ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಗಿಗಳಿಗೆ ಸಿಗದ ಚಿಕಿತ್ಸೆ: ಗ್ರಾಮಸ್ಥರ ಪ್ರತಿಭಟನೆ

Last Updated 20 ಡಿಸೆಂಬರ್ 2017, 6:24 IST
ಅಕ್ಷರ ಗಾತ್ರ

ದೇವನಹಳ್ಳಿ: ಸರ್ಕಾರಿ ಆಸ್ಪತ್ರೆಗಳಿಗೆ ಬರುವ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಲು ವಿಫಲರಾಗುತ್ತಿರುವ ವೈದ್ಯೆಯನ್ನು ವರ್ಗಾಯಿಸುವಂತೆ ಸ್ಥಳೀಯ ಗ್ರಾಮಸ್ಥರು ಆಗ್ರಹಿಸಿದರು.

ಮಂಗಳವಾರ ಕೊಯಿರಾ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಬಳಿ ಸೇರಿದ ಗ್ರಾಮಸ್ಥರು ಹೋರಾಟಕ್ಕೆ ಸಿದ್ಧ ಎಂದರು. ಕೆ. ಹೋಸೂರು ಗ್ರಾಮದ ಭಾಗ್ಯಮ್ಮ ಮಾತನಾಡಿ, ‘ನನ್ನ ಸೊಸೆ ಸುಕನ್ಯಾಗೆ ಈ ಹಿಂದೆ ಒಂದು ಹೆಣ್ಣು ಮಗುವಾಗಿದೆ. ನಂತರ ಮೂರು ತಿಂಗಳ ಗರ್ಭಿಣಿಯಾದ ನಂತರ ಐದು ತಿಂಗಳ ವರೆಗೆ ಮಗು ಬೆಳವಣಿಗೆ ಬಗ್ಗೆ ಹದಿನೈದು ದಿನಗಳಿಗೊಮ್ಮೆ ತಪಾಸಣೆಗೆ ಒಳಪಡಿಸಲಾಗುತ್ತಿತ್ತು. ಮಹಿಳಾ ವೈದ್ಯೆ ಡಾ. ರಶ್ಮಿ ಗರ್ಭಿಣಿಯ ಹೊಟ್ಟೆ ಮುಟ್ಟುತ್ತಿರಲಿಲ್ಲ. ಯಾವ ಔಷಧಿ ಎಂಬುದು ಗೊತ್ತಿಲ್ಲ. ಒಂದು ಇಂಜಕ್ಷನ್ ಹಾಕಿ ಮಾತ್ರೆ ಕೊಟ್ಟು ಮಗು ಬೆಳವಣಿಗೆ ಚೆನ್ನಾಗಿದೆ ಎಂದು ಸುಳ್ಳು ಹೇಳುತ್ತಿದ್ದರು’ ಎಂದು ಆಕ್ರೋಶ ಪಡಿಸಿದರು.

ಏಳು ತಿಂಗಳ ನಂತರ ವಿಪರೀತ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ವೇಳೆ ಖಾಸಗಿ ಆಸ್ಪತ್ರೆಯಲ್ಲಿ ತಪಾಸಣೆ ನಡೆಸಿದಾಗ ಮಗು ಐದನೇ ತಿಂಗಳಲ್ಲಿ ಇದ್ದಾಗ ಹೊಟ್ಟೆಯಲ್ಲಿ ಸತ್ತುಹೋಗಿದೆ. ಈಗಾಗಲೇ ಎರಡು ತಿಂಗಳಾಗಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ತುರ್ತಾಗಿ ಮಾಡಿಸಿ ಎಂದ ತಕ್ಷಣ ದೊಡ್ಡಬಳ್ಳಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಯಾಸದ ಹೆರಿಗೆಯಾದಾಗ ಐದು ತಿಂಗಳ ಗಂಡು ಮಗು ಸತ್ತುಹೋಗಿ ವಿಪರೀತ ವಾಸನೆ ಬರುತ್ತಿತ್ತು ಎಂದರು.

ಮಹಿಳೆಯರಾದ ರಾಮಕ್ಕ, ರಂಗಮ್ಮ, ಸವಿತಾ, ರತ್ನಮ್ಮ ಮಾತನಾಡಿ, ಈ ಹಿಂದೆ ಡಾ.ರಮೇಶ್ ಇಲ್ಲಿ ಕರ್ತವ್ಯದಲ್ಲಿದ್ದ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ರೋಗಿಗಳು ತುಂಬಿರುತ್ತಿದ್ದರು. ಉತ್ತಮ ಚಿಕಿತ್ಸೆ ನೀಡಿ ಜನರಿಗೆ ಸ್ಪಂದಿಸುತ್ತಿದ್ದರು. ಖಾಸಗಿ ಆಸ್ಪತ್ರೆ ಕಡೆ ಮುಖಮಾಡುತ್ತಿರಲಿಲ್ಲ. ಡಾ.ರಶ್ಮಿ ಬಂದ ನಂತರ ರೋಗಿಗಳ ಸಂಖ್ಯೆ ಕಡಿಮೆಯಾಗಿದೆ. ಯಾವ ರೋಗಕ್ಕೆ ಯಾವ ಚುಚ್ಚುಮದ್ದು ನೀಡಬೇಕು ಎಂಬುದು ಅವರಿಗೇ ತಿಳಿದಿಲ್ಲ ಎಂದರೆ ಚಿಕಿತ್ಸೆ ಯಾವ ರೀತಿ ನೀಡುತ್ತಾರೆ. ಗರ್ಭದಲ್ಲಿ ಗಂಡು ಮಗು ಸಾಯಿಸಲು ಈ ವೈದ್ಯೆಯರು ಬೇಕಾ, ಆಸ್ಪತ್ರೆ ಬಿಟ್ಟು ಮನೆಗೆ ಹೋಗಿ ಎಂದು ಒತ್ತಾಯಿಸಿದರು.

ಡಾ.ರಶ್ಮಿ ಮಾತನಾಡಿ, ನಾಯಿ ಕಡಿತದ ಚುಚ್ಚುಮದ್ದು ಹೊರತುಪಡಿಸಿ ಬೇರೆ ಎಲ್ಲಾ ರೋಗಿಗಳಿಗೆ ಚುಚ್ಚುಮದ್ದು ನೀಡುತ್ತೇವೆ. ನೀವು ಯಾರು, ಯಾಕೆ ಬಂದಿದ್ದೀರಿ ಎಂದು ತಡಬಡಾಯಿಸುತ್ತಿದ್ದರು. ಆಕ್ರೋಶಗೊಂಡ ಮಹಿಳೆಯರು ಆರೋಗ್ಯ ಸಚಿವರಿಗೆ ದೂರು ನೀಡಿ ವರ್ಗಾವಣೆ ಮಾಡಿಸಲೇಬೇಕು ಎಂದು ಹೊರನಡೆದರು.

ನಾಯಿ ಕಡಿತಕ್ಕೆ ಚುಚ್ಚುಮದ್ದು ಗೊತ್ತಿಲ್ಲ

ನಾಯಿ ಕಡಿತಕ್ಕಾಗಿ ಮಗು ಕರೆತಂದಿದ್ದ ಚಿಕ್ಕಗೌಡ ಮಾತನಾಡಿ, ‘ಎರಡು ದಿನಗಳಿಂದ ನಾಯಿ ಕಡಿತ ಚುಚ್ಚುಮದ್ದು ಲಸಿಕೆ ಹಾಕಿಸಲು ಮಗುವನ್ನು ಕರೆತರುತ್ತಿದ್ದೆನೆ ವೈದ್ಯೆ ಡಾ.ರಶ್ಮಿ ಅವರು ನರ್ಸ್ ಬರಬೇಕು ಎಷ್ಟು ಡ್ರಾಪ್ ಹಾಕಬೇಕು ಎಂದು ನನಗೆ ಗೊತ್ತಿಲ್ಲ. ಸದ್ಯ ಅವರು ರಜೆಯಲ್ಲಿದ್ದಾರೆ ಎಂದು ಹೇಳುತ್ತಿದ್ದಾರೆ. ಎಂದರೆ ಈ ವೈದ್ಯರು ಯಾವ ರೀತಿ ಚಿಕಿತ್ಸೆ ನೀಡುತ್ತಾರೆ ದೇವರೇ ಕಾಪಾಡಬೇಕು’ ಎಂದು ಬೇಸರ ವ್ಯಕ್ತಪಡಿಸಿದರು.

ನಾನೆಂದು ನಾಯಿ ಕಡಿತಕ್ಕೆ ಚುಚ್ಚುಮದ್ದು ಮಾಡಿಸಿಲ್ಲ. ತೋಳಿಗೆ ಹಾಕಬೇಕೋ ಸೊಂಟಕ್ಕೆ ಹಾಕಬೇಕೋ ನನಗೆ ಗೊತ್ತಿಲ್ಲ ಎಂದು ಮಾಧ್ಯಮದವರ ಮುಂದೆ ಹೇಳಿ ಮೊಬೈಲ್ ಮೂಲಕ ಬೇರೆ ವೈದ್ಯರಿಂದ ಸಲಹೆ ಪಡೆಯುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT