಿತ್ಯ 5ರಿಂದ 6 ಕೆ.ಜಿ. ಹೂವು ಸಿಗುತ್ತದೆ. ಸದ್ಯ ಒಂದು ಕೆ.ಜಿಗೆ ₹ 400ರಿಂದ 600 ಬೆಲೆ ಇದೆ. ಬೆಳಿಗ್ಗೆ 7ರಿಂದ 11ರೊಳಗೆ ಹೂವು ಬಿಡಿಸುವ ಕೆಲಸ ಮುಗಿಯುತ್ತದೆ’ ಎಂದರು ತೋವಿನಕೆರೆಯ ಶೋಭಾ. ‘ರಾಗಿ, ಭತ್ತ, ನಿಂಬೆ, ಎಳ್ಳಿ, ಅಡಿಕೆ, ತೆಂಗು, ಹೂವು, ತರಕಾರಿ, ಸೊಪ್ಪು ಬೆಳೆಯುತ್ತೇನೆ’ ಎನ್ನುವರು ಕೇವಲ ಒಂದೂಕಾಲು ಎಕರೆ ಜಮೀನು ಹೊಂದಿರುವ ಸಿದ್ದಗಂಗಣ್ಣ. ಸಮಗ್ರ ಕೃಷಿ ಕಾರಣಕ್ಕೆ ಸಿದ್ದಗಂಗಣ್ಣ ಅವರ ಜಮೀನಿಗೆ ಜಿಕೆವಿಕೆ ವಿದ್ಯಾರ್ಥಿಗಳು ಹಾಗೂ ಅಧ್ಯಯನಾಸಕ್ತರು ಭೇಟಿ ನೀಡುತ್ತಾರೆ.

ಅಂಗಳದಲ್ಲಿ ಕಟ್ಟಿದ್ದ ಮೂರು ಕುರಿಗಳು, ನಾಲ್ಕೈದು ಎಮ್ಮೆ, ಹಸುಗಳತ್ತ ಕೈತೋರಿ, ‘ಇವೇ ಗೊಬ್ಬರಕ್ಕೆ ಮೂಲ. ಒಂದು ಹಿಡಿ ಗೊಬ್ಬರ ಖರೀದಿಸಿಲ್ಲ. ಮನೆಗೆ ತರಕಾರಿ, ಸೊಪ್ಪು ಸಹ ನಾವೇ ಬೆಳೆಯುತ್ತೇವೆ’ ಎಂದು ತಿಳಿಸಿದರು.

ಸೇಬ್ ಹನುಮಂತು: ಎರಡು ಸೇಬಿನ ಗಿಡ ಬೆಳೆದಿರುವ ಹನುಮಂತರಾಯಪ್ಪ ಈಗ ಸುತ್ತಲ ಹಳ್ಳಿಗಳಲ್ಲಿ ಸೇಬ್‌ ಹನುಮಂತು ಎಂದೇ ಪ್ರಸಿದ್ಧಿ. ಇಂತಿಪ್ಪ ಹನುಮಂತು ಎಲೆ ಬಳ್ಳಿಯಿಂದಲೇ ಆರ್ಥಿಕವಾಗಿ ಸಶಕ್ತರಾಗಿದ್ದಾರೆ.

‘450 ಅಡಿಕೆ ಗಿಡಗಳಿವೆ. ಇವೆಲ್ಲಕ್ಕೂ ಎಲೆ ಬಳ್ಳಿ ಹಬ್ಬಿಸಿದ್ದೇನೆ. 30 ಮಲ್ಲೆ ಹೂವಿನ ಗಿಡ ಇವೆ. ತೊಗರಿ ಬೆಳೆಯುತ್ತೇನೆ. ವರ್ಷಕ್ಕೆ 10ರಿಂದ 12 ಕ್ವಿಂಟಲ್ ಅಡಿಕೆ ಆಗುತ್ತದೆ. 20 ದಿನಕ್ಕೆ ಒಮ್ಮೆ 10 ಪೆಂಡಿ ಎಲೆ ಕಟಾವು ಮಾಡುತ್ತೇನೆ. ಒಂದು ಪೆಂಡಿಗೆ

₹ 3 ಸಾವಿರ ಬೆಲೆ ಇದೆ’ ಎಂದು ಉತ್ಸಾಹದಲ್ಲಿ ನುಡಿಯುವರು. ಅಚ್ಚರಿ ಅಂದರೆ ಲಕ್ಷ ಲಕ್ಷ ಸಂಪಾದಿಸಲು ಅವರು ಆಶ್ರಯಿಸಿರುವ ಜಮೀನು ಕೇವಲ 41 ಗುಂಟೆ!

ಇಲ್ಲಿವೆ ಸಮುದಾಯ ಕೊಳವೆ ಬಾವಿಗಳು...

ಸಮುದಾಯ ಕೊಳವೆ ಬಾವಿಗಳು ಇಲ್ಲಿ ಗಮನ ಸೆಳೆಯುತ್ತವೆ. 2007ರಲ್ಲಿ ಸರ್ಕಾರದ ನೆರವಿನಲ್ಲಿ ಆರಂಭವಾದ ಈ ಯೋಜನೆಗೆ ‘ಬೆರಿ’ (ಬಯೋ ಮಾಸ್ ಎನರ್ಜಿಫಾರ್ ರೂರಲ್ ಇಂಡಿಯಾ) ಸಹಯೋಗ ಇದೆ.

ಕೊಳವೆ ಬಾವಿ ತೆಗೆಸಲು ಆರ್ಥಿಕ ಶಕ್ತಿ ಇಲ್ಲದ ನಾಲ್ಕೈದು ಜನರನ್ನು ಒಗ್ಗೂಡಿಸಿ ಅವರಿಗೆ ಸರ್ಕಾರವೇ ಕೊಳವೆಬಾವಿ ತೆಗೆಸಿಕೊಡುತ್ತದೆ. ಇದೇ ಸಮುದಾಯದ ಕೊಳವೆ ಬಾವಿ. ಕೊಳವೆಬಾವಿ ಇರುವ ಜಮೀನಿನ ಮಾಲೀಕ ಒಂದು ಎಕರೆಗೆ ಎರಡು ದಿನ ನೀರುಣಿಸಿಕೊಳ್ಳಬಹುದು. ಉಳಿದವರು ಒಂದು ದಿನ ಅರ್ಧ ಎಕರೆಗೆ ನೀರುಣಿಸಿಕೊಳ್ಳಬಹುದು. ಇದು ಸರದಿ ಪ್ರಕಾರ ನಡೆಯುತ್ತದೆ. ಒಂದು ವೇಳೆ ಆ ಕೊಳವೆ ಬಾವಿ ಸರ್ಕಾರಿ ಜಮೀನಿನಲ್ಲಿ ಇದ್ದರೆ ಎಲ್ಲರೂ ಸಮಪ್ರಮಾಣದಲ್ಲಿ ನೀರು ಪಡೆ ಯಲು ಅರ್ಹ. ಕಬ್ಬಿಗೆರೆ, ಚಿಕ್ಕರಸಹಳ್ಳಿ, ಅಜ್ಜೇನಹಳ್ಳಿ, ಹೂವಳ್ಳಿ ಹಾಗೂ ಮಜರೆ ಗೊಲ್ಲರಹಟ್ಟಿಯಲ್ಲಿ 15 ಬಾವಿಗಳು ಇವೆ.

ಕೊಳವೆಬಾವಿ ಇಲ್ಲದೆಯೇ 5 ಎಕರೆಯಲ್ಲಿ ಕೃಷಿ ಮಾಡುತ್ತಿದ್ದಾರೆ ತೋವಿನಕೆರೆ ಹೋಬಳಿ ರೈತ ಚಿಕ್ಕಣ್ಣ. ನೀರಿನ ಆಶ್ರಯಕ್ಕಾಗಿ ಜಮೀನಿನಲ್ಲಿಯೇ ಎರಡೂವರೆ ಸಾವಿರ ಲೀಟರ್ ಸಾಮರ್ಥ್ಯದ ಎರಡು ಸಿಮೆಂಟ್ ಟ್ಯಾಂಕರ್‌ ನಿರ್ಮಿಸಿದ್ದಾರೆ. ಇವುಗಳಿಗೆ ಟ್ರ್ಯಾಕ್ಟರ್‌ಗಳಿಂದ ನೀರು ತಂದು ತುಂಬಿಸಲಾಗುತ್ತದೆ.

‘ನೋಡಿ ಎರಡು ಗಿಡ ಚೆರ್‍ರಿ, ಇದು ಈಗ ಹಾಕಿರುವ ಮೆಣಸು’ ಎಂದು ಪ್ರತಿ ಗಿಡದ ವಿವರಣೆ ನೀಡುವರು ಚಿಕ್ಕಣ್ಣ. ‘ಮಳೆಗಾಲ ದಲ್ಲಿ ಗಿಡಗಳಿಗೆ ನೀರು ಬಿಡುವುದೇ ಇಲ್ಲ. ಬೇಸಿಗೆಯಲ್ಲಿ ವಾರಕ್ಕೆ ಒಮ್ಮೆ ನೀರು ಕೊಡುತ್ತೇವೆ. ಬಿಸಿಲಿನ ಕಾರಣಕ್ಕೆ ಸಂಜೆ 7ರ ನಂತರ ನೀರು ಹಾಯಿಸುತ್ತೇವೆ’ ಎನ್ನುವರು.

ಕಳೆದ ವರ್ಷದ ಬರದ ನಡುವೆಯೂ ಕಬ್ಬಿಗೆರೆಯ ಜವರೇಗೌಡ ಮುಕ್ಕಾಲು ಎಕರೆಯಲ್ಲಿ 18 ಚೀಲ ರಾಗಿ ಬೆಳೆದಿದ್ದಾರೆ. ಬರ ಗೆದ್ದ ರೈತರ ಕಥೆಗಳಿಗೆ ನಿದರ್ಶನ ಇವರು. ತನ್ನ ಅಜ್ಜ, ಅಪ್ಪ ಬಳಸುತ್ತಿದ್ದ ಕೃಷಿ ಸಾಧನ, ಸಲಕರಣೆಗಳನ್ನು ಜತನದಿಂದ ಕಾಪಾಡಿಕೊಂಡು ಬಂದಿದ್ದಾರೆ. ಈಗಾಗಲೇ ನಶಿಸಿರುವ ಮತ್ತು ನಶಿಸುತ್ತಿರುವ ಕೃಷಿ ಉಪಕರಣಗಳು ಮನೆಯಲ್ಲಿ ಇವೆ. ‘ಕೃಷಿ ಮ್ಯೂಸಿಯಂ’ ಎನ್ನುವಂತೆ ಆಸಕ್ತರು ಇವುಗಳನ್ನು ನೋಡಲು ಬರುತ್ತಿದ್ದಾರೆ.

ಮರವನೇಗಿಲು, ಎರಡು ಮತ್ತು ನಾಲ್ಕು ಚಿಪ್ಪಿನ ಮುಗ್ಗುರಿಗೆ, ಎಗ್ಗುಂಟೆ, ಸಾಲುಮಣಿ, ಹಲುಬೆ, ಕೊಡ್ಲಿ ಮಿಣಿ, ಮಿಂಟು ಕೋಲು, ಮುಳ್ಳು ಹಲುವೆ, ಮರದ ಗೋರೆ, ಮರದ ಪಡ್ಡಿ, ಉಳ್ಳಿ, ಆಗ್ರಾ, ಭೈರಿಗೆ...ಎಂದು ಸಲಕರಣೆಗಳ ಪಟ್ಟಿ ಓದಿದರು ಜವರೇಗೌಡರು.

ಅಕಾಲಿಕ ಹಲಸು: ಸಾಮಾನ್ಯವಾಗಿ ಜೂನ್–ಜುಲೈ ಹಲಸಿನ ಹಣ್ಣಿನ ಫಸಲಿನ ಅವಧಿ. ಕೊರಟಗೆರೆ ತಾಲ್ಲೂಕಿನ ಕೆಲವು ಹಳ್ಳಿಗಳಲ್ಲಿ ಈಗ ಹಲಸಿನ ಮರಗಳು ಫಸಲು ಬಿಟ್ಟಿವೆ. ಜನವರಿಗೆ ಹಣ್ಣು ದೊರೆಯುತ್ತದೆ.

‘15 ವರ್ಷದ ಮರ ಇದು. ಎರಡು ಬಾರಿ ಫಸಲು ಆಗುತ್ತದೆ. ಈ ಬಾರಿ 500 ಕಾಯಿ ದೊರೆಯಬಹುದು. ಕೊಡಣ್ಣೊ ಒಳ್ಳೆ ರೇಟಿಗೆ ಮಾರಿಕೊಳ್ಳುತ್ತೇವೆ’ ಎಂದು ಸಾಬರು ಬಂದು ಬೇಡುತ್ತಿದ್ದಾರೆ. ಇಲ್ಲಿವರೆಗೂ ನಾವು ಈ ಮರದ ಹಣ್ಣು ಮಾರಾಟವನ್ನೇ ಮಾಡಿಲ್ಲ. ಈಗ ಮಾರಾಟಕ್ಕೆ ಮನಸ್ಸು ಒಪ್ಪುತ್ತಾ’ ಎನ್ನುವರು ನಂದಿಹಳ್ಳಿ ಕರಿಯಣ್ಣ.

ಓದೇಕರ್ ಮತ್ತು ನಂದಿಹಳ್ಳಿ ಫಾರಂ: ನಂದಿಹಳ್ಳಿಯ ನೀಲಕಂಠಮೂರ್ತಿ ಅವರ ಓದೇಕರ್ ಫಾರಂಗೆ ನಿತ್ಯ ರೈತರು, ಕೃಷಿ ತಜ್ಞರು, ರೋಗಿಗಳು, ವಿದ್ಯಾರ್ಥಿಗಳ ಭೇಟಿ ಇದ್ದೇ ಇರುತ್ತದೆ. ಓದೇಕರ್ ಫಾರಂ ಔಷಧೀಯ ಸಸ್ಯಗಳ ಆಗರ. ಮಧುಮೇಹ, ರಕ್ತದ ಒತ್ತಡ, ಕೂದಲು ಉದುರುವಿಕೆ, ತಲೆಹೊಟ್ಟು, ಮುಖದಲ್ಲಿ ಕಲೆ, ಕೈ ಕಾಲು ನೋವು ಹೀಗೆ ಬಹುತೇಕ ರೋಗಗಳಿಗೆ ಇಲ್ಲಿ ಚೂರ್ಣಗಳನ್ನು ನೀಡಲಾಗುತ್ತದೆ. ಹುತ್ತದ ಮಣ್ಣಿನಿಂದ ತಯಾರಿಸುವ ಸಾಬೂನು ಪ್ರಮುಖ ಆಕರ್ಷಣೆ. ವಿಜಯ ಕುಮಾರ್ ಅವರ ನಂದಿಫಾರಂ ಸಹ ಮಾಹಿತಿಗಳ ಬಟ್ಟಲು. 40ಕ್ಕೂ ಹೆಚ್ಚು ವೈವಿಧ್ಯದ ಮರಗಳಿವೆ. ವಿಜಯ ಕುಮಾರ್ ರಾಜ್ಯದ ಮಟ್ಟದಲ್ಲಿ ‘ಕೃಷಿ ಪಂಡಿತ’ ಪ್ರಶಸ್ತಿಗೆ ಭಾಜನರಾದವರು.

ಸಿರಿಧಾನ್ಯಗಳ ಹಟ್ಟಿ: ಇಲ್ಲಿನ ಗೊಲ್ಲರಹಟ್ಟಿಗಳಲ್ಲಿ ಇಂದಿಗೂ ಸಾಂಪ್ರದಾಯಿಕ ಕೃಷಿಯೇ ಪ್ರಧಾನ. ಟಿಲ್ಲರ್, ಟ್ರ್ಯಾಕ್ಟರ್‌ಗಿಂತ ಎತ್ತು, ಕುರಿ, ಮೇಕೆಗಳು ಕೃಷಿ ಅವಿಭಾಜ್ಯ ಅಂಗ. ಯಾದವ ಸಮುದಾಯದವರು ಸಿರಿಧಾನ್ಯಗಳ ಬೇಸಾಯವನ್ನು ಪ್ರಮುಖವಾಗಿ ಅವಲಂಬಿಸಿದ್ದಾರೆ. ಸಿರಿಧಾನ್ಯಗಳ ಬಗ್ಗೆ ತಿಳಿವಳಿಕೆಗೆ ಬರುವವರು ಮೊದಲು ಪ್ರವೇಶಿಸುವುದು ಗೊಲ್ಲರಹಟ್ಟಿಗಳನ್ನೇ. ಮತ್ತೊಂದು ವಿಶೇಷ ಅಂದರೆ ಈ ಸಮುದಾಯದ ಜನರ ಹೊಲ ತೋಟಗಳಲ್ಲಿ ಕಡ್ಡಾಯವಾಗಿ ಹಲಸಿನ ಮರಗಳಿವೆ. ‘ಹಲಸಿನ ಎಲೆಗಳು ಕುರಿ, ಮೇಕೆಗಳಿಗೆ ಒಳ್ಳೆಯ ಆಹಾರ. ಆದ್ದರಿಂದ ಈ ಮರಗಳನ್ನು ಬೆಳೆಸುತ್ತೇವೆ’ ಎನ್ನುವರು ಸಮುದಾಯದ ಮುಖಂಡ ಸಿದ್ದಲಿಂಗೇಗೌಡ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry