7

ಅಭಿವೃದ್ಧಿಗೆ ಪಕ್ಷಭೇದವಿಲ್ಲ: ಸಿಎಂ

Published:
Updated:
ಅಭಿವೃದ್ಧಿಗೆ ಪಕ್ಷಭೇದವಿಲ್ಲ: ಸಿಎಂ

ಹಗರಿಬೊಮ್ಮನಹಳ್ಳಿ (ಬಳ್ಳಾರಿ ಜಿಲ್ಲೆ): ‘ಯಾವ ಕ್ಷೇತ್ರ ಅಥವಾ ಅಲ್ಲಿ ಯಾರು ಶಾಸಕರು ಎಂಬುದನ್ನು ನೋಡದೆ ರಾಜ್ಯದ ಎಲ್ಲ 224 ಕ್ಷೇತ್ರಗಳಲ್ಲೂ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಾದಿಸಿದರು.

ಪಟ್ಟಣದಲ್ಲಿ ಸೋಮವಾರ ಮಾಲವಿ ಜಲಾಶಯಕ್ಕೆ ಶಾಶ್ವತ ನೀರು ಒದಗಿಸುವ ಯೋಜನೆ ಮತ್ತು ಚಿಲವಾರ ಬಂಡಿ ಏತ ನೀರಾವರಿ ಯೋಜನೆ ಹಾಗೂ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ‘ಭೀಮಾನಾಯ್ಕ ಅವರು ನಮ್ಮ ಪಕ್ಷದವರು ಅಲ್ಲದೇ ಇದ್ದರೂ ಕ್ಷೇತ್ರದಲ್ಲಿ ₹1200 ಕೋಟಿ ವೆಚ್ಚದ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ರಾಜ್ಯದ ಇತಿಹಾಸದಲ್ಲಿ ಇಷ್ಟೊಂದು ದೊಡ್ಡ ಮೊತ್ತದ ಹಣವನ್ನು ಒಂದೇ ಕ್ಷೇತ್ರದ ಅಭಿವೃದ್ಧಿಗೆ ವಿನಿಯೋಗಿಸಿದ ನಿದರ್ಶನ ಇಲ್ಲ’ ಎಂದರು.

‘1972ರಲ್ಲಿ ಮಾಲವಿ ಜಲಾಶಯ ನಿರ್ಮಾಣಗೊಂಡಿದೆ. ಆಗ ಶಾಸಕರಾಗಿದ್ದ ಎನ್‌.ಎಂ.ನಬಿ ಅವರು ಕೂಡ ಜಲಾಶಯದ ಅಭಿವೃದ್ಧಿಗೆ ಒತ್ತಡ ಹೇರಿದ್ದರು. ಆದರೆ ಭೀಮಾನಾಯ್ಕ ಅವರು ಯಾವಾಗ ಎದುರಾದರೂ ಮಾಲವಿ ಜಲಾಶಯದ ವಿಷಯವನ್ನೇ ನನ್ನ ಬಳಿ ಪ್ರಸ್ತಾಪಿಸುತ್ತಿದ್ದರು. ನನ್ನನ್ನು ನಿರಂತರವಾಗಿ ಭೇಟಿ ಮಾಡುತ್ತಿದ್ದರು. ಅಭಿವೃದ್ಧಿ ಕಾರ್ಯಗಳ ಕುರಿತು ಮನವಿ ಸಲ್ಲಿಸಿ ಒತ್ತಾಯಿಸುತ್ತಿದ್ದರು. ಹೀಗಾಗಿ ಈ ಬಾರಿಯ ಆಯವ್ಯಯದಲ್ಲಿ ಜಲಾ ಶಯದ ಅಭಿವೃದ್ಧಿಗೆ ಅನು ದಾನ ಘೋಷಿಸಲಾಯಿತು. ನೀರಾವರಿಗೆ ನೀಡಿದ ಆದ್ಯತೆಯನ್ನು ಮುಂದುವರಿಸಲಾಗುವುದು’ ಎಂದರು.

ಗುಣಕ್ಕೆ ಮತ್ಸರ ಬೇಡ: ‘ಗುಣಕ್ಕೆ ಮತ್ಸರ ಇರಬಾರದು. ಮಾಲವಿ ಮತ್ತು ಚಿಲವಾರ ಬಂಡಿ ಏತ ನೀರಾವರಿ ಅಭಿವೃದ್ಧಿ ಯೋಜನೆಗೆ ಚಾಲನೆ ದೊರಕಿದ್ದರೆ ಅದರಲ್ಲಿ ಭೀಮಾನಾಯ್ಕರ ಪಾತ್ರ ದೊಡ್ಡದು’ ಎಂದು ಶ್ಲಾಘಿಸಿದರು.

ಪಾದಯಾತ್ರೆ ನೆನಪು....

‘ನಾನು ವಿರೋಧ ಪಕ್ಷದ ನಾಯಕನಾಗಿದ್ದ ಸಂದರ್ಭದಲ್ಲಿ ಹೊಸಪೇಟೆಯಿಂದ ಕೂಡಲಸಂಗಮದವರೆಗೂ ಪಾದಯಾತ್ರೆ ಮಾಡಿದ್ದೆವು. ಅದು ಮುಕ್ತಾಯವಾದಾಗ ನೀರಾವರಿ ಯೋಜನೆಗಳಿಗೆ ಪ್ರತಿ ವರ್ಷ ₹ 10,000 ಕೋಟಿ ಖರ್ಚು ಮಾಡುವುದಾಗಿ ಘೋಷಿಸಿದ್ದೆವು’ ಎಂದು ಮುಖ್ಯಮಂತ್ರಿ ಸ್ಮರಿಸಿದರು.

‘ಅಂದು ನಾವು ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇವೆ. ಇಲ್ಲಿಯವರೆಗೆ ₹45,000 ಕೋಟಿ ಖರ್ಚಾಗಿದೆ. ಮಾರ್ಚ್ ಅಂತ್ಯದವರೆಗೆ ₹52,000 ಕೋಟಿ ಖರ್ಚು ಮಾಡಲಿದ್ದೇವೆ. ಹಿಂದಿನ ಬಿಜೆಪಿ ಸರ್ಕಾರ ಐದು ವರ್ಷದ ಅವಧಿಯಲ್ಲಿ ಕೇವಲ ₹ 18,000 ಕೋಟಿ ಖರ್ಚು ಮಾಡಿತ್ತು’ ಎಂದರು. ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡುವ ಸಲುವಾಗಿ ರಾಜ್ಯದಲ್ಲಿ ಪ್ರವಾಸ ಹಮ್ಮಿಕೊಂಡಿರುವುದು, ಚುನಾವಣೆ ಬರುತ್ತಿದೆ ಎಂಬ ಕಾರಣಕ್ಕೆ ಅಲ್ಲ’ ಎಂದು ಸ್ಪಷ್ಟಪಡಿಸಿದರು.

‘ಯಡಿಯೂರಪ್ಪ ಸಿಎಂ ಆಗಬೇಕೇನ್ರೀ?'

ಹಗರಿಬೊಮ್ಮನಹಳ್ಳಿ: ‘ಸಾಲಮನ್ನಾ ವಿಚಾರದಲ್ಲಿ ನುಡಿದಂತೆ ನಡೆಯದ ಬಿ.ಎಸ್‌.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಬೇಕೇನ್ರಿ? ಆಗಬಾರದು. ಈಗ ಮತ್ತೆ ಯಡಿಯೂರಪ್ಪ ಆ ಮಾತನ್ನು ಹೇಳಿದರೆ ನಂಬ್ಕೊಬೇಕೇನ್ರಿ? ನಂಬ್ಕೋಬಾರ್ದು’ ಎಂದು ಸಿದ್ದರಾಮಯ್ಯ ಸಭಿಕರಿಗೆ ಕರೆ ನೀಡಿದರು.

‘ಕೇಂದ್ರ ಸರ್ಕಾರ ನೀಡಿರುವ ₹42,000 ಕೋಟಿ ಮನ್ನಾ ಮಾಡದಿದ್ದರೆ ಯಡಿಯೂರಪ್ಪನವರಿಗೆ ಧಿಕ್ಕಾರ ಹೇಳಿ. ಈ ಬಗ್ಗೆ ಗಂಭೀರ ಚರ್ಚೆ ನಡೆಯಬೇಕು’ ಎಂದು ಕರೆ ನೀಡಿದರು. ‘ಹಗರಿಬೊಮ್ಮನಹಳ್ಳಿ ಕ್ಷೇತ್ರದಲ್ಲಿ 10,000 ರೈತರ ₹50 ಕೋಟಿ ಸಾಲ ಮನ್ನಾ ಮಾಡಲಾಗಿದೆ. ಆದರೆ ಸಾಲ ಮನ್ನಾ ಮಾಡದ ಕೇಂದ್ರ ಸರ್ಕಾರಕ್ಕೆ ಏನು ರೋಗ ಬಂದಿದೆ?’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry