7

ಚಿಟಗುಪ್ಪ: ವಿವಿಧೆಡೆ ಎಳ್ಳಮಾವಾಸ್ಯೆ ಆಚರಣೆ

Published:
Updated:

ಚಿಟಗುಪ್ಪ: ಪಟ್ಟಣ ಹಾಗೂ ವಿವಿಧ ಗ್ರಾಮಗಳಲ್ಲಿ ಸೋಮವಾರ ರೈತರು ಸಡಗರ, ಸಂಭ್ರಮದಿಂದ ಎಳ್ಳ ಅಮಾವಾಸ್ಯೆ ಆಚರಿಸಿದರು. ರೈತ ಮಹಿಳೆಯರು ನಸುಕಿನ ಜಾವದಿಂದಲೇ ವಿವಿಧ ಬಗೆಯ ಅಡುಗೆ ಸಿದ್ಧಪಡಿಸಿಕೊಂಡು ಹೊಲಗಳಿಗೆ ಕುಟುಂಬ ಸದಸ್ಯರ ಜತೆ ಹೋಗಿ ಪೂಜೆ ಸಲ್ಲಿಸಿದ ನಂತರ ಮನೆಯಿಂದ ತಂದಿದ್ದ ಊಟ ಸವಿದರು.

ಸೂರ್ಯ ನೆತ್ತಿಗೇರುತ್ತಿದ್ದಂತೆ ಹೆಂಗಳೆಯರು, ಯುವಕರು, ವೃದ್ಧರು ಹಾಗೂ ಮಕ್ಕಳು ಹೊಸ ಬಟ್ಟೆ ಧರಿಸಿ ಸಂಭ್ರಮಪಟ್ಟರು. ಹಬ್ಬದ ಅಂಗವಾಗಿ ಅಲ್ಲಲ್ಲಿ ಗ್ರಾಮಸ್ಥರು ಬಂಡಿ, ಆಟೊ, ಜೀಪ್‌ಗಳಲ್ಲಿ ಅಂಬಲಿ ಗಡಿಗೆ, ಭಜ್ಜಿ, ಕಡುಬು, ಹೋಳಿಗೆ ಇತರ ಪದಾರ್ಥಗಳನ್ನು ತುಂಬಿಕೊಂಡು ಹೊಲಗದ್ದೆಗಳಿಗೆ ಹೋಗುವುದು ಕಂಡುಬಂತು.

ಹೊಲಗಳಲ್ಲಿ ಜೋಳದ ಬೆಳೆ ಇರುವ ಭೂಮಿಯಲ್ಲಿ ಪಾಂಡವರ ಮೂರ್ತಿ ಪ್ರತಿಷ್ಠಾಪಿಸಿ ಹೊಲದ ಮಾಲೀಕರಿಬ್ಬರೂ ಸೇರಿಕೊಂಡು ‘ಒಲಗ್ಯಾ ಒಲಗ್ಯಾ ಚಾಲೋಂ ಪಲಿಗ್ಯಾ ’ ಎಂಬ ಜಯ ಘೋಷಗಳೊಂದಿಗೆ ಹೊಲದ ಸುತ್ತಲೂ ಓಡಾಡಿ, ತೀರ್ಥ, ನೈವೇದ್ಯ, ಪ್ರಸಾದ, ಚೆಲ್ಲಿ ನಂತರ ಪ್ರತಿಷ್ಠಾಪಿಸಿದ ಪಾಂಡವರ ಮೂರ್ತಿ ಮುಂದೆ ಬಂದು ದಂಡ ನಮಸ್ಕಾರ ಮಾಡಿ ಭೂಮಿ ತಾಯಿಗೆ ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸಿದರು. ಬಾವಿ ಪೂಜೆ ನಡೆಸಿ, ನೈವೇದ್ಯ ಸಮರ್ಪಿಸಿ, ತೆಪ್ಪ ಮಾಡಿ ದೀಪ ಹಚ್ಚಿ ಬಾವಿ ನೀರಿನಲ್ಲಿ ಬಿಟ್ಟು ಭಕ್ತಿಯಿಂದ ಗಂಗಾ ಮಾತೆಗೆ ಕೈ ಮುಗಿದು ಪ್ರಾರ್ಥಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry