3

ನಗರದಲ್ಲಿ ಇಂದಿನಿಂದ ಅಕ್ಷರ ಜಾತ್ರೆ

Published:
Updated:
ನಗರದಲ್ಲಿ ಇಂದಿನಿಂದ ಅಕ್ಷರ ಜಾತ್ರೆ

ಕೋಲಾರ: ಜಿಲ್ಲಾ ಕೇಂದ್ರದಲ್ಲಿ ಸೋಮವಾರದಿಂದ (ಡಿ.19) ಎರಡು ದಿನಗಳ ಕಾಲ ಅಕ್ಷರ ಜಾತ್ರೆಯ ಸಂಭ್ರಮ. 16ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಟಿ.ಚನ್ನಯ್ಯ ರಂಗಮಂದಿರವು ನವ ವಧುವಿನಂತೆ ಸಿಂಗಾರಗೊಂಡಿದ್ದು, ನುಡಿ ಹಬ್ಬಕ್ಕೆ ಕ್ಷಣಗಣನೆ ಆರಂಭವಾಗಿದೆ.

ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌.ನಾಗಮೋಹನ್‌ದಾಸ್‌ ಸಮ್ಮೇಳನಾಧ್ಯಕ್ಷರಿಗಿದ್ದು, ಸಮ್ಮೇಳನಕ್ಕೆ ಜಿಲ್ಲೆಯ ಮೂಲೆ ಮೂಲೆಯಿಂದ ಸಾಹಿತ್ಯಾಸಕ್ತರ ದಂಡೇ ಹರಿದು ಬರಲಿದೆ. ಜನಪ್ರತಿನಿಧಿಗಳು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಸದಸ್ಯರು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರಿಗೆ ಈಗಾಗಲೇ ಆಹ್ವಾನ ಪತ್ರಿಕೆ ಕಳುಹಿಸಲಾಗಿದೆ.

ಸಾಹಿತಿಗಳು, ವಿವಿಧ ಕ್ಷೇತ್ರಗಳ ಗಣ್ಯರು, ಶಾಲಾ ಕಾಲೇಜು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಸಮ್ಮೇಳನದಲ್ಲಿ ಭಾಗವಹಿಸಲು ಅನುಕೂಲವಾಗುವಂತೆ ಶಾಲಾ ಶಿಕ್ಷಕರು ಮತ್ತು ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರಿಗೆ ಅನ್ಯ ಕಾರ್ಯನಿಮಿತ್ತ ರಜೆ (ಒಒಡಿ) ಸೌಲಭ್ಯ ಕಲ್ಪಿಸಲಾಗಿದೆ.

ಶಾಶ್ವತ ನೀರಾವರಿ ಯೋಜನೆ, ಜಿಲ್ಲೆಯ ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಉದ್ಯೋಗಾವಕಾಶ, ಜಿಲ್ಲೆಯನ್ನು ಗಡಿನಾಡ ಜಿಲ್ಲೆಯಾಗಿ ಘೋಷಿಸುವುದು, ಸರ್ಕಾರಿ ಕನ್ನಡ ಶಾಲೆಗಳ ಬಲವರ್ಧನೆ, ಕನ್ನಡ ನಾಡು, ನುಡಿ, ಸಂಸ್ಕೃತಿ ಮತ್ತು ಕೃಷಿಯ ತಲ್ಲಣಗಳು, ಭಾಷಾ ಸಾಮರಸ್ಯ, ಕನ್ನಡ ಭಾಷಾಭಿವೃದ್ಧಿ, ಮಹಿಳಾ ಸಬಲೀಕರಣ ಮತ್ತು ಸ್ವಾವಲಂಬನೆ, ಮಹಿಳಾ ಶಿಕ್ಷಣ, ಮಹಿಳಾ ಸಾಹಿತ್ಯ, ಸಮ್ಮೇಳನಾಧ್ಯಕ್ಷರ ಬದುಕು ಬರಹ ಕುರಿತು ಸಮ್ಮೇಳನದಲ್ಲಿ ಚಿಂತನ ಮಂಥನ ನಡೆಯಲಿದೆ.

ಕವಿಗೋಷ್ಠಿ, ಪುಸ್ತಕ ಪ್ರದರ್ಶನ, ನಾಟಕ ಪ್ರದರ್ಶನ, ಸಂಗೀತ ಸಂಜೆ, ಡೊಳ್ಳು ಕುಣಿತ, ಗೊರವನ ಕುಣಿತ, ನಾದಸ್ವರ, ತಮಟೆ ವಾದನ, ವೀರಗಾಸೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಸಮ್ಮೇಳನಕ್ಕೆ ಮೆರುಗು ನೀಡಲಿವೆ. ರಂಗಮಂದಿರದ ಆವರಣದಲ್ಲಿ ಸಮ್ಮೇಳನದ ವೀಕ್ಷಣೆಗೆ ಎಲ್‌ಇಡಿ ಪರದೆ ಅಳವಡಿಸಲಾಗಿದೆ.

ರಂಗಮಂದಿರದ ಬಳಿಯ ಸರ್ವಜ್ಯ ಉದ್ಯಾನಕ್ಕೆ ವಿದ್ಯುತ್‌ ದೀಪಾಲಂಕಾರ ಮಾಡಲಾಗಿದೆ. ಹಾಲಿಸ್ಟರ್‌ ಭವನ ಮತ್ತು ಒಕ್ಕಲಿಗರ ವಿದ್ಯಾರ್ಥಿನಿಲಯದಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ. ಸಮ್ಮೇಳನಕ್ಕೆ ಸಕಲ ಸಿದ್ಧತೆ ನಡೆದಿದ್ದು, ನಗರದಲ್ಲಿ ಎರಡು ದಿನಗಳ ಕಾಲ ನುಡಿ ಹಬ್ಬದ ಸಂಭ್ರಮ ಕಳೆಗಟ್ಟಲಿದೆ.

ಮ್ಮೇಳನದಲ್ಲಿ ಇಂದು

ಧ್ವಜಾರೋಹಣ: ರಾಷ್ಟ್ರಧ್ವಜ– ತಹಶೀಲ್ದಾರ್‌ ಎಂ.ವಿಜಯಣ್ಣ. ಪರಿಷತ್‌ ಧ್ವಜ– ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ನಾಗಾನಂದ ಕೆಂಪರಾಜ್‌. ನಾಡಧ್ವಜ– ಕನ್ನಡಪರ ಹೋರಾಟಗಾರ– ಚಿಕ್ಕ ಹನುಮಪ್ಪ. ಅತಿಥಿಗಳು– ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ವಿದ್ಯಾಕುಮಾರಿ, ಕೇಂದ್ರ ಕನ್ನಡ ಸಾಹಿತ್ಯ ಪರಿಷತ್‌ ಸಂಶೋಧನೆ ಮತ್ತು ತರಬೇತಿ ವಿಭಾಗದ ಸಂಚಾಲಕ ಕೆ.ರಾಜಕುಮಾರ್‌, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಕಾರ್ಯಕಾರಿ ಸಮಿತಿ ಸದಸ್ಯ ಬಿ.ಸುರೇಶ್‌. ಸ್ಥಳ– ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಆವರಣ. ಬೆಳಿಗ್ಗೆ 8.30ಕ್ಕೆ.

ಸಮ್ಮೇಳನಾಧ್ಯಕ್ಷರ ಮೆರವಣಿಗೆ: ಉದ್ಘಾಟನೆ– ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜಿ.ಗೀತಾ. ಅತಿಥಿಗಳು– ಜಿ.ಪಂ ಉಪಾಧ್ಯಕ್ಷೆ ಯಶೋದಾ, ತಾ.ಪಂ ಉಪಾಧ್ಯಕ್ಷೆ ಲಕ್ಷ್ಮಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರೋಹಿಣಿ ಕಟೋಚ್‌ ಸೆಪಟ್‌, ಉಪ ವಿಭಾಗಾಧಿಕಾರಿ ಶುಭಾ ಕಲ್ಯಾಣ್‌, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಸೈಯದ್‌ ಇಕ್ಬಾಲ್‌ ಪಾಷಾ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಸ್ವಾಮಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ನಿಕಟಪೂರ್ವ ಅಧ್ಯಕ್ಷ ಜೆ.ಜಿ.ನಾಗರಾಜ್‌, ತಾ.ಪಂ ಕಾರ್ಯ ನಿರ್ವಹಣಾಧಿಕಾರಿ ಚಂದ್ರಪ್ಪ, ನಗರಸಭೆ ಆಯುಕ್ತ ಎಸ್‌.ಎನ್‌.ರಾಮ್‌ಪ್ರಕಾಶ್‌, ಜಿಲ್ಲಾ ಕನ್ನಡಪರ ಒಕ್ಕೂಟಗಳ ಸಂಘದ ಅಧ್ಯಕ್ಷ ಸೋಮಶೇಖರ್‌, ಜಿಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಘದ ಅಧ್ಯಕ್ಷ ಎಸ್‌.ಮುನಿಯಪ್ಪ. ಸ್ಥಳ– ಜಿಲ್ಲಾ ಕಸಾಪ ಕಚೇರಿ ಆವರಣ. ಬೆಳಿಗ್ಗೆ 9ಕ್ಕೆ.

ಉದ್ಘಾಟನಾ ಸಮಾರಂಭ: ಉದ್ಘಾಟನೆ– ಸಾಹಿತಿ ಬರಗೂರು ರಾಮಚಂದ್ರಪ್ಪ. ಆಶಯ ನುಡಿ– ನಾಗಾನಂದ ಕೆಂಪರಾಜ್‌. ಅಧ್ಯಕ್ಷತೆ– ಶಾಸಕ ವರ್ತೂರು ಪ್ರಕಾಶ್‌. ಉಪಸ್ಥಿತರು– ಕೇಂದ್ರ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಪಿ.ಮನು ಬಳಿಗಾರ್‌, ಸಮ್ಮೇಳನಾಧ್ಯಕ್ಷರಾದ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌.ನಾಗಮೋಹನ್‌ದಾಸ್‌, ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಲಕ್ಷ್ಮೀಪತಿ ಕೋಲಾರ. ಸ್ಮರಣ ಸಂಚಿಕೆ ಬಿಡುಗಡೆ– ಜಿಲ್ಲಾ ಉಸ್ತುವಾರಿ ಸಚಿವ ಕೆ.ಆರ್‌.ರಮೇಶ್‌ಕುಮಾರ್‌. ಮಹಾದ್ವಾರ ಉದ್ಘಾಟನೆ– ಸಂಸದ ಕೆ.ಎಚ್‌.ಮುನಿಯಪ್ಪ. ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ– ನಗರಸಭೆ ಅಧ್ಯಕ್ಷೆ ಮಹಾಲಕ್ಷ್ಮಿ. ಪುಸ್ತಕ ಮಳಿಗೆಗಳ ಉದ್ಘಾಟನೆ– ವಿಧಾನ ಪರಿಷತ್‌ ಮಾಜಿ ಸಭಾಪತಿ ವಿ.ಆರ್‌.ಸುದರ್ಶನ್‌. ಸಮ್ಮೇಳನಾಧ್ಯಕ್ಷರ ಬದುಕು ಹೋರಾಟ ಕುರಿತ ಪುಸ್ತಕ ಬಿಡುಗಡೆ– ಜಿಲ್ಲಾಧಿಕಾರಿ ಜಿ.ಸತ್ಯವತಿ. ಅತಿಥಿಗಳು– ಶಾಸಕರಾದ ಎಸ್‌.ಎನ್‌.ನಾರಾಯಣಸ್ವಾಮಿ, ಕೊತ್ತೂರು ಜಿ.ಮಂಜುನಾಥ್‌, ಕೆ.ಎಸ್‌.ಮಂಜುನಾಥಗೌಡ, ವೈ.ರಾಮಕ್ಕ, ತಾ.ಪಂ ಅಧ್ಯಕ್ಷ ಎಂ.ಆಂಜಿನಪ್ಪ, ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಎಂ.ಗೋವಿಂದಗೌಡ, ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯ ಗೋಕುಲ ವಿ.ನಾರಾಯಣಸ್ವಾಮಿ, ಕೋಚಿಮುಲ್‌ ಅಧ್ಯಕ್ಷ ಎನ್‌.ಜಿ.ಬ್ಯಾಟಪ್ಪ, ದಲಿತ ಮುಖಂಡ ಸಿ.ಎಂ.ಮುನಿಯಪ್ಪ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಎನ್‌.ಮಂಜುನಾಥ್‌, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎಸ್‌.ಗಣೇಶ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಿ.ಎಂ.ರವಿಕುಮಾರ್‌. ಸ್ಥಳ– ಟಿ.ಚನ್ನಯ್ಯ ರಂಗಮಂದಿರ. ಬೆಳಿಗ್ಗೆ 10.30ಕ್ಕೆ.

ವಿಚಾರಗೋಷ್ಠಿ: ಕನ್ನಡ ನುಡಿ, ಸಂಸ್ಕೃತಿ, ಕೃಷಿಯ ತಲ್ಲಣಗಳು. ಅಧ್ಯಕ್ಷತೆ– ಸಾಹಿತಿ ಚಂದ್ರಶೇಖರ ನಂಗಲಿ. ‘ವರ್ತಮಾನದ ಸಾಂಸ್ಕೃತಿಕ ಲೋಕದ ತಲ್ಲಣಗಳು’ ಕುರಿತು ಪ್ರೊ.ರಹಮತ್‌ ತರೀಕೆರೆ, ‘ಕನ್ನಡ ಭಾಷಾಭಿವೃದ್ಧಿ– ಮುಂದಿನ ಹೆಜ್ಜೆಗಳು’ ಕುರಿತು ರಾಜಪ್ಪ ದಳವಾಯಿ, ‘ಕೃಷಿ ಕ್ಷೇತ್ರ ಎದುರಿಸುತ್ತಿರುವ ಬಿಕ್ಕಟ್ಟುಗಳು’ ಕುರಿತು ಪ್ರೊ.ಕೃಷ್ಣಮೂರ್ತಿ ಬಿಳಿಗೆರೆ ವಿಷಯ ಮಂಡನೆ. ಮಧ್ಯಾಹ್ನ 2ಕ್ಕೆ.

ಸಾಂಸ್ಕೃತಿಕ ಕಾರ್ಯಕ್ರಮ: ಜಯನಾಟ್ಯ ಕಲಾ ಅಕಾಡೆಮಿ ಕಲಾವಿದರಿಂದ ಡಿವಿಜಿ ಮತ್ತು ಮಾಸ್ತಿ ಕೃತಿಗಳ ನೃತ್ಯ ವೈಭವ. ಸಂಜೆ 4.45ಕ್ಕೆ.

ಗೌರವ ಸನ್ಮಾನ: ಅತಿಥಿಗಳು– ಕಸಾಪ ಗೌರವ ಸಲಹೆಗಾರ ಬಿ.ಎಂ.ಚನ್ನಪ್ಪ, ಕೇಂದ್ರ ರೇಷ್ಮೆ ಮಂಡಳಿ ಮಾಜಿ ಅಧ್ಯಕ್ಷ ಎನ್‌.ಬಿಸೇಗೌಡ, ಸಮಾಜ ಸೇವಕ ನರೇಂದ್ರ ರಂಗಪ್ಪ, ಉದ್ಯಮಿ ರಾಮಕೃಷ್ಣಪ್ಪ. ಸಂಜೆ 5.15ಕ್ಕೆ.

ನಾಟಕ ಪ್ರದರ್ಶನ: ಪಂಪ ಭಾರತ ನಾಟಕ. ಆಶಯ ನುಡಿ– ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಡೊಮಿನಿಕ್‌. ಅತಿಥಿಗಳು– ವಕೀಲ ಕೆ.ವಿ.ಶಂಕರಪ್ಪ, ರಂಗ ಕಲಾವಿದ ಪಿ.ಮುನಿರೆಡ್ಡಿ, ರಂಗ ನಿರ್ದೇಶಕ ವೆಂಕಟರಮಣ. ಸಂಜೆ 6ಕ್ಕೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry