6

‘ಹಾಡು ನೋಡ್ತಾರೆ ಆಲಿಸಲ್ಲ’

Published:
Updated:
‘ಹಾಡು ನೋಡ್ತಾರೆ ಆಲಿಸಲ್ಲ’

ಸಿನಿಮಾ ಹಾಡುಗಳನ್ನು ನಾಯಕ ಅಥವಾ ನಾಯಕಿಯ ನೃತ್ಯದ ಮೂಲಕ ನೋಡುವ ಪರಿಪಾಠ ಈಗ ಹೆಚ್ಚು. ಹಾಡು ಕೇಳುವವರು ಕಣ್ಣು ಮುಚ್ಚಿಕೊಂಡಿರುತ್ತಾರೆ. ದುರಾದೃಷ್ಟವೆಂದರೆ, ನಮಗೆ ಮುಖಗಳು (ಫೇಸಸ್‌) ಬೇಕೇ ವಿನಾ ಸ್ವರಗಳಲ್ಲ (ವಾಯ್ಸಸ್‌)’ ... ಬಹುಭಾಷಾ ಹಿನ್ನೆಲೆ ಸಂಗೀತ ಗಾಯಕಿ ಸುನಿಧಿ ಚೌಹಾಣ್‌ ಹೀಗಂತ ತಮ್ಮ ಅತೃಪ್ತಿಯನ್ನು ಹೊರಹಾಕಿದ್ದಾರೆ.

‘ಹಾಡು ಕೇಳುವವರು ಕಣ್ಣು ಮುಚ್ಕೊಂಡಿರುತ್ತಾರೆ, ನೋಡುವವರು ಕಣ್ಣು ಬಿಟ್ಟುಕೊಂಡಿರುತ್ತಾರೆ. ನಾವು ಈಗ ನೋಡುತ್ತಿರುವುದು ಎರಡನೇ ವರ್ಗದ ಜನರನ್ನು. ಕತ್ರಿನಾ ಕೈಫ್‌ ಒಂದು ಹಾಡಿಗೆ ನೃತ್ಯ ಮಾಡಿದ್ದರೆ ಹೆಚ್ಚು ಬಾರಿ ವೀಕ್ಷಣೆಯಾಗುತ್ತದೆ. ಯಾರೋ ಸಣ್ಣ ನಟಿಯಾಗಿದ್ದರೆ ವೀಕ್ಷಣೆಯ ಪ್ರಮಾಣವೂ ಕಡಿಮೆಯೇ ಆಗಿರುತ್ತದೆ. ನಾಯಕ ನಟರ ವಿಚಾರದಲ್ಲಿಯೂ ಹೀಗೇ ಆಗುತ್ತಿದೆ’ ಎಂದು ಸುನಿಧಿ ಖುಲ್ಲಂಖುಲ್ಲ ಟೀಕಿಸಿದ್ದಾರೆ.

ಸಂಗೀತವೇ ತಮ್ಮ ಉಸಿರು ಎಂದುಕೊಂಡಿರುವ ಸುನಿಧಿಗೆ, ಉತ್ತಮ ಹಾಡುಗಳಿಗೂ ಸಿಗಬೇಕಾದ ಮಾನ್ಯತೆ ಸಿಗದಿರುವ ಬಗ್ಗೆ ಬೇಸರ ಉಂಟಾಗಿರುವುದರಲ್ಲೂ ಅರ್ಥವಿದೆ. ಯಾಕೆಂದರೆ, ಎಳವೆಯಿಂದಲೇ ಅವರು ಸಂಗೀತವನ್ನು ಆರಾಧಿಸುತ್ತಾ ಬಂದವರು. ದೆಹಲಿಯಲ್ಲಿ ಹುಟ್ಟಿ ಬೆಳೆದ ಸುನಿಧಿಗೆ ಎಳೆಯ ವಯಸ್ಸಿನಿಂದಲೇ ಸಂಗೀತವೆಂದರೆ ಅದಮ್ಯ ಸೆಳೆತ. ತಂದೆ ದುಷ್ಯಂತ್‌ ಕುಮಾರ್‌ ಚೌಹಾಣ್‌ ಅವರಿಗೆ ಮಗಳು ಚೆನ್ನಾಗಿ ಓದಲಿ ಎಂಬ ಆಸೆ. ಆದರೆ ಹುಡುಗಿ ತಮ್ಮ ಊರಿನಲ್ಲಿ ಯಾವುದೇ ವೇದಿಕೆ ಸಿಕ್ಕಿದರೂ ತೋಚಿದಂತೆ ಹಾಡುತ್ತಿದ್ದುದನ್ನು ಗಮನಿಸಿದ ದುಷ್ಯಂತ್‌ ಅವರ ಸ್ನೇಹಿತ, ‘ಮಗಳನ್ನು ಸಂಗೀತ ಕ್ಷೇತ್ರದಲ್ಲಿ ಬೆಳಗಲು ಬಿಡಿ’ ಎಂದು ಸಲಹೆ ನೀಡಿದ್ದರು. ಅಮ್ಮನ ಒತ್ತಾಸೆಯೂ ಇತ್ತೆನ್ನಿ.

‘ನನಗೆ ಓದುವ ಆಸೆಯೇ ಇರಲಿಲ್ಲ. ನನ್ನ ಗಮ್ಯ ಸಂಗೀತ ಕ್ಷೇತ್ರ ಎಂಬುದು ನನಗೆ ಸ್ಪಷ್ಟವಾಗಿ ಗೊತ್ತಿತ್ತು. ಓದು ನಿಲ್ಲಿಸಿದ ಬಗ್ಗೆ ಯಾವತ್ತೂ ನನಗೆ ಅಪರಾಧಿಪ್ರಜ್ಞೆ ಕಾಡಿಲ್ಲ’ ಎಂದು 1995ರಲ್ಲೇ ಸುನಿಧಿ ಹೇಳಿಕೊಂಡಿದ್ದರು. ಆ ವರ್ಷ 40ನೇ ಫಿಲಂಫೇರ್‌ ಪ್ರಶಸ್ತಿ ಸಮಾರಂಭದಲ್ಲಿ ಹಾಡಿದ ಈ ರಾಗನಿಧಿಗೆ ದೊಡ್ಡ ಬ್ರೇಕ್‌ ಸಿಕ್ಕಿಬಿಟ್ಟಿತು. ಅಲ್ಲಿಂದಾಚೆ ಅವರಿಗೆ ತಿರುಗಿನೋಡಲೂ ಪುರುಸೊತ್ತಿಲ್ಲದಷ್ಟು ಅವಕಾಶಗಳು ಕೈತುಂಬಿದವು. ಈಗ ಹಿಂದಿನಂತೆ ಕೈತುಂಬಾ ಅವಕಾಶಗಳು ಇಲ್ಲ. ಹಾಗಂತ ಸುನಿಧಿ ಅದರ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಹೊಸಬರು ಬರುವುದು ಸಹಜ. ನಾವು ಯಾವ ಸ್ಥಾನದಲ್ಲಿದ್ದೀರಿ ಎಂಬುದು ಮುಖ್ಯ ಅಲ್ವೇ ಅಲ್ಲ. ಯಾಕೆಂದರೆ, ಎಲ್ಲಿವರೆಗೆ ನಮ್ಮ ಪ್ರತಿಭೆಯ ಬಗ್ಗೆ ನಮಗೆ ನಂಬಿಕೆ ಇರುತ್ತದೋ ಅಲ್ಲಿವರೆಗೂ ಸಣ್ಣಪುಟ್ಟ ವಿಚಾರಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಕಿಲ್ಲ ಎಂಬುದು ಅವರ ಚಿಂತನೆ.

ಹಿನ್ನೆಲೆ ಸಂಗೀತಗಾರರಿಗೂ ಹೀರೊ, ಹೀರೊಯಿನ್‌ಗಳಷ್ಟೇ ಬೇಡಿಕೆ ತಾರಾ ವರ್ಚಸ್ಸು ಇದೆ. ಹಾಗಾಗಿ ಫಿಟ್‌ನೆಸ್‌ ಕೂಡಾ ಕಾಯ್ದುಕೊಳ್ಳಬೇಕು ಎಂಬ ಉಮೇದು ಅವರದು. ರಾತ್ರಿ ತಡವಾಗಿ ಮಲಗಿದರೂ ಬೆಳಿಗ್ಗೆ ಉಲ್ಲಾಸದಿಂದ ಎದ್ದು ಸಣ್ಣದೊಂದು ವಾಕ್‌ ಮಾಡಿ ಟ್ರೆಡ್‌ಮಿಲ್‌ನಲ್ಲಿ ಸ್ವಲ್ಪ ಬೆವರಿಳಿಸುವಲ್ಲಿಂದ ದಿನಚರಿ ಶುರು ಮಾಡುತ್ತಾರೆ.

ಜಿಮ್‌ನಲ್ಲಿ ಗಂಟೆಗಟ್ಟಲೆ ವ್ಯಾಯಾಮ ಮಾಡುವುದಕ್ಕಿಂತ ವಾರಕ್ಕೆರಡು ಬಾರಿ ಜಿಮ್‌ಗೆ ಹೋದರೆ ಸಾಕು; ಉಳಿದಂತೆ ಯೋಗ, ಧ್ಯಾನ ಮಾಡಬೇಕು ಎಂಬುದು ಅವರ ಫಿಟ್‌ನೆಸ್‌ ಸೂತ್ರ. ಬಾಯಿ ಚಪಲಕ್ಕೆ ಕಡಿವಾಣ ಹಾಕುವುದು ಮತ್ತೊಂದು ಫಿಟ್‌ನೆಸ್‌ ಮಂತ್ರ. ‘ನಿಯಂತ್ರಣವಿಲ್ಲದೆ ತಿಂದು ಕೊಬ್ಬು ಕರಗಿಸಲು ಹರಸಾಹಸ ಪಡಬಾರದು. ಜಂಕ್‌ ಫುಡ್‌, ಜಿಡ್ಡಿನ ತಿನಿಸುಗಳನ್ನು ತಿನ್ನಲೇಬಾರದು’ ಎಂಬ ವಿವೇಚನೆ ಅವರದು. ಬೆಳಗಿನ ಉಪಾಹಾರಕ್ಕೆ ಬ್ರೆಡ್‌ ಟೋಸ್ಟ್‌–ಮೊಟ್ಟೆ, ಹಣ್ಣಿನ ರಸ ಅಥವಾ ಹಾಲು, ಮಧ್ಯಾಹ್ನಕ್ಕೆ ಎರಡು ಚಪಾತಿ–ಬೇಳೆ ಗೊಜ್ಜು, ಮಧ್ಯೆ ಏನಾದರೂ ತಿನಿಸು, ರಾತ್ರಿ ಊಟಕ್ಕೆ ಒಂದು ಬೌಲ್‌ ಅನ್ನ ಮತ್ತು ಮೀನು ಸಾರು.

ಇಷ್ಟು ಕಟ್ಟುನಿಟ್ಟಾಗಿದ್ದರೂ ಮದುವೆಯ ಬಳಿಕ ಸುನಿಧಿ ಸಾಕಷ್ಟು ತೂಕ ಹೆಚ್ಚಿಸಿಕೊಂಡಿದ್ದರು. ಆದರೆ ‘ದಿ ವಾಯ್ಸ್‌ ಇಂಡಿಯಾ’ ಶೋಗೂ ಮೊದಲು ಅವರು ಮತ್ತೆ ತಮ್ಮ ಹಿಂದಿನ ಆಕಾರಕ್ಕೆ ಮರಳಿದ್ದರು. ‘ಗಾಯಕರು ಫಿಟ್‌ನೆಸ್‌ ಕಾಯ್ದುಕೊಳ್ಳುವುದು ಹಾಡುಗಾರಿಕೆಯ ಮೇಲೂ ಪರಿಣಾಮ ಬೀರುತ್ತದೆ’ ಎಂದು ಆಗ ಅವರು ಹೇಳಿಕೊಂಡಿದ್ದರು.

2002ರಲ್ಲಿ ಬಾಬಿ ಖಾನ್‌ ಜತೆ ವಿವಾಹವಾದ ಸುನಿಧಿ ಮರುವರ್ಷವೇ ವಿಚ್ಛೇದನ ಪಡೆದಿದ್ದರು. 2012ರಲ್ಲಿ ಹಿತೇಶ್‌ ಸೋನಿಕ್‌ ಅವರನ್ನು ಮದುವೆಯಾಗಿದ್ದು, ಇದೀಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry