6

ರಸ್ತೆ ನಿರ್ಮಾಣಕ್ಕೆ ವಿದ್ಯಾರ್ಥಿಗಳ ವಿರೋಧ

Published:
Updated:
ರಸ್ತೆ ನಿರ್ಮಾಣಕ್ಕೆ ವಿದ್ಯಾರ್ಥಿಗಳ ವಿರೋಧ

ಕುಶಾಲನಗರ: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಸೇರಿದ ಜಾಗದಲ್ಲಿ ಕಚ್ಚಾ ರಸ್ತೆಗೆ ಜಾಗಬಿಟ್ಟು ಕೊಡಲು ಮುಂದಾದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ವಿರುದ್ಧ ಸೋಮವಾರ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಹಾಗೂ ಹಳೆಯ ವಿದ್ಯಾರ್ಥಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಹಾರಂಗಿ ರಸ್ತೆಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸರ್ವೇ ನಂಬರ್ 97/7 ರಲ್ಲಿ 13 ಎಕರೆ ಹಾಗೂ ಸರ್ವೇ ನಂಬರ್ 5/6ರಲ್ಲಿ 7 ಎಕರೆ ಜಾಗವಿದೆ. 2012–13ನೇ ಸಾಲಿನಲ್ಲಿ ಸರ್ವೇ ಕಾರ್ಯ ನಡೆಸಿ ಕಾಲೇಜಿಗೆ ಸೇರಿದ ಜಾಗದ ಹದ್ದುಬಸ್ತು ಮಾಡಿ ಗುರುತು ಮಾಡಿದ್ದರು. ಆದರೆ ಕಾಲೇಜಿನ ಹಿಂಭಾಗದಲ್ಲಿ ವಾಸವಿರುವ ರಾಜಕರಾಣಿ ಶಿವಾನಂದ ಎಂಬುವವರು ಕಾನೂನು ಬಾಹಿರವಾಗಿ ತಮ್ಮ ಮನೆಗೆ ರಸ್ತೆ ನಿರ್ಮಿಸಿಕೊಂಡಿದ್ದಾರೆ ಎಂದು ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ ರಸ್ತೆಗೆ ಅಡ್ಡಲಾಗಿ ಬೇಲಿ ಹಾಕಲು ಮುಂದಾದರು.

ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಸದಸ್ಯ ಎಂ.ಎಸ್.ಶಿವಾನಂದ್ ಮತ್ತು ಕೆಲವು ಮಹಿಳೆಯರು ವಿರೋಧ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರು, ವಿದ್ಯಾರ್ಥಿಗಳು ಹಾಗೂ ಶಿವಾನಂದ್ ನಡುವೆ ಪರಸ್ಪರ ಮಾತಿನ ಚಕಮುಖಿ ನಡೆಯಿತು. ಸ್ಥಳಕ್ಕೆ ಬಂದ ಶಾಸಕ ಅಪ್ಪಚ್ಚುರಂಜನ್ ವಿರುದ್ಧ ವಿದ್ಯಾರ್ಥಿಗಳು ಧಿಕ್ಕಾರ ಕೂಗಿದರು. ಇದರಿಂದ ಆಕ್ರೋಶಗೊಂಡ ಅಪ್ಪಚ್ಚುರಂಜನ್ ಅವರು ವಿದ್ಯಾರ್ಥಿಗಳ ವಿರುದ್ಧ ಹರಿಹಾಯ್ದರು.

ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರು ಅಥವಾ ವಿದ್ಯಾರ್ಥಿಗಳಿಂದ ಯಾವುದೇ ಅಹವಾಲು ಆಲಿಸದೆ ಶಾಸಕರು ರಸ್ತೆಯನ್ನು ವೀಕ್ಷಿಸಿ, ಅಳತೆ ಮಾಡುವಂತೆ ಸೂಚಿಸಿದರು. 25 ಅಡಿಯಷ್ಟು ಜಾಗದಲ್ಲಿ ರಸ್ತೆ ನಿರ್ಮಾಣ ಮಾಡಿರುವುದನ್ನು ನೋಡಿದ ಶಾಸಕರು, ‘ಇಷ್ಟೊಂದು ಜಾಗ ಬಿಟ್ಟುಕೊಡಲು ಸಾಧ್ಯವಿಲ್ಲ. 15 ಅಡಿಯಷ್ಟು ಜಾಗವನ್ನು ರಸ್ತೆಗೆ ಬಿಟ್ಟುಕೊಡುತ್ತೇವೆ. ಜಾಗದ ಬದಲಿಗೆ ಈ ಭಾಗದಲ್ಲಿ ಕಾಂಪೌಂಡ್ ನಿರ್ಮಿಸಿಕೊಡುವಂತೆ’ ಶಿವಾನಂದ ಅವರಿಗೆ ಹೇಳಿದರು.

ಶಾಸಕರ ಕ್ರಮದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ವಿದ್ಯಾರ್ಥಿ ಗಳು, ರಸ್ತೆಗೆ ಗುರುತು ಹಾಕುವುದಕ್ಕೆ ಅಡ್ಡಿಪಡಿಸಿದರು. ಇದರಿಂದ ಕಸಿವಿಸಿಕೊಂಡ ಶಾಸಕರು ಡಿವೈಎಸ್‌ಪಿ ಮುರುಳೀಧರ್ ಅವರಿಗೆ ಕರೆ ಮಾಡಿ ಪೊಲೀಸ್ ಪಡೆ ಕಳುಹಿಸುವಂತೆ ಸೂಚನೆ ನೀಡಿದರು.

ಪೊಲೀಸರು ಸ್ಥಳಕ್ಕೆ ಬಂದರೂ ವಿದ್ಯಾರ್ಥಿಗಳು ಪಟ್ಟುಬಿಡಲಿಲ್ಲ. ಜೊತೆಗೆ ಹೆಚ್ಚಿನ ವಿದ್ಯಾರ್ಥಿಗಳು ಜಮಾಯಿಸಿದರು. ‘ಸರ್ಕಾರಿ ಜಾಗವನ್ನು ಉಳಿಸುವ ಜೊತೆಗೆ ಗ್ರಾಮಸ್ಥರಿಗೆ ದಾರಿ ಮಾಡಿಕೊಡುವುದು ನನ್ನ ಕರ್ತವ್ಯ’ ಎಂದು ಅಪ್ಪಚ್ಚುರಂಜನ್ ಹೇಳಿದರು.

22 ಎಕರೆ ಜಾಗ ಹೊಂದಿದ್ದ ಕಾಲೇಜು ಈಗ 20 ಎಕರೆಗೆ ಬಂದಿದೆ. ಈ ಹಿಂದೆ ಕಾಲೇಜಿನ ಜಾಗವನ್ನು ಯಾವುದೇ ಕಾರಣಕ್ಕೂ ಒತ್ತುವರಿ ಯಾಗಲು ಬಿಡುವುದಿಲ್ಲ ಎಂದು ಸರ್ವೇ ನಡೆಸಿದ್ದೀರಿ. ಆದ್ದರಿಂದ ಯಾವುದೇ ಕಾರಣಕ್ಕೂ ಸರ್ಕಾರಿ ಜಾಗದಲ್ಲಿ ರಸ್ತೆ ನಿರ್ಮಾಣಕ್ಕೆ ಅವಕಾಶ ನೀಡಬೇಡಿ ಎಂದು ಗ್ರಾ.ಪಂ.ಮಾಜಿ ಸದಸ್ಯ ಗೋವಿಂದರಾಜ್ ಮನವಿ ಮಾಡಿದರು.

ಈ ಸಂದರ್ಭ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಎಂ.ಕೆ.ಪ್ರಕಾಶ್, ಎಚ್.ಎಚ್.ಸುಂದರ್, ಶಾಲೇಜು ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಲೋಹಿತ್, ಕರ್ನಾಟಕ ಕಾವಲು ಪಡೆ ಅಧ್ಯಕ್ಷ ಎಂ.ಕೃಷ್ಣ, ವಕೀಲ ಮಂಜುನಾಥ್, ತಾ.ಪಂ.ಸದಸ್ಯ ಗಣೇಶ್ ಇದ್ದರು.

ಕಾನೂನು ಕ್ರಮ

ಕಾಲೇಜಿನ ಜಾಗದಲ್ಲಿ ಅಕ್ರಮವಾಗಿ ರಸ್ತೆ ನಿರ್ಮಾಣ ಮಾಡುತ್ತಿದ್ದ ಶಿವಾನಂದ ವಿರುದ್ಧ ದೂರು ನೀಡಿದ್ದೇವೆ. ಮುಂದೆ ಮೇಲಾಧಿಕಾರಿಗಳ ಗಮನಕ್ಕೆ ತಂದು ಕಾನೂನು ರೀತಿ ಕ್ರಮ ಕೈಗೊಳ್ಳುತ್ತೇವೆ ಎಂದು ಪ್ರಾಂಶುಪಾಲ ಪಿ.ಎಂ.ಸುಬ್ರಮಣ್ಯ ತಿಳಿಸಿದರು.

* * 

ಕಾಲೇಜಿನ ಜಾಗವನ್ನು ಸರ್ವೆ ಕಾರ್ಯ ನಡೆಸಿ 20 ಎಕರೆಗಿಂತ ಹೆಚ್ಚುವರಿ ಜಾಗವಿದ್ದರೆ ಮಾತ್ರ ರಸ್ತೆ ನಿರ್ಮಾಣಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂ.ಪಿ.ಅಪ್ಪಚ್ಚುರಂಜನ್, ಶಾಸಕರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry