7

‘ಅಮರಾವತಿ’ಯಿಂದಲೇ ಅಂಬರೀಷ್‌ ಸರ್ಕಾರಿ ಕೆಲಸ!

Published:
Updated:
‘ಅಮರಾವತಿ’ಯಿಂದಲೇ ಅಂಬರೀಷ್‌ ಸರ್ಕಾರಿ ಕೆಲಸ!

ಮಂಡ್ಯ: ಶಾಸಕರ ಕಾರ್ಯ ನಿರ್ವಹಣೆಗೆ ಸುಸಜ್ಜಿತ ಸರ್ಕಾರಿ ಕಚೇರಿ ಇದ್ದರೂ ಶಾಸಕ ಅಂಬರೀಷ್‌ ಕಳೆದ ನಾಲ್ಕೂವರೆ ವರ್ಷಗಳಿಂದ ಒಮ್ಮೆಯೂ ಕಚೇರಿಗೆ ಭೇಟಿ ನೀಡಿಲ್ಲ. ನಗರದ ಹೊರವಲಯದಲ್ಲಿರುವ, ಆಪ್ತ ಸ್ನೇಹಿತ ಅಮರಾವತಿ ಚಂದ್ರಶೇಖರ್‌ ಅವರ ಮನೆಯಲ್ಲೇ ಸಭೆ, ಸಮಾರಂಭ ನಡೆಸುತ್ತಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ಸೋಮವಾರ ಮಧ್ಯಾಹ್ನ ಚಂದ್ರಶೇಖರ್ ನಿವಾಸಕ್ಕೆ ಭೇಟಿ ನೀಡಿದ ಅಂಬರೀಷ್‌ ಬೆಂಬಲಿಗರ ಜೊತೆ ಸಭೆ ನಡೆಸಿದರು. ಪ್ರಗತಿ ಹಂತದಲ್ಲಿರುವ ಅಮೃತ್‌ ಯೋಜನೆ ಕಾಮಗಾರಿ ಬಗ್ಗೆ ಮಾಹಿತಿ ಪಡೆಯಲು ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಅಧಿಕಾರಿಗಳನ್ನು ಅಮರಾವತಿ ನಿವಾಸಕ್ಕೆ ಕರೆಸಿಕೊಂಡು ಮಾತನಾಡಿದರು.

ಅಂಬರೀಷ್‌ ವಸತಿ ಸಚಿವ ಸ್ಥಾನದಿಂದ ಕೆಳಗಿಳಿದ ನಂತರ ಕಾವೇರಿ ನೀರಾವರಿ ನಿಗಮದ ಕಚೇರಿ ಕಟ್ಟಡಲ್ಲಿ ಸುಸಜ್ಜಿತ ಕಚೇರಿ ತೆರೆಯಲಾಗಿದೆ. ಆದರೆ ಕಚೇರಿ ಸದಾ ಬಂದ್‌ ಆಗಿದ್ದು ಶಾಸಕರಾಗಿ ಒಮ್ಮೆಯೂ ಭೇಟಿ ನೀಡಿಲ್ಲ. ಆಗೊಮ್ಮೆ, ಈಗೊಮ್ಮೆ ಕ್ಷೇತ್ರಕ್ಕೆ ಬಂದರೂ ‘ಅಮರಾವತಿ’ಯಲ್ಲಿ ಅಧಿಕಾರಿಗಳು ಹಾಗೂ ಬೆಂಬಲಿಗರ ಜೊತೆ ಚರ್ಚಿಸಿ ಬೆಂಗಳೂರಿಗೆ ಹಿಂತಿರುಗುತ್ತಾರೆ.

‘ಅಂಬರೀಷ್‌ ಶಾಸಕರಾಗಿ ಆಯ್ಕೆಯಾದ ನಂತರ ಒಂದು ದಿನವೂ ಜನರ ಅಹವಾಲು ಕೇಳಲಿಲ್ಲ. ಚಂದ್ರಶೇಖರ್‌ ಅವರ ಮನೆಯಿಂದಲೇ ಅಧಿಕಾರಿಗಳಿಗೆ ಸೂಚನೆ ನೀಡುತ್ತಾರೆ. ಇಂತಹ ಶಾಸಕರನ್ನು ಆಯ್ಕೆ ಮಾಡಿದ ನಾವು ದುರದೃಷ್ಟವಂತರು’ ಎಂದು ರೈತ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ಶಂಭೂನಹಳ್ಳಿ ಸುರೇಶ್‌ ಅಸಮಾಧಾನ ವ್ಯಕ್ತಪಡಿಸಿದರು.

‘ಸಿನಿಮಾ ನಟ ಜನರ ಕೈಗೆ ಸಿಕ್ಕರೆ ಜನಪ್ರಿಯತೆ ಹಾಳಾಗುತ್ತದೆ ಎಂಬ ಕಲ್ಪನೆ ಇನ್ನೂ ಅವರಿಗೆ ಇದ್ದಂತಿದೆ. ಅವರು ಜನರ ಕೈಗೆಟುಕುವುದಿಲ್ಲ. ಶಾಸಕ ಎನ್ನುವ ಪ್ರಜ್ಞೆ ಅವರಿಗೆ ಇದ್ದಂತಿಲ್ಲ.’ ಎಂದು ಆರ್‌ಟಿಐ ಕಾರ್ಯಕರ್ತ ಕೆ.ಆರ್‌.ರವೀಂದ್ರ ತಿಳಿಸಿದರು.

ಸಚಿವರಾಗಿದ್ದಾಗಲೂ ಕಚೇರಿಗೆ ಬರಲಿಲ್ಲ: ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅವರ ಕಚೇರಿ ಇತ್ತು. ಆ ಕಚೇರಿಗೆ ಭೇಟಿ ನೀಡಲಿಲ್ಲ. ಆಗಲೂ ‘ಅಮರಾವತಿ’ಯೇ ಕಚೇರಿಯಾಗಿತ್ತು ಎಂಬ ಆರೋಪವೂ ಇದೆ.

’ಕಚೇರಿಯಲ್ಲಿ ಕುಳಿತು ಜವಾಬ್ದಾರಿ ನಿರ್ವಹಿಸಬೇಕಾದ ಶಾಸಕರು ಸ್ನೇಹಿತರ ಮನೆಯಲ್ಲಿ ಕುಳಿತು ಮೋಜು ಮಾಡುತ್ತಾರೆ. ಮೋಜನ್ನೇ ಕೆಲಸ ಎಂದುಕೊಂಡಿದ್ದಾರೆ. ಇಂತಹ ಶಾಸಕ ಇನ್ನೊಮ್ಮೆ ನಮಗೆ ಬೇಕಾ’ ಎಂದು ಸಿಐಟಿಯು ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ ಪ್ರಶ್ನಿಸಿದರು.

‘ಚುನಾವಣೆ ಸಂದರ್ಭದಲ್ಲಾದರೂ ಜನರ ಜೊತೆ ಬೆರೆಯಬೇಕಾಗಿತ್ತು. ಜನರು ಎಂದರೆ ಅವರಿಗೆ ನಿರ್ಲಕ್ಷ್ಯ. ಬಾಯಿಗೆ ಬಂದಂತೆ ಮಾತನಾಡುವುದೇ ಕೆಲಸ. ಇಂಥವರು ಜನಪ್ರತಿನಿಧಿ ಆಗಿರುವುದು ನಮ್ಮ ದುರದೃಷ್ಟ’ ಎಂದು ಶಿಕ್ಷಕ ರಮೇಶ್‌ ಹೇಳಿದರು.

'ಬೆಂಬಲಿಗರನ್ನು ಅಧಿಕಾರಕ್ಕೆ ಏರಿಸಲು ಹಾಗೂ ಅಧಿಕಾರದಿಂದ ಇಳಿಸಲು ಮಾತ್ರ ಅವರು ಕ್ಷೇತ್ರಕ್ಕೆ ಬರುತ್ತಾರೆ. ನಗರಸಭೆ ಚುನಾವಣೆ ವೇಳೆ ಶಾಸಕರು ಕಚೇರಿಗೆ ಬಂದ ನೆನಪಿದೆ. ನಂತರ ಮತ್ತೆಂದೂ ಅವರು ಕಚೇರಿಗೆ ಬಂದಿಲ್ಲ. ಈ ಬಗ್ಗೆ ನಮಗೂ ಬೇಸರ ಇದೆ’ ಎಂದು ಕಾಂಗ್ರೆಸ್‌ ಮುಖಂಡರೊಬ್ಬರು ಹೇಳಿದರು.‌ ಈ ಕುರಿತು ಪ್ರತಿಕ್ರಿಯೆ ಪಡೆಯಲು ಅಂಬರೀಷ್‌ ಅವರಿಗೆ ಕರೆ ಮಾಡಿದಾಗ ಅವರು ಕರೆ ಸ್ವೀಕರಿಸಲಿಲ್ಲ.

ನಗರಸಭೆ ಅಧ್ಯಕ್ಷರ ಬದಲಾವಣೆಗೆ ಚರ್ಚೆ

ನಗರಸಭೆ ಅಧ್ಯಕ್ಷ ಹೊಸಹಳ್ಳಿ ಬೋರೇಗೌಡ ಅವರನ್ನು ಬದಲಾಯಿಸುವ ಕುರಿತು ಶಾಸಕ ಅಂಬರೀಷ್‌ ಸೋಮವಾರ ಕಾಂಗ್ರೆಸ್‌ ಸದಸ್ಯರ ಜೊತೆ ಮಾತನಾಡಿದ್ದಾರೆ.ಅಮರಾವತಿ ಚಂದ್ರಶೇಖರ್‌ ಅವರ ಮನೆಯಲ್ಲೇ ಸಭೆ ನಡೆಸಿದ ಅವರು ಸದಸ್ಯರು ಹಾಗೂ ಬೆಂಬಲಿಗರ ಜೊತೆ ಮಾತನಾಡಿದ್ದಾರೆ. ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ಸೂಕ್ತ ಅಭ್ಯರ್ಥಿ ಆಯ್ಕೆ ಮಾಡುವ ಕುರಿತು ಚರ್ಚೆ ಮಾಡಿದ್ದಾರೆ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

‘ಸಭೆಗೆ ನಾನೂ ಹೋಗಿದ್ದೆ. ಸ್ಥಾನ ಬದಲಾವಣೆ ಮಾಡುವ ಕುರಿತು ನನ್ನ ಜೊತೆ ಶಾಸಕರು ಮಾತನಾಡಿಲ್ಲ. ಭಿನ್ನಮತೀಯ ಸದಸ್ಯರು ನನ್ನನ್ನು ಬದಲಾಯಿಸುವಂತೆ ಅಂಬರೀಷ್‌ ಮೇಲೆ ಒತ್ತಡ ಹೇರುತ್ತಿದ್ದಾರೆ. ಭಿನ್ನಮತೀಯರ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ’ ಎಂದು ಹೊಸಹಳ್ಳಿ ಬೋರೇಗೌಡ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry