ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡವನದಿಣ್ಣೆ ಸುತ್ತಮುತ್ತ ಕಾಡಾನೆ ದಾಳಿ

Last Updated 20 ಡಿಸೆಂಬರ್ 2017, 7:04 IST
ಅಕ್ಷರ ಗಾತ್ರ

ಮೂಡಿಗೆರೆ: ತಾಲ್ಲೂಕಿನ ಬಡವನದಿಣ್ಣೆ ಸುತ್ತಮುತ್ತಲ ಪ್ರದೇಶದಲ್ಲಿ ಮಂಗಳವಾರ ಕಾಡಾನೆಗಳು ಕಾಣಿಸಿಕೊಂಡಿದ್ದು, ಗ್ರಾಮದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ.ಮಂಗಳವಾರ ಮುಂಜಾನೆ ಗ್ರಾಮಕ್ಕೆ ಕೆಂಜಿಗೆ ಭಾಗದಿಂದ ಬಂದಿರಬಹುದು ಎಂದು ಶಂಕಿಸಿರುವ ಎರಡು ಕಾಡಾನೆಗಳು, ಗ್ರಾಮದ ಲಕ್ಷ್ಮಣ ಗೌಡ ಎಂಬುವವರ ಕಾಫಿ ತೋಟದಲ್ಲಿ ತಿರುಗಾಡಿ ಫಸಲುಭರಿತ ಗಿಡಗಳನ್ನು ತುಳಿದು ಹಾನಿಗೊಳಿಸಿವೆ. ಗ್ರಾಮದ ಪರಮೇಶ್‌, ಮಹೇಶ್‌ ಸೇರಿದಂತೆ ಎಂಟಕ್ಕೂ ಅಧಿಕ ರೈತರ ಭತ್ತದ ಗದ್ದೆಗಳಲ್ಲಿ ತಿರುಗಾಡಿ, ಕಟಾವಿಗೆ ಸಿದ್ಧವಾಗಿದ್ದ ಭತ್ತದ ಪೈರನ್ನು ತಿಂದು, ತುಳಿದು ಹಾನಿಗೊಳಿಸಿವೆ.

ಬೆಳಕು ಹರಿಯುತ್ತಿದ್ದಂತೆ ಕೆಂಜಿಗೆ ಅರಣ್ಯದತ್ತ ತೆರಳಲು ಮುಂದಾಗಿರುವ ಕಾಡಾನೆಗಳು, ಅರಣ್ಯ ಪ್ರವೇಶಿಸಲಾಗದೇ, ಗ್ರಾಮದ ಬಳಿಯಿರುವ ಸರ್ಕಾರಿ ಶಾಲೆಯ ಹಿಂಭಾಗದಲ್ಲಿಯೇ ವಾಸ್ತವ್ಯ ಹೂಡಿದ್ದು, ಇಡೀ ದಿನ ಶಾಲಾ ಹಿಂಭಾಗದ ಅರಣ್ಯದಲ್ಲಿಯೇ ಬೀಡುಬಿಟ್ಟಿದ್ದವು. ಇದರಿಂದ ಗ್ರಾಮದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದ್ದು, ಬಹುತೇಕ ಕಾಫಿ ತೋಟಗಳಲ್ಲಿ ರಜೆ ಘೋಷಿಸಲಾಗಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೂ ರಜೆ ನೀಡಲಾಗಿತ್ತು.

ಕಾಡಾನೆ ಬಂದಿರುವ ಸುದ್ದಿ ತಿಳಿದು ಸ್ಥಳಕ್ಕೆ ಬಂದ ಮೂಡಿಗೆರೆ ಅರಣ್ಯ ಇಲಾಖೆ ಸಿಬ್ಬಂದಿ, ಹಗಲಿನಲ್ಲಿ ಕಾಡಾನೆಗಳನ್ನು ಅರಣ್ಯದತ್ತ ಓಡಿಸಿದರೆ ಅನಾಹುತ ಸಂಭವಿಸಬಹುದು ಎಂಬ ಹಿನ್ನೆಲೆಯಲ್ಲಿ, ಸಂಜೆಯವರೆಗೂ ಕಾಡಾನೆಗಳು ಕದಲದಂತೆ ಕಾದು, ರಾತ್ರಿ ಪಟಾಕಿ ಸಿಡಿಸಿ, ಕಾಡನೆಗಳನ್ನು ಅರಣ್ಯದತ್ತ ಓಡಿಸಿದರು.

‘ಕಾಡಾನೆ ದಾಳಿಯು ರೈತರಿಗೆ ಬಿಸಿತುಪ್ಪವಾಗಿದ್ದು, ಕಟಾವಿನ ಸಂದರ್ಭದಲ್ಲಿ ದಾಳಿ ನಡೆಸಿ ಬೆಳೆಹಾನಿ ಮಾಡುತ್ತಿರುವುದು ಅಪಾರ ನಷ್ಟವಾಗುತ್ತಿದೆ. ರೈತರು ಸಾಲ ಮಾಡಿ ಕೃಷಿ ಮಾಡಿದ್ದು, ಇದೀಗ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಕಾಡಾನೆ ದಾಳಿಯಿಂದ ಭತ್ತದ ಬೆಳೆಯನ್ನು ಕೈಬಿಡುತ್ತಿದ್ದು, ಮನೆ ಪೂರ್ತಿಗೆ ಭತ್ತ ಬೆಳೆದರೂ ಕಾಡಾನೆಗಳು ನಾಶಗೊಳಿಸುತ್ತಿವೆ. ಕಾಡಾನೆಗಳನ್ನು ಸ್ಥಳಾಂತರ ಮಾಡುವುದೊಂದೇ ಪರಿಹಾರವಾಗಿದ್ದು, ಅರಣ್ಯ ಇಲಾಖೆಯು ಕೂಡಲೇ ಕಾಡಾನೆಗಳನ್ನು ಸ್ಥಳಾಂತರಿಸಬೇಕು’ ಎಂದು ಗ್ರಾಮಸ್ಥರು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT