7

ಉದ್ಯೋಗಕ್ಕಾಗಿ ಎಚ್ಚೆತ್ತ ಯುವಜನರು

Published:
Updated:

ಅದೊಂದು ಕಾಲವಿತ್ತು, ‘ಉದ್ಯೋಗ ಸಿಗೋದಕ್ಕೂ ಅದೃಷ್ಟ ಮಾಡಿರಬೇಕು, ನಮ್ಮ ಹಣೆಬರಹನೇ ಇಷ್ಟು, ಪೂರ್ವಜನ್ಮದ ಕರ್ಮಫಲ, ಕೌಟುಂಬಿಕ ಹಿನ್ನೆಲೆ ಸರಿಯಿಲ್ಲ, ನನ್ನಲ್ಲಿ ಸರಿಯಾದ ಪ್ರತಿಭೆ ಇಲ್ಲ, ದೇವರು ನನ್ನ ಕಡೆ ಇನ್ನೂ ಕಣ್ಣು ಬಿಟ್ಟು ನೋಡಲಿಲ್ಲ...' ಎಂಬೆಲ್ಲ ಅನಿಸಿಕೆಗಳು ಉದ್ಯೋಗಕ್ಕಾಗಿ ಹಂಬಲಿಸಿ ಬೇಸತ್ತ ಮನಸ್ಸುಗಳಿಂದ ಹೊರಹೊಮ್ಮುತ್ತಿದ್ದವು. ಇಂದು ಕಾಲ ಬದಲಾಗಿದೆ. ಅಲ್ಲ... ಈ ಕಾಲದ ಯುವಜನರ ಮನಸ್ಸು ಬದಲಾಗಿದೆ ಎನ್ನುವುದು ಹೆಚ್ಚು ಸರಿಯಾದೀತು. ಅದಕ್ಕೇ ಅವರು, ‘ನಮ್ಮ ಅರ್ಹತೆಗೆ ತಕ್ಕ ಉದ್ಯೋಗಗಳು ಸೃಷ್ಟಿಯಾಗದ ಕಾರಣ ನಮಗೆ ನಿರುದ್ಯೋಗದ ಬಿಸಿ ತಟ್ಟುತ್ತಿದೆ’ ಎಂದು ಪ್ರತಿಭಟನೆಯ ಫಲಕ ಹಿಡಿದು ಆಳುವವರ ಎದುರು ನಿಂತಿದ್ದಾರೆ.

ಕಳೆದ ವಾರ ಕಾಂಗ್ರೆಸ್ ಕಚೇರಿ ಮುಂದೆ ಅನೇಕ ಯುವ ಮನಸ್ಸುಗಳು ನಿಂತು ‘ನೀವು ಸೃಷ್ಟಿಸಿದ ಉದ್ಯೋಗಗಳ ಲೆಕ್ಕ ಕೊಡಿ’ ಎಂದು ಕೇಳಿದರು. ಜೊತೆಗೆ ‘ನೀವು ಚುನಾವಣಾ ಪ್ರಣಾಳಿಕೆಯಲ್ಲಿ ಕೊಟ್ಟಿದ್ದ ಭರವಸೆಯನ್ನೊಮ್ಮೆ ನೆನಪಿಸಿಕೊಳ್ಳಿ’ ಎಂದರು. ಹಾಗೆಯೇ ‘ಉದ್ಯೋಗ ಸೃಷ್ಟಿಯ ಸಾಧ್ಯಾಸಾಧ್ಯತೆಗಳ ಬಗ್ಗೆ ನಾವು ಹೇಳುವುದರ ಕಡೆ ಕಿವಿಗೊಡಿ’ ಎಂದು ಹೊಸ ಹೋರಾಟದ ಅಧ್ಯಾಯವೊಂದನ್ನು ಪ್ರಾರಂಭಿಸಿದರು.

ಆಳುವ ವರ್ಗ ಇದನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಏಕೆಂದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಲಕ್ಷ, ಕೋಟಿ ಲೆಕ್ಕದ ಉದ್ಯೋಗ ಸೃಷ್ಟಿಯ ಭರವಸೆ ನೀಡಿದ್ದವು. ಭರವಸೆಗೆ ಹೋಲಿಸಿದರೆ ಅತಿ ಕನಿಷ್ಠ ಎನ್ನಬಹುದಾದಷ್ಟು ಉದ್ಯೋಗಗಳನ್ನು ಸೃಷ್ಟಿಸಿರುವ ಸರ್ಕಾರಗಳು, ಈಗ ಅದನ್ನೇ ಸಾಧನೆಯೆಂಬಂತೆ ಬಿಂಬಿಸಿಕೊಳ್ಳುತ್ತಿವೆ. ಇದನ್ನು ಪ್ರಶ್ನಿಸುತ್ತಿರುವ ಇಂದಿನ ವಿದ್ಯಾವಂತ ವರ್ಗ ‘ಉದ್ಯೋಗ ನಮ್ಮ ಹಕ್ಕು’ ಎಂಬುದನ್ನು ಎದೆತಟ್ಟಿ ಹೇಳುತ್ತಿದೆ.

ಈ ದೇಶದಲ್ಲಿ ದಿನದಿಂದ ದಿನಕ್ಕೆ ಸರ್ಕಾರಿ ಉದ್ಯೋಗಗಳು ಕಣ್ಮರೆಯಾಗುತ್ತಿವೆ. ಉದ್ಯೋಗ ಬಯಸುತ್ತಿರುವ ಯುವಜನರ ಸಂಖ್ಯೆ ದ್ವಿಗುಣಗೊಳ್ಳುತ್ತಿದೆ. ಕೆಲವೇ ಉದ್ಯೋಗಗಳಿಗೆ ಲಕ್ಷಾಂತರ ನಿರುದ್ಯೋಗಿಗಳು ಅರ್ಜಿ ಸಲ್ಲಿಸುತ್ತಾರೆ (ಇದಕ್ಕೆ ಪ್ರವೇಶ ಪರೀಕ್ಷೆಯ ಮಾನದಂಡ ಬೇರೆ). ಉದಾಹರಣೆಗೆ 2015ರಲ್ಲಿ ಕರ್ನಾಟಕ ಲೋಕಸೇವಾ ಆಯೋಗವು  ಎಫ್.ಡಿ.ಎ, ಎಸ್.ಡಿ.ಎ, ಬ್ಯಾಕ್‍ಲಾಗ್, ಕೆ.ಎಫ್.ಸಿ.ಎಸ್.ಸಿ.ಯ ಹಿರಿಯ ಮತ್ತು ಕಿರಿಯ ಸಹಾಯಕರ ಒಟ್ಟು 2463 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿತು. ಇದಕ್ಕೆ ಬಂದ ಒಟ್ಟು ಅರ್ಜಿಗಳ ಸಂಖ್ಯೆ 18.85 ಲಕ್ಷ. ಇದು ಈ ದೇಶದ ಉದ್ಯೋಗ ಸೃಷ್ಟಿ ಮತ್ತು ನಿರುದ್ಯೋಗದ ಸಮಸ್ಯೆಗೆ ಹಿಡಿದ ಕನ್ನಡಿ. ಇನ್ನು ಡಿ.ಇಡಿ., ಬಿ.ಇಡಿ., ಪದವೀಧರರಂತೂ ಕರ್ನಾಟಕ ಒಂದರಲ್ಲೇ 5 ಲಕ್ಷಕ್ಕೂ ಹೆಚ್ಚಿದ್ದಾರೆ. ಆಗೊಮ್ಮೆ ಈಗೊಮ್ಮೆ 2000 ದಿಂದ 3000 ಆಸುಪಾಸಿನಲ್ಲಿ ಶಿಕ್ಷಕರನ್ನು ನೇಮಿಸಿಕೊಳ್ಳುವ ಸರ್ಕಾರಗಳು ಕಾಲೇಜುಗಳೆಂಬ ನಿರುದ್ಯೋಗದ ಕಾರ್ಖಾನೆಗಳನ್ನು ಎಂದೋ ಸೃಷ್ಟಿಮಾಡಿ ಕಣ್ಮುಚ್ಚಿಕೊಂಡಿವೆ.

ನಿರುದ್ಯೋಗದ ಬಿಸಿ ಹೆಚ್ಚಾದಂತೆಲ್ಲಾ ಸರ್ಕಾರಗಳು ತಾವೇ ಪ್ರಮಾಣಪತ್ರ ಕೊಟ್ಟ ವಿದ್ಯಾರ್ಥಿಗಳಿಗೆ ‘ಎ’ ಶ್ರೇಣಿ ಉದ್ಯೋಗಗಳಿಗೆ ಮಾಡುವಂತೆ ನೇಮಕಾತಿ ಪರೀಕ್ಷೆ ಮಾಡಲು ಮುಂದಾದವು. ಇದರಿಂದಾಗಿ ವಿದ್ಯಾರ್ಥಿಗಳು ತಮ್ಮ ಮೇಲಿನ ನಂಬಿಕೆಯನ್ನು ತಾವೇ ಕಳೆದುಕೊಂಡವರಂತೆ ಪ್ರತಿಕ್ರಿಯಿಸುತ್ತಾ ಬಂದರು. ಈಗ ಈ ಯುವಪಡೆ ತನ್ನ ಮನೋಬಲವನ್ನು ಬದಲಿಸಿಕೊಂಡು ಮುಂದೆ ನಿಂತಿದೆ. ರಾಷ್ಟ್ರೀಯ ಕೌಶಲ ಅಭಿವೃದ್ಧಿ ನಿಗಮ ಸಮೀಕ್ಷೆಯ ಪ್ರಕಾರ 2013ರಲ್ಲಿ ಕರ್ನಾಟಕದಲ್ಲಿ 18 ರಿಂದ 39 ವರ್ಷದ ವಯೋಮಾನದವರ ಸಂಖ್ಯೆ 2.36 ಕೋಟಿ. ಇವರಲ್ಲಿ 95 ಲಕ್ಷ ಜನರಿಗೆ ಸೂಕ್ತ ಉದ್ಯೋಗಾವಕಾಶಗಳು ಇಲ್ಲ. ಇದು ರಾಜ್ಯದ ಪರಿಸ್ಥಿತಿಯಷ್ಟೇ ಅಲ್ಲ. ದೇಶದ ಪರಿಸ್ಥಿತಿಯೂ ಹೌದು. ಪ್ರತಿವರ್ಷ ದೇಶದಾದ್ಯಂತ 1.2 ಕೋಟಿ ಯುವಜನರು ಉದ್ಯೋಗ ಅರಸುವ ವಯಸ್ಸಿಗೆ ಬರುತ್ತಾರೆ. ಕರ್ನಾಟಕದಲ್ಲಿನ 8 ಲಕ್ಷ ಯುವಜನರು ಇದರಲ್ಲಿ ಸೇರ್ಪಡೆಯಾಗುತ್ತಾರೆ.

ಉದ್ಯೋಗ ಅರಸುವವರ ಸಂಖ್ಯೆ ಈ ಪ್ರಮಾಣದಲ್ಲಿ ಹೆಚ್ಚಾಗುತ್ತಿದ್ದರೂ ಉದ್ಯೋಗಗಳ ಸೃಷ್ಟಿ ಮಾತ್ರ ಇಳಿಮುಖವಾಗುತ್ತಿದೆ. 1999ರ ಹೊತ್ತಿಗೆ ಶೇ 1.7 ರಷ್ಟಿದ್ದ ಉದ್ಯೋಗ ಸೃಷ್ಟಿಯ ಪ್ರಮಾಣ 2013ರ ಹೊತ್ತಿಗೆ ಶೇ 0.4ಕ್ಕೆ ಇಳಿದಿತ್ತು. 2016-17ರ ಹೊತ್ತಿಗೆ ಅದು -0.4ಕ್ಕೆ ಇಳಿದಿದೆ ಎಂದರೆ ಉದ್ಯೋಗಗಳ ಸೃಷ್ಟಿ ಯಾವ ಪ್ರಮಾಣದಲ್ಲಿ ಕುಸಿಯುತ್ತಿದೆ ಎಂಬುದು ತಿಳಿಯುತ್ತದೆ.

ಉದ್ಯೋಗಗಳನ್ನು ಸೃಷ್ಟಿಸದೆ ಮೀಸಲಾತಿಯ ಬಗ್ಗೆ ಮಾತನಾಡುವ ಸರ್ಕಾರಗಳು ಕೂಡ ಇದನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಹಲವು ಪ್ರಬಲ ಸಮುದಾಯಗಳ  ಯುವಕರು ತಮಗಿರುವ ಮೀಸಲಾತಿಯ ಬಗ್ಗೆ ಅರಿವಿಲ್ಲದೆ, ಪರಿಶಿಷ್ಟ ಜಾತಿ ಮತ್ತು ಪಂಗಡದವರನ್ನು ಗುರಿಯಾಗಿಸಿಕೊಂಡು ತಮ್ಮ ನಿರುದ್ಯೋಗಕ್ಕೆ ಮೀಸಲಾತಿಯೇ ಕಾರಣ ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ. ವಾಸ್ತವದಲ್ಲಿ ಮೀಸಲಾತಿಯೆಂಬುದು ಖಾಲಿ ಕೊಡವಾಗಿ ಪರಿಣಮಿಸುತ್ತಿದೆ. ಅನೇಕ ಸರ್ಕಾರಿ ಉದ್ದಿಮೆಗಳು ಖಾಸಗಿಯವರ ಪಾಲಾಗುತ್ತಿವೆ. ಇದೆಲ್ಲದರಿಂದಾಗಿ ಅನೇಕ ಯುವ ಮನಸ್ಸುಗಳ ನಡುವೆ ವೈಮನಸ್ಸು ಬೆಳೆದು, ಕೋಮು ಮತ್ತು ಜಾತಿಯ ಗಲಭೆಗಳನ್ನು ಮುಂಚೂಣಿಗೆ ತಂದುಬಿಡುವ ಅಪಾಯವೂ ಇದೆ.

ಇದಕ್ಕಿಂತಲೂ ಮುಖ್ಯವಾಗಿ ಇಂದು ತಳ ಸಮುದಾಯಗಳ, ಆದಿವಾಸಿಗಳ ಮತ್ತು ದಮನಿತ ಸಮುದಾಯಗಳ ಯುವಜನರು ಶೈಕ್ಷಣಿಕವಾಗಿ ಮುಂದೆ ಬಂದಿದ್ದಾರೆ. ಇವರಿಗೆ ಸರಿಯಾದ ಉದ್ಯೋಗಗಳು ಸೃಷ್ಟಿಯಾಗಬೇಕು. ಇಲ್ಲದಿದ್ದರೆ ಇವರು ನಿರಂತರವಾಗಿ ನಿರುದ್ಯೋಗಿ ಜೀವನವನ್ನೇ ಸಾಗಿಸಬೇಕಾದ ಅನಿವಾರ್ಯ ಬಂದೊದಗುತ್ತದೆ. ದಮನಿತರ ದನಿಯಾಗುತ್ತೇವೆಂದು ಮಾತನಾಡುವ ಎಲ್ಲ ಜನಪರ ಸರ್ಕಾರಗಳು ಉದ್ಯೋಗ ಸೃಷ್ಟಿಯ ಮೂಲಕ ತಮ್ಮ ಹೇಳಿಕೆಗಳನ್ನು ಸಾಬೀತುಪಡಿಸಬೇಕಿದೆ.

ಹಿಂದಿನ ಯುವಜನರಂತೆ ಇಂದಿನವರು ಹಣೆಬರಹವನ್ನು ಹಳಿಯುತ್ತ ಕೂರುವುದಿಲ್ಲ. ಬದಲಾಗಿ ತಮ್ಮ ಸಾಮರ್ಥ್ಯದ ಮೇಲೆ ನಂಬಿಕೆ ಇಡುತ್ತಾರೆ. ಇದಕ್ಕೆ ಮೆರುಗಿಟ್ಟಂತೆ ‘ನೋ ಜಾಬ್, ನೋ ವೋಟ್’ ಎನ್ನುವ ಘೋಷಣೆಯನ್ನೇ ಮಾನದಂಡವನ್ನಾಗಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ ‘ನಮ್ಮ ವೋಟು ಯಾವ ಪಕ್ಷಕ್ಕೂ ಅಲ್ಲ; ನಮ್ಮ ವೋಟು ಏನಿದ್ದರೂ ಉದ್ಯೋಗಕ್ಕೆ ಮಾತ್ರ’ ಎನ್ನುವ ದಿಟ್ಟತನವನ್ನು ಕೈಗೊಂಡು ಎಚ್ಚರಿಸಿದ್ದಾರೆ.

ಇದನ್ನು ಗಂಭೀರವಾಗಿ ಪರಿಗಣಿಸಿ ಯುವಪಡೆಯನ್ನು ಉದ್ಯೋಗದಲ್ಲಿ ನೆಲೆನಿಲ್ಲುವಂತೆ ಮಾಡಬೇಕು. ಅವರಿಗೊಂದು ಸದೃಢ ಬದುಕನ್ನು ರೂಪಿಸುವ ಸಂಕಲ್ಪವನ್ನು ಮುಂದೆ ಆಳಬೇಕೆಂದುಕೆ. ಎಫ್.ಸಿ.ಎಸ್.ಸಿಕೊಂಡಿರುವ ಪಕ್ಷಗಳು ತೊಡಬೇಕಿದೆ. ಸರ್ಕಾರಿ ಉದ್ಯೋಗಗಳ ಜೊತೆಗೆ ಉದ್ಯೋಗ ಕ್ಷೇತ್ರದಲ್ಲಿ ಗಣನೀಯ ಅವಕಾಶಗಳನ್ನು ಸೃಷ್ಟಿಸುತ್ತಿರುವ ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆಗಳನ್ನು ಉಳಿಸಿ ಬೆಳೆಸಬೇಕಿದೆ. ಕೃಷಿ ಕ್ಷೇತ್ರವನ್ನು ಬಲಪಡಿಸಬೇಕಿದೆ. ಈ ಮೂಲಕ ಭಾರತವನ್ನು ಸದೃಢಗೊಳಿಸಬೇಕಿದೆ. ಇದು ಸರ್ಕಾರಗಳ ಬಹುಮುಖ್ಯ ಆದ್ಯತೆಯಾಗಬೇಕು.

ಸಹಾಯಕ ಪ್ರಾಧ್ಯಾಪಕರು, ಪೋನ್ : 9448585349, 7259797149

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry