7

ಸಸಾಲಟ್ಟಿ ಏತ ನೀರಾವರಿ ಯೋಜನೆ: ಹೋರಾಟಗಾರರ ಬಂಧನ

Published:
Updated:

ಮುಧೋಳ: ಸಸಾಲಟ್ಟಿ ಏತ ನೀರಾವರಿ ಯೋಜನೆ ಆಗ್ರಹಿಸಿ ಬನಹಟ್ಟಿ ಕಾರ್ಯಕ್ರಮಕ್ಕೆ ಮಂಗಳವಾರ ಬರುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಪ್ಪು ಬಾವುಟ ಪ್ರದರ್ಶಿಸಲು ಸನ್ನದ್ಧರಾಗಿದ್ದ ಹೋರಾಟಗಾರರನ್ನು ರಬಕವಿ ಹಳೆ ಬಸ್ ನಿಲ್ದಾಣದ ಬಳಿ ಬಂಧಿಸಿ ಅವರನ್ನು ಮುಧೋಳದ ಸಿಪಿಐ ಕಚೇರಿಯಲ್ಲಿ ಇಡಲಾಗಿತ್ತು. ಎರಡು ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ 120ಕ್ಕೂ ಅಧಿಕ ಪ್ರತಿಭಟನಾಕಾರರನ್ನು ಕರೆದೊಯ್ಯಲಾಯಿತು.

ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಉಪಾಧ್ಯಕ್ಷ ಗಂಗಾಧರ ಮೇಟಿ ಹಾಗೂ ರಾಜ್ಯ ನೇಕಾರರ ಸೇವಾ ಸಂಘದ ಅಧ್ಯಕ್ಷ ಶಿವಾನಂದ ಟಿರ್ಕಿ ಮಾತನಾಡಿ ‘2013ರಿಂದ ಸತತ ಹೋರಾಟ ಮಾಡಲಾಗುತ್ತಿದೆ. ಮುಖ್ಯಮಂತ್ರಿಯವರಿಗೆ ನಾಲ್ಕು ಬಾರಿ ಮನವಿ ಸಲ್ಲಿಸಿದಾಗ ಒಂದು ತಿಂಗಳಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಹೋರಾಟಗಾರರ ಸಭೆ ನಡೆಸಿ ಯೋಜನೆ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಹೇಳುತ್ತಿದ್ದಾರೆ. ಆದರೆ ಹೊರತು ಮಾತು ಉಳಿಸಿಕೊಳ್ಳಲಿಲ್ಲ’ ಎಂದರು.

‘ಸಂಗೊಳ್ಳಿ ರಾಯಣ್ಣ ಜನ್ಮಸ್ಥಳ ದಿಂದ ಪಾದಯಾತ್ರೆ ಮೂಲಕ ಬೆಳಗಾವಿಗೆ ಹೋಗಿ ಅಧಿವೇಶನ ಸಮಯದಲ್ಲಿ ಮನವಿ ಸಲ್ಲಿಸಲಾಗಿದೆ. ಮಹಾಲಿಂಗಪುರದ ವೀರರಾಣಿ ಕಿತ್ತೂರ ಚನ್ನಮ್ಮ ವೃತ್ತದಲ್ಲಿ ಫೆಬ್ರುವರಿಯಲ್ಲಿ 38 ದಿನಗಳು ನಡೆಸಿದ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಬಂದ ನೀರಾವರಿ ಸಚಿವ ಎಂ.ಬಿ.ಪಾಟೀಲ ಕೂಡಲಸಂಗಮದ ಸಂಗಮೇಶ್ವರ ಮೇಲೆ ಪ್ರಮಾಣ ಮಾಡಿ ಒಂದು ತಿಂಗಳಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದ್ದರು. ನಂತರ ತಿರುಗಿ ಒಂದು ಮಾತನ್ನು ಆಡಿಲ್ಲ’ ಎಂದು ಆರೋಪಿಸಿದರು.

‘ಕೊನೆಯದಾಗಿ ಇದೇ 27ರಂದು 2 ಸಾವಿರ ಬೈಕ್ ರ‍್ಯಾಲಿ ಮೂಲಕ ವಿಜಯಪುರದ ನೀರಾವರಿ ಸಚಿವ ಎಂ.ಬಿ.ಪಾಟೀಲ ಮನೆಗೆ ಮುತ್ತಿಗೆ ಹಾಕು ವುದಕ್ಕೆ ನಿರ್ಧರಿಸಲಾಗಿದೆ. 2013ರಿಂದ ಅವರ ಹಿಂದೆ ಅಲೆದು, ಅಲೆದು ಸಾಕಿದೆ. ಇನ್ನು ಕೆಲವೇ ತಿಂಗಳಲ್ಲಿ ನಮ್ಮ ಹಿಂದೆ ಬರುವ ಕಾಲ ಸಮೀಪವಾಗಿದೆ. ಆ ಸಂದರ್ಭದಲ್ಲಿ ತಕ್ಕ ಉತ್ತರ ನೀಡಬೇಕು’ ಎಂದು ಅವರು ಹೇಳಿದರು.

ಪ್ರಮುಖರಾದ ರಮೇಶ ಭಾವಿಕಟ್ಟಿ, ಅರ್ಜುನ ಭಾವಿಕಟ್ಟಿ, ಬಾಬು ಹಸರಡ್ಡಿ, ಹೊನ್ನಪ್ಪ ಬಿರಡಿ, ಬಂದು ಪಕಾಲಿ, ಕಾಡಪ್ಪ ಫಕೀರಪುರ, ಮಾಯಪ್ಪ ತುರಾದಿ, ಮಹಾದೇವ ಜಮಖಂಡಿ, ಹಣಮಂತ ಪೂಜಾರಿ, ವೀರುಪಾಕ್ಷ ಟಿರ್ಕಿ, ಸಂಗಮೇಶ ಮರೆಗುದ್ದಿ, ಸಿದ್ಧಪ್ಪ ಬಡಗಾವಿ ಮುಂತಾದವರನ್ನು ಬಂಧಿಸಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry