ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಬೈಲ್‌ನಲ್ಲಿ ಇಣುಕುವ ಹವ್ಯಾಸ

Last Updated 19 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಭಾರತದಲ್ಲಿ ಡಿಜಿಟಲ್ ಕ್ರಾಂತಿ ಆರಂಭವಾದಾಗಿನಿಂದ ಸ್ಮಾರ್ಟ್‌ಫೋನ್‌ಗಳಿಗೆ ಬೇಡಿಕೆ ಹೆಚ್ಚಿದ್ದು ಕಳೆದ ಐದು ವರ್ಷಗಳಲ್ಲಿ ಸ್ಮಾರ್ಟ್‌ಫೋನ್‌ ಬಳಕೆದಾರರ ಪ್ರಮಾಣ ಶೇ 40 ರಷ್ಟು ವೃದ್ಧಿಸಿದೆ ಎಂದು  ಸಮೀಕ್ಷೆಗಳು ಹೇಳುತ್ತವೆ. ಸ್ಮಾರ್ಟ್‌ಫೋನ್‌ಗಳು ದೈನಂದಿನ ಜೀವನದ ಒಂದು ಭಾಗವಾಗಿರುವುದರಿಂದ ಬಳಕೆದಾರರು ಇವುಗಳ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ. ದೇಶದಲ್ಲಿನ ಶೇ 51 ರಷ್ ಬಳಕೆದಾರರು ಪ್ರತಿ 10 ನಿಮಿಷಕ್ಕೆ ಒಮ್ಮೆ ಸ್ಮಾರ್ಟ್‌ಫೋನ್‌ ನೋಡುತ್ತಾರೆ ಎಂದು ‘ಕೆಪಿಎಂಜಿ’ ಸಮೀಕ್ಷೆ ತಿಳಿಸಿದೆ.

ಯಾವುದೇ ನೋಟಿಫಿಕೇಷನ್ ಅಥವಾ ಕರೆ ಬರದಿದ್ದರೂ ಪ್ರತಿ ಹತ್ತು ನಿಮಿಷಕ್ಕೆ ಮೊಬೈಲ್‌ನಲ್ಲಿ ಇಣುಕುವ ಹವ್ಯಾಸವನ್ನು ರೂಢಿಸಿಕೊಂಡಿದ್ದಾರೆ ಎಂದು  ಈ ಅಧ್ಯಯನ ಹೇಳಿದೆ. ಜಾಗತಿಕವಾಗಿ ಆನ್‌ಲೈನ್‌ ಸಮೀಕ್ಷೆ ಹಾಗೂ ವಿಶ್ಲೇಷಣಾ ವರದಿಗಳನ್ನು ತಯಾರಿಸುವ ‘ಕೆಪಿಎಂಜಿ’, ಅಮೆರಿಕ, ಬ್ರಿಟನ್, ಚೀನಾ ಹಾಗೂ ಭಾರತ ಸೇರಿದಂತೆ ಹತ್ತು ಸಾವಿರಕ್ಕೂ ಹೆಚ್ಚು ಸ್ಮಾರ್ಟ್‌ಫೋನ್‌ ಬಳಕೆದಾರರನ್ನು ಅಧ್ಯಯನಕ್ಕೆ ಒಳಪಡಿಸಿ ‘ನಾನು, ನನ್ನ ಜೀವನ, ನನ್ನ ವ್ಯಾಲೆಟ್’ ಎಂಬ ಶೀರ್ಷಿಕೆಯ ಅಡಿಯಲ್ಲಿ ಈ ಸಮೀಕ್ಷಾ ವರದಿ ತಯಾರಿಸಿದೆ.

ಇದರಲ್ಲಿ ಕೇವಲ ಸ್ಮಾರ್ಟ್‌ಫೋನ್‌ ನೋಡುವುದು ಮಾತ್ರವಲ್ಲದೆ  ಇತರ ಆಸಕ್ತಿದಾಯಕ ಸಂಗತಿಗಳೂ ಬೆಳಕಿಗೆ ಬಂದಿವೆ. ಜಾಗತಿಕವಾಗಿ ಸಾಕಷ್ಟು ಜನರು ತಮ್ಮ ವ್ಯಾಲೆಟ್ ಕಳೆದುಕೊಳ್ಳುವುದಕ್ಕಿಂತ ಹೆಚ್ಚಾಗಿ ಮೊಬೈಲ್ ಫೋನ್‌ ಕಳೆದು ಕೊಳ್ಳುತ್ತಾರೆ. ಶೇ 57 ರಷ್ಟು ಭಾರತೀಯರು, ಶೇ 61 ರಷ್ಟು ಬ್ರಿಟನ್ನರು, ಶೇ 74 ಅಮೆರಿಕನ್ನರು ಹಾಗೂ ಶೇ 29 ರಷ್ಟು ಚೀನಿಯರು ಮೊಬೈಲ್‌ಗಳನ್ನು ಕಳೆದುಕೊಳ್ಳುತ್ತಾರೆ ಎಂದು ಈ ವರದಿಯಲ್ಲಿ ಹೇಳಲಾಗಿದೆ.

ಡಿಜಿಟಲ್ ವ್ಯವಹಾರದ ಫಲವಾಗಿ ದೇಶದಲ್ಲಿ ಇಂಟರ್ನೆಟ್ ಬಳಕೆದಾರರ ಪ್ರಮಾಣ ಹೆಚ್ಚಾಗಿದೆ. ಅದರಲ್ಲೂ ಸಾಮಾಜಿಕ ಜಾಲತಾಣ  ವಾಟ್ಸ್‌ಆ್ಯಪ್ ಬಳಸುವವರ ಪ್ರಮಾಣ ಹೆಚ್ಚಿದೆ. ಇದು ಒಟ್ಟಾರೆ ಸ್ಮಾರ್ಟ್‌ಫೋನ್‌ ಬಳಕೆದಾರರ ಪ್ರಮಾಣದಲ್ಲಿ ಶೇ 88 ರಷ್ಟಿರುವುದು ವಿಶೇಷ.

ಶೇ 41 ರಷ್ಟು ಬಳಕೆದಾರರು ಆನ್‌ಲೈನ್‌ ಹಾಗೂ ಸಾಮಾಜಿಕ ಜಾಲತಾಣಗಳನ್ನು ನಂಬುತ್ತಾರೆ. ಶೇ 80 ರಷ್ಟು ಜನರು ಆ್ಯಪ್, ತಂತ್ರಜ್ಞಾನದ ಮಾಹಿತಿಗಳನ್ನು ಆನ್‌ಲೈನ್‌ನ ಇತರ ವೇದಿಕೆಗಳ ಮೂಲಕ ಪಡೆಯುತ್ತಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಇ-ಮೇಲ್ ನೋಡದವರು!

ದೇಶದಲ್ಲಿನ ಒಟ್ಟಾರೆ ಇ-ಮೇಲ್ ಬಳಕೆದಾರರಲ್ಲಿ ಶೇ 52 ರಷ್ಟು ಜನರು ದಿನದ ಕೊನೆಯಲ್ಲಿ ಇ-ಮೇಲ್ ಪರಿಶೀಲಿಸುವುದಿಲ್ಲ ಮಾಡುವುದಿಲ್ಲ ಎಂದು  ವರದಿಯೊಂದು ತಿಳಿಸಿದೆ. ಅಂದರೆ ದಿನದ ಕೊನೆಯಲ್ಲಿ ಮನೆಗೆ ಮರಳುವ ಸಮಯದಲ್ಲಿ ಯಾರೂ ಕೂಡ ವೈಯಕ್ತಿಕ ಹಾಗೂ ವೃತ್ತಿ ಸಂಬಂಧಿಸಿದ ಇ-ಮೇಲ್‌ಗಳನ್ನು  ಚೆಕ್ ಮಾಡುವುದಿಲ್ಲ! ಆದರೆ ಶೇ 29 ರಷ್ಟು ಬಳಕೆದಾರರು ನಿಯಮಿತವಾಗಿ ಮೇಲ್‌ಗಳನ್ನು ಚೆಕ್ ಮಾಡುತ್ತಾರೆ. ಇ-ಮೇಲ್ ನೋಡದಿರುವುದಕ್ಕೆ ಕೆಲಸ ಹಾಗೂ ಮಾನಸಿಕ ಒತ್ತಡವೇ ಕಾರಣ ಎಂಬುದು ಈ ಅಧ್ಯಯನ ವರದಿಯಿಂದ ಬಹಿರಂಗವಾಗಿದೆ.

ಇ-ಮೇಲ್ , ಸಾಮಾಜಿಕ ಜಾಲತಾಣಗಳ ಬಳಕೆಯನ್ನು ಡಿಜಿಟಲ್ ಹವ್ಯಾಸ ಎಂದು ಕರೆಯಲಾಗುತ್ತದೆ. ಶೇ 60 ರಷ್ಟು ಜನರು ಪ್ರತಿ ಗಂಟೆಗೊಮ್ಮೆ ಮೇಲ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಇಣುಕುತ್ತಾರೆ. ಇವರಲ್ಲಿ ಡೆಸ್ಕ್‌ಟಾಪ್‌ ಬಳಕೆದಾರರಿಗಿಂತ ಸ್ಮಾರ್ಟ್‌ಫೋನ್‌ ಬಳಕೆದಾರರೆ ಹೆಚ್ಚಿನ ಪ್ರಮಾಣದಲ್ಲಿದ್ದಾರೆ.

ರಜಾ ದಿನಗಳಲ್ಲಿ ಶೇ 74 ರಷ್ಟು ಬಾರತೀಯರು ಸಾರ್ವಜನಿಕ ವೈಫೈಗಳ ಮೊರೆ ಹೋಗುತ್ತಾರೆ. ಇದರಿಂದಾಗಿ ಸೈಬರ್ ಕಳ್ಳರ ಕೈಗೆ ಸಿಕ್ಕಿಹಾಕಿಕೊಂಡು ಆರ್ಥಿಕ ನಷ್ಟ ಅನುಭವಿಸುತ್ತಾರೆ. ಸಾರ್ವಜನಿಕ ವೈಫೈ ಬಳಕೆ ಮಾಡಿಕೊಂಡು ವೈಯಕ್ತಿಕ ಮಾಹಿತಿ ವಿನಿಮಯ ಹಾಗೂ ಹಣಕಾಸು ವ್ಯವಹಾರ ನಡೆಸುವುದು ಬೇಡ ಎಂದು ಎಂಸಿಎಎಫ್ಇಇ ಅಧ್ಯಯನ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ವೆಂಕಟ್ ಕೃಷ್ಣಪುರ್ ಹೇಳುತ್ತಾರೆ. ಈ ಸಮೀಕ್ಷೆಗಾಗಿ ಭಾರತದ 1,504 ಜನರನ್ನು ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಅವರ ಅನುಭವ ಮತ್ತು ಮಾಹಿತಿ ಹಂಚಿಕೆಯನ್ನು ಆಧರಿಸಿ ಈ ವಿಸ್ತೃತ ವರದಿ ತಯಾರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT