7

ಸ್ವಚ್ಛತಾ ಆ್ಯಪ್‌ ಬಳಸಿ, ಬಹುಮಾನ ಗೆಲ್ಲಿ

Published:
Updated:

ಮೈಸೂರು: ಐತಿಹಾಸಿಕ ನಗರಕ್ಕೆ ಮತ್ತೆ ‘ನಂಬರ್‌ ಒನ್‌ ಸ್ವಚ್ಛನಗರ’ ಕಿರೀಟ ತಂದುಕೊಡಲು ಪಾಲಿಕೆ ಎಲ್ಲ ಸಿದ್ಧತೆ ಮಾಡಿಕೊಂಡಿದೆ. ಈಗ ಉಳಿದಿರುವುದು ಸಾರ್ವಜನಿಕರ ಸಹಭಾಗಿತ್ವ ಮಾತ್ರ. ಈ ಕನಸು ನನಸಾಗಬೇಕಾದರೆ ಪ್ರತಿಯೊಬ್ಬರೂ ಸ್ವಚ್ಛತಾ ಆ್ಯಪ್‌ ಬಳಸಬೇಕು ಎಂದು ಮೇಯರ್‌ ಎಂ.ಜೆ.ರವಿಕುಮಾರ್‌ ಕೋರಿದರು.

‘ಈ ಬಾರಿಯ ಸ್ವಚ್ಛತೆಯ ಪಟ್ಟ ಗಿಟ್ಟಿಸಿಕೊಳ್ಳಲು ದೇಶದ 4,041 ನಗರಗಳು ಸ್ಪರ್ಧೆಗೆ ನಿಂತಿವೆ. ಕಳೆದ ಬಾರಿ ಮೈಸೂರು 5ನೇ ಸ್ಥಾನ ಪಡೆಯುವ ಮೂಲಕ ತುಸು ಹಿನ್ನಡೆ ಕಂಡಿದೆ. ಹಾಗಾಗಿ, ಈ ಬಾರಿ ಸ್ವಚ್ಛತೆಗೆ ಮತ್ತಷ್ಟು ಒತ್ತುಕೊಡಲಾಗಿದೆ. ನಗರದಲ್ಲಿ ಶೇ 100ರಷ್ಟು ಶೌಚಾಲಯ ನಿರ್ಮಾಣ ಮಾಡಲಾಗಿದೆ. ಕಸ ಸಂಗ್ರಹ, ಘನತ್ಯಾಜ್ಯ ವಿಲೇವಾರಿ, ದಾಖಲೆಗಳ ನಿರ್ವಹಣೆ ಸೇರಿದಂತೆ ಪಾಲಿಕೆ ಎಲ್ಲ ಸಿದ್ಧತೆ ಮಾಡಿಕೊಂಡಿದೆ’ ಎಂದು ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಈ ಬಾರಿ ಸ್ವಚ್ಛ ಸರ್ವೇಕ್ಷಣೆಯಲ್ಲಿ ಸಾರ್ವಜನಿಕರ ಪ್ರತಿಕ್ರಿಯೆ ಹಾಗೂ ಪಾಲ್ಗೊಳ್ಳುವಿಕೆಗೆ ಸಂಬಂಧಿಸಿ ಪ್ರತ್ಯೇಕವಾಗಿ 1,400 ಅಂಕ ನಿಗದಿ ಮಾಡಲಾಗಿದೆ. ಇದರಲ್ಲಿ ಸ್ವಚ್ಛತಾ ಆ್ಯಪ್‌ ಉಪಯೋಗಿಸುವವರ ಸಂಖ್ಯೆ, ದೂರು ದಾಖಲು– ಪರಿಹಾರ, ಇದರ ಇತಿಹಾಸದ ರ‍್ಯಾಂಕಿಂಗ್‌... ಹೀಗೆ ವಿವಿಧ ವಿಭಾಗಗಳಲ್ಲಿ ಅಂಕ ಹಂಚಲಾಗಿದೆ.

ಮಾರ್ಗದರ್ಶಿ ಪ್ರಕಾರ ನಗರದಲ್ಲಿ ಸುಮಾರು 18,000 ಆ್ಯಪ್‌ಗಳು ಡೌನ್‌ಲೋಡ್‌ ಆಗಿ ಬಳಕೆಯಲ್ಲಿ ರಬೇಕು. ಸದ್ಯ ನಮ್ಮಲ್ಲಿ 4,000 ಮಾತ್ರ ಇವೆ. ಇನ್ನುಳಿದ ಆ್ಯಪ್‌ಗಳನ್ನು ಡಿ.31ರೊಳಗಾಗಿ ಡೌನ್‌ಲೋಡ್‌ ಮಾಡಬೇಕಿದೆ. ಬರುವ ಜ 4ರಿಂದ ಇದರ ಪ್ರತಿಕ್ರಿಯೆ ಆರಂಭವಾಗಲಿದೆ. ನಾಗರಿಕರು ತಮ್ಮ ಮೊಬೈಲ್‌ ಮೂಲಕ ಆ್ಯ‍ಪ್‌ ಬಳಸಿ ಈ ಕಾರ್ಯದಲ್ಲಿ ಪಾಲ್ಗೊಳ್ಳಬೇಕು’ ಎಂದರು.

ಐವರಿಗೆ ತಲಾ ₹ 10,000 ಬಹುಮಾನ: ಈ ಆ್ಯಪ್‌ ಬಳಸುವವರಿಗೆ ಬಹುಮಾನ ನೀಡಲು ಪಾಲಿಕೆ ತೀರ್ಮಾನಿಸಿದೆ. ಲಕ್ಕಿಡಿಪ್‌ ಮೂಲಕ ಐವರನ್ನು ಆಯ್ಕೆ ಮಾಡಿ ತಲಾ ₹ 10,000 ಬಹುಮಾನ ನೀಡಲಾಗುವುದು ಎಂದು ಪಾಲಿಕೆ ಆಯುಕ್ತ ಜಿ.ಜಗದೀಶ್‌ ತಿಳಿಸಿದರು.

ಸ್ವಚ್ಛತೆಯ ಉಸ್ತುವಾರಿ ನೋಡಿಕೊಳ್ಳಲು ಪ್ರತಿ ವಾರ್ಡಿಗೂ ಎರಡು ಕ್ಷೇಮಾಭಿವೃದ್ಧಿ ಸಂಘಗಳನ್ನು ಸ್ಥಾಪಿಸಲಾಗಿದೆ. ಸ್ತ್ರೀಶಕ್ತಿ ಸಂಘಗಳು ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘಗಳ ಸದಸ್ಯರೂ ಇದರಲ್ಲಿದ್ದಾರೆ.

ಅಲ್ಲದೆ, ಆ್ಯಪ್‌ಗಳನ್ನು ಡೌನ್‌ಲೋಡ್‌ ಮಾಡಿಕೊಂಡರೆ ಸಾಲದು. ಅಶುಚಿತ್ವದ ಚಿತ್ರ ತೆಗೆದು ಪೋಸ್ಟ್ ಮಾಡಬೇಕು. ಪರಿಹಾರವಾದ ಬಗ್ಗೆಯೂ ಪ್ರತಿಕ್ರಿಯೆ ನೀಡಬೇಕು. ಆಗ ಮಾತ್ರ ಅದು ಸಿಂಧುವಾಗುತ್ತದೆ’ ಎಂದರು. ಉಪಮೇಯರ್‌ ರತ್ನಾ ಲಕ್ಷ್ಮಣ್‌ ಹಾಗೂ ವಿವಿಧ ಸ್ಥಾಯಿ ಸಮಿತಿ ಸದಸ್ಯರು, ಅಧಿಕಾರಿಗಳು ಇದ್ದರು.

ಸ್ವಚ್ಛತಾ ಆ್ಯಪ್‌ ಬಳಸುವುದು ಹೇಗೆ?

ಪ್ಲೇ ಸ್ಟೋರ್‌ನಲ್ಲಿ 'swachhata MoHUa' ಆ್ಯಪ್‌ ಇನ್‌ಸ್ಟಾಲ್‌ ಮಾಡಿಕೊಳ್ಳಿ‌

ನಿಮ್ಮ ಮೊಬೈಲ್‌ ನಂಬರ್‌ ಹಾಕಿ ರಿಜಿಸ್ಟರ್‌ ಮಾಡಿ‌ಕೊಳ್ಳಿ

ನಿಮ್ಮ ಮೊಬೈಲ್‌ಗೆ ವೆರಿಫಿಕೇಶನ್‌ ಕೋಡ್‌ ಬರುತ್ತದೆ, ಅದನ್ನು ತೋರಿಸಿದ ಕಾಲಮ್ಮುಗಳಲ್ಲಿ ತುಂಬಿ‌

ಈಗ ಪೆನ್‌ಟೂಲ್‌ ಬಳಸಿ ನಿಮಗೆ ಹೇಳಬೇಕಾದ ಮಾಹಿತಿ ನೀಡಿ ಅಥವಾ ಫೋಟೊ ಕ್ಲಿಕ್ಕಿಸಿ ಕ್ಯಾ‌ಪ್ಷನ್‌ ಹಾಕಿ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry