3

ಬದಲಾವಣೆಯ ಗಾಳಿ ಆರಂಭ: ಸಚಿವ ಖಾದರ್‌

Published:
Updated:

ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯದಿಂದಲೇ ದೇಶದಲ್ಲಿ ಬದಲಾವಣೆಯ ಗಾಳಿ ಆರಂಭವಾಗಿದೆ ಎಂದು ಆಹಾರ ಸಚಿವ ಯು.ಟಿ. ಖಾದರ್ ಹೇಳಿದರು.

ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗುಜರಾತ್‌ನಲ್ಲಿ ಎರಡು ದಶಕದಿಂದ ಬಿಜೆಪಿ ಅಧಿಕಾರದಲ್ಲಿದೆ. ಕೇಂದ್ರದ ಸಚಿವರೆಲ್ಲರೂ ಗುಜರಾತ್‌ನಲ್ಲಿಯೇ ಬೀಡು ಬಿಟ್ಟಿದ್ದರು. ಅದಾಗ್ಯೂ ಕಾಂಗ್ರೆಸ್ ಹೆಚ್ಚು ಸ್ಥಾನ ಗೆದ್ದಿದೆ ಎಂದರು.

ಗುಜರಾತ್‌ ಚುನಾವಣಾ ಫಲಿತಾಂಶದ ನಂತರ ದೇಶದ ರಾಜಕೀಯದಲ್ಲಿ ಮಹತ್ತರ ಬದಲಾವಣೆಗಳು ಆಗಲಿವೆ. ಸತ್ಯಕ್ಕೆ ಎಂದಿಗೂ ಜಯ ಸಿಗುತ್ತದೆ ಎಂಬುದನ್ನು ಈ ಫಲಿತಾಂಶ ಸಾಬೀತು ಮಾಡಿದೆ. ಪ್ರಧಾನಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು 30ಕ್ಕೂ ಅಧಿಕ ರ‍್ಯಾಲಿಗಳನ್ನು ನಡೆಸಿದ್ದರು. ಆದರೂ, ಅಲ್ಲಿನ ಮತದಾರರು ಕಾಂಗ್ರೆಸ್‌ಗೆ ಹೆಚ್ಚಿನ ಸ್ಥಾನ ನೀಡುವ ಮೂಲಕ ದೇಶದಲ್ಲಿ ಮತ್ತೆ ಕಾಂಗ್ರೆಸ್‌ ಪರ ಅಲೆ ಆರಂಭವಾಗಿದೆ ಎಂದು ತಿಳಿಸಿದರು.

ಜನರನ್ನು ಎಲ್ಲ ಕಾಲದಲ್ಲೂ ಮೋಸ ಮಾಡಲು ಸಾಧ್ಯವಿಲ್ಲ. ಯಾವುದೇ ಗಿಮಿಕ್‌ಗಳು ನಡೆಯುವುದಿಲ್ಲ ಎಂಬುದನ್ನು ಚುನಾವಣಾ ಫಲಿತಾಂಶ ತೋರಿಸಿದೆ. ಇದು ಬಿಜೆಪಿಗೆ ತೀವ್ರ ಹಿನ್ನಡೆ ಉಂಟು ಮಾಡಿದೆ ಎಂದು ಹೇಳಿದರು.

ಹಿಮಾಚಲ ಪ್ರದೇಶದ ಫಲಿತಾಂಶವನ್ನು ಸ್ವಾಗತಿಸುವುದಾಗಿ ಹೇಳಿದ ಅವರು, ಅಲ್ಲಿನ ಜನರು ಬದಲಾವಣೆ ಬಯಸಿದ್ದಾರೆ. ಅದಕ್ಕಾಗಿಯೇ ಬಿಜೆಪಿಗೆ ಮತ ನೀಡಿದ್ದಾರೆ ಎಂದರು.

ಎಐಸಿಸಿ ಅಧ್ಯಕ್ಷರಾಗಿ ರಾಹುಲ್‌ ಗಾಂಧಿ ಇದೀಗ ಅಧಿಕಾರ ವಹಿಸಿಕೊಂಡಿದ್ದಾರೆ. ಅವರಿಗೆ ದೇವರು ಹಾಗೂ ಜನರ ಆಶೀರ್ವಾದವಿದೆ. ಮುಂದೊಂದು ದಿನ ರಾಹುಲ್‌ ಗಾಂಧಿ ಪ್ರಧಾನಿ ಆಗುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ದೇಶಕ್ಕಾಗಿ ಯಾರಾದರೂ ತ್ಯಾಗ ಮಾಡಿದ್ದರೆ, ಅದು ಗಾಂಧಿ ಪರಿವಾರ. ಪಂಜಾಬ್‌ನಲ್ಲಿ ಶಾಂತಿ ಸ್ಥಾಪನೆಗಾಗಿ ಇಂದಿರಾ ಗಾಂಧಿ ರಕ್ತ ಹರಿಸಿದರೆ, ದಕ್ಷಿಣದಲ್ಲಿ ಶಾಂತಿ ಸ್ಥಾಪನೆಗೆ ರಾಜೀವ್‌ ಗಾಂಧಿ ರಕ್ತ ಹರಿಸಿದ್ದಾರೆ.

ಅಂತಹ ಕುಟುಂಬದ ರಾಹುಲ್‌ ಗಾಂಧಿ ಕಾಂಗ್ರೆಸ್‌ ಅಧ್ಯಕ್ಷರಾಗಿದ್ದು, ಅವರ ನೇತೃತ್ವದಲ್ಲಿ ಪಕ್ಷ ಕರ್ನಾಟಕದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ತಿಳಿಸಿದರು. ಜಿಲ್ಲಾ ಪಂಚಾಯಿತಿ ಸದಸ್ಯೆ ಮಮತಾ ಗಟ್ಟಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry