‘ಕಥನ ಕುತೂಹಲ’: ಹಿಡಿದಿಡುವ ವಿಶಿಷ್ಟ ರಂಗಪ್ರಸ್ತುತಿ

7

‘ಕಥನ ಕುತೂಹಲ’: ಹಿಡಿದಿಡುವ ವಿಶಿಷ್ಟ ರಂಗಪ್ರಸ್ತುತಿ

Published:
Updated:
‘ಕಥನ ಕುತೂಹಲ’: ಹಿಡಿದಿಡುವ ವಿಶಿಷ್ಟ ರಂಗಪ್ರಸ್ತುತಿ

ಲೋಕಚರಿತ ತಂಡದ ‘ಕಥನ ಕುತೂಹಲ’ ರಂಗಪ್ರಸ್ತುತಿಯ ಮೂರೂ ಕಥೆಗಳ ಕೇಂದ್ರಬಿಂದು ‘ಧರ್ಮ’, ಅದೂ ಮುಸ್ಲಿಂ ಸಮುದಾಯ. ಬೇರೆ ಬೇರೆ ಕಾಲದ ಮೂರು ಮುಸ್ಲಿಂ ಪಾತ್ರಗಳು ರಂಗಪ್ರಸ್ತುತಿಯ ಜೀವಾಳ. ಒಂದು ಧರ್ಮದ ಸುತ್ತ ಹೆಣೆದುಕೊಂಡಿರುವ ನಂಬಿಕೆಗಳು, ಗ್ರಹಿಕೆಗಳು, ಅಪವಾದಗಳು ಹಾಗೂ ವಾಸ್ತವಗಳ ಸುತ್ತ ಮೂರು ಕಥೆಗಳು ಸುತ್ತುವರಿಯುತ್ತವೆ.

ಜಾತಿ, ಮತ, ಧರ್ಮ, ತೊಡುವ ಉಡುಪು, ಉಣ್ಣುವ ಆಹಾರಗಳಿಂದ ವ್ಯಕ್ತಿಯ ವ್ಯಕ್ತಿತ್ವಗಳನ್ನು ಅಳೆಯುವ ಕ್ರಮ ಸಮಾಜದಲ್ಲಿ ನಮ್ಮ ಅರಿವಿಗೇ ಬಾರದೇ ನಡೆದುಕೊಂಡು ಬಂದಿದೆ. ಈ ಮುಖವನ್ನು ಬಿಚ್ಚಿಡುತ್ತ, ಈ ಕ್ರಮವನ್ನು ಬುಡಮೇಲು ಮಾಡುವ ತಂತ್ರ ಈ ಕಥೆಗಳಲ್ಲಿದೆ.

ಕನ್ನಡ ಸಾಹಿತ್ಯ ಲೋಕವನ್ನು ರಂಗಭೂಮಿಯೊಂದಿಗೆ ಹೊಸೆಯುವ ಹೊಸ ಪ್ರಯತ್ನವಿದು. ಕಥಾಲೋಕಕ್ಕೂ, ರಂಗಭೂಮಿಗೂ ಇದೊಂದು ಹೊಸ ಪರಿಚಯ ಎನ್ನಬಹುದು.

ಸಾಮಾನ್ಯವಾಗಿ ಕಥೆಗಳನ್ನು ಯಥಾವತ್‌ ರಂಗಭೂಮಿಗೆ ತರುವಲ್ಲಿ ಕೆಲವು ಸವಾಲುಗಳಿರುತ್ತವೆ. ಒಬ್ಬರೇ ಒಂದೆಡೆ ಕುಳಿತು ಓದುವ, ಅನಂತರ ಆ ಕುರಿತು ಯಾರೊಂದಿಗಾದರೂ ನಾಲ್ಕು ಮಾತಾಡುವ ಅನುಭವ ಹಿತ. ಇಂಥ ಗುಣವಿರುವ ಕಥೆಗಳನ್ನು ವೇದಿಕೆಗೆ ತಂದು, ಎಲ್ಲರೂ ಒಟ್ಟಾಗಿ ನೋಡುವ, ನಗುವ, ಚಿಂತನೆಗಿಳಿಯುವ ಅಪರೂಪದ ಅವಕಾಶ ಸೃಷ್ಟಿಸಿದ್ದು ‘ಲೋಕಚರಿತ’.

ಮುಸಲ್ಮಾನರ ಬಗೆಗೆ ಇರುವ ಅನುಮಾನ, ಆತಂಕವನ್ನೂ, ಅವರ ವಾಸ್ತವದ ಸ್ಥಿತಿಗತಿಗಳನ್ನು ಮೂರೂ ಕಥೆಗಳು ಪ್ರೇಕ್ಷಕನ ಮುಂದಿಡುತ್ತವೆ. ಆದರೆ ಯಾವುದೇ ಬಗೆಯ ನೇರ ಸಂದೇಶವನ್ನು ಹೇರುವುದಿಲ್ಲ. ಆ ನಿರ್ಧಾರವನ್ನು ಕೈಗೊಳ್ಳುವ ಸ್ವಾತಂತ್ರ್ಯ ಪ್ರೇಕ್ಷಕನಿಗೆ ಸಿಗುತ್ತದೆ.

ಲವಲವಿಕೆಯ ಆರಂಭ

ಪೂರ್ಣಚಂದ್ರ ತೇಜಸ್ವಿ ಅವರ ‘ಡೇರ್ ಡೆವಿಲ್ ಮುಸ್ತಾಫಾ’ ಕಥೆಯಿಂದ ರಂಗಪ್ರಸ್ತುತಿ ಆರಂಭ. ಕಾಲೇಜು ಜೀವನದ ಸ್ವಾಭಾವಿಕ ತುಂಟತನ, ಗುಂಪುಗಾರಿಕೆ, ಜಗಳ, ಸ್ನೇಹ, ಅನುಭೂತಿ... ಎಲ್ಲವೂ ರಂಗದ ಮೇಲೆ ಮೂಡಿಬರುತ್ತದೆ. ನೋಡುವವರೂ ಕಾಲೇಜು ದಿನಗಳ ನೆನಪಿನಲ್ಲಿ ಕಳೆದುಹೋಗುವಂತೆ ಕಲಾವಿದರು ಸೆಳೆದುಕೊಳ್ಳುತ್ತಾರೆ. ಎಂಸಿಸಿ, ಕ್ರೈಸ್ಟ್‌ ಕಾಲೇಜ್‌, ಸೇಂಟ್ ಜೋಸೆಫ್‌ ಕಾಲೇಜ್, ಎಂಇಎಸ್‌ ಕಾಲೇಜ್‌, ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಈಗ ತಾನೆ ಕಾಲೇಜು ಮುಗಿಸಿ ವಿವಿಧ ಕ್ಷೇತ್ರಗಳಲ್ಲಿ ತೊಡಗಿಕೊಂಡಿರುವ ಯುವ ಕಲಾವಿದರು ಕಾಲೇಜುಗಳಲ್ಲಿನ ತಮ್ಮ ದಿನಚರಿಯನ್ನೇ ರಂಗದ ಮೇಲೆ ನಿರ್ವಹಿಸಿದಂತಿದೆ. ಇದೇ ಕಾರಣಕ್ಕೇನೊ, ಈ ಪ್ರಸ್ತುತಿಗೆ ಹೆಚ್ಚಿನ ಜೀವಕಳೆ ಒದಗಿಬಂದಿದೆ. ಸಣ್ಣ ಸಣ್ಣ ಕೀಟಲೆ ಮಾಡುತ್ತ, ಟಪಾಂಗುಚ್ಚಿ ಹೆಜ್ಜೆ ಹಾಕುತ್ತ, ಹಾಡುತ್ತ, ಕುಣಿಯುತ್ತ ಯುವಕ–ಯುವತಿಯರು ಗಮನ ಸೆಳೆಯುತ್ತಾರೆ.

ಒಂದೊಂದು ಸಂಭಾಷಣೆಯಲ್ಲೂ ಮುಸ್ತಾಫಾನನ್ನು ಪಾತ್ರಧಾರಿಗಳು ಬದಲಾಗುತ್ತಾ ಹೋಗುತ್ತಾರೆ. ಮುಸ್ತಾಫಾ ಸರಣಿಯಲ್ಲಿ ಅವನನ್ನು ಗುರುತಿಸಲು ನೆರವಾಗುವುದು ವಿಶೇಷವಾದ ಕುಚ್ಚಿನ ಟೋಪಿ!

ಒಂದು ಕೋಮಿನವರ ಬಗ್ಗೆ ಇನ್ನೊಂದು ಕೋಮಿನವರಿಗೆ ಇರುವ ಭಯ, ಆತಂಕ... ಅದರಲ್ಲಿ ವಾಸ್ತವ ಎಷ್ಟು, ಭ್ರಮೆ ಎಷ್ಟು ಮತ್ತು ಸಮೂಹ ಸನ್ನಿಯ ಪಾಲು ಎಷ್ಟು ಎನ್ನುವ ಪ್ರಶ್ನೆಗಳನ್ನು ಮುಂದಿಡುತ್ತ ಸಾಗುತ್ತದೆ ‘ದಾದಾ ಕ ಪಹಾಡ್’.

ಭಾರತೀಯ ವೈದ್ಯ ಪದ್ಧತಿಗಳ ಇಂದಿನ ಸ್ಥಿತಿಗತಿ, ವ್ಯಾಪಾರೀಕರಣದ ಕಪಿಮುಷ್ಟಿಯಲ್ಲಿ ನಲುಗುತ್ತಿರುವ ನಮ್ಮ ಪರಂಪರಾಗತ ಪದ್ಧತಿಗಳು, ಅವುಗಳನ್ನು ಒಪ್ಪಿಕೊಳ್ಳುವುದೊ, ಬಿಡುವುದೊ ಎನ್ನುವ ಸಂದಿಗ್ಧತೆಯನ್ನು ಈ ಕಥೆ ಅನಾವರಣಗೊಳಿಸುತ್ತದೆ.

ಕೊನೆಯಲ್ಲಿ ಪ್ರದರ್ಶಿಸಲಾದ ‘ಶಫಿ ಎಲೆಕ್ಟ್ರಿಕಲ್ಸ್’ ರಂಗಕ್ಕೆ ಅಷ್ಟು ಒಗ್ಗಲಿಲ್ಲವೇನೊ ಎಂದು ಅನಿಸುತ್ತದೆ. ನಾಟಕದುದ್ದಕ್ಕೂ ಒಂದೇ ಪಾತ್ರ ತೆವಳುತ್ತ ಸಾಗಿದಂತೆ ಅನಿಸುತ್ತದೆ. ವ್ಯಾಪಾರೀಕರಣ, ಮಾಧ್ಯಮ, ರಾಜಕಾರಣ, ಹಿಂಸಾಚಾರ... ಎಲ್ಲವನ್ನೂ ಇಬ್ಬರು ನಿರೂಪಕರು ತಮ್ಮ ಮಾತಿನಲ್ಲೇ ತೋರ್ಪಡಿಸುವುದು ಸವಾಲು. ಆದರೆ ಕಲಾವಿದರಾದ ಚೆನ್ನಕೇಶವ ಮತ್ತು ವಲ್ಲಭ ಅವರ ನಿರೂಪಣೆಯಲ್ಲಿ ಜೀವಂತಿಕೆ ಎದ್ದು ಕಾಣುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry