7

ತಂಬಾಕು ಸೇವನೆ ಹತೋಟಿ ಚಿತ್ರಕ್ಕಿಂತಲೂ ಜಾಗೃತಿ ಮುಖ್ಯ

Published:
Updated:
ತಂಬಾಕು ಸೇವನೆ ಹತೋಟಿ ಚಿತ್ರಕ್ಕಿಂತಲೂ ಜಾಗೃತಿ ಮುಖ್ಯ

ಬೀಡಿ, ಸಿಗರೇಟ್‌ ಮತ್ತಿತರ ತಂಬಾಕು ಉತ್ಪನ್ನಗಳ ಪೊಟ್ಟಣದ ಮೇಲಿನ ಶೇ 85ರಷ್ಟು ಜಾಗದಲ್ಲಿ ‘ತಂಬಾಕಿನ ಅಪಾಯಗಳ ಬಗ್ಗೆ ಎಚ್ಚರಿಸುವ ಚಿತ್ರ ಮತ್ತು ಸಂದೇಶ’ ಮುದ್ರಣವನ್ನು ಕಡ್ಡಾಯಗೊಳಿಸಿ ಕೇಂದ್ರ ಸರ್ಕಾರ 2015ರಲ್ಲಿ ಹೊರಡಿಸಿದ್ದ ಅಧಿಸೂಚನೆಯು ‘ಸಂವಿಧಾನಬಾಹಿರ’ ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ಕೊಟ್ಟಿದೆ. ಈ ಅಧಿಸೂಚನೆ 2016ರ ಏಪ್ರಿಲ್‌ನಿಂದ ಜಾರಿಯಲ್ಲಿತ್ತು. ಈಗ ಕೋರ್ಟ್‌ನ ಈ ತೀರ್ಪು,  ಸಾರ್ವಜನಿಕ ಆರೋಗ್ಯ ರಕ್ಷಣೆಯ ಹಾದಿಯಲ್ಲಿ ಸ್ವಲ್ಪ ಮಟ್ಟಿಗಿನ ಹಿನ್ನಡೆ ಎಂದು ಹೇಳಬಹುದು. ಇದರ ತಕ್ಷಣದ ಪರಿಣಾಮ ಎಂದರೆ ತಂಬಾಕು ಪೊಟ್ಟಣಗಳ ಮೇಲೆ ಎಚ್ಚರಿಕೆ ಸಂದೇಶ ಹಾಗೂ ಚಿತ್ರಗಳನ್ನು ದೊಡ್ಡದಾಗಿ ಮುದ್ರಿಸುವ ದೇಶಗಳ ಪಟ್ಟಿಯಲ್ಲಿ ನಾವು ಈಗಿರುವ 3ನೇ ಸ್ಥಾನದಿಂದ 106ನೇ ಸ್ಥಾನಕ್ಕೆ ಇಳಿಯುತ್ತೇವೆ. ಆದರೆ, ತೀರ್ಪಿನ ನಂತರವೂ ತಂಬಾಕು ಉತ್ಪನ್ನಗಳ ಪೊಟ್ಟಣದ ಶೇ 40ರಷ್ಟು ಜಾಗದಲ್ಲಿ ಎಚ್ಚರಿಕೆ ಚಿತ್ರ– ಸಂದೇಶ ಮುದ್ರಿಸುವುದು ಕಡ್ಡಾಯ. ಏಕೆಂದರೆ ಇದಕ್ಕೆ ಸಂಬಂಧಪಟ್ಟ 2008ರ ಅಧಿಸೂಚನೆಯನ್ನು ರದ್ದುಪಡಿಸಬೇಕು ಎಂಬ ಸಿಗರೇಟ್‌ ತಯಾರಿಕಾ ಕಂಪೆನಿಗಳ ಕೋರಿಕೆಯನ್ನು ಕೋರ್ಟ್ ಮಾನ್ಯ ಮಾಡಿಲ್ಲ. ಅಲ್ಲದೆ ತೀರ್ಪಿನ ನಂತರವೂ, ಅಧಿಸೂಚನೆಯಲ್ಲಿ ಇರುವ ಲೋಪದೋಷಗಳನ್ನು ಸರಿಪಡಿಸಿ ಹೊಸದಾಗಿ ಹೊರಡಿಸಲು ಶಾಸಕಾಂಗಕ್ಕೆ ಅವಕಾಶ– ಅಧಿಕಾರ ಇದ್ದೇ ಇದೆ.

ವಾಸ್ತವವಾಗಿ ತಂಬಾಕು ಉತ್ಪನ್ನಗಳ ಪೊಟ್ಟಣದ ಮೇಲೆ ಎಷ್ಟು ಪ್ರಮಾಣದಲ್ಲಿ ಎಚ್ಚರಿಕೆಯ ಸಂದೇಶ– ಚಿತ್ರ ಇರಬೇಕು ಎನ್ನುವುದರ ಬಗ್ಗೆ ಇದುವರೆಗೂ ಒಮ್ಮತ ಇಲ್ಲ ಎನ್ನುವುದನ್ನು ಗಮನಿಸಬೇಕಾಗುತ್ತದೆ. ಶೇ 40ರಷ್ಟು ಇದ್ದದ್ದನ್ನು ಅಧಿಸೂಚನೆಯೊಂದರ ಮೂಲಕ ಶೇ 85ಕ್ಕೆ ಏರಿಸಿದ್ದು ಕೇಂದ್ರ ಆರೋಗ್ಯ ಸಚಿವಾಲಯ. ಆದರೆ ಸಂಸದೀಯ ಸ್ಥಾಯಿ ಸಮಿತಿಯು ಸಂಸತ್ತಿಗೆ ಸಲ್ಲಿಸಿದ ಅಂತಿಮ ವರದಿಯಲ್ಲಿ, ಈ ಪ್ರಮಾಣ ಶೇ 50ರಷ್ಟಿದ್ದರೆ ಸಾಕು ಎಂದು ಅಭಿಪ್ರಾಯಪಟ್ಟಿದೆ. ಶೇ 85ಷ್ಟು ಜಾಗದಲ್ಲಿ ಎಚ್ಚರಿಕೆ ಚಿತ್ರ ಮುದ್ರಿಸಿದರೂ ಯಾವುದೇ ಪ್ರಯೋಜನ ಇಲ್ಲ ಎಂದು ವಾಣಿಜ್ಯ ಸಚಿವಾಲಯ ಹೇಳಿದೆ. ಬೀಡಿ ಕಟ್ಟುವುದನ್ನೇ ಜೀವನೋಪಾಯ ಮಾಡಿಕೊಂಡ ಲಕ್ಷಾಂತರ ಬಡ ಕುಟುಂಬಗಳಿಗೆ ಆರ್ಥಿಕವಾಗಿ ತೊಂದರೆಯಾಗುತ್ತದೆ ಎಂಬ ಕಾರಣಕ್ಕಾಗಿ ಕೇಂದ್ರ ಉದ್ಯೋಗ ಸಚಿವಾಲಯ ಕೂಡ ಶೇ 85ರ ನಿಯಮದ ವಿರುದ್ಧವಾಗಿದೆ. ತಂಬಾಕು ಉತ್ಪನ್ನಗಳ ಮೇಲೆ ಈಗಾಗಲೇ ಅತ್ಯಧಿಕ ತೆರಿಗೆ ಇದೆ. ಹೀಗಿರುವಾಗ ಎಚ್ಚರಿಕೆಯ ಚಿತ್ರ– ಸಂದೇಶ ಮುದ್ರಣ ಜಾಗದ ಪ್ರಮಾಣ ಹೆಚ್ಚಿಸುವುದು ‘ಗ್ರಾಹಕರನ್ನು ನಿರುತ್ತೇಜಗೊಳಿಸುತ್ತದೆ, ಬಳಕೆ ಕಡಿಮೆಯಾಗುತ್ತದೆ; ಅದರಿಂದ ಉದ್ದೇಶ ಈಡೇರುತ್ತದೆ’ ಎಂಬ ತೀರ್ಮಾನಕ್ಕೆ ಬರುವುದು ಸರಿಯಲ್ಲ.

ರೈಲು, ಬಸ್ಸು, ಕಚೇರಿ ಮುಂತಾದ ಕಡೆ ಜಾರಿಯಲ್ಲಿದ್ದ ಧೂಮಪಾನ ನಿಷೇಧವನ್ನು ಸಾರ್ವಜನಿಕ ಸ್ಥಳಗಳಿಗೂ ವಿಸ್ತರಿಸಲಾಗಿದೆ. ಹೀಗಾಗಿ ಮನಸ್ಸಿಗೆ ಬಂದ ಕಡೆಯಲ್ಲೆಲ್ಲ ಧೂಮಪಾನ ಮಾಡುವಂತಿಲ್ಲ. ಉಲ್ಲಂಘನೆಗೆ ದಂಡ ವಿಧಿಸಲಾಗುತ್ತಿದೆ. ಇವೆಲ್ಲ ಬೀಡಿ– ಸಿಗರೇಟ್‌ ಬಳಕೆಯನ್ನು ಕೆಲ ಮಟ್ಟಿಗಾದರೂ ಕಡಿಮೆ ಮಾಡಿವೆ. ತಂಬಾಕು ಉತ್ಪನ್ನಗಳನ್ನು ಉಪಯೋಗಿಸುವುದು ಆರೋಗ್ಯಕ್ಕೆ ಹಾನಿಕರ ಎಂಬುದನ್ನು ಜನರಿಗೆ ಮನವರಿಕೆ ಮಾಡಿಕೊಡುವುದು ಎಲ್ಲಕ್ಕಿಂತ ಬಹಳ ಮುಖ್ಯ. ಸಿಗರೇಟ್‌ ಪೊಟ್ಟಣದ ಮೇಲಿನ ಚಿತ್ರಗಳು ಧೂಮಪಾನದ ಅಪಾಯಗಳ ಬಗ್ಗೆ ವಿಶೇಷವಾಗಿ ಮಕ್ಕಳಲ್ಲಿ ಮತ್ತು ಅನಕ್ಷರಸ್ಥರಲ್ಲಿ ಹೆಚ್ಚಿನ ಅರಿವು ಮೂಡಿಸಬಲ್ಲವು ಎನ್ನುವುದೇನೋ ನಿಜ. ಆದರೆ ಇಷ್ಟೇ ಸಾಲದು. ಅವುಗಳ ಸೇವನೆಯಿಂದ ದೂರ ಇರಬೇಕು ಎನ್ನುವುದು ಮನಸ್ಸಿನ ಒಳಗಿನಿಂದಲೂ ಬರಬೇಕು. ಈ ವಿಷಯದಲ್ಲಿ ನಿರಂತರ ಜಾಗೃತಿ, ಪ್ರಚಾರ, ಅರಿವು, ಶಿಕ್ಷಣ ಹೆಚ್ಚು ಪರಿಣಾಮ ಬೀರಬಲ್ಲವು. ತಂಬಾಕು ಬಳಕೆಯಿಂದ ಆಗುವ ಸಾವುಗಳೂ ಹೆಚ್ಚುತ್ತಿವೆ. ಅದು ಒಂದು ಒಂದು ದೊಡ್ಡ ಆರೋಗ್ಯ ಸಮಸ್ಯೆಯಾಗಿ ಕಾಡುತ್ತಿದೆ. ತಂಬಾಕಿನ ಮೇಲಿನ ತೆರಿಗೆಯಿಂದ ಬರುವ ಆದಾಯಕ್ಕಿಂತ ಆರೋಗ್ಯ ರಕ್ಷಣೆಗೆ ಮಾಡಬೇಕಾಗುವ ವೆಚ್ಚ ಹಲವು ಪಟ್ಟು ಹೆಚ್ಚಿದೆ. ಅದು ಸರ್ಕಾರಗಳಿಗೂ ಗೊತ್ತು. ಆದ್ದರಿಂದ ಅವು ಈ ವಿಚಾರದಲ್ಲಿ ಒಂದು ಸ್ಪಷ್ಟ ಮತ್ತು ಸಮಗ್ರ ತೀರ್ಮಾನಕ್ಕೆ ಬರಬೇಕು. ಎಚ್ಚರಿಕೆಯ ಸಂದೇಶ ಮುದ್ರಣದ ಜಾಗ ಹೆಚ್ಚಿಸುವುದೊಂದೇ ಮದ್ದು ಎಂಬ ಧೋರಣೆ ಬಿಡಬೇಕು. ಸಿಗರೇಟ್‌ ಕಂಪನಿಗಳು ಸಹ ಲಾಭಕ್ಕಿಂತ ಸಾಮಾಜಿಕ ಜವಾಬ್ದಾರಿಯನ್ನು ಅರಿತುಕೊಳ್ಳಬೇಕು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry