ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಡಿಎಸ್‌ ಅಧಿಕಾರಕ್ಕೆ ಬಂದರೆ ಸಾಲ ಮನ್ನಾ

Last Updated 19 ಡಿಸೆಂಬರ್ 2017, 6:05 IST
ಅಕ್ಷರ ಗಾತ್ರ

ಚಿಕ್ಕನಾಯಕನಹಳ್ಳಿ: ’ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ರಾಜ್ಯದ ರೈತರ ಸಂಪೂರ್ಣ ಸಾಲ ಮನ್ನಾ ಮಾಡಲಾಗುವುದು’ಎಂದು ರಾಜ್ಯ ಯುವ ಜೆಡಿಎಸ್ ಅಧ್ಯಕ್ಷ ಮಧು ಬಂಗಾರಪ್ಪ ಹೇಳಿದರು.

ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ಸೋಮವಾರ ನಡೆದ ತಾಲ್ಲೂಕು ಯುವ ಜನತಾದಳದ ಬೈಕ್‌ ರ‍್ಯಾಲಿ ಹಾಗೂ ಯುವ ಸಮಾವೇಶದಲ್ಲಿ ಮಾತನಾಡಿ, ಈಗಾಗಲೇ ರಾಜ್ಯದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ಗೆ ಅಧಿಕಾರ ನೀಡಿದ್ದೀರಿ. ಈ ಬಾರಿ ಜೆಡಿಎಸ್‌ಗೆ ಮತ ನೀಡಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿ ಎಂದರು.

ನಟ ನಿಖಿಲ್‌ಗೌಡ ಮಾತನಾಡಿ, ರಾಜ್ಯದಲ್ಲಿ ಕುಮಾರಸ್ವಾಮಿ ಅವರ 20ತಿಂಗಳ ಆಡಳಿತ ನೋಡಿದ್ದೀರಿ. ರಾಜ್ಯದಲ್ಲಿ ಬಡವರ, ದೀನದಲಿತರ, ಮಹಿಳೆಯರ, ರೈತರ ಪರವಾಗಿ ಹೋರಾಟ ಮಾಡಿ ಗ್ರಾಮ ವಾಸ್ತವ್ಯದ ಮೂಲಕ ಮನೆ, ಮನೆಗೆ ಜೆಡಿಎಸ್ ತಲುಪಿಸಿದ್ದಾರೆ.

ಕುಮಾರಸ್ವಾಮಿ ಅವರಿಗೆ ಹೃದಯ ಖಾಯಿಲೆ ಇದ್ದರೂ ರೈತರ ಪರವಾಗಿ ಅಧ್ಯಯನ ಮಾಡಲು ಇಸ್ರೇಲ್‌ಗೆ ತೆರಳಿ ಅಲ್ಲಿ ಕೃಷಿ ಅಧ್ಯಯನ ಮಾಡಿ ರಾಜ್ಯದ ರೈತರಿಗೆ ಯಾವ ರೀತಿಯಲ್ಲಿ ಅನುಕೂಲ ಮಾಡಬಹುದು ಎಂಬುದನ್ನು ತಿಳಿದುಕೊಂಡು ಬಂದಿದ್ದಾರೆ ಎಂದರು.

ಚಿ.ನಾ.ಹಳ್ಳಿ ಕ್ಷೇತ್ರದ ಶಾಸಕರಾದ ಸಿ.ಬಿ.ಸುರೇಶ್‌ಬಾಬು ಸಜ್ಜನರಾಗಿದ್ದು ಮುಂದೆ ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ಬಹುಮತದಿಂದ ಗೆಲ್ಲಿಸಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗುತ್ತಾರೆ. ಸಿ.ಬಿ.ಸುರೇಶ್‌ಬಾಬು ಮಂತ್ರಿಯಾಗುತ್ತಾರೆ ಎಂದರು.

ಶಾಸಕ ಸಿ.ಬಿ.ಸುರೇಶ್‌ಬಾಬು ಮಾತನಾಡಿ, ಚಿ.ನಾ.ಹಳ್ಳಿ ಕ್ಷೇತ್ರದಾದ್ಯಂತ ಸಾವಿರಾರು ದ್ವಿಚಕ್ರ ವಾಹನಗಳು ಬಂದು ಯುವ ಸಮಾವೇಶದಲ್ಲಿ ಭಾಗವಹಿಸಿದ್ದೀರಿ. ಯುವಕರು ಜೆಡಿಎಸ್ ಕಾರ್ಯಕ್ರಮಗಳ ಬಗ್ಗೆ ಹಳ್ಳಿಗಳಲ್ಲಿ ತಿಳಿಸಿ ಎಂದರು.

ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯರಾದ ರಮೇಶ್‌ಬಾಬು, ಬೆಮೆಲ್ ಕಾಂತರಾಜು, ಚೌಡಾರೆಡ್ಡಿ ತೂಪಲ್ಲಿ, ಜೆಡಿಎಸ್ ಮುಖಂಡರಾದ ದುಶ್ಯಂತ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ಆರ್.ರಾಮಚಂದ್ರಯ್ಯ, ಕಲ್ಲೇಶ್, ಜಯಪ್ರಕಾಶ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಹೊನ್ನಮ್ಮ, ಪುರಸಭೆ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್, ತಾಲ್ಲೂಕು ಯುವ ಘಟಕದ ಅಧ್ಯಕ್ಷ ಬಿ.ಎನ್.ಶಿವಪ್ರಕಾಶ್, ಪ್ರಧಾನ ಕಾರ್ಯದರ್ಶಿ ಬಿ.ಕೆ.ಸದಾಶಿವಯ್ಯ, ಬೆಳ್ಳಿಲೋಕೇಶ್, ಚಂದ್ರಶೇಖರ್‌ ಶೆಟ್ಟಿ ಉಪಸ್ಥಿತರಿದ್ದರು.

ಬೈಕ್ ರ‍್ಯಾಲಿ: ಚಿ.ನಾ.ಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಬಲಪಡಿಸುವಲ್ಲಿ ಕಿಬ್ಬನಹಳ್ಳಿಯಿಂದ ಚಿಕ್ಕನಾಯಕನಹಳ್ಳಿವರೆಗೆ ಏರ್ಪಡಿಸಿದ್ದ ಬೃಹತ್ ಬೈಕ್ ರ‍್ಯಾಲಿಯಲ್ಲಿ ಸಾವಿರಾರು ಬೆಂಬಲಿಗರು ಪಟ್ಟಣದ ನಾಲ್ಕು ಬೀದಿಗಳಲ್ಲೂ ಸಂಚರಿಸಿ ಸಮಾವೇಶ ಏರ್ಪಡಿಸಿದ್ದ ಕನ್ನಡ ಸಂಘದ ವೇದಿಕೆಗೆ ಬಂದರು. ಕಿಬ್ಬನಹಳ್ಳಿ ಪ್ರವಾಸಿ ಮಂದಿರದ ಬಳಿ ಬೈಕ್ ರ‍್ಯಾಲಿಗೆ ನಟ ನಿಖಿಲ್‌ಗೌಡ ಹಾಗೂ ದುಶ್ಯಂತ್ ಶ್ರೀನಿವಾಸ್ ಚಾಲನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT