7

ಗ್ರಾಹಕರ ಅಭಿರುಚಿಗೆ ಪೂರಕ ಕೃಷಿ ಪದ್ಧತಿ ಇಂದಿನ ಅಗತ್ಯ

Published:
Updated:

ಶಿವಮೊಗ್ಗ: ವಿಶ್ವಮಟ್ಟದಲ್ಲಿ ಗ್ರಾಹಕರ ಅಭಿರುಚಿಗೆ ಅನುಗುಣವಾಗಿ ಕೃಷಿ ಪದ್ಧತಿ ರೂಪುಗೊಳ್ಳುತ್ತಿದೆ. ಅದೇ ಮಾದರಿಗೆ ಭಾರತವೂ ಹೊಂದಿಕೊಂಡರೆ ನಿಜವಾದ ಹಸಿರು ಕ್ರಾಂತಿ ಸಾಧ್ಯ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕೆ.ಟಿ.ಗಂಗಾಧರ್ ಪ್ರತಿಪಾದಿಸಿದರು.

ಕುವೆಂವು ರಂಗಮಂದಿರದಲ್ಲಿ ನಡೆಯುತ್ತಿರುವ 12ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಂಗಳವಾರ ಜನಪದರ ಬದುಕು– ಬವಣೆ ಕುರಿತ ಗೋಷ್ಠಿಯಲ್ಲಿ ಅವರು ಮಾತನಾಡಿದರು.

ವಿಶ್ವದ ವಿವಿಧ ರಾಷ್ಟ್ರಗಳಲ್ಲಿ ಇಂದು ಗ್ರಾಹಕರ ಬದಲಾದ ಅಭಿರುಚಿಗೆ ಪೂರಕವಾಗಿ ಹೊಸ ತಳಿಯ ಆಹಾರ ಬೆಳೆ ಬೆಳೆಯಲಾಗುತ್ತಿದೆ. ಭಾರತದಲ್ಲಿ ಮಾತ್ರ ಬೆಲೆ ಏರಿಗೆ ಹಿಂದೆ ಬಿದ್ದು ಬೆಳೆ ನಿರ್ಧರಿಸಲಾಗುತ್ತಿದೆ. ಬೆಲೆ ಕೈಕೊಟ್ಟಾಗ ನಷ್ಟ ಅನುಭವಿಸುತ್ತಾರೆ. ಮಾರುಕಟ್ಟೆ ವಿಸ್ತರಣೆಯತ್ತ ಗಮನ ಹರಿಸುತ್ತಿಲ್ಲ. ಕೃಷಿ ಕ್ಷೇತ್ರದ ಹಲವು ತೊಡಕುಗಳನ್ನು ನಿವಾರಿಸಿಕೊಂಡು ಮುನ್ನಡೆದರೆ ಯಶಸ್ಸು ಸಾಧ್ಯ ಎಂದು ಕಿವಿಮಾತು ಹೇಳಿದರು.

ಆಹಾರ ಮತ್ತು ಶಿಕ್ಷಣ ಇಂದು ದಂಧೆಯಾಗಿದೆ. 1894ರಲ್ಲಿ ಬ್ರಿಟಿಷರು ಜಾರಿಗೆ ತಂದ ಭೂ ಸ್ವಾಧೀನ ಕಾಯ್ದೆ ಸ್ವಾತಂತ್ರ್ಯಾ ನಂತರವೂ ಅಸ್ತಿತ್ವದಲ್ಲಿ ಇತ್ತು. ರೈತ ಸಂಘಟನೆಗಳ ಹೋರಾಟದ ಫಲವಾಗಿ ಕಾಯ್ದೆಗೆ ತಿದ್ದುಪಡಿ ತರಲಾಯಿತು.

ಇಂದಿಗೂ ನಮ್ಮನ್ನು ಆಳುವ ಸರ್ಕಾರಗಳು ರೈತರ ಭೂಮಿ ಕಿತ್ತುಕೊಳ್ಳುವ ತಂತ್ರ ಮಾಡುತ್ತಲೇ ಇವೆ. ಸಂಘಟನೆಗಳು ಭೂ ಮಾಲೀಕತ್ವದ ಹಕ್ಕು ಉಳಿಸಲು ಹೋರಾಟ ಮಾಡುತ್ತಲೇ ಇವೆ. ವಿಶ್ವ ವಾಣಿಜ್ಯ ಒಪ್ಪಂದ ಪೂರ್ಣ ಪ್ರಮಾಣದಲ್ಲಿ ಜಾರಿಯಾದರೆ ರೈತರ ಬದುಕು ಮತ್ತಷ್ಟು ಸಂಕಷ್ಟಕ್ಕೆ ಒಳಗಾಗುತ್ತದೆ. ಕಾರ್ಪೊರೇಟ್ ಕೃಷಿ ಪದ್ಧತಿಗೆ ಹೊಂದಿಕೊಂಡು ರೈತರು ಬದುಕು ಸಾಗಿಸಬೇಕಾದ ಅನಿವಾರ್ಯತೆ ಎದುರಾಗುತ್ತದೆ ಎಂದು ಎಚ್ಚರಿಸಿದರು.

ಕೃಷಿಕರ ಉಪ ಕಸುಬು ಹಾಲಿನ ಉತ್ಪಾದನೆ ಈಚೆಗೆ ಹೆಚ್ಚಾಗಿದೆ ಎಂದು ಖರೀದಿ ಬೆಲೆ ಕಡಿಮೆ ಮಾಡಿರುವ ಶಿವಮೊಗ್ಗ ಹಾಲು ಒಕ್ಕೂಟ, ಮಾರುಕಟ್ಟೆ ವಿಸ್ತರಣೆಯತ್ತ ಗಮನ ಹರಿಸಿಲ್ಲ ಎಂದು ಹರಿಹಾಯ್ದರು.

ರೈತರ ಸಂಕಷ್ಟ ಮತ್ತು ಸವಾಲು ಕುರಿತು ಮಾತನಾಡಿದ ರೈತ ಮಹದೇವ ಕೂರಂಬಳ್ಳಿ, ಎಲ್ಲ ಉದ್ಯಮಗಳಿಗೂ ಕೃಷಿಯೇ ಬುನಾದಿ. ಆದರೆ, ಅಂತಹ

ಬುನಾದಿ ಕಡೆಗಣಿಸಿ ಎಲ್ಲ ಉದ್ಯಮಗಳನ್ನೂ ಕಟ್ಟಲಾಗಿದೆ. ರೈತರು ಇಂತಹ ಉದ್ಯಮಗಳಿಗೆ, ಯೋಜನೆಗಳಿಗೆ ತಮ್ಮ ನೆಲ, ಜಲ ಸೇರಿದಂತೆ ಎಲ್ಲವನ್ನೂ ಕಳೆದುಕೊಂಡಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.

ರೈತರು ಇಂದು ರೈತ ಸಂಘಟನೆಗಳ ಮೇಲೆ ನಂಬಿಕೆ ಇಟ್ಟಿಲ್ಲ. ಬದಲಿಗೆ ಶಕ್ತಿ ರಾಜಕಾರಣದ ಮೇಲೆ ಅವಲಂಬಿತರಾಗಿದ್ದಾರೆ. ಗುಳೆ ಹೋಗಲು ಹತ್ತು ಹಲವು ಕಾರಣಗಳಿವೆ ಎಂದು ಬೇಸರ ವ್ಯಕ್ತಡಿಸಿದರು.

ನೆಲವಿಲ್ಲದವರ ಹೋರಾಟ ಕುರಿತು ಮಾತನಾಡಿದ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಎಂ. ಗುರುಮೂರ್ತಿ, ದಶಕಗಳ ಕಾಲ ಭೂ ಹಕ್ಕಿಗಾಗಿ ಹೋರಾಟ ನಡೆಸಿದರೂ ಹಲವು ಜನರಿಗೆ ಭೂ ಒಡೆತನ ಸಿಕ್ಕಿಲ್ಲ. ಭೂಮಿ ಗುರುತಿಸಿದರೂ, ತಾಂತ್ರಿಕ ಕಾರಣಗಳಿಂದ ಹಕ್ಕುಪತ್ರ, ದಾಖಲೆ ಹಸ್ತಾಂತರಿಸಿಲ್ಲ ಎಂದು ಆರೋಪಿಸಿದರು.

ನೆಲ, ಬೆಳೆ, ಮಳೆ ಕುರಿತು ಮಾತನಾಡಿದ ಕೃಷಿ ಮತ್ತು ತೋಟಗಾರಿಕಾ ವಿ.ವಿ ಸಹ ಪ್ರಾಧ್ಯಾಪಕ ಡಾ.ನಾಗರಾಜ ಅಡಿವೆಪ್ಪನವರ್, ಜಿಲ್ಲೆಯ ಕೃಷಿಕರಲ್ಲಿ ಶೇ 86ರಷ್ಟು ಸಣ್ಣ ರೈತರು ಇದ್ದಾರೆ. ಹಾಗಾಗಿ, ಆಧುನಿಕ ಕೃಷಿ ಪದ್ಧತಿ ಸಾಧ್ಯವಾಗಿಲ್ಲ. ಆದರೆ, ಇರುವ ಇತಿಮಿತಿಯಲ್ಲೇ ಹಲವು ರೈತರು ಲಾಭದಾಯಕ ಬೆಳೆ ಬೆಳೆದು ಉಳಿದ ರೈತರಿಗೆ ಮಾದರಿಯಾಗಿದ್ದಾರೆ ಎಂದು ವಿಶ್ಲೇಷಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry