ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರೂವರೆ ತಿಂಗಳಾದರೂ ಶುರುವಾಗದ ಕಾಮಗಾರಿ

Last Updated 19 ಡಿಸೆಂಬರ್ 2017, 9:45 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ವಾರ್ಡ್ 45ರ ಗಿರಣಿಚಾಳದಲ್ಲಿ ಕೊಳೆಗೇರಿ ನಿವಾಸಿಗಳಿಗೆ ವಸತಿ ಮನೆ ನಿರ್ಮಿಸಲು ಭೂಮಿ ಪೂಜೆ ನಡೆದು ಮೂರೂವರೆ ತಿಂಗಳಾಯಿತು. ಆದರೆ, ಕಾಮಗಾರಿ ಮಾತ್ರ ಇನ್ನೂ ಆರಂಭವಾಗಿಲ್ಲ.

ಪ್ರಧಾನಮಂತ್ರಿ ಆವಾಸ್ ಯೋಜನೆಯ ‘ಸರ್ವರಿಗೂ ಸೂರು’ ಯೋಜನೆಯಡಿ ₹30.64 ಕೋಟಿ ವೆಚ್ಚದಲ್ಲಿ ರಾಜ್ಯ ಕೊಳೆಗೇರಿ ಅಭಿವೃದ್ಧಿ ಮಂಡಳಿಯು ಬೆಂಗೇರಿಯ ಗಾಂಧಿನಗರದಲ್ಲಿ 265, ಚಾಮುಂಡೇಶ್ವರಿನಗರ 80, ಗಿರಣಿಚಾಳ 120 ಹಾಗೂ ಲೋಕಪ್ಪನ ಹಕ್ಕಲಿನಲ್ಲಿ 60 ಮನೆಗಳು ಸೇರಿದಂತೆ ಒಟ್ಟು 525 ಮನೆಗಳನ್ನು ನಿರ್ಮಿಸುವ ಕಾಮಗಾರಿಗೆ ಕೈಗೆತ್ತಿಕೊಳ್ಳಲಾಗಿತ್ತು.

ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ, ಸಂಸದ ಪ್ರಹ್ಲಾದ ಜೋಶಿ ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್ ಅವರು ಸೆ.6 ರಂದು ಭೂಮಿ ಪೂಜೆ ನೆರವೇರಿಸಿದ್ದರು. ಕಾಮಗಾರಿ ಗುತ್ತಿಗೆಯನ್ನು ಬೆಂಗಳೂರು ಮೂಲದ ಗೌರಿ ಇನ್ಫ್ರಾ ಎಂಜಿನಿಯರ್ಸ್ ಪ್ರೈವೇಟ್‌ ಲಿಮಿಟೆಡ್‌ಗೆ ನೀಡಲಾಗಿದೆ. ಬೇರೆ ಕಡೆಗಳಲ್ಲಿ ನಿರ್ಮಾಣ ಆರಂಭವಾಗಿದ್ದರೂ ಪರಿಶಿಷ್ಟ ಜಾತಿ ಮತ್ತು ಪಂಗಡದವರೇ ಹೆಚ್ಚಾಗಿರುವ ಗಿರಣಿಚಾಳದಲ್ಲಿ ಮಾತ್ರ ಕೆಲಸ ಶುರುವಾಗಿಲ್ಲ.

ಹಣ ಎಲ್ಲಿಂದ ತರುವುದು: ‘ಮನೆಯನ್ನು ಉಚಿತವಾಗಿ ಕಟ್ಟಿಸಿಕೊಡಲಾಗುವುದು ಎಂದು ಹೇಳಿದ್ದ ಕೊಳಚೆ ನಿರ್ಮೂಲನಾ ಮಂಡಳಿಯವರು, ಈಗ ₹ 48 ಸಾವಿರ ಪಾವತಿಸಿದರೆ ಮಾತ್ರ ಮನೆ ನಿರ್ಮಾಣ ಕೆಲಸ ಆರಂಭಿಸುವುದಾಗಿ ಹೇಳುತ್ತಿದ್ದಾರೆ. ಕೂಲಿ ಕೆಲಸ ಮಾಡುವ ನಮ್ಮ ಬಳಿಅಷ್ಟೊಂದು ಹಣವಿಲ್ಲ’ ಎಂದು ಗಿರಣಿಚಾಳದ ಕೂಲಿ ಕಾರ್ಮಿಕ ಕೃಷ್ಣ ಜಕ್ಕಪ್ಪನವರ ಹೇಳಿದರು.

‘ದಿನಗೂಲಿ ನೆಚ್ಚಿಕೊಂಡೇ ಬದುಕುವವರು. ನಮಗೆ ಯಾರೂ ಸಾಲ ಕೊಡುವುದಿಲ್ಲ. ವಸತಿ ಇಲ್ಲದವರಿಗೆ ಉಚಿತವಾಗಿ ಮನೆ ಕಟ್ಟಿಕೊಡುವುದಾಗಿ ಹೇಳುವ ಸರ್ಕಾರ, ಈಗ ದುಡ್ಡು ಕೇಳುತ್ತಿದೆ. ಅಷ್ಟು ಹಣ ಹೊಂದಿಸುವುದು ಹೇಗೆ ಎಂದು ತೋಚುತ್ತಿಲ್ಲ’ ಎಂದು ಮನೆಗೆಲಸ ಮಾಡುವ ಪದ್ಮಾ ಬಳ್ಳಾರಿ ಅಳಲು ತೋಡಿಕೊಂಡರು.

ಮನವಿ ಸ್ಪಂದಿಸದ ಅಧಿಕಾರಿಗಳು: ‘ಗಿರಣಿಚಾಳದಲ್ಲಿ ಸೂರಿಲ್ಲದ ಪರಿಶಿಷ್ಟ ಜಾತಿ ಮತ್ತು ಪಂಗಡದ 260 ಕುಟುಂಬಗಳಿವೆ. ಈ ಪೈಕಿ 120 ಕುಟುಂಬಗಳಿಗೆ ಮನೆಗಳು ಮಂಜೂರಾಗಿವೆ. ಅವರಿಗೆ ₹ 48 ಸಾವಿರ ಪಾವತಿಸುವುದು ಸಾಧ್ಯವಿಲ್ಲ. ಹಾಗಾಗಿ, ಪಾಲಿಕೆ ಮತ್ತು ಮಂಡಳಿಯ ಎಸ್‌.ಸಿ ಮತ್ತು ಎಸ್‌.ಟಿ ಅನುದಾನದಿಂದ ಆ ಮೊತ್ತ ಭರಿಸುವುದಕ್ಕಾಗಿ, ಫಲಾನುಭವಿಗಳ ಪಟ್ಟಿ ನೀಡುವಂತೆ ಮಂಡಳಿ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ನೀಡಿಲ್ಲ’ ಎಂದು ಪಾಲಿಕೆ ಸದಸ್ಯ ಮೋಹನ ಹಿರೇಮನಿ ದೂರಿದರು.

‘ಡಿ.ಡಿ ಪಾವತಿಸಿಲ್ಲ’

‘ಮನೆ ನಿರ್ಮಾಣ ಕಾಮಗಾರಿ ಆರಂಭಿಸಬೇಕಾದರೆ ಪರಿಶಿಷ್ಟ ಜಾತಿ ಮತ್ತು ಪಂಗಡದ ಫಲಾನುಭವಿಗಳು  ₹ 48 ಸಾವಿರ ಮತ್ತು ಇತರ ವರ್ಗದವರು ₹ 58 ಸಾವಿರವನ್ನು ಡಿ.ಡಿ ರೂಪದಲ್ಲಿ ಕೊಳಚೆ ನಿರ್ಮೂಲನಾ ಮಂಡಳಿಗೆ ಪಾವತಿಸಬೇಕು. ಗಿರಣಿಚಾಳದ ಫಲಾನುಭವಿಗಳು ಡಿ.ಡಿ. ಕಟ್ಟಿಲ್ಲ. ಹಾಗಾಗಿ, ಅಲ್ಲಿ ಕಾಮಗಾರಿ ಇನ್ನೂ ಆರಂಭಿಸಿಲ್ಲ’ ಎಂದು ಕೊಳಚೆ ನಿರ್ಮೂಲನಾ ಮಂಡಳಿ ಸಹಾಯಕ ನಿರ್ವಾಹಕ ಎಂಜಿನಿಯರ್ ಹನುಮಂತ ರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

* * 

ಪರಿಶಿಷ್ಟರೇ ಹೆಚ್ಚಾಗಿರುವ ಗಿರಣಿಚಾಳ ಅಭಿವೃದ್ಧಿಯಿಂದ ದೂರು ಉಳಿದಿದೆ. ಈ ಬಗ್ಗೆ ಶಾಸಕರ ಗಮನ ಸೆಳೆದರೂ ಪ್ರಯೋಜನವಾಗಿಲ್ಲ
ಮೋಹನ ಹಿರೇಮನಿ
ವಾರ್ಡ್ 45ರ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT