7

ಅಂಬೇಡ್ಕರ್‌ಗೆ ಮಾಡಿದ ದ್ರೋಹ ಗೊತ್ತಾಗಬೇಕು: ಕೋಟಿಗಾನಹಳ್ಳಿ ರಾಮಯ್ಯ

Published:
Updated:
ಅಂಬೇಡ್ಕರ್‌ಗೆ ಮಾಡಿದ ದ್ರೋಹ ಗೊತ್ತಾಗಬೇಕು: ಕೋಟಿಗಾನಹಳ್ಳಿ ರಾಮಯ್ಯ

ಕೋಲಾರ: ‘ದೇಶವು ಅಂಬೇಡ್ಕರ್‌ಗೆ ಮಾಡಿರುವ ದ್ರೋಹ ಗೊತ್ತಾಗಬೇಕು. ಸ್ತ್ರೀವಾದಿಗಳ ದ್ರೋಹ ಅರ್ಥವಾಗದ ಹೊರತು ಹೋರಾಟ ನಿಜ ನೆಲೆಯ ಮೇಲೆ ಉಳಿಯಲು ಸಾಧ್ಯವಿಲ್ಲ’ ಎಂದು ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಹೇಳಿದರು.

ಸಮ್ಮೇಳನದಲ್ಲಿ ‘ಗಂಗೆ ಮತ್ತು ಮೀಡಿಯಾ ನಡುವೆ ಸ್ತ್ರೀವಾದ– ಅಂಬೇಡ್ಕರ್‌ ಕಂಡಂತೆ’ ಕುರಿತ ವಿಚಾರಗೋಷ್ಠಿಯಲ್ಲಿ ಮಾತನಾಡಿ, ಸಮಾಜದಲ್ಲಿ ಮಹಿಳೆಯನ್ನು ಸಂಕಷ್ಟದಿಂದ ಹೇಗೆ ಪಾರು ಮಾಡಬೇಕು ಎಂಬುದನ್ನು ಅಂಬೇಡ್ಕರ್ ಸಂವಿಧಾನದಲ್ಲಿ ತಿಳಿಸಿಕೊಟ್ಟಿದ್ದಾರೆ ಎಂದರು.

ಗಂಗೆಯ ಪುರಾಣ ಕಾಲಘಟ್ಟ ಈಗಿನ ಮಾಧ್ಯಮ ಜಗತ್ತಿನ ಕಾಲಘಟ್ಟ ಬೇರೆ ಬೇರೆ. ಅಂಬೇಡ್ಕರ್‌ರ ಕಾಲಘಟ್ಟ ಮತ್ತು ಈಗ ನೋಡುತ್ತಿರುವ ಕಾಲಘಟ್ಟ ಬೇರೆ. ಈಗಿನ ಕಾಲಕ್ಕೆ ಒಳಪಡಿಸಲಾಗದ ಭೌಗೋಳಿಕ ನೆಲೆಗೂ ಅಳವಡಿಸಲಾಗದ ವಿಷಯ ಮಾತನಾಡಲು ಇರುವ ಆತ್ಮವಿಶ್ವಾಸ ಅಂಬೇಡ್ಕರ್‌ರ ಬರಹಗಳಲ್ಲಿದೆ ಎಂದು ತಿಳಿಸಿದರು.

ಅಂಬೇಡ್ಕರ್‌ರ ಬರಹ ಎರಡು ದಡಗಳಿಗೆ ಒಳಪಡುತ್ತದೆ. ಭಾರತೀಯ ನೆಲೆಯಲ್ಲಿ ಗಂಗೆಯಿಂದ ಹಿಡಿದು, ಗರುಡ ಪುರಾಣ, ನ್ಯಾಯಿಕ ವಿಷಯಗಳನ್ನು ಓದಿರುವವರು ಅಂಬೇಡ್ಕರ್ ಒಬ್ಬರೆ. ಅವರು ವಿಮೋಚನಾ ಸಾಹಿತ್ಯ, ಧರ್ಮ ಶಾಸ್ತ್ರ, ವಿಧೇಯಕ ಅಧ್ಯಯನ ಮಾಡಿರುವುದರ ಜತೆಗೆ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಮಾರ್ಗದರ್ಶನ ತಿಳಿಸಿಕೊಟ್ಟಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಅಂಬೇಡ್ಕರ್ ಯಾವ ಕಮ್ಯೂನಿಸ್ಟ್ ಎಂದು ಮಹಾರಾಷ್ಟ್ರದವರು ಪ್ರಶ್ನಿಸುತ್ತಾರೆ. ಸ್ತ್ರೀಪರವಾಗಿ ಮಾತನಾಡಿದಾಗ ಅಂಬೇಡ್ಕರ್ ಏನೆಂದು ಅರ್ಥವಾಗುತ್ತದೆ. ಅವರು ಮಹಿಳೆಯರ ಮೇಲಿನ ದೌರ್ಜನ್ಯ ತಡೆಗೆ ಸಂವಿಧಾನದಲ್ಲಿ ಒತ್ತು ಕೊಟ್ಟಿದ್ದಾರೆ. ಇದರಿಂದ ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ಅವಕಾಶ ಪಡೆಯಲು ಸಾಧ್ಯವಾಗಿದೆ ಎಂದರು.

ಸವಾಲು ಮುಂದಿದೆ: ‘ಮಹಿಳಾ ಸಮುದಾಯವನ್ನು ಕಾಡುವ ಸಮಸ್ಯೆಗಳನ್ನು ಬೇರೆ ದೃಷ್ಟಿಕೋನದಲ್ಲಿ ನೋಡಿ ಪರಿಹಾರ ಕಂಡುಕೊಳ್ಳುವ ಸವಾಲು ಮುಂದಿದೆ’ ಎಂದು ಜನವಾದಿ ಮಹಿಳಾ ಸಂಘಟನೆ ರಾಜ್ಯ ಘಟಕದ ಉಪಾಧ್ಯಕ್ಷೆ ಕೆ.ನೀಲಾ ಹೇಳಿದರು.

ಜಾಗತೀಕರಣ, ಬಂಡವಾಳಶಾಹಿಗಳು ಹಾಗೂ ಧರ್ಮವು ದೋಸ್ತಿಯಾಗಿ ಸಮಾಜದಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡುತ್ತಿವೆ. ವಿರೋಧಿ ಮೌಲ್ಯಗಳಲ್ಲೇ ಸುಖಿಸುವ ರೀತಿಯಲ್ಲಿ ಮನಸ್ಥಿತಿಯನ್ನು ವ್ಯವಸ್ಥಿತವಾಗಿ ಬೆಳೆಸಲಾಗುತ್ತಿದೆ. ಸಂಬಂಧಗಳ ಒಳಗೆ ಯಜಮಾನಿಕೆ ನಡೆಯುತ್ತಿದೆ. ಹೀಗಾಗಿ ಜೀವನದ ಪ್ರತಿ ಹೆಜ್ಜೆಯನ್ನೂ ಮಹಿಳೆ ಎಚ್ಚರದಿಂದಲೇ ಇಡಬೇಕಾಗಿದೆ ಎಂದರು.

ಅಕ್ಷರ ಜಾತ್ರೆಗೆ ವಿದ್ಯುಕ್ತ ತೆರೆ

ಕೋಲಾರ:
ನಗರದಲ್ಲಿ ಎರಡು ದಿನಗಳಿಂದ ನಡೆಯುತ್ತಿದ್ದ ಅಕ್ಷರ ಜಾತ್ರೆಗೆ ಬುಧವಾರ ವಿದ್ಯುಕ್ತ ತೆರೆ ಬಿದ್ದಿತು.

ನುಡಿ ಹಬ್ಬದ ಅಂತಿಮ ದಿನ ವಿಚಾರಗೋಷ್ಠಿಗಳು, ಕವಿಗೋಷ್ಠಿ, ಸಮ್ಮೇಳನಾಧ್ಯಕ್ಷರ ಬದುಕು ಬರಹದ ಅವಲೋಕನ, ಸಮ್ಮೇಳನಾಧ್ಯಕ್ಷರ ಜತೆಗಿನ ಸಂವಾದದಲ್ಲಿ ಕನ್ನಡ ನಾಡು, ನುಡಿ, ಸರ್ಕಾರಿ ಶಾಲೆಗಳು, ಮಹಿಳಾ ಸಬಲೀಕರಣ, ಮಹಿಳಾ ಸಾಹಿತ್ಯ ಕುರಿತು ಚಿಂತನ ಮಂಥನ ನಡೆಯಿತು.

ಜಿಲ್ಲೆಯ ಮೂಲೆ ಮೂಲೆಯಿಂದ ಬಂದಿದ್ದ ಸಾಹಿತಿಗಳು ಹಾಗೂ ಸಾಹಿತ್ಯಾಸಕ್ತರು ಉತ್ಸಾಹದಿಂದ ಸಮ್ಮೇಳನದಲ್ಲಿ ಪಾಲ್ಗೊಂಡರು. ನಿರಂತರ ಸಾಂಸ್ಕೃತಿಕ ಮತ್ತು ಚಾರಿಟಬಲ್‌ ಟ್ರಸ್ಟ್‌ನ ಕಲಾವಿದರು ಕುವೆಂಪು ಕೃತಿಗಳನ್ನು ಆಧರಿಸಿದ ನೃತ್ಯ ರೂಪಕ ಪ್ರದರ್ಶಿಸಿದರು. ಸಂಜೆ ನಡೆದ ಸಂಗೀತ ಸಂಜೆಯು ಸಾಹಿತ್ಯಾಸಕ್ತರ ಮನಸೂರೆಗೊಂಡಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry