7

ಇಂದಿರಾ ಕ್ಯಾಂಟೀನ್ ಆರಂಭಕ್ಕೆ ಅಪಸ್ವರ

Published:
Updated:
ಇಂದಿರಾ ಕ್ಯಾಂಟೀನ್ ಆರಂಭಕ್ಕೆ ಅಪಸ್ವರ

ರಾಮನಗರ: ಹಳೇ ಬಸ್‌ ನಿಲ್ದಾಣ ವೃತ್ತಕ್ಕೆ ಹೊಂದಿಕೊಂಡಂತೆ ಇರುವ ಜಿಲ್ಲಾ ಪಶು ಆಸ್ಪತ್ರೆ ಆವರಣದಲ್ಲಿ ಸರ್ಕಾರ ಇಂದಿರಾ ಕ್ಯಾಂಟೀನ್ ನಿರ್ಮಿಸಲು ಹೊರಟಿದ್ದು, ಅದಕ್ಕೆ ಅಪಸ್ವರ ಕೇಳಿ ಬಂದಿದೆ.

ಪಶು ಆಸ್ಪತ್ರೆಗೆ ಸೇರಿದ ಈ ಜಾಗ ಭೂದಾನಿಗಳಿಂದ ಬಂದಿದ್ದು, ಗೋಶಾಲೆ ನಿರ್ಮಿಸಲು ಕೊಟ್ಟ ಜಾಗವಾಗಿದೆ. ಒಟ್ಟು 5ಎಕರೆ ಜಾಗದ ಪೈಕಿ ಇದೀಗ 1 ಎಕರೆ 30 ಗುಂಟೆ ಜಮೀನಷ್ಟೇ ಪಶು ಸಂಗೋಪನಾ ಇಲಾಖೆ ಬಳಿ ಉಳಿದುಕೊಂಡಿದೆ. ಇದರಲ್ಲಿಯೇ ಪಶು ಆಸ್ಪತ್ರೆ, ಔಷಧ ಉಗ್ರಾಣ, ಇಲಾಖೆ ಸಹಾಯಕ ನಿರ್ದೇಶಕರ ಕಚೇರಿಗಳು ಕಾರ್ಯ ನಿರ್ವಹಿಸುತ್ತಿವೆ. ಅಲ್ಲದೆ, ಸುಸಜ್ಜಿತ ಪಾಲಿ ಕ್ಲಿನಿಕ್‌ ನಿರ್ಮಾಣಕ್ಕೆ ಯೋಜನೆ ಸಿದ್ಧಗೊಂಡಿದೆ. ಹೀಗಿರುವಾಗ ಅದೇ ಜಾಗವನ್ನು ಕ್ಯಾಂಟೀನ್‌ಗೆ ಬಳಸಿಕೊಳ್ಳಲು ಹೊರಟಿರುವುದಕ್ಕೆ ರೈತ ಸಮುದಾಯ ಅಸಮಾಧಾನ ವ್ಯಕ್ತಪಡಿಸಿದೆ.

ಈ ಸಂಬಂಧ ಸಮಾನ ಮನಸ್ಕ ರೈತರು ಈಚೆಗೆ ನಗರಸಭೆ ಹಾಗೂ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದು, ದಾನಿಗಳ ಆಶಯಕ್ಕೆ ವಿರುದ್ಧವಾಗಿ ಜಾಗ ಅನ್ಯ ಉದ್ದೇಶಗಳಿಗೆ ಬಳಸಿ ಕೊಳ್ಳಬಾರದು ಎಂದು ಮನವಿ ಮಾಡಿದ್ದಾರೆ.

1958ರಲ್ಲಿ ದುರ್ಗಾಪ್ರಸಾದ್ ಎಂಬುವವರು ಗೋ ಶಾಲೆ ಆರಂಭಿಸಲು ಇಲ್ಲಿನ 5 ಎಕರೆ ಭೂಮಿ ದಾನ ಮಾಡಿದ್ದರು, ಇಂದು ಈ ಜಾಗ ನಗರದ ಹೃದಯ ಭಾಗವಾಗಿ ಪರಿವರ್ತನೆಗೊಂಡಿದೆ. ಹೀಗಾಗಿ ಇಲ್ಲಿನ ನೆಲದ ಮೇಲೆ ಎಲ್ಲರ ಕಣ್ಣು ಬಿದ್ದಿದೆ ಎಂದು ರೈತ ಮುಖಂಡರು ದೂರುತ್ತಾರೆ.

ಜನನಿಬಿಡ ಪ್ರದೇಶದಲ್ಲಿಯೇ ಕ್ಯಾಂಟೀನ್‌ಗೆ ಬೇರೊಂದು ಸ್ಥಳ ಹುಡುಕಿಕೊಳ್ಳಬೇಕು. ಗಾಂಧಿಪಾರ್ಕ್ ಆವರಣ, ಕೆಎಸ್‍ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿನ ಮಳಿಗೆ, ಮಿನಿ ವಿಧಾನಸೌಧದಲ್ಲಿನ ಆವರಣ... ಹೀಗೆ ಇನ್ನೂ ಹಲವು ಜಾಗಗಳು ಇದ್ದು, ಪರ್ಯಾಯ ಜಾಗವನ್ನು ನಗ ರಸಭೆ ಗುರುತಿಸಿಕೊಡಬೇಕು. ಜನ–ಜಾನುವಾರುಗಳಿಗೆ ಮೀಸಲಿಟ್ಟ ಜಾಗವನ್ನು ಅದೇ ಉದ್ದೇಶಕ್ಕೆ ಬಳಸಿಕೊಳ್ಳಬೇಕು ಎನ್ನುವುದು ರೈತರ ಆಗ್ರಹವಾಗಿದೆ.

ತೊಂದರೆ ಆಗದು: ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ನಗರಸಭೆ ಆಯುಕ್ತ ಕೆ. ಮಾಯಣ್ಣ ಗೌಡ ‘ಜನಸಂದಣಿ ಇರುವ ಕಡೆ ಕ್ಯಾಂಟೀನ್‌ ಆರಂಭಿಸಬೇಕು ಎನ್ನುವುದು ಸರ್ಕಾರದ ಆಶಯ. ಅದರಂತೆ ಸ್ಥಳ ಗುರುತಿಸಿ ಪ್ರಸ್ತಾವ ಸಲ್ಲಿಸಿದ್ದು, ಸರ್ಕಾರವೇ ಅಂತಿಮವಾಗಿ ಸ್ಥಳ ನಿಗದಿಪಡಿಸಿದೆ’ ಎಂದು ಸ್ಪಷ್ಟನೆ ನೀಡಿದರು.

‘ಕೇವಲ 60X60 ಅಡಿ ವಿಸ್ತೀರ್ಣದಲ್ಲಿ ಕ್ಯಾಂಟೀನ್‌ ನಿರ್ಮಾಣ ಆಗಲಿದ್ದು, ಹೆಚ್ಚಿನ ಜಾಗ ಬೇಕಾಗದು. ಇದರಿಂದ ಇಲ್ಲಿಗೆ ಬರುವ ರೈತರಿಗೂ ಉಪಯೋಗವಾಗಲಿದೆ. ಇದರ ಜೊತೆಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳ ಕಚೇರಿ ಸಮೀಪ ಮತ್ತೊಂದು ಕ್ಯಾಂಟೀನ್ ಸಹ ಪ್ರಾರಂಭಗೊಳ್ಳಲಿದೆ’ ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry