ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಎಫ್ಐ, ಎಸ್‌ಡಿಪಿಐ ನಿಷೇಧಕ್ಕೆ ಆಗ್ರಹ

Last Updated 20 ಡಿಸೆಂಬರ್ 2017, 6:53 IST
ಅಕ್ಷರ ಗಾತ್ರ

ಚಾಮರಾಜನಗರ: ಪಿಎಫ್‌ಐ ಮತ್ತು ಎಸ್‌ಡಿಪಿಐ ಸಂಘಟನೆಗಳನ್ನು ನಿಷೇಧಿಸುವಂತೆ ಆಗ್ರಹಿಸಿ ಜಿಲ್ಲೆಯ ವಿವಿಧೆಡೆ ಮಂಗಳವಾರ ಹಿಂದೂ ಹಿತರಕ್ಷಣಾ ಸಮಿತಿಯಿಂದ ಪ್ರತಿಭಟನೆ ನಡೆಯಿತು.

ನಗರದ ಚಾಮರಾಜೇಶ್ವರ ಸ್ವಾಮಿ ದೇವಸ್ಥಾನದಿಂದ ಮೆರವಣಿಗೆ ಆರಂಭಿಸಿದ ಸಮಿತಿಯ ಕಾರ್ಯಕರ್ತರು ಜಿಲ್ಲಾಡಳಿತ ಭವನಕ್ಕೆ ತೆರಳಿ ಘೋಷಣೆ ಕೂಗಿದರು. ಹಿಂದೂ ಕಾರ್ಯಕರ್ತರ ಮೇಲೆ ರಾಜ್ಯದಲ್ಲಿ ನಿರಂತರವಾಗಿ ನಡೆಯುತ್ತಿರುವ ಹಲ್ಲೆ ಮತ್ತು ಪೈಶಾಚಿಕ ಹತ್ಯೆಗಳ ತನಿಖೆಯನ್ನು ಎನ್‌ಐಎಗೆ ವಹಿಸಬೇಕು ಎಂದು ಆಗ್ರಹಿಸಿದರು.

ಸಿದ್ದರಾಮಯ್ಯ ಮುಖ್ಯಮಂತ್ರಿ ಯಾದ ನಂತರ ಇಂತಹ ಹತ್ಯೆಗಳು ಹೆಚ್ಚು ನಡೆಯುತ್ತಿವೆ. ಇವು ಯಾವುದೇ ವೈಯಕ್ತಿಕ ದ್ವೇಷವಾಗಿರದೆ ಸಾಮಾಜಿಕ ಮತ್ತು ರಾಜಕೀಯ ಕಾರಣಗಳಿಗಾಗಿ ನಡೆಯುತ್ತಿರುವುದು ಜನರ ಕಳವಳಕ್ಕೆ ಕಾರಣ ಎಂದು ಹೇಳಿದರು.

ಹೊನ್ನಾವರದಲ್ಲಿ ಇತ್ತೀಚೆಗೆ ಹನುಮ ಜಯಂತಿಯ ಸಂದರ್ಭದಲ್ಲಿ ಮತಾಂಧರಿಂದ ನಡೆದ ಪರೇಶ್‌್ ಮೇಸ್ತ ಹತ್ಯೆ, ಹಿಂದೂಗಳ ಮೇಲೆ ಆಗುತ್ತಿರುವ ಆಕ್ರಮಣಕ್ಕೆ ಉದಾಹರಣೆಯಾಗಿದೆ. ಬೆಂಗಳೂರಿನಲ್ಲಿ ರುದ್ರೇಶ್‌ ಹತ್ಯೆಯಾಗಿ ಒಂದು ವರ್ಷವಾಗಿದೆ. ರಾಜ್ಯ ಪೊಲೀಸರು ಹಾಗೂ ರಾಷ್ಟ್ರೀಯ ತನಿಖಾ ದಳವು ವಿಚಾರಣೆ ನಡೆಸಿ 5 ಜನರನ್ನು ಬಂಧಿಸಿವೆ. ಅವರೆಲ್ಲರೂ ಎಸ್‌ಡಿಪಿಐ ಹಾಗೂ ಪಿಎಫ್‌ಐ ಸಂಘಟನೆಯ ಸದಸ್ಯರು ಎಂದು ಆರೋಪಿಸಿದರು.

ಹೆಚ್ಚುತ್ತಿರುವ ಹಿಂಸೆ ಮತ್ತು ಹತ್ಯೆಗಳಿಗೆ ಈ ಸಂಘಟನೆಗಳು ಕಾರಣವೆಂದು ವರದಿಗಳಿಂದ ತಿಳಿದಿದ್ದರೂ ಸರ್ಕಾರ ಕ್ರಮ ಕೈಗೊಳ್ಳುವ ಬದಲು, ಆ ಸಂಘಟನೆಗಳ ಕಾರ್ಯಕರ್ತರ ವಿರುದ್ಧ ದಾಖಲಾಗಿದ್ದ ಪ್ರಕರಣಗಳನ್ನು ಹಿಂತೆಗೆದುಕೊಂಡಿದೆ ಎಂದು ದೂರಿದರು.

ಪ್ರತಿಭಟನೆಯಲ್ಲಿ ಮುಖಂಡರಾದ ಪ್ರಶಾಂತ್‌. ವೀರೇಂದ್ರ, ಮಂಜುನಾಥ, ಸಿ. ನಾಗರಾಜಮ್ಮ, ಶಾಂತಮೂರ್ತಿ, ಶಿವಕುಮಾರ್‌, ಕುಮಾರ್‌, ಜಿ.ಎಂ. ಗಾಡ್ಕರ್‌, ನಿಜಗುಣರಾಜು, ಮಹದೇವನಾಯಕ, ಶರ್ಮ, ರಂಗಸ್ವಾಮಿ, ಸಂತೋಷ, ಪ್ರದೀಪ್‌ ಕುಮಾರ್‌ ದೀಕ್ಷಿತ್‌, ವಾಸುದೇವರಾವ್‌, ಬಾಲಸುಬ್ರಮಣ್ಯ ಪಾಲ್ಗೊಂಡಿದ್ದರು.

ಹನೂರು ವರದಿ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ತಾಲ್ಲೂಕು ಹಿಂದೂ ಹಿತರಕ್ಷಣಾ ಸಮಿತಿ ಕಾರ್ಯಕರ್ತರು ಪಟ್ಟಣದಲ್ಲಿ ಧರಣಿ ನಡೆಸಿದರು.

ಖಾಸಗಿ ಬಸ್ ನಿಲ್ದಾಣದಿಂದ ಮಲೆಮಹದೇಶ್ವರ ಬೆಟ್ಟ-ಕೊಳ್ಳೇಗಾಲ ರಸ್ತೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಬಳಿಕ, ವಿಶೇಷ ತಹಶೀಲ್ದಾರ್ ಮಹದೇವಸ್ವಾಮಿ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

ಮುಖಂಡರಾದ ಪರಿಮಳಾ ನಾಗಪ್ಪ, ಪರಶಿವಮೂರ್ತಿ, ರಾಮಾಪುರ ರಾಜೇಂದ್ರ , ರಾಜಶೇಖರ್, ಪಾಳ್ಯ ರಾಚಪ್ಪ, ಡಿ.ಕೆ. ರಾಜು, ಮಹದೇವಪ್ರಸಾದ್, ವರುಣ ಮಂಜು, ಶಿವಪುರ ಮಹದೇವಪ್ರಭು, ಶಿವರಾಂ, ಮುತ್ತರಾಜು, ಲೋಕೇಶ್ ರಂಗಧಾಮಚಾರಿ, ಇತರರು ಹಾಜರಿದ್ದರು.

ಗುಂಡ್ಲುಪೇಟೆ ವರದಿ: ಪಿಎಫ್‍ಐ, ಕೆಎಫ್‌ಡಿ ಮತ್ತು ಎಸ್‌ಡಿಪಿಐ ಸಂಘಟನೆಗಳ ನಿಷೇಧಕ್ಕೆ ಆಗ್ರಹಿಸಿ ತಾಲ್ಲೂಕಿನ ಹಿಂದೂ ಹಿತರಕ್ಷಣಾ ಸಮಿತಿ ಸದಸ್ಯರು ತಾಲ್ಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.

ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ನೂರೊಂದುಶೆಟ್ಟಿ, ಮುಖಂಡ ರಾದ ಸಿ.ಎಸ್. ನಿರಂಜನಕುಮಾರ್, ಎಲ್. ಸುರೇಶ್. ಮಹದೇವಸ್ವಾಮಿ, ಪ್ರಣಯ್, ಬಿ.ಎಂ. ನಂದೀಶ್ ಮತ್ತಿತರರು ಇದ್ದರು.

ತಹಶೀಲ್ದಾರ್‌ ವಿರುದ್ಧ ಆಕ್ರೋಶ: ಮನವಿ ಪತ್ರ ನೀಡುವ ವೇಳೆ ತಹಶೀಲ್ದಾರ್ ಸಿದ್ದು ಅವರು ಕಚೇರಿಯಲ್ಲಿಯೇ ಇದ್ದರೂ ಇಲ್ಲವೆಂದು ಹೇಳಿ ತಪ್ಪಿಸಿಕೊಂಡಿದ್ದಾರೆ. ಫೋನ್‌ ಕೂಡ ಸ್ವಿಚ್ ಆಫ್ ಮಾಡಿದ್ದಾರೆ ಎಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಸ್ಥಳಕ್ಕೆ ಬಂದ ತಹಶೀಲ್ದಾರ್ ಅವರನ್ನು ಮುಖಂಡ ನಿರಂಜನಕುಮಾರ್ ತೀವ್ರ ತರಾಟೆಗೆ ತೆಗೆದುಕೊಂಡರು.

ಕೊಳ್ಳೇಗಾಲ ವರದಿ: ನಗರದ ಬಸ್ ನಿಲ್ದಾಣದಿಂದ ಮೆರವಣಿಗೆ ಆರಂಭಿಸಿದ ಹಿಂದೂ ಹಿತರಕ್ಷಣಾ ಸಮಿತಿ ಸದಸ್ಯರು ಸ್ಟೇಟ್ ಬ್ಯಾಂಕ್ ರಸ್ತೆ, ಡಾ.ರಾಜ್‌ಕುಮಾರ್ ರಸ್ತೆ, ಡಾ.ಬಿ.ಆರ್. ಅಂಬೇಡ್ಕರ್ ರಸ್ತೆ, ಎಡಿಬಿ ವೃತ್ತದ ಮೂಲಕ ಸಾಗಿ ತಾಲ್ಲೂಕು ಕಚೇರಿಯಲ್ಲಿ ಅಧಿಕಾರಿ ರಮೇಶ್ ಅವರಿಗೆ ಮನವಿ ಸಲ್ಲಿಸಿದರು.

ನಗರಸಭೆ ಸದಸ್ಯ ಗಿರಿ, ತಾಲ್ಲೂಕು ಪಂಚಾಯಿತಿ ಸದಸ್ಯ ಕೃಷ್ಣ, ಮುಖಂಡರಾದ ನಾಗೇಂದ್ರಸ್ವಾಮಿ, ಮುಖಂಡರಾದ ರಮೇಶ್‌ ಮುರಾರಿ, ಬಸವಯ್ಯ, ಚಂದ್ರಕಲಾಬಾಯಿ, ಜಿ.ಪಿ. ಶಿವಕುಮಾರ್, ಸುರೇಶ್, ಚಿನ್ನಸ್ವಾಮಿ ಮಾಳಿಗೆ, ನಾಗರಾಜು, ಉದಯ್‌ ಕುಮಾರ್, ರಾಜಶೇಖರ್, ಕುಮಾರಸ್ವಾಮಿ, ಮಧುಸೂದನ್, ಮಂಜುನಾಥ್, ನಂಜಪ್ಪ, ಪರಮೇಶ್, ಜ್ಯೋತಿ, ಉಷಾರಾಣಿ, ಶಿವಮ್ಮ, ಕವಿತಾ, ಸಿದ್ಧಾರ್ಥ್, ಶಿವಕುಮಾರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT