ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಲಸೂರ ತಾಲ್ಲೂಕು ರಚನೆ ಮುಂದಕ್ಕೆ

Last Updated 19 ಡಿಸೆಂಬರ್ 2017, 8:31 IST
ಅಕ್ಷರ ಗಾತ್ರ

ಬಸವಕಲ್ಯಾಣ: ಜಿಲ್ಲೆಯ ಕಮಲನಗರ ಮತ್ತು ಚಿಟಗುಪ್ಪ ತಾಲ್ಲೂಕುಗಳ ರಚನೆಗೆ ಸರ್ಕಾರ ಹಸಿರು ನಿಶಾನೆ ತೋರಿಸಿ ಹುಲಸೂರನ್ನು ಪರಿಶೀಲನೆ ಪಟ್ಟಿಯಲ್ಲಿ ಸೇರ್ಪಡೆ ಮಾಡಿರುವುದಕ್ಕೆ ಗ್ರಾಮಸ್ಥರು ಅತೃಪ್ತಿ ವ್ಯಕ್ತಪಡಿಸಿದ್ದಾರೆ.

ಹಿಂದಿನ ಬಿಜೆಪಿ ಸರ್ಕಾರ ಘೋಷಿಸಿದ ನೂತನ ತಾಲ್ಲೂಕುಗಳ ಪಟ್ಟಿಯಲ್ಲಿ ಹುಲಸೂರನ ಹೆಸರಿತ್ತು. ಈ ಸರ್ಕಾರ ಪ್ರಕಟಿಸಿದ ಪಟ್ಟಿಯಲ್ಲಿಯೂ ಇದರ ಹೆಸರಿದೆ. ಆದರೆ, 2018 ರ ಜನವರಿಯಲ್ಲಿ ಹೊಸ ತಾಲ್ಲೂಕುಗಳ ರಚನೆಗೆ ಸರ್ಕಾರ ಹೊರಡಿಸಿದ ಅಧಿಸೂಚನೆಯಲ್ಲಿ ಮಾತ್ರ ಇದರ ಹೆಸರು ಇಲ್ಲ.

‘ಅನೇಕ ವರ್ಷಗಳಿಂದ ಇದಕ್ಕಾಗಿ ಹೋರಾಟ ನಡೆದಿದೆ. ಗಡಿಭಾಗದ ಈ ಗ್ರಾಮ ತಾಲ್ಲೂಕು ಕೇಂದ್ರವಾಗಲು ಎಲ್ಲ ಅರ್ಹತೆಗಳನ್ನು ಪಡೆದಿದೆ. ಆದರೂ, ಇದನ್ನು ಕಡೆಗಣಿಸಿರುವುದರಲ್ಲಿ ಕಾಣದ ಕೈಗಳ ಕೈವಾಡವಿದೆ. ಸರ್ಕಾರದ ಈ ನಿರ್ಣಯದಿಂದ ಈ ಭಾಗದ ಜನತೆಗೆ ಅನ್ಯಾಯವಾಗಿದೆ’ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮಲ್ಲಪ್ಪ ಧಬಾಲೆ ದೂರಿದ್ದಾರೆ.

‘ಹುಲಸೂರ ಹೋಬಳಿ ಕೇಂದ್ರ ಆಗಿರುವುದಷ್ಟೇ ಅಲ್ಲ. ಈ ಹಿಂದೆ ಎರಡು ಅವಧಿಗೆ ವಿಧಾನಸಭೆಯ ಮೀಸಲು ಕ್ಷೇತ್ರ ಕೂಡ ಆಗಿತ್ತು. ಎಂ.ಬಿ.ಪ್ರಕಾಶ ಆಯೋಗದ ವರದಿಯಲ್ಲಿಯೂ ಇದನ್ನು ತಾಲ್ಲೂಕು ಮಾಡುವುದು ಸೂಕ್ತ ಎಂದು ಸ್ಪಷ್ಟವಾಗಿ ನಮೂದಿಸಲಾಗಿದೆ. ಈಗಿನ ಸರ್ಕಾರ ಕೂಡ ಕೆಲ ದಿನಗಳ ಹಿಂದೆ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಹುಲಸೂರ ಸೇರ್ಪಡೆ ಆಗಿತ್ತು. ಆದರೂ, ತಾಲ್ಲೂಕು ಕೇಂದ್ರ ಮಾಡುವುದಕ್ಕೆ ಹಿಂದೇಟು ಹಾಕುತ್ತಿರುವುದು ಏಕೆ ಎಂಬುದು ತಿಳಿಯುತ್ತಿಲ್ಲ’ ಎಂದು ಹುಲಸೂರ ತಾಲ್ಲೂಕು ರಚನೆ ಹೋರಾಟ ಸಮಿತಿ ಅಧ್ಯಕ್ಷ ಎಂ.ಜಿ.ರಾಜೋಳೆ ಹೇಳಿದ್ದಾರೆ.

‘ಭಾಲ್ಕಿ, ಹುಮನಾಬಾದ್ ಮತ್ತು ಬಸವಕಲ್ಯಾಣ ಈ ಮೂರು ತಾಲ್ಲೂಕುಗಳ ಗ್ರಾಮಗಳು ಈ ತಾಲ್ಲೂಕಿಗೆ ಸೇರ್ಪಡೆ ಆಗಲಿವೆ. ತಾಲ್ಲೂಕು ಸ್ಥಳಗಳು ದೂರವಾಗುವ ಗ್ರಾಮಗಳಿಗೆ ಅನುಕೂಲ ಕಲ್ಪಿಸುವುದಕ್ಕಾಗಿ ಈ ತಾಲ್ಲೂಕು ರಚಿಸುವುದು ಅತ್ಯಂತ ಅವಶ್ಯಕವಾಗಿದೆ. ಇದಕ್ಕಾಗಿ ಕಳೆದ ಅನೇಕ ವರ್ಷಗಳಿಂದ ರಸ್ತೆತಡೆ, ಧರಣಿ ನಡೆಸಲಾಗಿದೆ. ಮುಖ್ಯಮಂತ್ರಿ ಮತ್ತು ಸಂಬಂಧಿತ ಸಚಿವರಿಗೆ ಮನವಿ ಸಲ್ಲಿಸಲಾಗಿದೆ. ಆದರೂ ತಾಲ್ಲೂಕು ರಚಿಸುವುದಕ್ಕೆ ವಿಳಂಬ ಮಾಡುತ್ತಿರುವುದರಿಂದ ಜನತೆಯಲ್ಲಿ ನಿರಾಶೆ ಭಾವನೆ ಮೂಡಿದೆ. ಹಾಗಾಗಿ ಇನ್ನೂ ಮುಂದೆ ಹೋರಾಟ ತೀವ್ರಗೊಳಿಸಲಾಗುವುದು’ ಎಂದಿದ್ದಾರೆ.

‘ಕಾರಣ ಏನೇ ಇದ್ದರೂ ತಕ್ಷಣ ಪರಿಹಾರ ಕಂಡುಕೊಂಡು ಕಮಲನಗರ ಮತ್ತು ಚಿಟಗುಪ್ಪ ತಾಲ್ಲೂಕುಗಳ ಜತೆಯಲ್ಲಿಯೇ ಹುಲಸೂರ ತಾಲ್ಲೂಕಿನ ರಚನೆಗೂ ಮುಂದಾಗಬೇಕು’ ಎಂದು ಗಡಿಗೌಡಗಾಂವ ಪಿಕೆಪಿಎಸ್ ಮಾಜಿ ಅಧ್ಯಕ್ಷ ಸತೀಶ ಹಿರೇಮಠ ಆಗ್ರಹಿಸಿದ್ದಾರೆ.

* * 

ಜಿಲ್ಲೆಯ ಎರಡು ತಾಲ್ಲೂಕುಗಳ ರಚನೆಗೆ ಅಧಿಸೂಚನೆ ಹೊರಡಿಸಿ ಹುಲಸೂರನ್ನು ಪರಿಶೀಲನೆ ಪಟ್ಟಿಯಲ್ಲಿ ಸೇರಿಸಿ ಅನ್ಯಾಯ ಮಾಡಲಾಗಿದೆ.
ಎಂ.ಜಿ.ರಾಜೋಳೆ ತಾಲ್ಲೂಕು ರಚನೆ ಹೋರಾಟ ಸಮಿತಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT