ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಿಗೆ 14ನೇ ಹಣಕಾಸಿನ ಅನುದಾನ ಬಳಸಿ

Last Updated 20 ಡಿಸೆಂಬರ್ 2017, 8:42 IST
ಅಕ್ಷರ ಗಾತ್ರ

ಹಾಸನ: ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು 14ನೇ ಹಣಕಾಸಿನ ಅನುದಾನವನ್ನು ಕುಡಿಯುವ ನೀರು ಪೂರೈಕೆ ಕಾಮಗಾರಿಗಳಿಗೆ ಮಾತ್ರ ವಿನಿಯೋಗಿಸಬೇಕು ಎಂದು ಆಲೂರು–ಸಕಲೇಶಪುರ ಕ್ಷೇತ್ರದ ಶಾಸಕ ಎಚ್.ಕೆ. ಕುಮಾರಸ್ವಾಮಿ ಸೂಚನೆ ನೀಡಿದರು.

ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಬೇಸಿಗೆ ಸಮೀಪಿಸುತ್ತಿದ್ದು, ಅನೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಹಾಗಾಗಿ ಮೋಟಾರು ಅಳವಡಿಕೆ, ವಿದ್ಯುತ್ ಸಂಪರ್ಕ ಹಾಗೂ ಪೈಪ್‌ಲೈನ್ ಕಾಮಗಾರಿಗಳಿಗೆ ಅನುದಾನ ಬಳಸಿಕೊಳ್ಳಿ ಎಂದು ತಿಳಿಸಿದರು.

ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಭಾನುಪ್ರಕಾಶ್ ಮಾತನಾಡಿ, ಈ ಬಾರಿ ಹಿಂಗಾರು ಶೇ 35ರಷ್ಟು ಕೊರತೆ ಉಂಟಾಗಿದೆ. ಇದರಿಂದಾಗಿ ಬಿತ್ತನೆ ಪ್ರಮಾಣ ಕಡಿಮೆಯಾಗಿದೆ. ಇಲಾಖೆಯಿಂದ ರೈತರಿಗೆ ನೀಡುವ 2 ಸಾವಿರ ಟಾರ್ಪಲ್‌ಗಳಿಗೆ ಬೇಡಿಕೆ ಇದ್ದು, 400 ಟಾರ್ಪಲ್‌ ಮಾತ್ರ ನೀಡಲಾಗುತ್ತಿದೆ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಯಾವುದೇ ಮಾನದಂಡ ಇಲ್ಲದೆ ಟಾರ್ಪಲ್ ನೀಡುತ್ತಿರುವುದರಿಂದ ಬೇಡಿಕೆ ಹೆಚ್ಚಿದ್ದು, ಹೆಚ್ಚುವರಿ ಅನುದಾನ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸುವಂತೆ ತಿಳಿಸಿದರು.

ತಾಲ್ಲೂಕಿನ ಅನೇಕ ಪ್ರಾಥಮಿಕ ಕೇಂದ್ರಗಳಲ್ಲಿ ವೈದ್ಯರ ಕೊರತೆ ಇದ್ದು, ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು. ಕೊರತೆ ಇರುವ ಕಡೆ ಆಯುರ್ವೇದ ವೈದ್ಯರನ್ನು ವಾರದಲ್ಲಿ ಮೂರು ದಿನ ಕರ್ತವ್ಯ ನಿರ್ಹಿಸುವಂತೆ ನೋಡಿ ಕೊಳ್ಳಬೇಕು. ಗೊರೂರು ಮತ್ತು ಕಟ್ಟಾಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರೇ ಇಲ್ಲ. ಜತೆಗೆ ಪ್ರತಿ ಹೋಬಳಿಗೂ 108 ಆಂಬುಲೆನ್ಸ್‌ ನೀಡಬೇಕು ಎಂದು ತಾಲ್ಲೂಕು ಆರೋಗ್ಯಾಧಿಕಾರಿಗೆ ತಿಳಿಸಿದರು.

ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕ ಮಾತನಾಡಿ, ಇಲಾಖೆಯಿಂದ ಜಾನುವಾರು ವಿಮಾ ಯೋಜನೆ ಲಭ್ಯವಿದ್ದು, ಶೇ 50 ರಷ್ಟು ರಿಯಾಯಿತಿ ನೀಡಲಾಗುವುದು. ಸಹಕಾರಿ ಕೇಂದ್ರಗಳಲ್ಲಿ ನೋಂದಾಯಿಸಿಕೊಂಡ ರೈತರು ವಿಮಾ ಮೊತ್ತದ ಶೇ 30ರಷ್ಟು ಮಾತ್ರವೇ ಪಾವತಿಸಬೇಕು. ಅಲ್ಲದೆ ಪರಿಶಿಷ್ಟ ಜಾತಿ ಮತ್ತು ಪಂಗಡದ ರೈತರು ಕೇವಲ ಶೇ 15ರಷ್ಟು ವಿಮಾ ಹಣ ಪಾವತಿಸಬೇಕು ಎಂದು ಮಾಹಿತಿ ನೀಡಿದರು.

ಈ ಬಾರಿ ಆಲೂಗೆಡ್ಡೆ ಬಿತ್ತನೆ ಬೀಜ ನೀಡಲು ರೈತರಿಂದ ನೋಂದಣಿ ಮಾಡಿಸಿ ಕೊಳ್ಳಲಾಗುತ್ತಿದ್ದು, ಬೇಡಿಕೆಯಂತೆ ಪೂರೈಕೆ ಮಾಡಲಾಗುವುದು ಎಂದು ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕರು ಸಭೆಗೆ ಮಾಹಿತಿ ನೀಡಿದರು.

ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಮಾತನಾಡಿ, ಇಲಾಖೆಯಿಂದ ಮೀನುಗಾರರಿಗೆ ಟಿವಿಎಸ್ ದ್ವಿಚಕ್ರವಾಹನ, ಬಾಕ್ಸ್‌ ಹಾಗೂ ₹ 10 ಸಾವಿರ ಸಹಾಯಧನ ನೀಡಲಾಗುತ್ತಿದೆ. ತಾಲ್ಲೂಕಿನಲ್ಲಿ ಪರವಾನಗಿ ಪಡೆದ 250 ಮೀನುಗಾರರಿದ್ದು, ಈ ವರೆಗೂ 8.36 ಲಕ್ಷ ಮೀನಿನ ಮರಿಗಳನ್ನು ವಿತರಿಸಲಾಗಿದೆ ಎಂದು ತಿಳಿಸಿದರು.

ಶಾಸಕ ಕುಮಾರಸ್ವಾಮಿ, ಕೆರೆಗಳಲ್ಲಿ ಮೀನು ಸಾಕಾಣೆ ಗುತ್ತಿಗೆಯನ್ನು ಮಹಿಳಾ ಸ್ವ–ಸಹಾಯ ಸಂಘಗಳಿಗೂ ನೀಡಬೇಕು. ಇದರಿಂದ ಅವರ ಆರ್ಥಿಕ ಸ್ಥಿತಿಯೂ ಉತ್ತಮವಾಗುತ್ತದೆ. ಜತೆಗೆ ಹೇಮಾವತಿ ಹಿನ್ನಿರಿನಲ್ಲಿ ಮೀನು ಹಿಡಿದು ಜೀವಿಸುವ ಅನೇಕ ಕುಟುಂಬಗಳಿದ್ದು, ಜಲಾಶಯಕ್ಕೆ ಹೆಚ್ಚು ಮೀನಿನ ಮರಿಗಳನ್ನು ಬಿಡಬೇಕು ಎಂದು ಸಲಹೆ ನೀಡಿದರು. ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಿ.ಟಿ. ಸತೀಶ್, ಕಾರ್ಯನಿರ್ವಹಕಾಧಿಕಾರಿ ಕೆ.ಸಿ. ದೇವರಾಜೇಗೌಡ, ಉಪಾಧ್ಯಕ್ಷೆ ನಾಗರತ್ನಾ ಇದ್ದರು.

ಪಿಡಿಒಗಳಿಗೆ ನೋಟಿಸ್ ನೀಡಿ

ಸರಿಯಾಗಿ ಕರ್ತವ್ಯ ನಿರ್ವಹಿಸದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿ ಎಂದು  ಶಾಸಕ ಎಚ್.ಕೆ.ಕುಮಾರ ಸ್ವಾಮಿ ಅವರು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗೆ ನಿರ್ದೇಶನ ನೀಡಿದರು.

ಗೊರೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇಣುಕಮ್ಮ ಮಾತನಾಡಿ, ‘ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಕಚೇರಿಗೆ ಸರಿಯಾಗಿ ಬರುವುದಿಲ್ಲ. ಪ್ರಶ್ನಿಸಿದರೆ ಉಡಾಫೆ ಉತ್ತರ ನೀಡುತ್ತಾರೆ. ಸಭೆಗಳ ಬಗ್ಗೆಯೂ ಮಾಹಿತಿ ನೀಡುವುದಿಲ್ಲ’ ಎಂದು ಆರೋಪಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ, ಗೊರೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿರುದ್ಧ ಸಾಕಷ್ಟು ದೂರುಗಳಿವೆ. ಗ್ರಾಮ ವಿಕಾಸ ಯೋಜನೆಯಡಿ ಶೇ 16 ಮಾತ್ರವೇ ಸಾಧನೆ ಮಾಡಲಾಗಿದೆ. ಈ ಬಗ್ಗೆ ಜಿಲ್ಲಾ ಪಂಚಾಯಿತಿ ಸಿಇಒ ಗಮನಕ್ಕೂ ತರಲಾಗುವುದು ಎಂದು ಪಂಚಾಯಿತಿ ಅಭಿವದ್ಧಿ ಅಧಿಕಾರಿ ನವೀನ್ ಅವರನ್ನು ತರಾಟೆಗೆ ತೆಗೆದುಕೊಂಡರು.

* * 

ಕಳೆದ ಬಾರಿ ದೃಢೀಕೃತ ಆಲೂಗೆಡ್ಡೆ ಬಿತ್ತನೆ ಬೀಜ ಸರಿಯಾಗಿ ಮೊಳಕೆ ಬಾರದೆ ರೈತರು ನಷ್ಟ ಅನುಭವಿಸಿದ್ದಾರೆ. ಈ ಬಾರಿ ಕ್ರಮ ವಹಿಸಬೇಕು
ಎಚ್.ಕೆ.ಕುಮಾರಸ್ವಾಮಿ, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT