ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧನುರ್ಮಾಸ ಆರಂಭ; ತರಕಾರಿ ಧಾರಣೆ ಕುಸಿತ

Last Updated 19 ಡಿಸೆಂಬರ್ 2017, 5:23 IST
ಅಕ್ಷರ ಗಾತ್ರ

ಮೈಸೂರು: ಧನುರ್ಮಾಸ ಆರಂಭವಾಗುತ್ತಿದ್ದಂತೆ ತರಕಾರಿಗಳ ಧಾರಣೆಯಲ್ಲಿ ಕುಸಿತ ಉಂಟಾಗಿದೆ. ಸಾಮಾನ್ಯವಾಗಿ ಶೂನ್ಯಮಾಸದಲ್ಲಿ ನಾಮಕರಣ, ಗೃಹಪ್ರವೇಶ, ಮದುವೆ ಮೊದಲಾದ ಶುಭ ಸಮಾರಂಭಗ ನಡೆಯುವುದಿಲ್ಲ. ಇದರಿಂದ ಸಹಜವಾಗಿಯೇ ತರಕಾರಿಗಳಿಗೆ ಬೇಡಿಕೆ ಕಡಿಮೆಯಾಗುತ್ತದೆ.

ಮತ್ತೊಂದೆಡೆ, ತರಕಾರಿಗಳ ಇಳುವರಿ ಈ ಬಾರಿ ಉತ್ತಮವಾಗಿದೆ. ದಿನವೊಂದಕ್ಕೆ 89 ಕ್ವಿಂಟಲ್‌ನಿಂದ 122 ಕ್ವಿಂಟಲ್‌ಗೆ ಬದನೆಕಾಯಿ, 112 ಕ್ವಿಂಟಲ್‌ನಿಂದ 186 ಕ್ವಿಂಟಲ್‌ಗೆ ಎಲೆಕೋಸು, 122 ಕ್ವಿಂಟಲ್‌ನಿಂದ 169 ಕ್ವಿಂಟಲ್‌ಗೆ ಬೀನ್ಸ್, 149 ಕ್ವಿಂಟಲ್‌ನಿಂದ 169 ಕ್ವಿಂಟಲ್‌ಗೆ ಹಸಿಮೆಣಸಿನಕಾಯಿ ಆವಕ ಎಪಿಎಂಸಿ ಮಾರುಕಟ್ಟೆಯಲ್ಲಿ ಹೆಚ್ಚಾಗಿದೆ. ಇದೂ ಬೆಲೆ ಕುಸಿತಕ್ಕೆ ಕಾರಣವಾಗಿದೆ.

‘ಶೂನ್ಯಮಾಸದಲ್ಲಿ ತರಕಾರಿಗಳ ಬೆಲೆ ಇಳಿಕೆ ಸಾಮಾನ್ಯ ಸಂಗತಿ. ಪ್ರತಿ ವರ್ಷ ಇದೇ ರೀತಿ ಇರುತ್ತದೆ. ರೈತರಿಗೆ ಯಾವುದೇ ಲಾಭವಾಗುವುದಿಲ್ಲ’ ಎಂದು ಎಂ.ಜಿ.ರಸ್ತೆ ಮಾರುಕಟ್ಟೆಗೆ ತರಕಾರಿಗಳನ್ನು ಮಾರಾಟ ಮಾಡಲು ತಂದಿದ್ದ ಕಡಕೊಳದ ರೈತ ನಂಜುಂಡಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.

ಬದನೆಕಾಯಿ ಸಗಟು ಧಾರಣೆಯಂತೂ ತೀರಾ ಕಡಿಮೆಯಾಗಿದೆ. ಎಪಿಎಂಸಿ ಮಾರುಕಟ್ಟೆಯಲ್ಲಿ ಗುಂಡುಬದನೆ ಕೆ.ಜಿಗೆ ₹ 4ಕ್ಕೆ ಕುಸಿದಿರುವುದು ಬೆಳೆಗಾರರು  ಗಿಡಗಳಿಂದ ಬಿಡಿಸುವುದಾದರೂ ಏಕೆ ಎಂದು ಪ್ರಶ್ನಿಸುವಂತಾಗಿದೆ. ಟೊಮೆಟೊ ಸಹ ಡಿ.15ರಂದು ₹ 4ಕ್ಕೆ ಕುಸಿದಿತ್ತು. ಎಲೆಕೋಸು ಧಾರಣೆ ಕೆ.ಜಿಗೆ ₹ 9ಕ್ಕೆ ಕಡಿಮೆಯಾಗಿರುವುದರಿಂದ ತರಕಾರಿ ಬೆಳೆದವರಿಗೆ ಲಾಭ ಇಲ್ಲ ಎನ್ನುವಂತಾಗಿದೆ.

18 ದಿನಗಳಿಂದ ಯಥಾಸ್ಥಿತಿಯಲ್ಲಿರುವ ಕೋಳಿಮೊಟ್ಟೆ ಧಾರಣೆ: ಕೋಳಿ ಮೊಟ್ಟೆ ಧಾರಣೆ ಕಳೆದ 18 ದಿನಗಳಿಂದಲೂ ಯಥಾಸ್ಥಿತಿಯಲ್ಲಿಯೇ ಮುಂದುವರಿದಿದೆ. ರಾಷ್ಟ್ರೀಯ ಮೊಟ್ಟೆ ದರ ಸಮನ್ವಯ ಸಮಿತಿಯ ದರವು ಒಂದು ಮೊಟ್ಟೆಗೆ ₹ 4.35ರಲ್ಲೇ ದರ ಮುಂದುವರಿದಿದೆ. ಬೇಡಿಕೆ ಹಾಗೂ ಪೂರೈಕೆಯಲ್ಲಿ ಸ್ಥಿರತೆ ಇರುವುದರಿಂದ ಬೆಲೆಯೂ ಸ್ಥಿರವಾಗಿದೆ.

ಕರ್ನಾಟಕ ರಾಜ್ಯ ಪೌಲ್ಟ್ರಿ ಫಾರ್ಮರ್ಸ್ ಅಂಡ್ ಬ್ರೀಡರ್ಸ್ ಅಸೋಸಿಯೇಷನ್ ದರದಲ್ಲಿ ಏರಿಳಿತವಾಗಿದೆ. ಬ್ರಾಯ್ಲರ್ ಪೇರೆಂಟ್ ಕೋಳಿ ದರ ₹ 95ರಿಂದ ₹ 85ಕ್ಕೆ ಕಡಿಮೆಯಾಗಿದ್ದರೆ, ಕಮರ್ಷಿಯಲ್ ಬ್ರಾಯ್ಲರ್ ಕೋಳಿ ದರ ಕೆ.ಜಿಗೆ ₹ 82ರಿಂದ ₹ 87ಕ್ಕೆ ಹೆಚ್ಚಿದೆ.

ತುಟ್ಟಿಯಾಗುತ್ತಿರುವ ಈರುಳ್ಳಿ

ಮೈಸೂರು: ಈರುಳ್ಳಿ ಧಾರಣೆ ಕಡಿಮೆಯಾಗುವ ಯಾವುದೇ ಲಕ್ಷಣಗಳು ಮಾರುಕಟ್ಟೆಯಲ್ಲಿ ಗೋಚರಿಸುತ್ತಿಲ್ಲ. ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಇದರ ಕನಿಷ್ಠ ಧಾರಣೆ ₹ 15ರಿಂದ 25ಕ್ಕೆ ಹೆಚ್ಚಾಗಿದ್ದರೆ, ಗರಿಷ್ಠ ಧಾರಣೆ ₹ 35ರಿಂದ 40ಕ್ಕೆ ಏರಿಕೆಯಾಗಿದೆ. ಇದರಿಂದ ಚಿಲ್ಲರೆ ಮಾರುಕಟ್ಟೆಯಲ್ಲೂ ದಪ್ಪ ಗಾತ್ರದ ಉತ್ತಮ ಗುಣಮಟ್ಟದ ಈರುಳ್ಳಿ ₹ 60ರಿಂದ  80ರಲ್ಲಿ ಮಾರಾಟವಾಗುತ್ತಿದೆ. ಸಾಂಬಾರು ಈರುಳ್ಳಿ ಕೆ.ಜಿಗೆ ₹ 200 ತಲುಪಿದೆ.

ಪಟ್ಟಿ

ತರಕಾರಿ                ಹಿಂದಿನ ವಾರದ ಧಾರಣೆ          ಈ ವಾರದ ಧಾರಣೆ (ರೂಪಾಯಿನಲ್ಲಿ)

ಟೊಮೆಟೊ               5-6                            5-6

ಕ್ಯಾರೆಟ್                 28-30                         20-28

ಬೀನ್ಸ್                   28-30                         12-15

ಬೀಟ್‌ರೂಟ್‌             18-20                         12-15

ಬದನೆ                   7-8                             5-6

ಎಲೆಕೋಸು             17-19                          9-10

ದಪ್ಪಮೆಣಸಿನಕಾಯಿ      28-30                        25-27

ನುಗ್ಗೆಕಾಯಿ              80-100                       80-90

ಹಸಿಮೆಣಸಿನಕಾಯಿ      14-15                         10-12

ಈರುಳ್ಳಿ                 15-35                         25-40

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT