ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಗ್ಗರಿಸಿದ ವಿಶ್ವ ವ್ಯಾಪಾರ ಸಂಘಟನೆ ಮಾತುಕತೆ

Last Updated 20 ಡಿಸೆಂಬರ್ 2017, 12:55 IST
ಅಕ್ಷರ ಗಾತ್ರ

ಅರ್ಜೆಂಟೀನಾದ ಬ್ಯೂನಸ್‌ ಐರಿಸ್‌ನಲ್ಲಿ ಕಳೆದ ವಾರ ನಡೆದ ವಿಶ್ವ ವ್ಯಾಪಾರ ಸಂಘಟನೆ (ಡಬ್ಲ್ಯುಟಿಒ) ಸಚಿವರ ಮಟ್ಟದ ಹನ್ನೊಂದನೆಯ ಸಮ್ಮೇಳನವು ಜಾಗತಿಕ ವ್ಯಾಪಾರ ಉತ್ತೇಜಿಸಲು ಯಾವುದೇ ಪ್ರಮುಖ ಒಪ್ಪಂದಕ್ಕೆ ಬರದೆ ವಿಫಲಗೊಂಡಿದೆ. ಐರೋಪ್ಯ ಒಕ್ಕೂಟ ಮತ್ತು ದಕ್ಷಿಣ ಅಮೆರಿಕದ ದೇಶಗಳು ತಮ್ಮೊಳಗೆ ಮುಕ್ತ ವ್ಯಾಪಾರ ಸಾಧ್ಯವಾಗಿಸುವ ಕುರಿತು ನಿರ್ಧಾರಕ್ಕೆ ಬಂದಿವೆ. ಇದನ್ನು ಹೊರತುಪಡಿಸಿದರೆ ವಿವಾದಾತ್ಮಕ ಕೃಷಿ ಸಬ್ಸಿಡಿ ಕುರಿತು ಮಾತುಕತೆಗಳಲ್ಲಿ ಪ್ರಗತಿಯಾಗಿಲ್ಲ. ಈ ವಿಷಯದಲ್ಲಿ ಸಮ್ಮೇಳನದ ಸಾಧನೆ ಶೂನ್ಯ. ವಾಣಿಜ್ಯ ಸಚಿವರ ಮಟ್ಟದ ಸಮಾವೇಶವು ಯಾವುದೇ ಘೋಷಣೆ ಪ್ರಕಟಿಸದೆ ಕೊನೆಗೊಂಡಿದೆ.

* ಸಾಧಿಸಿದ್ದೇನು?

ಇ–ಕಾಮರ್ಸ್‌, ಕೃಷಿ ಮತ್ತು ಮೀನುಗಾರಿಕೆ ಸಬ್ಸಿಡಿಗೆ ಮಿತಿ ಹಾಕುವ ಕುರಿತು ಹೊಸ ಒಪ್ಪಂದಕ್ಕೆ ಬರಲು ಮತ್ತು ತಮ್ಮ ಹಿತಾಸಕ್ತಿ ರಕ್ಷಿಸಿಕೊಳ್ಳಲು ಕೂಟವನ್ನು ಅಸ್ತಿತ್ವಕ್ಕೆ ತರಲು ಕೆಲ ದೇಶಗಳು ಮುಂದಾಗಿರುವುದು ಸಮಾವೇಶದ ಗೆಲುವು ಎಂದು ಅಮೆರಿಕ ಬಣ್ಣಿಸಿಕೊಂಡಿದೆ. ಚೀನಾ ಅನುಸರಿಸುತ್ತಿರುವ, ತನಗೆ ಅನುಕೂಲಕರವಾದ ವ್ಯಾಪಾರ ನೀತಿ ವಿರುದ್ಧ ಸಂಘಟನೆ ಒಳಗೇ ಹೋರಾಟ ನಡೆಸಲು ಅಮೆರಿಕವು ಐರೋಪ್ಯ ಒಕ್ಕೂಟ ಮತ್ತು ಜಪಾನ್‌ ಜತೆ ಕೈಜೋಡಿಸಿದೆ.

 * ವಿವಾದದ ಮೂಲ ಏನು?

ಆಹಾರ ಸುರಕ್ಷತೆ ಸಾಧ್ಯವಾಗಿಸುವ ವಿಷಯಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಭಾರತದಂತಹ ಅಭಿವೃದ್ಧಿಶೀಲ ದೇಶಗಳ ಬೇಡಿಕೆ ಒಪ್ಪಿಕೊಳ್ಳಲು ಅಮೆರಿಕ ಹಿಂದೇಟು ಹಾಕಿದ್ದರಿಂದ ಮಾತುಕತೆ ವಿಫಲಗೊಂಡಿತು. ಇದರಿಂದ ಭಾರತ ಮತ್ತು ಇತರ ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ತೀವ್ರ ನಿರಾಶೆಯಾಗಿದೆ.

ಜಾಗತಿಕ ವ್ಯಾಪಾರ ನಿಯಮಗಳ ಅನ್ವಯ, ಸಂಘಟನೆಯ ಸದಸ್ಯ ದೇಶಗಳ ಆಹಾರ ಸಬ್ಸಿಡಿ ಮೊತ್ತವು ಕೃಷಿ ಉತ್ಪಾದನೆಯ ಒಟ್ಟು ಮೌಲ್ಯದ ಶೇ 10ರಷ್ಟನ್ನು ಮೀರಬಾರದು ಎನ್ನುವ ನಿಬಂಧನೆ ವಿಧಿಸಲಾಗಿದೆ. ಇದಕ್ಕೆ 1986–88ರ ಬೆಲೆಗಳನ್ನು ಆಧಾರವಾಗಿ ಇಟ್ಟುಕೊಳ್ಳಲಾಗಿದೆ. ಈ ಷರತ್ತು ಉಲ್ಲಂಘಿ­ಸಿದರೆ ವಾಣಿಜ್ಯ ನಿಷೇಧದ ದಂಡನೆ ಇರುವುದು ಬಡ ದೇಶಗಳ ಚಿಂತೆಗೆ ಕಾರಣವಾಗಿದೆ.

ಆಹಾರ ಸುರಕ್ಷತೆ ಕಾರ್ಯಕ್ರಮವನ್ನು ಪೂರ್ಣ ಪ್ರಮಾಣದಲ್ಲಿ ಜಾರಿಗೆ ತಂದರೆ ಅದು ನಿಬಂಧನೆಯ ಸ್ಪಷ್ಟ ಉ‌ಲ್ಲಂಘನೆ ಎಂದೂ ಕೆಲ ದೇಶಗಳು ವಾದಿಸುತ್ತಿವೆ. ಅಮೆರಿಕವು ಈ ವಾದ ಪ್ರತಿಪಾದನೆಯ ಮುಂಚೂಣಿಯಲ್ಲಿ ಇದೆ.

* ಭಾರತದ ಹಕ್ಕೊತ್ತಾಯ ಏನು?

ಆಹಾರ ಸಬ್ಸಿಡಿ ಗರಿಷ್ಠ ಮಿತಿ ಲೆಕ್ಕ ಹಾಕುವ ಸೂತ್ರದಲ್ಲಿ ತಿದ್ದುಪಡಿ ಆಗಬೇಕು ಎನ್ನುವುದು ಭಾರತದ ಧೋರಣೆಯಾಗಿದೆ. ಅಭಿವೃದ್ಧಿಶೀಲ ದೇಶಗಳಲ್ಲಿ ಆಹಾರ ಸುರಕ್ಷತೆ ಉತ್ತೇಜಿಸಲು ಶಾಶ್ವತ ದರ ನಿಯಮಗಳನ್ನು ರೂಪಿಸಬೇಕು ಎಂದು ಒತ್ತಾಯಿಸುತ್ತಿದೆ. ಚೀನಾ ಕೂಡ ಭಾರತದ ನಿಲುವಿಗೆ ಬೆಂಬಲ ವ್ಯಕ್ತಪಡಿಸಿದೆ.

ನಮ್ಮಲ್ಲಿ ಪಡಿತರ ವ್ಯವಸ್ಥೆ ಮೂಲಕ ಬಡವರಿಗೆ ಅಗ್ಗದ ದರದಲ್ಲಿ ಆಹಾರ ಧಾನ್ಯಗಳನ್ನು ಪೂರೈಸಲಾಗುತ್ತಿದೆ. ಕನಿಷ್ಠ ಬೆಂಬಲ ಬೆಲೆಗೆ ಕೃಷಿ ಉತ್ಪನ್ನಗಳನ್ನು ಖರೀದಿಸಲಾಗುತ್ತದೆ. ವಿದ್ಯುತ್, ರಸಗೊಬ್ಬರ ಖರೀದಿಯಲ್ಲಿಯೂ ಸಬ್ಸಿಡಿ ನೀಡುತ್ತಿ­ರುವಾಗ ಶೇ 10 ಮಿತಿ ಪಾಲನೆ ಸಾಧ್ಯವಾಗುವುದಿಲ್ಲ ಎನ್ನು­ವುದು ಭಾರತದ ನಿಲುವಾಗಿದೆ. ಆಹಾರ ಧಾನ್ಯಗಳ ಸಾರ್ವಜನಿಕ ದಾಸ್ತಾನು ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಬೇಕು ಎಂದು ಭಾರತ ಮೊದಲಿ­ನಿಂದಲೂ ಪ್ರತಿಪಾದಿಸುತ್ತಲೇ ಬಂದಿದೆ. ಇದಕ್ಕೆ ಕಿವಿಗೊಡದ ಶ್ರೀಮಂತ ದೇಶಗಳು, ತಮ್ಮ ವ್ಯಾಪಾರ ಹಿತಾಸಕ್ತಿಗೆ ಆದ್ಯತೆ ನೀಡಿ, ಭಾರತದಂತಹ ಅಭಿವೃದ್ಧಿಶೀಲ ದೇಶಗಳ ಬೇಡಿಕೆಗೆ ಸೊಪ್ಪು ಹಾಕುತ್ತಿಲ್ಲ.

* ರೈತರ ಸಂಕಷ್ಟ

ಕೃಷಿ ಫಸಲಿಗೆ ನ್ಯಾಯಯುತ ಬೆಲೆ ಸಿಗುತ್ತಿಲ್ಲ. ಆಹಾರ ಧಾನ್ಯ ಸಗಟಾಗಿ ಖರೀದಿಸಲು ಮೂಲಸೌಕರ್ಯಗಳಿಲ್ಲ. ಇದರಿಂದ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂದು ರೈತ ಸಂಘಟನೆಗಳು ಸರ್ಕಾರಗಳ ವಿರುದ್ಧ ಹರಿಹಾಯುತ್ತಿವೆ. 2022ರ ಹೊತ್ತಿಗೆ ಕೃಷಿಕರ ವರಮಾನ ದು‍ಪ್ಪಟ್ಟು ಮಾಡುವುದಾಗಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಭರವಸೆ ನೀಡಿದೆ. ಪ್ರಮುಖ ಬೆಳೆಗಳ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಹೆಚ್ಚಿಸಿದರೆ ಮಾತ್ರ ಸಾಧ್ಯ. ಡಬ್ಲ್ಯುಟಿಒ ನಿರ್ಬಂಧದ ಕಾರಣಕ್ಕೆ ಎಂಎಸ್‌ಪಿ ಹೆಚ್ಚಿಸಲು ಸಾಧ್ಯವಾಗುತ್ತಿಲ್ಲ.

*ಅಮೆರಿಕದ ನಿಲುವೇನು?

ಸದ್ಯದ ಮಾರುಕಟ್ಟೆಯ ವಸ್ತುಸ್ಥಿತಿಯನ್ನು ಪರಿಗಣನೆ ತೆಗೆದುಕೊಂಡು ಕೃಷಿ ಹಿತಾಸಕ್ತಿಗಳ ರಕ್ಷಣೆಯಾಗಬೇಕೆ ಹೊರತು ಕಾರ್ಯಸಾಧ್ಯವಲ್ಲದ ಮತ್ತು ಹಳೆಯ ಮಾತುಕತೆಗಳನ್ನು ಆಧರಿಸಿರಬಾರದು. 2001ರಲ್ಲಿ ಚಾಲನೆ ನೀಡಿದ ದೋಹಾ ಸುತ್ತಿನ ಮಾತುಕತೆ ಸ್ವೀಕಾರಾರ್ಹವಲ್ಲ ಎಂದು ಅಮೆರಿಕ ಪಟ್ಟು ಹಿಡಿದಿದೆ. ಗಡುವು ಸಮೀಪಿಸುತ್ತಿರುವ ಶಾಂತಿ ಷರತ್ತಿನ ಬದಲಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ನೆರವಾಗುವುದಾಗಿ ವಾಗ್ದಾನ ಮಾಡಿದ್ದ ಅಮೆರಿಕವು ಈಗ ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ. ‘ಅಮೆರಿಕವೇ ಮೊದಲು’ ಎನ್ನುತ್ತ ತನ್ನ ಹಿತಾಸಕ್ತಿ ರಕ್ಷಣೆಗೆ ಮುಂದಾಗಿರುವ ‘ವಿಶ್ವದ ದೊಡ್ಡಣ್ಣ’ ತನ್ನ ಪಟ್ಟು ಸಡಿಲಿಸಿಲ್ಲ. ಜಾಗತಿಕ ವ್ಯಾಪಾರ ವ್ಯವಸ್ಥೆಯ
ಪ್ರಯೋಜನಗಳನ್ನೇ ಅಮೆರಿಕ ಪ್ರಶ್ನಿಸುತ್ತಿದೆ.

 * ಭಾರತದ ಹಿತಾಸಕ್ತಿಗೆ ಧಕ್ಕೆ?

ದೇಶದ ರಫ್ತು ವಹಿವಾಟು ಹೆಚ್ಚುತ್ತಿಲ್ಲ. ಆಮದು ನಿರಂತರವಾಗಿ ಏರಿಕೆಯಾಗುತ್ತಿದೆ. ಇದು ಯೋಜನಾ ತಜ್ಞರ ಚಿಂತೆಗೆ ಕಾರಣವಾಗಿದೆ. ಸರಕು ಮತ್ತು ಸೇವೆಗಳ ರಫ್ತು ಹೆಚ್ಚಿಸಿ ಮಾರುಕಟ್ಟೆ ವಿಸ್ತರಿಸುವ ಭಾರತದ ಯತ್ನಕ್ಕೆ ಡಬ್ಲ್ಯುಟಿಒ ವೈಫಲ್ಯವು ಅಡ್ಡಿಯಾಗಲಿದೆ.

* ಬಾಲಿ ಸಮಾವೇಶದ ಆಶಯ

2013ರಲ್ಲಿ ಇಂಡೊನೇಷ್ಯಾದ ಬಾಲಿಯಲ್ಲಿ ನಡೆದಿದ್ದ 9ನೇ ಸಮಾವೇಶದಲ್ಲಿಯೇ ಇದಕ್ಕೊಂದು ಪರಿಹಾರ ಕಂಡುಕೊಳ್ಳಲು ‘ಶಾಂತಿ ಷರತ್ತಿನ’ (Peace C* ause) ಸೂತ್ರ ಒಪ್ಪಿಕೊಳ್ಳಲಾಗಿತ್ತು. ಅದರ ಅನ್ವಯ, 11ನೇ ಸಮಾವೇಶದಲ್ಲಿ ಶಾಶ್ವತ ಪರಿಹಾರ ಕಂಡುಕೊಳ್ಳುವ ಬಗ್ಗೆ ಮಾತುಕತೆ ನಡೆಸಲು ಸದಸ್ಯ ದೇಶಗಳು ಬದ್ಧತೆ ತೋರಿದ್ದವು. ಈಗ ಒಪ್ಪಂದಕ್ಕೆ ಬರಲಾಗದ ಕಾರಣಕ್ಕೆ ಹಿಂದಿನ ಶಾಂತಿ ಷರತ್ತು ಮುಂದುವರೆಯಲಿದೆ.

* ಏನಿದು ಆಹಾರ ಸುರಕ್ಷತೆ?

ಬಡವರಿಗೆ ಅಗ್ಗದ ದರದಲ್ಲಿ ಆಹಾರ ಧಾನ್ಯ ಒದಗಿಸುವುದಕ್ಕೆ ‘ಆಹಾರ ಭದ್ರತೆ’ ಎನ್ನುತ್ತಾರೆ. ಈ ಯೋಜನೆಯನ್ನು ಸಮರ್ಪಕವಾಗಿ ಜಾರಿಗೆ ತರಲು ಸರ್ಕಾರಗಳು ಆಹಾರ ಧಾನ್ಯಗಳನ್ನು ಸಂಗ್ರಹಿಸಿ ಇಡುವುದು ವಿವಾದಕ್ಕೆ ಕಾರಣವಾಗಿದೆ. ವಿಶ್ವದಾದ್ಯಂತ ಕೋಟ್ಯಂತರ ಜನರ ಜೀವನಾಧಾರಕ್ಕೆ ‘ಆಹಾರ ಸುರಕ್ಷತೆ’ ಮಹತ್ವದ್ದಾಗಿದೆ.

* ಭಾರತ ಹೊಣೆಯಲ್ಲ

ಮಾತುಕತೆ ಕುಸಿದು ಬೀಳಲು ಭಾರತ ಕಾರಣ ಎಂದು ಗೂಬೆ ಕೂರಿಸದಿರುವುದು ಈ ಬಾರಿಯ ಇನ್ನೊಂದು ವಿಶೇಷ. ಭಾರತವು ರಾಜಿಗೆ ಸಾಧ್ಯವಿಲ್ಲದ ಮತ್ತು ನಿಷ್ಠುರ ನಿಲುವು ತಳೆಯುವುದರಿಂದ ವಿವಾದಾತ್ಮಕ ವಿಷಯಗಳಲ್ಲಿ ಒಮ್ಮತಾಭಿಪ್ರಾಯಕ್ಕೆ ಬರಲು ಸಾಧ್ಯವಾಗುತ್ತಿಲ್ಲ ಎಂದು ಈ ಹಿಂದೆ ಆರೋಪಿಸಲಾಗುತ್ತಿತ್ತು. ಈ ಮೊದಲು ಭಾರತಕ್ಕೆ ‘ಖಳನಾಯಕ’ನ ಪಟ್ಟ ಕಟ್ಟಲಾಗುತ್ತಿತ್ತು. ಈ ಬಾರಿ ಈ ಕುಖ್ಯಾತಿಯು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಪಾಲಾಗಿದೆ.

* ಭಾರತದ ಮುಂದಿನ ನಡೆ ಏನು?

ಆಹಾರ ಸುರಕ್ಷತೆ ಮತ್ತು ಇತರ ವಿಷಯಗಳಲ್ಲಿ ಬೆಂಬಲ ಪಡೆಯಲು ಭಾರತವು ಫೆಬ್ರುವರಿಯಲ್ಲಿ ಸಂಘಟನೆಯ 40 ದೇಶಗಳ ಸಭೆ ನಡೆಸಲು ನಿರ್ಧರಿಸಿದೆ.

ಹೂಡಿಕೆ ಸೌಲಭ್ಯ ಉತ್ತೇಜನ, ಇ–ಕಾಮರ್ಸ್‌ ನಿಯಮ, ಲಿಂಗ ಸಮಾನತೆ ಉತ್ತೇಜನ ಮತ್ತು ಮೀನುಗಾರಿಕೆ ಸಬ್ಸಿಡಿ ಕಡಿತ ಜಾರಿಗಾಗಿ ಶ್ರೀಮಂತ ದೇಶಗಳು ಕೂಟ ರಚಿಸಿಕೊಳ್ಳಲು ಮುಂದಾಗಿವೆ. ಇದಕ್ಕೆ ಪರ್ಯಾಯವಾಗಿ ಭಾರತವು ದೆಹಲಿಯಲ್ಲಿ ಈ ಸಭೆ ನಡೆಸಲು ಉದ್ದೇಶಿಸಿದೆ. ಕೃಷಿ ಸಂಬಂಧಿ ವಿಷಯಗಳಿಗೆ ಒತ್ತು ನೀಡಲು ಪಟ್ಟು ಹಿಡಿದಿರುವ ಭಾರತವು ವ್ಯಾಪಾರಕ್ಕೆ ನೇರವಾಗಿ ಸಂಬಂಧಿಸಿರದ ವಿಷಯಗಳನ್ನು ಸಂಧಾನದ ಮೇಜಿಗೆ ತರುವುದರ ವಿರುದ್ಧ ದನಿ ಎತ್ತುತ್ತಿದೆ.

***

ನಮ್ಮ ಪ್ರಯತ್ನಗಳ ಹೊರತಾಗಿಯೂ ಸದಸ್ಯ ದೇಶಗಳು ಮಹತ್ವದ ನಿರ್ಧಾರಕ್ಕೆ ಬರುವಲ್ಲಿ ವಿಫಲಗೊಂಡಿವೆ. ಇದರಿಂದ ನಮಗೆ ತೀವ್ರ ನಿರಾಶೆಯಾಗಿದೆ.
– ರೋಬರ್ಟೊ ಅಜೆವೆಡೊ , ಡಬ್ಲ್ಯುಟಿಒ ಮಹಾ ನಿರ್ದೇಶಕ

***

ನಾವಿಲ್ಲಿ ಮುಕ್ತ ಮನಸ್ಸಿನಿಂದ ಬಂದಿದ್ದೇವು. ಕೆಲ ದೇಶಗಳ ಹಠಮಾರಿತತನದಿಂದಾಗಿ ವಿದ್ಯಮಾನಗಳು ನಿರೀಕ್ಷೆಯಂತೆ ನಡೆಯಲಿಲ್ಲ
ಸುರೇಶ್‌ ಪ್ರಭು ವಾಣಿಜ್ಯ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT