7
ಮೂರು ತಿಂಗಳಿನಿಂದ ವೇತನ ಇಲ್ಲದ ಗ್ರಾಮ ಪಂಚಾಯ್ತಿ ಸಿಬ್ಬಂದಿ

ನೀರು–ಸ್ವಚ್ಛತೆ ಸ್ಥಗಿತಗೊಳಿಸುವ ಎಚ್ಚರಿಕೆ

Published:
Updated:

ನ್ಯಾಮತಿ: ಗ್ರಾಮ ಪಂಚಾಯ್ತಿ ಸಿಬ್ಬಂದಿಗೆ ಮೂರು ತಿಂಗಳಿನಿಂದ ವೇತನ ಪಾವತಿಯಾಗಿಲ್ಲ, ಕೂಡಲೇ ವೇತನ ಪಾವತಿ ಮಾಡಬೇಕು. ತಪ್ಪಿದಲ್ಲಿ ಕೆಲಸ ಸ್ಥಗಿತಗೊಳಿಸಿ ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ಪತ್ರವನ್ನು ಬುಧವಾರ ಉಪಾಧ್ಯಕ್ಷೆ ಸುನಂದಮ್ಮ ಜೀರಿಗೆ ಅವರು ಪಿಡಿಒ ಜಿ.ಬಿ. ವಿಜಯಕುಮಾರ ಅವರಿಗೆ ಸಲ್ಲಿಸಿದರು.

ಮನವಿ ಸಲ್ಲಿಸಿದ ನಂತರ ಗಾರೆಕಟ್ಟೆ ರಾಜ ಮತ್ತು ಜಿ. ನಾಗರಾಜ ಮಾತನಾಡಿ, ‘ವೇತನ ಸಿಗದೇ ಇರುವುದರಿಂದ ಜೀವನ ನಿರ್ವಹಣೆ ಕಷ್ಟಕರವಾಗಿದೆ. ಈ ಬಗ್ಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಅಧ್ಯಕ್ಷೆ ಸುನೀತಾ ಸ್ಪಂದಿಸುತ್ತಿಲ್ಲ, ಕಚೇರಿಗೂ ಬರುತ್ತಿಲ್ಲ. ಹಣ ಪಾವತಿ ಚೆಕ್‌ಗೆ ಅಧ್ಯಕ್ಷರ ಸಹಿ ಬೇಕಾಗಿದೆ ಎಂದು ಉಪಾಧ್ಯಕ್ಷೆ ಸುನಂದಮ್ಮ ಮತ್ತು ಪಿಡಿಒ ವಿಜಯಕುಮಾರ ಹೇಳುತ್ತಾರೆ.

ಈ ಹಿಂದೆ ಪ್ರತಿಭಟನೆ ನಡೆಸಿ ಕಚೇರಿಗೆ ಬೀಗ ಜಡಿದಾಗ ಕೆಲ ಸದಸ್ಯರ ಭರವಸೆ ಮೇರೆಗೆ ಪ್ರತಿಭಟನೆ ಹಿಂಪಡೆದು ಸಹಕರಿಸಿದ್ದೆವು, ಆದರೆ ಈಗ ವೇತನ ಕೊಡುವ ತನಕ ಪ್ರತಿಭಟನೆ ಮುಂದುವರೆಸುತ್ತೇವೆ’ ಎಂದರು.

ಸದಸ್ಯ ಪಿ. ಚಂದ್ರಶೇಖರ ಮಾತನಾಡಿ, ‘ಸಾಮಾನ್ಯ ಸಭೆ ನಡೆಸದೆ ಸಿಬ್ಬಂದಿ ವೇತನ, ಸಾರ್ವಜನಿಕರ ಅರ್ಜಿ ವಿಲೇವಾರಿ ಮಾಡಲು ಸಾಧ್ಯವಿಲ್ಲ. ಅಧ್ಯಕ್ಷರಿಗೆ ಈ ಬಗ್ಗೆ ಹಲವಾರು ಬಾರಿ ಮನವಿ ಸಲ್ಲಿಸಿ ಸಮಸ್ಯೆಗಳನ್ನು ಪರಿಹರಿಸುವಂತೆ ತಿಳಿಸಿದರು ಉಪಯೋಗವಾಗಲಿಲ್ಲ. ತುರ್ತುಸಭೆ ಯಲ್ಲಿ ಅಧ್ಯಕ್ಷರ ಚಟುವಟಿಕೆಗಳ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ಗ್ರಾಮದಲ್ಲಿ ಸಾರ್ವಜನಿಕರಿಗೆ ಆಗುವ ತೊಂದರೆಗಳಿಗೆ ಅಧ್ಯಕ್ಷೆಯೇ ಹೊಣೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ಸುನಂದಮ್ಮ ಜೀರಿಗೆ, ಸದಸ್ಯರಾದ ಎ. ಪ್ರಸಾದ, ಗಿರೀಶ, ಸುನೀತಾ, ಗೀತಾ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry