7

ಹತ್ತು ವರ್ಷ ಕಳೆದರೂ ಅಸ್ತಿತ್ವಕ್ಕೆ ಬಾರದ ಕಾಳಗಿ ಬಿಇಒ ಕಚೇರಿ

Published:
Updated:
ಹತ್ತು ವರ್ಷ ಕಳೆದರೂ ಅಸ್ತಿತ್ವಕ್ಕೆ ಬಾರದ ಕಾಳಗಿ ಬಿಇಒ ಕಚೇರಿ

ಕಾಳಗಿ: ಚಿತ್ತಾಪುರ ತಾಲ್ಲೂಕು ಭೌಗೋಳಿಕವಾಗಿ ರಾಜ್ಯದಲ್ಲೇ ದೊಡ್ಡ ತಾಲ್ಲೂಕಾಗಿದ್ದು, ಉತ್ತರ–ದಕ್ಷಿಣವಾಗಿ 120ಕಿ.ಮೀ ಉದ್ದವಿದೆ. ಇಲ್ಲಿ ನೂರಾರು ಶಾಲೆಗಳಿದ್ದು, ಸಾವಿರಾರು ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೆ, ಈ ಎಲ್ಲ ಶಾಲೆಗಳ ತನಿಖೆ, ಮೇಲ್ವಿಚಾರಣೆ ಹಾಗೂ ಇತರ ಕಾರ್ಯಗಳನ್ನು ಸಮರ್ಪಕವಾಗಿ ನಿರ್ವಹಿಸುವುದು ಒಬ್ಬ ಕ್ಷೇತ್ರ ಶಿಕ್ಷಣಾಧಿಕಾರಿಗೆ ಸಾಧ್ಯವಾಗುತ್ತಿಲ್ಲ.

ಇದನ್ನು ಮನಗಂಡು ಚಿತ್ತಾಪುರ ತಾಲ್ಲೂಕಿನ ಗುಂಡಗುರ್ತಿ ಮತ್ತು ಕಾಳಗಿ ಹೋಬಳಿಯ ದೂರದ ಹಳ್ಳಿಗಳನ್ನು ಒಟ್ಟುಸೇರಿಸಿ ಕಾಳಗಿ ಪಟ್ಟಣದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಪ್ರಾರಂಭಿಸಿ ಎಂದು ಆಗಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಈ ಭಾಗದ ಜನರು ನಿವೇದನೆ ಮಾಡಿಕೊಂಡಿದ್ದರು. ಬೇಡಿಕೆಗೆ ಸ್ಪಂದಿಸಿ, ಆ ಕೂಡಲೇ ಶಿಕ್ಷಣ ಇಲಾಖೆಗೆ ಸೂಚಿಸಿದ್ದರು. ಆದರೆ, ಈ ಕಡತ ಹತ್ತು ವರ್ಷಗಳಾದರೂ ತೆರೆದುಕೊಳ್ಳದೆ ಧೂಳು ತಿನ್ನುತ್ತಿದೆ.

ಇದರಿಂದ ಚಿತ್ತಾಪುರ ಪಟ್ಟಣಕ್ಕೆ ಬಹು ದೂರ ಎನಿಸುವ ಮತ್ತು ಕಾಳಗಿಗೆ ಸಮೀಪದಲ್ಲಿರುವ ನಿಪ್ಪಾಣಿ, ಸಾವತ ಖೇಡ, ಅರಣಕಲ್, ಬೆಡಸೂರ, ವಟವಟಿ ಮುಂತಾದ ಹಳ್ಳಿ–ತಾಂಡಾದ ಶಾಲೆಗಳ ಶಿಕ್ಷಕರು ಮತ್ತು ಪಾಲಕರಿಗೆ ‘ಚಿತ್ತಾಪುರ ಕಚೇರಿ’ಯ ಅಲೆದಾಟ ಇನ್ನೂ ತಪ್ಪಿಲ್ಲ. ಇದರಿಂದ ಶಾಲಾ ವ್ಯವಸ್ಥೆ ಹಾಗೂ ಶಿಕ್ಷಣದ ಗುಣಮಟ್ಟದ ಅಭಿವೃದ್ಧಿಗೆ ಪೆಟ್ಟು ಬೀಳುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಎಚ್‌.ಡಿ.ಕುಮಾರಸ್ವಾಮಿ ಮತ್ತು ಚಿತ್ತಾಪುರ ಕ್ಷೇತ್ರದ ಶಾಸಕ ವಿಶ್ವನಾಥ ಪಾಟೀಲ ಹೆಬ್ಬಾಳ ಅವರ ಶಿಫಾರಸ್ಸಿನ ಅನ್ವಯ ಆಗಿನ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಸವರಾಜ ಹೊರಟ್ಟಿ 2007ರ ಆಗಸ್ಟ್ 29ರಂದು ಶಿಕ್ಷಣ ಇಲಾಖೆಯ ಕಾರ್ಯದರ್ಶಿಗೆ ಆದೇಶಿಸಿ, ಕಾಳಗಿಯಲ್ಲಿ ತಕ್ಷಣ ಹೊಸದಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ತೆರೆದು ಸುತ್ತಲಿನ ಜನತೆಗೆ ಅನುಕೂಲ ಮಾಡಿಕೊಟ್ಟು ಈಗಿರುವ ಚಿತ್ತಾಪುರ ಕಚೇರಿಯ ಹೊರೆ ಕಡಿಮೆಗೊಳಿಸುವಂತೆ ಪತ್ರ ಬರೆದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂಬ ದೂರು ಕೇಳಲಾರಂಭಿಸಿವೆ.

ಕಾಳಗಿ ಬಿಇಒ ಕಚೇರಿಯ ತಾತ್ಕಾಲಿಕ ಪ್ರಾರಂಭಕ್ಕೆ ಸರ್ಕಾರಿ ಮಾದರಿಯ ಪ್ರಾಥಮಿಕ ಶಾಲೆಯ ಹೆಚ್ಚುವರಿ ಎರಡು ಕೊಠಡಿಗಳನ್ನು ತೆಗೆದುಕೊಳ್ಳುವುದು. ಸ್ವಂತ ಕಟ್ಟಡ ನಿರ್ಮಿಸಲು ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ 100*100ಚದರ ಅಡಿ ನಿವೇಶನ ಇರುವುದು.

ಕಾಳಗಿ, ತೆಂಗಳಿ, ಗುಂಡಗುರ್ತಿ, ಮಾಡಬೂಳ, ಹೆಬ್ಬಾಳ, ರೇವಗ್ಗಿ ಕೋರವಾರ ಕ್ಲಸ್ಟರ್‌ಗಳ 97 ಸರ್ಕಾರಿ, 9ಅನುದಾನರಹಿತ ಪ್ರಾಥಮಿಕ ಶಾಲೆಗಳು, 20ಸರ್ಕಾರಿ, 2ಅನುದಾನರಹಿತ ಪ್ರೌಢಶಾಲೆಗಳು –ಹೀಗೆ ಒಟ್ಟು 128 ಶಾಲೆಗಳ ಜತೆಗೆ 661 ಶಿಕ್ಷಕರು ಈ ಕಚೇರಿ ವ್ಯಾಪ್ತಿಗೆ ಬರುತ್ತಾರೆ.

ಅಷ್ಟೇ ಅಲ್ಲದೆ, ಚಿಂಚೋಳಿ ತಾಲ್ಲೂಕಿನ ಗಡಿಕೇಶ್ವರ – 15, ಕೋಡ್ಲಿ– 24, ರಟಕಲ್‌ –15 ಮತ್ತು ರುಮ್ಮನಗೂಡ ಕ್ಲಸ್ಟರ್‌ ವ್ಯಾಪ್ತಿಯ 19 –ಹೀಗೆ ಒಟ್ಟು 73ಶಾಲೆಗಳು ಕಾಳಗಿ ಬಿಇಒ ಕಚೇರಿಗೆ ಒಳಪಡಿಸಬಹುದು ಎಂಬ ಅಂಕಿ–ಅಂಶಗಳ ಸಮಗ್ರ ವರದಿಯನ್ನು ಕಲಬುರ್ಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಹೆಚ್ಚುವರಿ ಆಯುಕ್ತರು 2007ರಲ್ಲೆ ತರಿಸಿಕೊಂಡಿದ್ದೂ ಆಗಿದೆ ಎಂದು ಹೇಳಲಾಗುತ್ತಿದೆ.

ಆದರೆ, ಯಾವುದೇ ಒಂದು ಶೈಕ್ಷಣಿಕ ಕ್ಷೇತ್ರ ವಿಭಜನೆಗೆ 400 ಶಾಲೆಗಳು, 4,000ಶಿಕ್ಷಕರು ಹಾಗೂ ಒಂದು ಲಕ್ಷ ವಿದ್ಯಾರ್ಥಿಗಳು ಇರಬೇಕಾಗಿರುವುದು ಸರ್ಕಾರದ ಮಾನದಂಡವಾಗಿದೆ. ಇಲ್ಲಿ ಈ ಮೂರು ಷರತ್ತುಗಳು ಪೂರೈಸದೆ ಇರುವ ಪ್ರಯುಕ್ತ ಸದರಿ ಪ್ರಸ್ತಾವವನ್ನು ತಿರಸ್ಕರಿಸಲಾಗಿದೆ ಎಂದು 2011ರ ಜೂನ್ 13ರಂದು ಹೆಚ್ಚುವರಿ ಆಯುಕ್ತರ ಕಚೇರಿಯ ಉಪನಿರ್ದೇಶಕರು ತಿಳಿಸಿರುವುದು ಬೆಳಕಿಗೆ ಬಂದಿದೆ.

ನಂತರವು 2013ರ ಜುಲೈ 6ರವರೆಗೆ ಪ್ರಕ್ರಿಯೆ ನಡೆದಿದ್ದು, ಬಳಿಕ ಏನಾಯ್ತು ಎಂಬುದು ನಿಗೂಢವಾಗಿ ಉಳಿದಿದೆ. ಒಟ್ಟಾರೆ ಕಾಳಗಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಸ್ಥಾಪನೆಗೆ ಸಂಬಂಧಿಸಿ ಮುಖ್ಯಮಂತ್ರಿ, ಶಿಕ್ಷಣ ಸಚಿವರು ಮನಸು ಮಾಡಿದ್ದರೂ ಶಿಕ್ಷಣ ಇಲಾಖೆಯ ಕೆಳಸ್ತರದ ಅಧಿಕಾರಿಗಳು ಚೆಲ್ಲಾಟವಾಡುತ್ತಿರುವುದು ವಿಪರ್ಯಾಸವೇ ಸರಿ.

* * 

ನಾನು ಹೊಸದಾಗಿ ಬಂದಿದ್ದೇನೆ. ಕಾಳಗಿ ಬಿಇಒ ಕಚೇರಿ ಸ್ಥಾಪನೆ ಕುರಿತು ನನಗೇನು ಮಾಹಿತಿ ಇಲ್ಲ. ಕಾಳಗಿ ತಾಲ್ಲೂಕು ಅಸ್ತಿತ್ವಕ್ಕೆ ಬಂದರೆ ಕಚೇರಿ ಸ್ಥಾಪಿಸಲು ಅವಕಾಶವಿದೆ.

ದೊಡ್ಡರಂಗಪ್ಪ, ಚಿತ್ತಾಪುರ ಬಿಇಒ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry