7

ಮಿತಿಗಳ ನಡುವೆ ಮೈಕೊಡವಿದ ರಾಹುಲ್ ಕಾಂಗ್ರೆಸ್

Published:
Updated:
ಮಿತಿಗಳ ನಡುವೆ ಮೈಕೊಡವಿದ ರಾಹುಲ್ ಕಾಂಗ್ರೆಸ್

ನವದೆಹಲಿ: ಗುಜರಾತ್ ಚುನಾವಣೆಗಳಲ್ಲಿ ತಾಂತ್ರಿಕ ಗೆಲುವು ಸಾಧಿಸಲಾಗದೆ ಹೋದರೂ, ಪ್ರಚಂಡ ಎದುರಾಳಿಯನ್ನು ನೂರರ ಒಳಗಿನ ಎರಡಂಕಿಗೆ ಕಟ್ಟಿ ಹಾಕುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದೆ.

ಈ ಸಾಧನೆ ತನ್ನ ನೈತಿಕ ವಿಜಯ ಎಂದು ಖುದ್ದು ಕಾಂಗ್ರೆಸ್ ಬೆನ್ನು ಚಪ್ಪರಿಸಿಕೊಂಡಿರುವುದನ್ನು ರಾಜಕೀಯ ವಿಶ್ಲೇಷಕ ವಲಯವೂ ಅನುಮೋದಿಸಿದೆ. ಗೆಲುವನ್ನು ಸುಲಭದ ತುತ್ತಾಗಿ ಬಿಜೆಪಿಗೆ ಒಪ್ಪಿಸದೆ ಬೆವರಿಳಿಸಿದ್ದು ಕಾಂಗ್ರೆಸ್ಸಿನ ಸಾಧನೆಯೇ ಸರಿ ಎಂಬುದನ್ನು ಕೇಸರಿ ಪರಿವಾರದ ಅನೇಕ ಮುಂದಾಳುಗಳೂ ಒಪ್ಪಿದ್ದಾರೆ.

ಬಿಜೆಪಿಯ ವಿಜಯದ ಓಟಕ್ಕೆ ತಡೆಯೇ ಇಲ್ಲದ ಏಕಪಕ್ಷೀಯ ರಾಜಕಾರಣ ಹೆಪ್ಪು ಒಡೆದಿದೆ. ಮೋದಿ ನೇತೃತ್ವದ ಬಿಜೆಪಿಯ ಬಲಿಷ್ಠ ಕೋಟೆ 2019ರ ಲೋಕಸಭಾ ಚುನಾವಣೆಗಳ ಹೊತ್ತಿಗೂ ಅಜೇಯ ಎಂಬ ಭಾವನೆಗೆ ದೊಡ್ಡ ಏಟು ಬಿದ್ದಿಲ್ಲವಾದರೂ ಬಿರುಕು ಮೂಡಿದೆ.

ಕದ ತಟ್ಟಿರುವ ಹೊಸ ವರ್ಷದಲ್ಲಿ ಜರುಗಲಿರುವ ಕರ್ನಾಟಕ, ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಡ ವಿಧಾನಸಭಾ ಚುನಾವಣೆಗಳು ಕಾಂಗ್ರೆಸ್ ಪಕ್ಷದ ಪಾಲಿಗೆ ಹೊಸ ಸಾಧ್ಯತೆಗಳನ್ನು ತೆರೆಯುವ ಅವಕಾಶಗಳು ಇಂದಿನ ಫಲಿತಾಂಶದ ನಂತರ ಇನ್ನಷ್ಟು ಹೊಳಪಾಗಿವೆ.

ಗುಜರಾತಿನ ದಲಿತ, ಪಾಟೀದಾರ, ಹಿಂದುಳಿದ ವರ್ಗಗಳ ನಾಯಕರ ಬೆಂಬಲದಿಂದ ಕಾಂಗ್ರೆಸ್ ಮೂಡಿಸಿರುವ ಈ ಬಿರುಕು ಮುಂಬರುವ ದಿನಗಳಲ್ಲಿ ದೊಡ್ಡದಾಗುವುದೇ ಇಲ್ಲ ಎಂಬ ಭರವಸೆಯನ್ನು ಯಾರೂ ನೀಡಲಾರರು. ಮೋದಿ ಅಜೇಯ ಅಲ್ಲ, ಅವರ ತವರಿನಲ್ಲಿ ಅವರನ್ನು ಕೆಡವುದು ಕಷ್ಟವಾದರೂ ಕಟ್ಟಿ ಹಾಕಬಹುದು. ಗುಜರಾತಿನಲ್ಲೇ ಮೋದಿ ಓಟವನ್ನು ತಡೆಯುವುದು ಸಾಧ್ಯವಿದ್ದಲ್ಲಿ, ಗುಜರಾತಿನ ಹೊರಗೂ ಸಾಧ್ಯ ಎಂಬ ಭಾವನೆಯನ್ನು ರಾಹುಲ್- ಅಲ್ಪೇಶ್-ಜಿಗ್ನೇಶ್- ಹಾರ್ದಿಕ್ ಮೂಡಿಸಿದ್ದಾರೆ.

‘ಪಪ್ಪು’ ಎಂದು ತಾನು ಹೀಯಾಳಿಸುತ್ತಿದ್ದ ರಾಹುಲ್ ಅವರ ಬಲಾಬಲಗಳ ಮರು ಅಂದಾಜನ್ನು ಮುಂಬರುವ ಚುನಾವಣೆಗಳಲ್ಲಿ ಮಾಡುವುದು ಬಿಜೆಪಿಗೆ ಇನ್ನು ಅನಿವಾರ್ಯ. ಕೆಲ ದಿನಗಳ ಹಿಂದೆಯಷ್ಟೇ ಅಧ್ಯಕ್ಷ ಪದವಿಗೆ ಏರಿರುವ ನೆಹರೂ-ಗಾಂಧಿ ಮನೆತನದ ಮತ್ತೊಂದು ಕುಡಿ ತನ್ನನ್ನು ತಾನೇ ಗಂಭೀರವಾಗಿ ಪರಿಗಣಿಸಿಕೊಂಡಿರುವ ಸೂಚನೆಗಳು ಒಡಮೂಡಿವೆ. ಹೀಗಾಗಿ ಕಾಂಗ್ರೆಸ್ ಕೂಡ ಅವರನ್ನು ಗಂಭೀರವಾಗಿ ಪರಿಗಣಿಸಬೇಕಿದೆ.

ಬೇಕೆಂದಾಗ ಮೈಕೊಡವಿ ಕಣಕ್ಕಿಳಿಯುವ ದೈತ್ಯ ಮತ್ತು ಪ್ರಚಂಡ ''ಚುನಾವಣಾ ಯಂತ್ರ''ದ ಅಮೂಲ್ಯ ನೆರವು ಬಿಜೆಪಿಗೆ ಉಂಟು. ಮತಗಟ್ಟೆಗಳ ನಿರ್ವಹಣೆಯನ್ನು ಬಹು ಸೂಕ್ಷ್ಮ ಹಂತಕ್ಕೆ ತಿದ್ದಿ ತೀಡಿ ಸುಸ್ಥಿತಿಯಲ್ಲಿ ಇರಿಸಿದ್ದಾರೆ ಪಕ್ಷದ ಅಧ್ಯಕ್ಷ ಅಮಿತ್ ಷಾ. ಬೆಂಬಲಿಗರನ್ನು ಮತಗಟ್ಟೆಗೆ ಕರೆತಂದು ಮತ ಹಾಕಿಸುವ ಸಮರ್ಪಿತ ಮನಸ್ಥಿತಿಯ ಕಾರ್ಯಕರ್ತರ ಪಡೆಯೇ ಬಿಜೆಪಿಯ ಬೆನ್ನಿಗಿದೆ. ಈ ಕಾರ್ಯಕರ್ತರೆಲ್ಲ ಆರೆಸ್ಸೆಸ್ ವಿಚಾರಧಾರೆಯಿಂದ ಪ್ರೇರಿತರಾದವರು. ದಾಳಿಯನ್ನು ಸೀದಾ ಎದುರಾಳಿಯ ಶಿಬಿರಕ್ಕೇ ಒಯ್ಯಬಲ್ಲ ನರೇಂದ್ರ ಮೋದಿಯವರಂತಹ ಆಕ್ರಮಣಕಾರಿ ನಾಯಕತ್ವಕ್ಕೆ ಪ್ರತ್ಯುತ್ತರವನ್ನು ಕಾಂಗ್ರೆಸ್ ಇನ್ನೂ ಕಂಡುಕೊಂಡಿಲ್ಲ. ಕಟ್ಟರ್ ಕಾರ್ಯಕರ್ತ ಕಾಲಾಳುಗಳ ಪಡೆ ಕಾಂಗ್ರೆಸ್ ಬೆನ್ನಿಗೆ ಇಲ್ಲ.ವಿಶೇಷವಾಗಿ ಕಳೆದ ಮೂರೂವರೆ ವರ್ಷಗಳಿಂದ ಕಾಂಗ್ರೆಸ್ ಚುನಾವಣಾ ಯಂತ್ರಕ್ಕೆ ತುಕ್ಕು ಹಿಡಿದು ಸ್ಥಗಿತಗೊಂಡಿದೆ.

ಇಪ್ಪತ್ತೆರಡು ವರ್ಷಗಳ ಹಿಂದೆಯೇ ಗುಜರಾತಿನಲ್ಲಿ ಗೆಲುವಿನ ದಾರಿ ಕಳೆದುಕೊಂಡಿತ್ತು ಕಾಂಗ್ರೆಸ್ ಪಕ್ಷ. ನಿರ್ವಿಣ್ಣತೆಯ ಆಳಕ್ಕೆ ಜಾರಿತ್ತು. ಕೋಮುವಾದಿ ಧ್ರುವೀಕರಣದ ಮೋದಿ ಬ್ರಹ್ಮಾಸ್ತ್ರದ ಮುಂದೆ ನಿಸ್ತೇಜಗೊಂಡಿತ್ತು. ‘ಹಿಂದು ಹೃದಯ ಸಾಮ್ರಾಟ‘ನೆಂದು ಹೊರಹೊಮ್ಮಿದ ಮೋದಿ, ತಮ್ಮ ಸುತ್ತ 'ವಿಕಾಸಪುರುಷ'ನೆಂಬ ಉಕ್ಕಿನ ಕವಚವನ್ನೂ ತೊಟ್ಟರು. ಅಲ್ಪಸಂಖ್ಯಾತರಿಗೆ 'ಅವರ ಜಾಗ' ತೋರಿಸಿದ ಕಟ್ಟರ್ ಹಿಂದುತ್ವದ ಪ್ರಬಲ ಪ್ರತಿಪಾದನೆ ಜೊತೆಗೆ 'ಗುಜರಾತ್ ಅಭಿವೃದ್ಧಿ ಮಾದರಿ' ಮಿಳಿತಗೊಂಡ ಮೋದಿ ಸೋಲೇ ಇಲ್ಲದ ಪ್ರಚಂಡರೆಂದು ಕಾಂಗ್ರೆಸ್ ಒಪ್ಪಿಕೊಂಡು ತೆಪ್ಪಗೆ ಹಿಂದೆ ಸರಿಯಿತು. ಎಲ್ಲ ಚುನಾವಣೆಗಳಲ್ಲೂ ದಿಕ್ಕು ತೋಚದಂತೆ, ಚೈತನ್ಯವೇ ಇಲ್ಲದ ಪ್ರಚಾರದ ಮೂಲಕ ಮೋದಿ ಅವರ ಕಟ್ಟರ್ ಹಿಂದುತ್ವದ ವರ್ಚಸ್ಸಿಗೆ ಇನ್ನಷ್ಟು ಶಕ್ತಿ ತುಂಬುವಂತಹ ದಡ್ಡ ರಾಜಕಾರಣ ಮಾಡುತ್ತಿತ್ತು. ಚುನಾವಣೆಯ ಹೊಸ್ತಿಲಲ್ಲಿ ತನ್ನ ಸ್ಥಳೀಯ ತಲೆಯಾಳು ಶಂಕರಸಿಂಗ್ ವಾಘೇಲ ಅವರನ್ನು ಬಿಜೆಪಿಗೆ ಬಿಟ್ಟುಕೊಟ್ಟು ಏಟು ತಿಂದಿತ್ತು ಕಾಂಗ್ರೆಸ್ ಪಕ್ಷ.

ಎರಡು ದಶಕಗಳಿಂದ ಗೆಲ್ಲುತ್ತ ಬಂದಿರುವ ಬಿಜೆಪಿ ಈ ಬಾರಿ ನಿಜಕ್ಕೂ 'ಆಡಳಿತವಿರೋಧಿ ವಾತಾವರಣ' ಎದುರಿಸಿತ್ತು. ಖುದ್ದು ಮೋದಿ ಮತ್ತು ಅಮಿತ್ ಷಾ ಜೋಡಿ ಒಳಗೊಳಗೆ ಅಧೀರರಾಗಿದ್ದದ್ದು ಹೌದು. ಗುಜರಾತ್ ಅಭಿವೃದ್ಧಿ ಮಾದರಿ ಜನರ ನಂಬಿಕೆ ಕಳೆದುಕೊಂಡಿತ್ತು. ಪ್ರಬಲ ಪಾಟೀದಾರರು, ಅವಮಾನಿತ ದಲಿತರು, ಠಾಕೂರ್ ಸೇರಿದಂತೆ ಹಲವು ಹಿಂದುಳಿದ ವರ್ಗಗಳು, ರೈತರು, ಕಾರ್ಮಿಕರು, ವ್ಯಾಪಾರಿಗಳು-ಉದ್ಯಮಿಗಳು ಬಿಜೆಪಿ ವಿರುದ್ಧ ಬಹಿರಂಗವಾಗಿ ಮುನಿದಿದ್ದ ಚುನಾವಣೆಯಿದು. ಗುಜರಾತಿಗೆ ಹೋಗಿ ಬಂದ ಸುದ್ದಿಗಾರರೆಲ್ಲ ಒಮ್ಮತದಿಂದ ಗ್ರಹಿಸಿದ್ದ ನೆಲಮಟ್ಟದ ಸ್ಥಿತಿಯಿದು. ಮೋದಿ-ಷಾ ಜೋಡಿ ಈ ಸ್ಥಿತಿಯನ್ನು ಅರಿತು ಪ್ರತಿತಂತ್ರ ರೂಪಿಸಿ ಅದನ್ನು ಜಾರಿಗೂ ತಂದಿತು. ದಶಕಗಳಿಂದ ನಿಷ್ಕ್ರಿಯಗೊಂಡಿದ್ದ ಕಾಂಗ್ರೆಸ್ ಪಕ್ಷದ ಪ್ರತಿಕ್ರಿಯೆ ಚುರುಕುತನ ಕಳೆದುಕೊಂಡಿತ್ತು. ಖುದ್ದು ರಾಹುಲ್ ಗಾಂಧಿಯವರೇ ಪೂರ್ಣಪ್ರಮಾಣದ ರಾಜಕಾರಣಿಯಂತೆ ಕಾಣಿಸಿಕೊಂಡದ್ದು ಇತ್ತೀಚಿನ ತಿಂಗಳುಗಳಲ್ಲಿ. ಅವರು ಪಕ್ಷದ ಅಧ್ಯಕ್ಷ ಆಗುತ್ತಾರೆಯೇ ಇಲ್ಲವೇ ಎಂಬ ಅನುಮಾನ ಕೂಡ ಅಳಿದಿರಲಿಲ್ಲ. ತಮ್ಮ ಹೊಣೆಗಾರಿಕೆಯನ್ನು ಗಂಭೀರವಾಗಿ ನಿಭಾಯಿಸುತ್ತಿಲ್ಲವೆಂದೂ, ಪಕ್ಷದ ಪಾಲಿಗೆ ಆಸ್ತಿಯಾಗಬೇಕಾದವರು ಹೊರೆಯಾಗಿ ಪರಿಣಮಿಸಿದ್ದಾರೆಂದೂ ಪಕ್ಷದ ಒಳಗೇ ಪಿಸುಮಾತಿನ ಟೀಕೆಯ ಅಲೆಗಳು ಅಪ್ಪಳಿಸಿದ್ದು ತೀರಾ ಹಳೆಯ ಬೆಳವಣಿಗೆಯೇನೂ ಅಲ್ಲ.

ತಡವಾಗಿಯಾದರೂ ಸರಿ, ಮೈ ಕೊಡವಿ ಮೇಲೆದ್ದರು ರಾಹುಲ್. ಹಠಾತ್ತನೆ ಅಂತರ್ಧಾನ ಆಗದೆ ಗುಜರಾತಿನಲ್ಲಿ ತಿಂಗಳುಗಟ್ಟಲೆ ಸತತ ನೆಲಕಚ್ಚಿ ಕಠಿಣ ದುಡಿಮೆಗೆ ಇಳಿದರು. ಪಕ್ಷಕ್ಕೆ ಮೆತ್ತಿದ್ದ ಕಿಲುಬು ತೊಳೆದು ಹೊಳೆಯಿಸುವ ಅವರ ಪ್ರಯತ್ನ ಗಂಭೀರ ಸ್ವರೂಪದ್ದು ಎಂಬ ವಿಶ್ವಾಸ ಮೂಡಿಸಿದರು. ಪಾಟೀದಾರರ ನಾಯಕ ಹಾರ್ದಿಕ್ ಪಟೇಲ್ ಮತ್ತು ದಲಿತ ಸಮುದಾಯದ ತಲೆಯಾಳು ಜಿಗ್ನೇಶ್ ಮೇವಾನಿ ಅವರೊಂದಿಗೆ ಸ್ನೇಹದ ಸೇತುವೆ ಕಟ್ಟಿದರು. ಹಿಂದುಳಿದ ವರ್ಗಗಳ ಮುಂದಾಳು ಅಲ್ಪೇಶ್ ಠಾಕೂರ್ ಅವರನ್ನು ಪಕ್ಷಕ್ಕೇ ಸೇರಿಸಿಕೊಂಡರು. ಬಿಜೆಪಿಯ ವಿರುದ್ಧ ಮುನಿದಿದ್ದ ಗುಜರಾತಿಗಳಿಗೆ ಪರ್ಯಾಯ ರಾಜಕೀಯ ಶಕ್ತಿಯೊಂದನ್ನು ಕಟ್ಟಲು ಪ್ರಯತ್ನಿಸಿದರು. ಆದರೆ ಅದು ಸಶಕ್ತ ಪರ್ಯಾಯ ಎಂಬ ನಂಬಿಕೆ ಮೂಡಿಸುವಲ್ಲಿ ಪೂರ್ಣ ಯಶಸ್ಸು ಅವರಿಗೆ ದೊರೆತಿಲ್ಲ ಎಂಬುದನ್ನು ಫಲಿತಾಂಶಗಳು ಸಾರಿ ಹೇಳಿವೆ.

ಈಗಷ್ಟೇ ಮೈಚಳಿ ಬಿಡುತ್ತಿರುವ ರಾಹುಲ್, ರಾಜಕೀಯ ತಂತ್ರಗಳಲ್ಲಿ ಪಳಗಲು ಇನ್ನೂ ದೂರದ ದಾರಿ ಕ್ರಮಿಸಬೇಕಿದೆ. ಜಿಗ್ನೇಶ್-ಅಲ್ಪೇಶ್-ಹಾರ್ದಿಕ್ ಜೊತೆ ಅವರು ಕಟ್ಟಿದ ಗೆಳೆತನದ ಸೇತುವೆಯಲ್ಲಿ ಅಂತರ್ಗತ ವೈರುಧ್ಯಗಳಿದ್ದವು. ಜಾತಿಪದ್ಧತಿಯ ಏಣಿಶ್ರೇಣಿಯಲ್ಲಿ ತಲೆ ತಲಾಂತರಗಳಿಂದ ಮೇಲು-ಕೀಳಿನ ಸಂಬಂಧದಲ್ಲಿ ಗಟ್ಟಿಗೊಂಡಿದ್ದ ಜಾತಿ ಸಮುದಾಯಗಳು ಹಠಾತ್ತನೆ ಪರಸ್ಪರರ ಹೆಗಲ ಮೇಲೆ ಕೈಹಾಕಿ ಮಿತ್ರರಂತೆ ಚಲಿಸುವುದು ಅಸಾಧ್ಯ. ರಾಹುಲ್ ಕಟ್ಟಿದ ಹೊಸ ಸೇತುವೆಗೂ ಈ ಮಿತಿಗಳು ಇದ್ದೇ ಇದ್ದವು. ಫಲಿತಾಂಶದಲ್ಲೂ ಅವು ಪ್ರತಿಫಲಿಸಿದವು.

ಕರ್ನಾಟಕದಲ್ಲಿ ಸಿದ್ದರಾಮಯ್ಯ, ರಾಜಸ್ತಾನದಲ್ಲಿ ಅಶೋಕ್ ಗೆಹ್ಲೊಟ್- ಸಚಿನ್ ಪೈಲಟ್ ಅವರಂತೆ ಗುಜರಾತಿನಲ್ಲಿ ಸ್ಥಳೀಯ ನಾಯಕತ್ವವನ್ನು ಬೆಳೆಸದೇ ಇರುವುದು ಈ ಚುನಾವಣೆಯಲ್ಲಿ ಪಕ್ಷ ಎದುರಿಸಿದ ಮತ್ತೊಂದು ಮಿತಿ.

ಮೋದಿಯವರ ಗುಜರಾತಿನಲ್ಲಿ ಬಿಜೆಪಿ ಕೈಯಲ್ಲಿನ ಹಿಂದು-ಮುಸ್ಲಿಂ ಧ್ರುವೀಕರಣದ ಭರ್ಜರಿ ಅಸ್ತ್ರವನ್ನು ಕೊಂಚವಾದರೂ ಮೊಂಡು ಮಾಡಬೇಕೆಂಬ ಪ್ರಜ್ಞಾಪೂರ್ವಕ ರಣತಂತ್ರವನ್ನು ರಾಹುಲ್ ಕಾಂಗ್ರೆಸ್ ಹೆಣೆದಿತ್ತು. ಮುಸಲ್ಮಾನ ಸಮುದಾಯದಿಂದ ದೂರವೇ ಉಳಿಯುವ ಜೊತೆ ಜೊತೆಗೆ ತಾನು ಹಿಂದೂ ವಿರೋಧಿ ಅಲ್ಲ ಎಂಬ ಸಂದೇಶವನ್ನು ರವಾನಿಸಿತು. ಈ ಹೊಚ್ಚ ಹೊಸ ಹೊರಳು ದಾರಿಯ ಪ್ರಯೋಗವನ್ನು ಸಣ್ಣಪುಟ್ಟ ತಿದ್ದುಪಡಿಗಳೊಡನೆ ಮುಂಬರುವ ವರ್ಷಗಳಲ್ಲೂ ಪ್ರಯೋಗ ಮಾಡುವ ಸಾಧ್ಯತೆಗಳು ದಟ್ಟವಾಗಿವೆ ಎನ್ನುತ್ತಿವೆ ಕಾಂಗ್ರೆಸ್ ಮೂಲಗಳು.ಸೋತಿರುವ ಪಕ್ಷ ಎಲ್ಲವನ್ನೂ ಸೋತಿಲ್ಲ, ಗೆದ್ದಿರುವ ವಕ್ಷ ಎಲ್ಲವನ್ನೂ ಬಾಚಿ ಬುಟ್ಟಿಗೆ ಹಾಕಿಕೊಂಡಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry