7

‘ಸಾವಳಗಿ ತಾಲ್ಲೂಕು, ಜಮಖಂಡಿ ಜಿಲ್ಲೆ ರಚಿಸಿ’

Published:
Updated:
‘ಸಾವಳಗಿ ತಾಲ್ಲೂಕು, ಜಮಖಂಡಿ ಜಿಲ್ಲೆ ರಚಿಸಿ’

ಜಮಖಂಡಿ: ತಾಲ್ಲೂಕಿನ ಹೋಬಳಿ ಕೇಂದ್ರವಾಗಿರುವ ಸಾವಳಗಿ ತಾಲ್ಲೂಕು ಕೇಂದ್ರ ಘೋಷಣೆ ಮಾಡಬೇಕು. ಬೆಳಗಾವಿ ಜಿಲ್ಲೆಯ ಅಥಣಿ, ರಾಯಬಾಗ ತಾಲ್ಲೂಕುಗಳನ್ನು ಸೇರಿಸಿ ಜಮಖಂಡಿ ಜಿಲ್ಲೆ ರಚಿಸಬೇಕು ಎಂದು ಶಾಸಕ ಸಿದ್ದು ನ್ಯಾಮಗೌಡ ಒತ್ತಾಯಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಜಮಖಂಡಿ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ಹಾಗೂ ಭೂಮಿಪೂಜೆ ನೆರವೇರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ನಗರಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಜಿ.ಜಿ. ಹೈಸ್ಕೂಲ್‌ ಮೈದಾನದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್‌ ಸರ್ಕಾರದ ನಾಲ್ಕೂವರೆ ವರ್ಷದ ಅಧಿಕಾ ರಾವಧಿಯಲ್ಲಿ ಜಮಖಂಡಿ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳಿಗಾಗಿ ₹1230 ಕೋಟಿ ಅನುದಾನ ನೀಡಲಾಗಿದೆ. ಹೊಸ ಯೋಜನೆಗಳ ಅನುಷ್ಠಾನಕ್ಕಾಗಿ ಬೇಕಾಗುವ ಅಂದಾಜು ₹300 ಕೋಟಿ ಅನುದಾನ ಬರುವ ಮಾರ್ಚ್‌ ತಿಂಗಳೊಳಗಾಗಿ ಬಿಡುಗಡೆ ಆಗಲಿದೆ ಎಂದರು.

ಅಂದಾಜು ₹8.60 ಕೋಟಿ ವೆಚ್ಚದಲ್ಲಿ ನಗರದ ಬೈಪಾಸ್‌ ರಸ್ತೆ ನಿರ್ಮಿಸಲಾಗಿದೆ. ತಾಲ್ಲೂಕಿನ ಜಂಬಗಿ ಬಿಕೆ ಗ್ರಾಮದ ಹತ್ತಿರ ಕೃಷ್ಣಾನದಿಗೆ ಅಡ್ಡಲಾಗಿ ₹60 ಕೋಟಿ ವೆಚ್ಚದಲ್ಲಿ ಸಂಪರ್ಕ ಸೇತುವೆ ನಿರ್ಮಿಸಲಾಗಿದೆ. ₹ 14 ಕೋಟಿ ವೆಚ್ಚ ಮಾಡಿ ಜಮಖಂಡಿ–ಸಾವಳಗಿ ರಸ್ತೆ ನಿರ್ಮಿಸಲಾಗಿದೆ ಎಂದರು.

ನಗರೋತ್ಥಾನ ಯೋಜನೆ ಅಡಿಯಲ್ಲಿ ₹12 ಕೋಟಿ ಅನುದಾನ ನಗರಸಭೆಗೆ ಬಿಡುಗಡೆ ಆಗಿದ್ದು, ನಗರದ ಎಲ್ಲ ಪ್ರಮುಖ ರಸ್ತೆಗಳನ್ನು ಕಾಂಕ್ರೀಟ್‌ ರಸ್ತೆಗಳನ್ನಾಗಿ ಪರಿವರ್ತಿಸಲಾಗಿದೆ. ಅಂದಾಜು ₹22 ಕೋಟಿ ವೆಚ್ಚದಲ್ಲಿ ನಗರದಾದ್ಯಂತ ಒಳಚರಂಡಿ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗಿದೆ.

ಅಡಿಹುಡಿ–ತೊದಲಬಾಗಿ ಏತ ನೀರಾವರಿ ಯೋಜನೆಯನ್ನು ಪುನರುಜ್ಜೀವನಗೊಳಿಸಲು ₹4.5 ಕೋಟಿ ಮಂಜೂರು ಮಾಡಲಾಗಿದೆ. ತಾಲ್ಲೂಕಿನ ಆಲಬಾಳ ಗ್ರಾಮದಲ್ಲಿ ₹11.27 ಕೋಟಿ ವೆಚ್ಚದಲ್ಲಿ 110 ಕೆವಿ ವಿದ್ಯುತ್‌ ಸ್ಟೇಷನ್‌ ಸ್ಥಾಪಿಸಲಾಗಿದ್ದು, 4 ತಿಂಗಳಿನಿಂದ ವಿದ್ಯುತ್‌ ಸರಬರಾಜು ಆರಂಭಿಸಲಾಗಿದೆ.

ಹೆಸ್ಕಾಂ ವಿಭಾಗೀಯ ಕಚೇರಿ ಕಟ್ಟಡ ನಿರ್ಮಾಣಕ್ಕೆ ₹68 ಲಕ್ಷ ವೆಚ್ಚ ಮಾಡಲಾಗಿದೆ. ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರ ಸ್ಥಾಪನೆಗೆ ₹4.51 ಕೋಟಿ ಖರ್ಚು ಮಾಡಲಾಗಿದೆ. ಉರ್ದು ಪ್ರೌಢಶಾಲೆ ಕಟ್ಟಡ ನಿರ್ಮಾಣಕ್ಕಾಗಿ ₹57 ಲಕ್ಷ, ಬಾಲಕರ ವಸತಿ ನಿಲಯ ನಿರ್ಮಾಣಕ್ಕೆ ₹4.2 ಕೋಟಿ, ಬಾಲಕಿಯರ ವಸತಿ ನಿಲಯ ನಿರ್ಮಾಣಕ್ಕೆ ₹2 ಕೋಟಿ ವ್ಯಯಿಸಲಾಗಿದೆ.

ತಾಲ್ಲೂಕಿನ ತೊದಲಬಾಗಿ ಗ್ರಾಮದಲ್ಲಿ ಅಂದಾಜು ₹17 ಕೋಟಿ ವೆಚ್ಚದಲ್ಲಿ ರಾಣಿ ಚನ್ನಮ್ಮ ವಸತಿ ಶಾಲೆ ನಿರ್ಮಾಣಕ್ಕಾಗಿ ಟೆಂಡರ್‌ ಕರೆಯಲಾಗಿದೆ. ಹಾಲಳ್ಳಿ–ಸಾವಳಗಿ ರಸ್ತೆ ನಿರ್ಮಾಣಕ್ಕಾಗಿ ₹ 6 ಕೋಟಿ ಬಿಡುಗಡೆ ಆಗಿದೆ. ತುಬಚಿ–ಬಬಲೇಶ್ವರ ಏತ ನೀರಾವರಿ 1.30 ಲಕ್ಷ ಎಕರೆ ಜಮೀನಿಗೆ ನೀರಾವರಿ ಸೌಲಭ್ಯ ದೊರೆಯಲಿದೆ. ಆ ಪೈಕಿ ತಾಲ್ಲೂಕಿನ 30 ಸಾವಿರ ಎಕರೆ ನೀರಾವರಿಗೆ ಒಳಪಡಲಿದೆ.

ಅಂದಾಜು ₹74 ಕೋಟಿ ವೆಚ್ಚದ ಮಧುರಖಂಡಿ– ಕಲ್ಲಹಳ್ಳಿ– ಹುನ್ನೂರ ಏತ ನೀರಾವರಿ ಯೋಜನೆಗೆ ಮಂಜೂರಾತಿ ದೊರೆತಿದೆ. ಅಂದಾಜು ₹211 ಕೋಟಿ ವೆಚ್ಚದ ಗಲಗಲಿ–ಮರೇಗುದ್ದಿ ಏತ ನೀರಾವರಿ ಯೋಜನೆಗೆ ಸರ್ಕಾರದ ಮಂಜೂರಾತಿ ದೊರೆಯಬೇಕಾಗಿದೆ ಎಂದು ಸಮಗ್ರ ಮಾಹಿತಿ ನೀಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಆರ್‌.ಬಿ. ತಿಮ್ಮಾಪುರ, ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್‌.ಆರ್‌. ಪಾಟೀಲ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ವೀಣಾ ಕಾಶಪ್ಪನವರ, ನಗರಸಭೆ ಅಧ್ಯಕ್ಷ ರಾಜು ಪಿಸಾಳ, ವರ್ಧಮಾನ ನ್ಯಾಮಗೌಡ, ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಬಿ. ಸೌದಾಗರ, ಶಾಸಕ ಎಚ್‌.ವೈ. ಮೇಟಿ, ಮಾಜಿ ಶಾಸಕ ಎಸ್‌.ಜಿ. ನಂಜಯ್ಯನಮಠ, ಕಾಂಗ್ರೆಸ್‌ ಉಸ್ತುವಾರಿ ಪಾರಸಮಲ್‌ ಜೈನ, ಅರ್ಬನ್‌ ಬ್ಯಾಂಕ್‌ ಅಧ್ಯಕ್ಷ ಅರುಣಕುಮಾರ ಶಹಾ, ಸಹಕಾರಿ ಧುರೀಣ ಅರುಣಕುಮಾರ ಶಹಾ ಹಾಜರಿದ್ದರು.

ಜಂಬಗಿ ಸೇತುವೆ ಭೇಟಿ ರದ್ದು

ಹೆಲಿಕಾಪ್ಟರ್‌ನಲ್ಲಿ ಕಾಣಿಸಿಕೊಂಡ ತಾಂತ್ರಿಕ ದೋಷದಿಂದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಳ್ಳಾರಿಯಿಂದ ನಗರಕ್ಕೆ ನಿಗದಿತ ವೇಳೆಗಿಂತ ಒಂದೂವರೆ ಗಂಟೆ ತಡವಾಗಿ ಬಂದ ಕಾರಣ ಜಂಬಗಿ ಸೇತುವೆಗೆ ಭೇಟಿ ನೀಡುವ ಕಾರ್ಯಕ್ರಮವನ್ನು ರದ್ದುಪಡಿಸಲಾಯಿತು. ಸಿದ್ದರಾಮಯ್ಯ ಹೆಲಿಕಾಪ್ಟರ್‌ನಿಂದ ಇಳಿದು ನಗರದ ಹೆಲಿಪ್ಯಾಡ್‌ ಹತ್ತಿರ ಬಂದ ಕೂಡಲೇ ಅವರಿಗೆ ಪೊಲೀಸರು ಗೌರವ ವಂದನೆ ಸಲ್ಲಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry