ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಹನ ಚಾಲನಾ ಪರೀಕ್ಷೆಗೆ ಹೈಟೆಕ್ ಪಥ

Last Updated 20 ಡಿಸೆಂಬರ್ 2017, 5:36 IST
ಅಕ್ಷರ ಗಾತ್ರ

ರಾಯಚೂರು: ನಗರದ ಸಿದ್ದರಾಂಪುರ ಗ್ರಾಮದ ಮಾರ್ಗದಲ್ಲಿ ಸ್ವಯಂ ಚಾಲಿತ ಚಾಲನಾ ಪರೀಕ್ಷಾ ಪಥ (ಹೈಟೆಕ್ ಟ್ರ್ಯಾಕ್) ನಿರ್ಮಾಣ ಕಾಮಗಾರಿ ಶೀಘ್ರ ಆರಂಭವಾಗಲಿದೆ. ರಾಯಚೂರಿನ ಕಂದಾಯ ಇಲಾಖೆಗೆ ಸೇರಿದ್ದ ಸರ್ವೆ ಸಂಖ್ಯೆ 11/22ರಲ್ಲಿ ಐದು ಎಕರೆ ಜಾಗವನ್ನು ಆರ್‌ಟಿಒ ಕಚೇರಿಗೆ ಹಸ್ತಾಂತರಿಸಲಾಗಿದ್ದು, ಸುಮಾರು ₹8 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಪಥಗಳನ್ನು ನಿರ್ಮಾಣ ಮಾಡಲಾಗುತ್ತಿದೆ.

ಗುಡ್ಡದಿಂದ ಕೂಡಿದ ಪ್ರದೇಶದಲ್ಲಿ ಅತ್ಯಾಧುನಿಕ ಪಥ ನಿರ್ಮಿಸುವುದು ಸವಾಲು ಎನ್ನಲಾಗಿತ್ತು. ಆದರೆ, ಸ್ಥಳ ಪರಿವೀಕ್ಷಣೆ ಮಾಡಿಕೊಂಡಿರುವ ಗುತ್ತಿಗೆದಾರ ಕಂಪೆನಿಯು, ಪಥ ನಿರ್ಮಾಣ ಸಾಧ್ಯವೆಂದು ತಿಳಿಸಿದೆ. ಪಥ ನಿರ್ಮಾಣ ಕಾಮಗಾರಿ ಆರಂಭಿಸುವುದಕ್ಕೆ ಸಾರಿಗೆ ಇಲಾಖೆಯ ಅಧಿಕಾರಿಗಳು ಶೀಘ್ರ ಚಾಲನೆ ನೀಡಲಿದ್ದಾರೆ.

ರಾಜ್ಯದಲ್ಲಿ ಬೆಂಗಳೂರಿನಲ್ಲಿ ಎರಡು ಹಾಗೂ ಕಲಬುರ್ಗಿಯಲ್ಲಿ ಒಂದು ಅತ್ಯಾಧುನಿಕ ಪಥಗಳನ್ನು ನಿರ್ಮಿಸಲಾಗಿದೆ. ವಾಹನ ಚಾಲನೆ ಮಾಡುವವರು ನಿಯಮಾನುಸಾರ ಚಾಲನೆ ಮಾಡಿಕೊಂಡು ಹೋಗುವುದನ್ನು ಅತ್ಯಾಧುನಿಕ ಪಥದಲ್ಲಿ ನಿಖರವಾಗಿ ಗುರುತಿಸಿ ಪರವಾನಗಿ ನೀಡಲು ಸಾಧ್ಯವಾಗುತ್ತದೆ. ಇದರಲ್ಲಿ ಯಾರೂ ಹಸ್ತಕ್ಷೇಪ ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ.

ಹೈದರಾಬಾದ್ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಕಲಬುರ್ಗಿ ನಂತರ ರಾಯಚೂರಿನಲ್ಲಿ ಅತ್ಯಾಧುನಿಕ ಪಥ ನಿರ್ಮಾಣ ಮಾಡುತ್ತಿರುವುದು ವಿಶೇಷ. ವಾಹನ ಚಲಿಸುವ ಪರೀಕ್ಷಾ ಪಥದುದ್ದಕ್ಕೂ ಸೆನ್ಸರ್‌ಗಳನ್ನು ಅಳವಡಿಸಲಾಗುತ್ತದೆ. ವಾಹನ ಓಡಿಸುವವರು ಸ್ವಲ್ಪ ಯಾಮಾರಿದರೆ ಅಥವಾ ನಿಯಮ ಉಲ್ಲಂಘನೆ ಮಾಡಿದ್ದನ್ನು ಈ ಸೆನ್ಸರ್‌ಗಳು ಗುರುತಿಸುತ್ತವೆ. ವಾಹನ ಪಥದಿಂದ ಹೊರಗೆ ಚಲಿಸಿದರೆ, ಪರವಾನಗಿ ನೀಡುವುದಕ್ಕೆ ನಿರಾಕರಿಸಲಾಗುತ್ತದೆ. ವಾಹನ ಚಾಲನೆ ಮಾಡುವುದು ಗಣಕೀಕರಣ ಮತ್ತು ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ದೃಶ್ಯಾವಳಿ ಸೆರೆ ಹಿಡಿಯುವ ವ್ಯವಸ್ಥೆ ಅಳವಡಿಸಲಾಗುತ್ತದೆ. ವಾಹನ ಓಡಿಸುವುದಕ್ಕೆ ಪಕ್ಕಾ ಕಲಿತುಕೊಂಡರಷ್ಟೆ ಎಲ್‌ಎಲ್‌ಆರ್ ಪಡೆದುಕೊಳ್ಳಲು ಸಾಧ್ಯ.

ಸದ್ಯದ ವ್ಯವಸ್ಥೆಯಲ್ಲಿ ಪ್ರಾದೇಶಿಕ ಸಾರಿಗೆ ಇನ್‌ಸ್ಪೆಕ್ಟರ್ ಎದುರು ವಾಹನ ಓಡಿಸಿ ತೋರಿಸಬೇಕು. ಇನ್‌ಸ್ಪೆಕ್ಟರ್‌ ಎದುರು ನಡೆಯುವ ಪರೀಕ್ಷೆಯಲ್ಲಿ ಅನುಮೋದನೆಯಾದರೆ, ಪರವಾನಗಿ ಸಿಗುತ್ತಿತ್ತು. ಇದೀಗ ಪರವಾನಗಿ ಅನುಮೋದಿಸುವ ಕೆಲಸವೆಲ್ಲವೂ ಗಣಕೀಕರಣ ಮಾಡಿರುವುದರಿಂದ ಅಧಿಕಾರಿಗಳು ತಮ್ಮ ಇಷ್ಟದಂತೆ ಪರವಾನಗಿ ನೀಡುವುದಕ್ಕೆ ಸಾಧ್ಯವಾಗುವುದಿಲ್ಲ.

‘ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯಲ್ಲಿ ಕಾಗದ ರಹಿತ ಆಡಳಿತ ಮಾಡುವ ಯೋಜನೆ ಸರ್ಕಾರದ್ದಾಗಿದೆ. ಹೀಗಾಗಿ ಎಲ್ಲವೂ ಗಣಕೀಕೃತವಾಗುತ್ತಿದೆ. ಇದಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡು ಒಂದೊಂದು ಸಂಗತಿಯನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ. ರಾಯಚೂರು ಕಚೇರಿಯಲ್ಲಿ ಬಹಳಷ್ಟು ಬದಲಾವಣೆ ಮಾಡಿಕೊಳ್ಳಲಾಗುವುದು. ತಾಂತ್ರಿಕ ಪರಿಣಿತಿ ಹೊಂದುವುದು ಸದ್ಯದ ಅಗತ್ಯವಾಗಿದೆ’ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಕೆ. ದಾಮೋದರ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ವಾಹನ ಓಡಿಸುವುದಕ್ಕೆ ಬರುತ್ತದೆಯೋ ಇಲ್ಲವೋ ಎಂಬುದನ್ನು ಇನ್‌ಸ್ಪೆಕ್ಟರ್‌ಗಳು ಒಂದೊಂದು ಸಲ ಸರಿಯಾಗಿ ನೋಡುವುದಿಲ್ಲ. ಮಧ್ಯವರ್ತಿಗಳ ಮೂಲಕ ಬಹಳ ಜನರು ಪರವಾನಗಿ ಪಡೆಯುತ್ತಿದ್ದರು. ಈಗ ಎಲ್ಲವೂ ಪಾರದರ್ಶಕವಾಗಿ ನಡೆಸುವ ವ್ಯವಸ್ಥೆ ಮಾಡುತ್ತಿರುವುದು ಒಳ್ಳೆಯ ವಿಚಾರ’ ಎಂದು ಐಡಿಎಸ್‌ಎಂಟಿ ಬಡಾವಣೆ ನಿವಾಸ ಹುಸೇನ್‌ ಹೇಳಿದರು.

* * 

ರಾಜ್ಯ ಸರ್ಕಾರವು ರಾಯಚೂರಿನಲ್ಲಿ ಸ್ವಯಂ ಚಾಲಿತ ಚಾಲನಾ ಪರೀಕ್ಷಾ ಪಥ (ಹೈಟೆಕ್‌ ಟ್ರ್ಯಾಕ್‌) ನಿರ್ಮಾಣ ಜವಾಬ್ದಾರಿಯನ್ನು ಸಾರಿಗೆ ಇಲಾಖೆಗೆ ವಹಿಸಿದೆ.
ಕೆ. ದಾಮೋದರ್, ಪ್ರಭಾರಿ ಆರ್‌ಟಿಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT