7

ಮಹದೇಶ್ವರ ಬೆಟ್ಟದಲ್ಲಿ ಎಳ್ಳಮಾವಾಸ್ಯೆ ವಿಶೇಷ ಪೂಜೆ

Published:
Updated:
ಮಹದೇಶ್ವರ ಬೆಟ್ಟದಲ್ಲಿ ಎಳ್ಳಮಾವಾಸ್ಯೆ ವಿಶೇಷ ಪೂಜೆ

ಹನೂರು: ಜಿಲ್ಲೆಯ ಪ್ರಸಿದ್ಧ ಯಾತ್ರಾ ಸ್ಥಳ ಮಲೆಮಹದೇಶ್ವರ ಬೆಟ್ಟದಲ್ಲಿ ಎಳ್ಳಮಾವಾಸ್ಯೆ ಪ್ರಯುಕ್ತ ಸೋಮವಾರ ವಿವಿಧ ಪೂಜಾ ಕೈಂಕರ್ಯಗಳು ವಿಧಿ ವಿಧಾನಗಳೊಂದಿಗೆ ಸಂಭ್ರಮದಿಂದ ನಡೆಯಿತು.

ಬೆಳಗಿನ ಜಾವ 3 ಗಂಟೆಯಿಂದಲೇ ಮಹದೇಶ್ವರ ಸ್ವಾಮಿಗೆ ಅಭಿಷೇಕ, ಅಲಂಕಾರ ಮಾಡಿ ವಿಶೇಷಪೂಜೆ ಸಲ್ಲಿಸಲಾಯಿತು. ಶಬರಿಮಲೆ ಯಾತ್ರೆ ಮುಗಿಸಿ ಬಂದ ಸಾವಿರಾರು ಭಕ್ತರು ಜಾತ್ರೆಯಲ್ಲಿ ಭಾಗವಹಿಸಿದರು.

ಭಾನುವಾರ ರಾತ್ರಿ ನಡೆದ ಎಣ್ಣೆಮಜ್ಜನ ಸೇವೆಗೆ ಶನಿವಾರ ರಾತ್ರಿಯಿಂದಲೇ ಜಿಲ್ಲೆ ಹಾಗೂ ಹೊರಜಿಲ್ಲೆಗಳಿಂದ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಬಂದಿದ್ದರು. ಮಹದೇಶ್ವರ ಸ್ವಾಮಿಯ ಉತ್ಸವಮೂರ್ತಿಯನ್ನು ದೇವಸ್ಥಾನದ ಸುತ್ತಲೂ ಮೆರವಣಿಗೆ ಮಾಡಲಾಯಿತು.

ಹರಕೆ ಹೊತ್ತ ಭಕ್ತರು ಚಿನ್ನದ ರಥೋತ್ಸವ, ಹುಲಿವಾಹನೋತ್ಸವ, ಬಸವ ವಾಹನೋತ್ಸವ, ರುದ್ರಾಕ್ಷಿಮಂಟಪೋತ್ಸವ ಎಳೆಯುವುದರ ಮೂಲಕ ಹರಕೆ ಕಾಣಿಕೆ ಸಲ್ಲಿಸಿದರೆ. ಸುತ್ತಲೂ ನೆರೆದಿದ್ದ ಭಕ್ತರು ಉತ್ಸವಗಳಿಗೆ ಎಳ್ಳು, ರಾಗಿ, ಜೋಳ ಮುಂತಾದ ದವಸಧಾನ್ಯಗಳನ್ನು ಎಸೆದು ನಮಿಸಿದರು.

ಜಾತ್ರೆಗೆ ಎರಡು ದಿನಗಳಿಗೂ ಮುನ್ನ ರಾಮನಗರ, ಬೆಂಗಳೂರು, ಮೈಸೂರು ಹಾಗೂ ಇನ್ನಿತರ ಜಿಲ್ಲೆಗಳಿಂದ ಸಾವಿರಾರು ಭಕ್ತರು ಕಾಲ್ನಡಿಗೆಯಲ್ಲಿ ಬಂದಿದ್ದರು. ಸೋಮವಾರ ಜಾತ್ರಾ ಮಹೋತ್ಸವದ ಬಳಿಕ ಭಕ್ತರು ನಾಗಮಲೆಗೆ ತೆರಳಿ ಪೂಜೆ ಸಲ್ಲಿಸಿದರು.

ಜಾತ್ರೆ ಅಂಗವಾಗಿ ಕೊಳ್ಳೇಗಾಲ ಕೆ.ಎಸ್.ಆರ್‌.ಟಿ.ಸಿ. ಬಸ್ ಡಿಪೊದಿಂದ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಆದರೆ, ಸೋಮವಾರ ಮಧ್ಯಾಹ್ನದ ಬಳಿಕ ಭಕ್ತರ ಸಂಖ್ಯೆ ಜಾಸ್ತಿಯಾದ ಕಾರಣ ಬಸ್‌ಗಳ ಕೊರತೆಯಿಂದಾಗಿ ಪರದಾಡುವಂತಾಯಿತು.

‘ಪ್ರಾಧಿಕಾರದ ಮೂರು ಬಸ್‌ಗಳು ಕೆಟ್ಟು ನಿಂತಿವೆ. ಕೇಳಿದರೆ ಎಂಜಿನ್‌ ಕೆಟ್ಟು ಹೋಗಿದೆ ಎನ್ನುತ್ತಾರೆ. ಎರಡು ದಿನಗಳ ಜಾತ್ರೆಯಲ್ಲಿ ಬಸ್‌ ಕೊರತೆ ಕಾಡುತ್ತಿದೆ. 3 ಗಂಟೆಯಿಂದಲೂ ಮಹಿಳೆಯರು, ಮಕ್ಕಳಾದಿಯಾಗಿ ಬಸ್‌ನಿಲ್ದಾಣದಲ್ಲಿ ಕಾದು ಬಸವಳಿದಿದ್ದೇವೆ. ಇಲ್ಲಿನ ಸಾರಿಗೆ ಅಧಿಕಾರಿಗಳು ಸಹ ಸಮರ್ಪಕ ರೀತಿಯಲ್ಲಿ ಸ್ಪಂದಿಸುತ್ತಿಲ್ಲ’ ಎಂದು ತಿ. ನರಸೀಪುರ ತಾಲ್ಲೂಕಿನ ಮಹದೇವಯ್ಯ ಅಸಮಾಧಾನ ವ್ಯಕ್ತಪಡಿಸಿದರು.

* * 

ಜಾತ್ರೆಗೆ ರಾಜ್ಯದ ವಿವಿಧೆಡೆಯಿಂದ ಲಕ್ಷಕ್ಕೂ ಅಧಿಕ ಭಕ್ತರು ಬಂದಿದ್ದು, 2 ದಿನದಲ್ಲಿ 75,000ಕ್ಕೂ ಹೆಚ್ಚು ಲಾಡುಗಳು ಮಾರಾಟವಾಗಿವೆ

ಎ.ಜೆ. ರೂಪಾ ಕಾರ್ಯದರ್ಶಿ, ಮಲೆಮಹದೇಶ್ವರ ಬೆಟ್ಟ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry