ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸರ್ಕಾರಿ ಶಾಲೆಗಳ ಪುನಶ್ಚೇತನಕ್ಕೆ ಕಟಿಬದ್ಧರಾಗಿ’

Last Updated 21 ಡಿಸೆಂಬರ್ 2017, 8:26 IST
ಅಕ್ಷರ ಗಾತ್ರ

ರಿಪ್ಪನ್‌ಪೇಟೆ: ಸರ್ಕಾರಿ ಶಾಲೆಗಳನ್ನು ಮುಂದಿನ ತಲೆಮಾರಿಗೆ ಉಳಿಸಿ ಬೆಳೆಸುವ ಗುರುತರ ಜವಾಬ್ದಾರಿ ಸರ್ಕಾರಿ ಅಧಿಕಾರಿಗಳ ಮೇಲಿದೆ. ಸರ್ಕಾರಿ ಶಾಲೆಗಳ ರಕ್ಷಣೆ ವರ್ತಮಾನದ ಅಗತ್ಯ ಎಂದು ಶಿಕ್ಷಣ ಪ್ರೇಮಿ ಹಾಗೂ ವರ್ತಕ ಅನಂತಶಾಸ್ತ್ರಿ ಹೇಳಿದರು.

ಗ್ರಾಮ ಪಂಚಾಯ್ತಿ ಸಭಾಭವನದಲ್ಲಿ ಬುಧವಾರ ಸರ್ಕಾರಿ ಶಾಲೆಗಳ ಹಾಗೂ ಕಾಲೇಜುಗಳ ಹಿತ ರಕ್ಷಣಾ ಸಮಿತಿ ಆಯೋಜಿಸಿದ್ದ ಗ್ರಾಮ ಪಂಚಾಯ್ತಿ ಚುನಾಯಿತ ಸದಸ್ಯರು ಹಾಗೂ ಅಧಿಕಾರಿಗಳು ಮತ್ತು ಸಿಬ್ಬಂದಿವರ್ಗಕ್ಕೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.

ಸರ್ಕಾರಿ ಶಾಲೆಗಳ ಅವನತಿಗೆ ಸರ್ಕಾರಿ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ. ಅಧಿಕಾರಿ ವರ್ಗದವರು ಖಾಸಗಿ ಶಾಲೆಯ ವ್ಯಾಮೋಹ ಬಿಟ್ಟು, ತಮ್ಮ ಮಕ್ಕಳನ್ನು ಮೊದಲಿಗರಾಗಿ ಸರ್ಕಾರಿ ಶಾಲೆಗೆ ಸೇರಿಸಬೇಕು. ಇಲ್ಲಿಯೂ ಕೇಂದ್ರೀಯ ಪಠ್ಯಕ್ರಮಗಳ ಅಳವಡಿಕೆಗೂ ಕ್ರಮ ಕೈಗೊಳ್ಳಬೇಕು. ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣ ದೊರಕುವಂತಾಗಲಿ ಎಂದರು.

ಶಾಲಾ ಕಾಲೇಜುಗಳ ಹಿತ ರಕ್ಷಣಾ ಸಮಿತಿ ಅಧ್ಯಕ್ಷ ಕೆರೆಹಳ್ಳಿ ಪರಶುರಾಂ ಮಾತನಾಡಿ, ‘ಶಾಲೆಯೇ ಊರಿನ ದೇಗುಲ. ಮೊದಲು ನಮಗೆ ಅಕ್ಷರ ಅಭ್ಯಾಸ ಮಾಡಿಸಿದ ಶಾಲೆಯನ್ನು ಮರೆಯದಿರಿ’ ಎಂದು ಕಿವಿಮಾತು ಹೇಳಿದರು.

1919ರಲ್ಲಿ ಪ್ರಾರಂಭಗೊಂಡ ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆಯು ಶತಮಾನದ ಸಂಭ್ರಮದ ಅಂಚಿನಲ್ಲಿದ್ದರೂ ಹಕ್ಕುಪತ್ರ ದೊರಕದಿರುವುದು ಶೋಚನೀಯ. ಆ ನಿಟ್ಟಿನಲ್ಲಿ ಹಿತ ರಕ್ಷಣಾ ಸಮಿತಿಯ ಕೋರಿಕೆ ಮೇರೆಗೆ ಗ್ರಾಮ ಪಂಚಾಯ್ತಿಯು ಈಚೆಗೆ ನಡೆದ ಸಾಮಾನ್ಯ ಸಭೆಯಲ್ಲಿ ಹಕ್ಕುಪತ್ರ ನೀಡುವ ಕುರಿತು ಸರ್ವಾನುಮತದಿಂದ ನಿರ್ಣಯ ಕೈಗೊಂಡಿರುವುದು ಹೋರಾಟಕ್ಕೆ ಸಿಕ್ಕ ಮೊದಲ ಜಯ. ಪಂಚಾಯ್ತಿಯ ಸ್ಪಂದನೆಗೆ ಈ ಅಭಿನಂದನಾ ಕಾರ್ಯಕ್ರಮ ಅರ್ಥಪೂರ್ಣವಾಗಿದೆ ಪ್ರಶಂಶಿಸಿದರು.

ಸಭೆಯಲ್ಲಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಲಕ್ಷ್ಮಮ್ಮ ಲಕ್ಷ್ಮಣ್‌, ಉಪಾಧ್ಯಕ್ಷ ಕೃಷ್ಣೋಜಿರಾವ್‌, ಸದಸ್ಯರಾದ ಆರ್‌. ರಾಘವೇಂದ್ರ, ಆಸಿಫ್‌, ಶ್ರೀನಿವಾಸ್‌ ಆಚಾರ್‌, ಲೀಲಾ ಶಂಕರ್‌, ಮಲ್ಲಿಕಾರ್ಜುನ , ಮುಖಂಡ ಟಿ.ಆರ್‌. ಕೃಷ್ಣಪ್ಪ ಹಾಗೂ ಎಸ್‌ಡಿಎಂಸಿ ಅಧ್ಯಕ್ಷೆ ಧನಲಕ್ಷ್ಮಿ ಮಾತನಾಡಿದರು.

ಪ.ನಾ. ಜಗದೀಶ ಸ್ವಾಗತಿಸಿ, ನಿರೂಪಿಸಿದರು. ಬಿ.ಎಂ.ಮಹಮದ್‌ ಹನೀಫ್‌ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT