7

ಸುಭದ್ರ ಭವಿಷ್ಯಕ್ಕೆ ಮ್ಯೂಚುವಲ್‌ ಫಂಡ್‌

Published:
Updated:
ಸುಭದ್ರ ಭವಿಷ್ಯಕ್ಕೆ ಮ್ಯೂಚುವಲ್‌ ಫಂಡ್‌

ಕಷ್ಟಪಟ್ಟು ಸಂಪಾದಿಸಿದ ಹಣದಲ್ಲಿ ಒಂದಿಷ್ಟನ್ನು ಎಲ್ಲಾದರೂ ಹೂಡಿಕೆ ಮಾಡಿ, ಅದು ವೃದ್ಧಿಯಾಗುವಂತೆ ನೋಡಿಕೊಂಡು ನಮ್ಮ ಭವಿಷ್ಯವನ್ನು ಭದ್ರಪಡಿಸಿಕೊಳ್ಳಬೇಕು ಎಂಬುದು ಪ್ರತಿಯೊಬ್ಬರ ಬಯಕೆ. ಯೋಜನಾಬದ್ದ ಹೂಡಿಕೆಯಿಂದ ಈ ಕನಸನ್ನು ನನಸಾಗಿಸಲೂ ಸಾಧ್ಯ.

ಯಾವುದೇ ಹೂಡಿಕೆಯು ಕೆಲ ನಿರ್ದಿಷ್ಟ ಗುಣಲಕ್ಷಣಗಳನ್ನು  ಹೊಂದಿರಬೇಕು ಎಂದು ಪ್ರತಿಯೊಬ್ಬ ಹೂಡಿಕೆದಾರ ನಿರೀಕ್ಷಿಸುತ್ತಾನೆ. ಆದರೆ, ಒಂದೇ ಹೂಡಿಕೆಯಿಂದ ಇವೆಲ್ಲವನ್ನೂ ಈಡೇರಿಸಿಕೊಳ್ಳುವುದು ಅಸಾಧ್ಯ. ಬ್ಯಾಂಕ್‌ ಠೇವಣಿಗಳು ನಿಗದಿತವಾಗಿ ಆದಾಯ ಕೊಡಬಹುದು. ಆದರೆ ಹೂಡಿರುವ ಮೂಲ ಹಣ ವೃದ್ಧಿಯಾಗುವುದಿಲ್ಲ. ಚಿನ್ನ ಅಥವಾ ಭೂಮಿಯಲ್ಲಿ ಮಾಡಿರುವ ಹೂಡಿಕೆ ದೀರ್ಘಾವಧಿಯಲ್ಲಿ ಒಳ್ಳೆಯ ಆದಾಯ ತರಬಲ್ಲದು, ಆದರೆ ನಿಗದಿತವಾಗಿ ಆದಾಯ ತರಲಾರವು. ಈ ಹೂಡಿಕೆಗೆ ತೆರಿಗೆ ವಿನಾಯ್ತಿಯೂ ಇಲ್ಲ. ರಿಯಲ್‌ ಎಸ್ಟೇಟ್‌ ಭಾರಿ ಪ್ರಮಾಣದ ಹೂಡಿಕೆಯನ್ನು ನಿರೀಕ್ಷಿಸುತ್ತದೆ. ಅಲ್ಲದೆ ಸುಲಭವಾಗಿ ಅದನ್ನು ನಗದಾಗಿ ಪರಿವರ್ತಿಸಲು ಸಾಧ್ಯವಾಗುವುದಿಲ್ಲ. ಆದರೆ ಷೇರು, ಮ್ಯೂಚುವಲ್‌ ಫಂಡ್‌, ಬ್ಯಾಲೆನ್ಸ್ಡ್‌ ಫಂಡ್‌ಗಳ ಹೂಡಿಕೆ ದೀರ್ಘಾವಧಿಯಲ್ಲಿ ಹೂಡಿಕೆದಾರರ ಎಲ್ಲ ನಿರೀಕ್ಷೆಗಳನ್ನೂ ಈಡೇರಿಸಬಲ್ಲವು (ಸಣ್ಣಪುಟ್ಟ ಏರುಪೇರುಗಳು ಇದ್ದೇ ಇರುತ್ತವೆ). ಆದರೆ, ಈ ಹೂಡಿಕೆ ವಿಧಾನದ ಬಗ್ಗೆ ಜನರಿಗೆ ತಿಳಿದಿರುವುದು ಅತ್ಯಲ್ಪ.

ಹೂಡಿಕೆ ಮಾಡಲು ಇಚ್ಛಿಸುವವರಿಗೆ ನೂರಾರು ಆಯ್ಕೆಗಳಿವೆ. ಬ್ಯಾಂಕ್‌ ಠೇವಣಿ, ಪರಿವರ್ತಿಸಲಾಗದ ಸಾಲಪತ್ರಗಳು, ಚಿನ್ನ, ಸಾರ್ವಜನಿಕ ಭವಿಷ್ಯ ನಿಧಿ, (ಪಿಪಿಎಫ್‌) ಅಂಚೆಕಚೇರಿ ಠೇವಣಿಗಳು, ಷೇರು, ರಾಷ್ಟ್ರೀಯ ಉಳಿತಾಯ ಯೋಜನೆಗಳು, ಮ್ಯೂಚುವಲ್‌ ಫಂಡ್‌, ರಾಷ್ಟ್ರೀಯ ಪಿಂಚಣಿ ಯೋಜನೆ, ರಿಯಲ್‌ ಎಸ್ಟೇಟ್‌ ಇನ್‌ವೆಸ್ಟ್‌ಮೆಂಟ್‌ ಟ್ರಸ್ಟ್‌ (ಆರ್‌ಇಐಟಿಎಸ್‌), ಇನ್‌ಫ್ರಾಸ್ಟ್ರಕ್ಚರ್‌ ಇನ್‌ವೆಸ್ಟ್‌ಮೆಂಟ್‌ ಟ್ರಸ್ಟ್‌ (ಐಎನ್‌ವಿಐಟಿಎಸ್‌)... ಹೀಗೆ ಆಯ್ಕೆಗಳು ಹಲವಾರು ಇವೆ.

ಬ್ಯಾಂಕ್‌ ಠೇವಣಿ, ಪಿಪಿಎಫ್‌, ರಾಷ್ಟ್ರೀಯ ಉಳಿತಾಯ ಯೋಜನೆ (ಎನ್‌ಎಸ್‌ಸಿ)ಗಳಲ್ಲಿ ಹೂಡಿಕೆ ಮಾಡಿದರೆ ಚಿಂತೆ ಕಡಿಮೆ. ಆದರೆ ಇದರಿಂದ ಬರುವ ಆದಾಯ ಹೆಚ್ಚಿಗೆ ಇಲ್ಲ. ಈಚೆಗಂತೂ ಈ ಹೂಡಿಕೆಗಳ ಮೇಲಿನ ಬಡ್ಡಿ ದರ ಕಡಿಮೆ ಆಗುತ್ತಲೇ ಇದೆ. ‘ಆರ್‌ಇಐಟಿಎಸ್‌’ ಹಾಗೂ ‘ಐಎನ್‌ವಿಐಟಿಎಸ್‌’ಗಳು ಇನ್ನೂ ಅಷ್ಟು ಜನಪ್ರಿಯವಾಗಿಲ್ಲ. ಆದರೆ ನೇರವಾಗಿ ಅಥವಾ ಮ್ಯೂಚುವಲ್‌ ಫಂಡ್‌ಗಳ ಮೂಲಕ ಷೇರುಗಳಲ್ಲಿ ಹೂಡಿಕೆ ಮಾಡಿದರೆ ಹೂಡಿಕೆದಾರರ ಎಲ್ಲ ನಿರೀಕ್ಷೆಗಳು ಸಾಕಾರವಾಗುವ ಸಾಧ್ಯತೆ ಇದೆ. ಇಲ್ಲಿ ಅಲ್ಪಾವಧಿಯ ಹೂಡಿಕೆಯಲ್ಲಿ ನಷ್ಟವಾಗುವ ಸಾಧ್ಯತೆ ಇದೆ. ಆದರೆ, ದೀರ್ಘಾವಧಿಯಲ್ಲಿ ಇದು ಒಳ್ಳೆಯ ಹೂಡಿಕೆ ಎನಿಸುವ ಸಾಧ್ಯತೆಯೇ ಹೆಚ್ಚು.

ಷೇರುಗಳಲ್ಲಿ ಮಾಡಿರುವ ದೀರ್ಘಕಾಲೀನ ಹೂಡಿಕೆ ಇತರ ಎಲ್ಲ ಹೂಡಿಕೆಗಳಿಗಿಂತ ಹೆಚ್ಚಿನ ಆದಾಯ ತಂದುಕೊಡುತ್ತದೆ ಎಂಬುದನ್ನು ಇತಿಹಾಸ ಸಾರಿ ಹೇಳುತ್ತದೆ. 1979ರಲ್ಲಿ ಮುಂಬೈ ಷೇರು ಮಾರುಕಟ್ಟೆಯಲ್ಲಿ ಮಾಡಿರುವ ₹ 10 ಸಾವಿರ ಹೂಡಿಕೆಗೆ ಇಂದಿನ ಮಾರುಕಟ್ಟೆ ಮೌಲ್ಯ (ಡಿವಿಡೆಂಡ್‌ ಬಿಟ್ಟು) ಕಡಿಮೆ ಎಂದರೂ ₹ 33 ಲಕ್ಷ ಇದೆ (1979ರಲ್ಲಿ 100 ಅಂಶದಲ್ಲಿದ್ದ ಮುಂಬೈ ಷೇರು ಸೂಚ್ಯಂಕ ಇಂದು 33,000ಕ್ಕೆ ತಲುಪಿದೆ). ಅದೇ 1979ರಲ್ಲಿ ಬ್ಯಾಂಕ್‌ನಲ್ಲಿ ಠೇವಣಿಯಾಗಿಟ್ಟಿದ್ದ ₹ 10 ಸಾವಿರ ಇಂದು ಗರಿಷ್ಠವೆಂದರೆ ₹ 1.50ಲಕ್ಷ ಆಗಿರಬಹುದು ಅಷ್ಟೇ.

ಷೇರು ಮಾರುಕಟ್ಟೆ ಹಾಗೂ ಮ್ಯೂಚುವಲ್‌ ಫಂಡ್‌ ಹೂಡಿಕೆಯ ಬಹುಮುಖ್ಯವಾದ ಆಕರ್ಷಣೆ ಎಂದರೆ ಇವುಗಳಿಗೆ ಇರುವ ತೆರಿಗೆ ವಿನಾಯಿತಿ. ಷೇರುಗಳಿಂದ ಬರುವ ವಾರ್ಷಿಕ ₹ 10ಲಕ್ಷದ ವರೆಗಿನ ಲಾಭಾಂಶಕ್ಕೆ ತೆರಿಗೆ ಇರುವುದಿಲ್ಲ. ಷೇರುಗಳಲ್ಲಿ ಹೂಡಿಕೆ ಮಾಡುವ ಮ್ಯೂಚುವಲ್‌ ಫಂಡ್‌ ಹಾಗೂ ಬ್ಯಾಲೆನ್ಸ್ಡ್‌ ಫಂಡ್‌ಗಳಿಂದ ಬರುವ ಪೂರ್ತಿ ಲಾಭಾಂಶಕ್ಕೆ ತೆರಿಗೆ ವಿನಾಯ್ತಿ ಇದೆ. ಇದಲ್ಲದೆ ಇವುಗಳಲ್ಲಿ ನಡೆಸಿದ ದೀರ್ಘಾವಧಿ ಹೂಡಿಕೆಯ ಬಂಡವಾಳ ಗಳಿಕೆ ಮೇಲಿನ ತೆರಿಗೆಗೂ ವಿನಾಯ್ತಿ ಇರುವುದು ಇನ್ನೊಂದು ಆಕರ್ಷಕ ಅಂಶವಾಗಿದೆ. ಕನಿಷ್ಠ ಒಂದು ವರ್ಷದ ಕಾಲ ತಮ್ಮಲ್ಲಿಯೇ ಇಟ್ಟುಕೊಂಡ ಷೇರುಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುವಾಗ ಹೂಡಿಕೆದಾರರಿಗೆ ಬರುವ ಲಾಭವೇ ದೀರ್ಘಾವಧಿ ಬಂಡವಾಳ ಗಳಿಕೆ. ಮಾರುಕಟ್ಟೆ ಆಧಾರಿತ ಉಳಿತಾಯ ಯೋಜನೆಗಳ ಮೂಲಕ ಹೂಡಿಕೆ ಮಾಡಿದ್ದರೆ ‘80ಸಿ’ ಅಡಿ ಆದಾಯ ತೆರಿಗೆ ವಿನಾಯ್ತಿಯೂ ಲಭಿಸುವುದು. ಈ ಎಲ್ಲ ಕಾರಣಗಳಿಂದ ಮ್ಯೂಚುವಲ್‌ ಫಂಡ್‌ ಹೂಡಿಕೆ ಹೆಚ್ಚು ಆಕರ್ಷಕವಾಗಿ ಕಾಣಿಸುತ್ತದೆ.

ಮ್ಯೂಚುವಲ್‌ ಫಂಡ್‌ಗಳೇ ಯಾಕೆ?

ದೀರ್ಘಾವಧಿಯಲ್ಲಿ ಷೇರು ಮಾರುಕಟ್ಟೆಯೇ ಅತಿ ಹೆಚ್ಚು ಲಾಭ ತಂದುಕೊಡುತ್ತದೆ ಎಂಬುದನ್ನು ನೂರು ವರ್ಷಗಳ ಆರ್ಥಿಕ ಇತಿಹಾಸ ಸ್ಪಷ್ಟವಾಗಿ ಹೇಳುತ್ತದೆ. ಆದರೆ, ನೇರವಾಗಿ ಷೇರುಗಳಲ್ಲಿ ಹೂಡಿಕೆ ಮಾಡಲು ಬೇಕಾದಷ್ಟು ಜ್ಞಾನ ಹಾಗೂ, ಮಾರುಕಟ್ಟೆ ಮೇಲೆ ಸತತವಾಗಿ ನಿಗಾ ಇಡಲು ಬೇಕಾದಷ್ಟು ಸಮಯಾವಕಾಶ ಎಲ್ಲರಲ್ಲೂ ಇರುವುದಿಲ್ಲ. ಆದ್ದರಿಂದ ಮ್ಯೂಚುವಲ್‌ ಫಂಡ್‌ಗಳ ಮೂಲಕ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದು ಒಳ್ಳೆಯ ಆಯ್ಕೆ.

ಸಿಪ್‌’ ಆಯ್ಕೆ ಏಕೆ?

ಮ್ಯೂಚುವಲ್‌ ಫಂಡ್‌ಗಳಲ್ಲಿ ಒಂದೇ ಬಾರಿಗೆ ಅಥವಾ ಕಂತುಗಳಲ್ಲಿ ಹಣವನ್ನು ತುಂಬಲು ಅವಕಾಶ ಇದೆ. ವ್ಯವಸ್ಥಿತ ಹೂಡಿಕೆ ಯೋಜನೆ ‘ಸಿಪ್‌’ (ಸಿಸ್ಟಮೆಟಿಕ್‌ ಇನ್‌ವೆಸ್ಟ್‌ಮೆಂಟ್‌ ಪ್ಲ್ಯಾನ್‌) ಒಂದು ಒಳ್ಳೆಯ ಹೂಡಿಕೆ ವಿಧಾನ. ಇದರಲ್ಲಿ ಹೂಡಿಕೆದಾರರು ವಾರಕ್ಕೊಮ್ಮೆ, ತಿಂಗಳು ಅಥವಾ ತ್ರೈಮಾಸಿಕದಲ್ಲಿ ಒಮ್ಮೆಯಂತೆ ಹೂಡಿಕೆ ಮಾಡಬಹುದು. ಪ್ರತಿ ತಿಂಗಳಲ್ಲೂ ಹೂಡಿಕೆ ಮಾಡುವುದು ಲಾಭದಾಯಕ. ಈ ರೀತಿ ವ್ಯವಸ್ಥಿತವಾಗಿ ನಿಗದಿತ ಅವಧಿಯಲ್ಲಿ ಹೂಡಿಕೆ ಮಾಡುವುದರಿಂದ ಯೂನಿಟ್‌ ದರ ಕಡಿಮೆ ಆದಾಗ ಹೆಚ್ಚು ಯೂನಿಟ್‌ಗಳ ಖರೀದಿ ಸಾಧ್ಯವಾಗಿ ಸರಾಸರಿ ಹೂಡಿಕೆ ವೆಚ್ಚ ಕಡಿಮೆ ಆಗುತ್ತದೆ.

ಕಳೆದ 37 ವರ್ಷಗಳಲ್ಲಿ ಭಾರತದಲ್ಲಿ ಬ್ಯಾಂಕ್‌ ಠೇವಣಿಗಳಿಂದ ಬಂದ ಸರಾಸರಿ ವಾರ್ಷಿಕ ಆದಾಯ ಶೇ 9ರಷ್ಟಿದ್ದರೆ, ಚಿನ್ನದ ಮೇಲಿನ ಹೂಡಿಕೆಯಿಂದ ಬಂದ ಆದಾಯ ಶೇ 9ಕ್ಕೂ ಕಡಿಮೆ. ಷೇರುಗಳಲ್ಲಿ ಮಾಡಿರುವ ಹೂಡಿಕೆಯಿಂದ ಬಂದ ಆದಾಯ (ಷೇರು ಸೂಚ್ಯಂಕದ ಅಂಕಿಅಂಶಗಳ ಪ್ರಕಾರ) ಶೇ 16ರ ಆಸುಪಾಸಿನಲ್ಲಿದೆ. ಮ್ಯೂಚುವಲ್‌ ಫಂಡ್‌ಗಳ ಆದಾಯವೂ ಸರಿಸುಮಾರು ಇಷ್ಟೇ ಇದೆ.

ಸರಿಯಾದ ಫಂಡ್‌ ಆಯ್ಕೆ

ಒಳ್ಳೆಯ ಮ್ಯೂಚುವಲ್‌ ಫಂಡ್‌ ಆಯ್ಕೆ ಅಷ್ಟು ಸುಲಭದ ಕೆಲಸವಲ್ಲ. ಇದು ಸ್ವಲ್ಪ ಅನುಭವವನ್ನು ನಿರೀಕ್ಷಿಸುತ್ತದೆ. ಬೇರೆ ಬೇರೆ ಫಂಡ್‌ಗಳು ಕೊಡುವ ಆದಾಯದ ಪ್ರಮಾಣ ಬೇರೆ ಬೇರೆಯಾಗಿರುತ್ತದೆ. ಕಳೆದ 20 ವರ್ಷಗಳ ಅವಧಿಯಲ್ಲಿ ಒಳ್ಳೆಯ ಸಾಧನೆ ಮಾಡಿರುವ, ಅತ್ಯುತ್ತಮ ಫಂಡ್‌ ಎಂಬ ಹೆಗ್ಗಳಿಕೆಗೆ ಪಾತ್ರವಾದ ‘ಎಚ್‌ಡಿಎಫ್‌ಸಿ ಟ್ಯಾಕ್ಸ್‌ ಸೇವರ್‌’ ಶೇ 25.14ರಷ್ಟು ಆದಾಯ ದಾಖಲಿಸಿದ್ದರೆ, ಕನಿಷ್ಠ ಸಾಧನೆ ಮಾಡಿರುವ ಫಂಡ್‌ ಸಹ ಹೂಡಿಕೆದಾರರಿಗೆ ಶೇ 11.38ರಷ್ಟು ಆದಾಯ ತಂದುಕೊಟ್ಟಿದೆ. ಈ ಅವಧಿಯಲ್ಲಿ 20 ಫಂಡ್‌ಗಳು ಶೇ 15ಕ್ಕೂ ಹೆಚ್ಚಿನ ಆದಾಯ ದಾಖಲಿಸಿವೆ. ಅದರಲ್ಲೂ 9 ಫಂಡ್‌ಗಳು ಶೇ 20ಕ್ಕೂ ಹೆಚ್ಚು ಆದಾಯ ಗಳಿಸಿವೆ.

ಇದನ್ನೇ ಆಧಾರವಾಗಿಟ್ಟು ಲೆಕ್ಕ ಹಾಕಿದರೆ, 20 ವರ್ಷಗಳ ಅವಧಿಗೆ (1997 ರಿಂದ 2017) ‘ಸಿಪ್‌’ ಮೂಲಕ ತಲಾ ₹ 5000ದಂತೆ ಹೂಡಿಕೆ ಮಾಡಿದ್ದರೆ ಈಗ ಅದರ ಮೊತ್ತ ₹ 2.37ಕೋಟಿ ಆಗುತ್ತಿತ್ತು. ಅದೇ, ಕನಿಷ್ಠ ಆದಾಯ ತರುವ ಫಂಡ್‌ನಲ್ಲಿ ಹೂಡಿಕೆ ಮಾಡಿದ್ದರೆ ಮೊತ್ತ ₹ 42.68 ಲಕ್ಷ ಆಗುತ್ತಿತ್ತು. ಆದ್ದರಿಂದ ಸರಿಯಾದ ಫಂಡ್‌ ಆಯ್ಕೆ ಮಾಡುವುದು ಮುಖ್ಯ. ಹೂಡಿಕೆದಾರರಿಗೆ ಅನುಭವ ಇದ್ದರೆ ಚಿಂತಿಸಿ, ತಾವಾಗಿಯೇ ನಿರ್ಧಾರ ಕೈಗೊಳ್ಳಬಹುದು. ಇಲ್ಲದಿದ್ದರೆ ತಜ್ಞರ ಸಲಹೆ ಪಡೆಯುವುದು ಸೂಕ್ತ.

ಕೆಲವು ಮೊಟ್ಟೆಗಳು ಬೇರೆ ಬುಟ್ಟಿಯಲ್ಲಿರಲಿ

ನಮ್ಮ ಸಾಂಪ್ರದಾಯಿಕ ಪದ್ಧತಿಯು ಎಲ್ಲಾ ಮೊಟ್ಟೆಗಳನ್ನು ಒಂದೇ ಬುಟ್ಟಿಯಲ್ಲಿಡುವುದನ್ನು ನಿಷೇಧಿಸುತ್ತದೆ. ಅದರಂತೆ ಹಣವನ್ನು ಬೇರೆ ಬೇರೆ ಫಂಡ್‌ಗಳಲ್ಲಿ ಹೂಡಿಕೆ ಮಾಡುವುದು ಒಳ್ಳೆಯದು. ನಷ್ಟ ತಾಳಿಕೆಯ ಸಾಮರ್ಥ್ಯಕ್ಕೆ ಅನುಗುಣವಾಗಿ ತಮಗೆ ಸರಿಹೊಂದುವ ಫಂಡ್‌ ಆಯ್ಕೆಮಾಡಿ, ‘ಸಿಪ್‌’ ಮೂಲಕ ಹೂಡಿಕೆ ಮಾಡುವುದು ಒಳ್ಳೆಯ ಮಾರ್ಗ. ಆಯ್ಕೆಗೆ ನೂರಾರು ಫಂಡ್‌ಗಳು ಇವೆ. ಅವುಗಳ ಹಿಂದಿನ ಸಾಧನೆಗಳನ್ನೂ ಪರಿಗಣಿಸಿ, ಸರಿಯಾದ್ದನ್ನು ಆಯ್ಕೆ ಮಾಡಬೇಕು.

ಜಿಯೊಜಿತ್‌ ಸಂಸ್ಥೆ ತನ್ನ 30 ವರ್ಷಗಳ ಅನುಭವದಲ್ಲಿ ಸಾಕಷ್ಟು ಸಂಶೋಧನೆ ನಡೆಸಿ, ತನ್ನ ಗ್ರಾಹಕರಿಗೆ ಹೂಡಿಕೆಗೆ ಸರಿಯಾದ ಸಲಹೆಗಳನ್ನು ನೀಡುತ್ತ, ತಮ್ಮ ಗುರಿ ಸಾಧನೆಗೆ ಸಹಕಾರ ನೀಡುತ್ತ ಬಂದಿದೆ. ದೇಶದಲ್ಲಿ ಲಭ್ಯವಿರುವ ಮ್ಯೂಚುವಲ್‌ ಫಂಡ್‌ಗಳ ಬಗ್ಗೆ ಸಮಗ್ರ ಅಧ್ಯಯನ ನಡೆಸಿರುವ ಜಿಯೊಜಿತ್‌ ಸಂಸ್ಥೆ, 56 ಫಂಡ್‌ಗಳಲ್ಲಿ ಮಾತ್ರ ಹೂಡಿಕೆ ಮಾಡುವಂತೆ ತನ್ನ ಗ್ರಾಹಕರಿಗೆ ಸಲಹೆ ನೀಡುತ್ತದೆ.

***

ಹೂಡಿಕೆಯ ನಿರೀಕ್ಷೆಗಳು

* ಹೂಡಿರುವ ಹಣ ನಿಗದಿತವಾಗಿ ಆದಾಯ ತರುತ್ತಿರಬೇಕು

* ಯಾವುದರಲ್ಲಿ ಹೂಡಿಕೆ ಮಾಡಿರುವೆವೋ ಆ ವಸ್ತುವಿನ ಮೌಲ್ಯ ವೃದ್ಧಿ ಆಗುತ್ತಿರಬೇಕು

* ಅಗತ್ಯವೆನಿಸಿದಾಗ ಸುಲಭವಾಗಿ ನಗದೀಕರಣ ಸಾಧ್ಯವಾಗಬೇಕು

* ಹೂಡಿಕೆಗೆ ಭದ್ರತೆ ಇರಬೇಕು

* ತೆರಿಗೆ ಉಳಿತಾಯ ಸಾಧ್ಯವಾಗಬೇಕು

***

ಮ್ಯೂಚುವಲ್‌ ಫಂಡ್‌ಗಳೆಂದರೇನು?

ಸಮಾನ ಆರ್ಥಿಕ ಗುರಿ ಹೊಂದಿರುವ ಹೂಡಿಕೆದಾರರಿಂದ ಹಣವನ್ನು ಸಂಗ್ರಹಿಸಿ, ಆ ಹಣವನ್ನು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ವ್ಯವಸ್ಥೆಯೇ ಈ ಮ್ಯೂಚುವಲ್‌ ಫಂಡ್‌ಗಳು. ಹೂಡಿಕೆದಾರರ ಅಗತ್ಯ ಹಾಗೂ ಫಂಡ್‌ನ ಹೂಡಿಕೆ ಯೋಜನೆಗಳಿಗೆ ಅನುಗುಣವಾಗಿ ವೃತ್ತಿಪರ ಫಂಡ್‌ ಮ್ಯಾನೇಜರ್‌ಗಳು ಈ ಹಣವನ್ನು ಷೇರು, ಬಾಂಡ್‌, ಸಾಲಪತ್ರ ಮುಂತಾದವುಗಳಲ್ಲಿ ಹೂಡಿಕೆ ಮಾಡುತ್ತಾರೆ.

***

(ಲೇಖಕ ಜಿಯೊಜಿತ್‌ ಫೈನಾನ್ಸ್‌ ಸಂಸ್ಥೆಯ ಮುಖ್ಯ ಹೂಡಿಕೆ ಪರಿಣತ)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry