7
'ಅಭಿವೃದ್ಧಿ ರೆವಲ್ಯೂಷನ್‌ ಫೋರಂ'ನ ಅಧ್ಯಕ್ಷ ಕುಂದರನಹಳ್ಳಿ ರಮೇಶ್‌ ಸಲಹೆ

342 ಅಧ್ಯಯನ ಪೀಠ ಸ್ಥಾಪನೆಯಾಗಲಿ

Published:
Updated:
342 ಅಧ್ಯಯನ ಪೀಠ ಸ್ಥಾಪನೆಯಾಗಲಿ

ತುಮಕೂರು: ಮಾಹಿತಿ ಹಕ್ಕು ಕಾಯ್ದೆಯನ್ನು ಜನರು ಒಳ್ಳೆಯ ಕೆಲಸಗಳಿಗೆ ಬಳಸಿಕೊಳ್ಳುವುದನ್ನು ಬಿಟ್ಟು, ಅಧಿಕಾರಿಗಳನ್ನು ಬ್ಲಾಕ್‌ಮೇಲ್‌ ಮಾಡಲು ಬಳಸಿಕೊಳ್ಳುತ್ತಿದ್ದಾರೆ ಎಂದು 'ಅಭಿವೃದ್ಧಿ ರೆವಲ್ಯೂಷನ್‌ ಫೋರಂ'ನ ಅಧ್ಯಕ್ಷ ಕುಂದರನಹಳ್ಳಿ ರಮೇಶ್‌ ಹೇಳಿದರು.

ನಗರದಲ್ಲಿ ದಿ ಇನ್‌ಸ್ಟಿಟ್ಯೂಟ್‌ ಆಫ್‌ ಎಂಜಿನಿಯರ್ಸ್‌, ಅಭಿವೃದ್ಧಿ ರೆವಲ್ಯೂಷನ್ಸ್‌ ಫೋರಂ ಮತ್ತು ಸಾಸಾ ಸಂಸ್ಥೆಯ ಆಶ್ರಯದಲ್ಲಿ ಮಂಗಳವಾರ ನಡೆದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಕೇಂದ್ರ ಸರ್ಕಾರದ 2022ರ ವಿಷನ್‌ನಲ್ಲಿ ಬಡತನ ಮುಕ್ತ ಭಾರತ, ಭಯೋತ್ಪಾದಕತೆ ಮುಕ್ತ ಭಾರತ, ಲಂಚ ಮುಕ್ತ ಭಾರತ, ಕೋಮುವಾದ ಮುಕ್ತ ಭಾರತ ಮತ್ತು ಜಾತಿ ಮುಕ್ತ ಭಾರತ ಎನ್ನುವ ಘೋಷಣೆಯ ಮೂಲಕ ಹೊಸ ಭಾರತದ ಪರಿಕಲ್ಪನೆಯನ್ನು ಮುಂದಿಡಲಾಗಿದೆ. ರಾಜ್ಯ ಸರ್ಕಾರದ 2025ರ ವಿಷನ್‌ನಲ್ಲಿ ಕರ್ನಾಟಕ ರಾಜ್ಯವು ಕೃಷಿ, ಮೂಲಭೂತ ಸೌಕರ್ಯ, ಉದ್ಯೋಗ, ಸಾಮಾಜಿಕ ನ್ಯಾಯ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಅಭಿವೃದ್ಧಿ ಸಾಧಿಸುವ ಆಶಯವನ್ನು ಹೊಂದಿದೆ ಎಂದರು.

ಕೇಂದ್ರ ಸರ್ಕಾರದ 52 ಇಲಾಖೆಗಳು, ರಾಜ್ಯ ಸರ್ಕಾರದ 60, ರಾಜ್ಯದ 224 ವಿಧಾನ ಸಭಾ ಕ್ಷೇತ್ರಗಳು ಮತ್ತಿತರ ಮುಖ್ಯ ಕಚೇರಿಗಳ ಅಭಿವೃದ್ಧಿ ಅಧ್ಯಯನ ಮಾಡುವ ಉದ್ದೇಶದಿಂದ 342 ಅಭಿವೃದ್ಧಿ ಅಧ್ಯಯನ ಪೀಠ ರಚಿಸಲು ಸರ್ಕಾರಕ್ಕೆ ಸಲಹೆಯನ್ನು ನೀಡಲಾಗುವುದು. ಈ ರೀತಿಯಾಗಿ ಅಧ್ಯಯನ ಪೀಠಗಳು ಆರಂಭಗೊಂಡರೆ ಸರ್ಕಾರದ ಎಲ್ಲಾ ಇಲಾಖೆಗಳಲ್ಲಿ ಆಗಬೇಕಾದ ಅಭಿವೃದ್ಧಿ ಮತ್ತು ಅನುದಾನದ ಡೇಟಾದ ಖಚಿತ ಮಾಹಿತಿ ಪಡೆದುಕೊಳ್ಳಲು ಸಹಾಯವಾಗುತ್ತದೆ ಎಂದು ಹೇಳಿದರು.

ಪ್ರತಿಯೊಂದು ಪೀಠಗಳಲ್ಲಿಯೂ ತಲಾ 3 ಜನರಂತೆ ಅತ್ಯಂತ ಬಡವ ಬುದ್ದಿವಂತ ನಿರುದ್ಯೋಗಿಗಳನ್ನು ಗುರುತಿಸಿ ಸುಮಾರು 1,026 ಜನರಿಗೆ ಉದ್ಯೋಗ ನೀಡಲಾಗುವುದು. ರಾಜ್ಯದ 46 ವಿಶ್ವವಿದ್ಯಾಲಯಗಳಲ್ಲಿ ಅಥವಾ ಸಂಘಸಂಸ್ಥೆಗಳಲ್ಲಿ ಈ ಪೀಠಗಳ ಕಚೇರಿಗಳನ್ನು ತೆರೆಯಲು ಅವಕಾಶ ನೀಡುವಂತೆ ಒತ್ತಾಯಿಸಲಾಗುವುದು ಎಂದರು.

ದಿ ಇನ್‌ಸ್ಟಿಟ್ಯೂಟ್‌ ಆಫ್‌ ಎಂಜಿನಿಯರ್ಸ್‌ನ ತುಮಕೂರು ಘಟಕದ ಅಧ್ಯಕ್ಷ ಡಾ.ಡಿ.ಎಸ್‌.ಸುರೇಶ್‌ ಮಾತನಾಡಿ, ‘ಪ್ರತಿಯೊಬ್ಬರೂ ಕೂಡ ದೇಶದ ಅಭಿವೃದ್ಧಿ ಮತ್ತು ಯೋಜನೆ ಸಿದ್ಧಪಡಿಸುವಿಕೆಯಲ್ಲಿ ತಮ್ಮ ಕೊಡುಗೆಯನ್ನು ನೀಡಬಹುದು. ನಿಮಗೆ ತಿಳಿದಿರುವ ಉತ್ತಮ ಯೋಜನೆಗಳ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಕಳುಹಿಸಿದಾಗ, ಅದು ಉತ್ತಮವಾಗಿದ್ದರೆ ಖಂಡಿತವಾಗಿಯೂ ಸರ್ಕಾರದಿಂದ ಪ್ರತಿಕ್ರಿಯೆ ಬರುತ್ತದೆ. ಹೀಗಾಗಿ ಬುದ್ಧಿವಂತ ನಾಗರಿಕರು ದೇಶದ ಅಭಿವೃದ್ಧಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.

ಶೀಘ್ರದಲ್ಲಿ ಜಿ.ಎಸ್‌.ಪರಮಶಿವಯ್ಯ ಅಧ್ಯಯನ ಪೀಠ

ತುಮಕೂರು ವಿಶ್ವವಿದ್ಯಾಲಯ ಮತ್ತು ಅಭಿವೃದ್ಧಿ ರೆವಲ್ಯೂಷನ್‌ ಫೋರಂ ಸಹಭಾಗಿತ್ವದಲ್ಲಿ ಜಿ.ಎಸ್‌.ಪರಮಶಿವಯ್ಯ ಅಧ್ಯಯನ ಪೀಠಕ್ಕೆ ಪ್ರಸ್ತಾವ ಸಲ್ಲಿಸಲಾಗಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಈ ಪೀಠ ಕಾರ್ಯ ಆರಂಭ ಮಾಡಲಿದೆ ಎಂದು ಕುಂದರನಹಳ್ಳಿ ರಮೇಶ್‌ ಹೇಳಿದರು.

ಈ ಅಧ್ಯಯನ ಪೀಠವು ಕೇವಲ ಪ್ರಮಾಣ ಪತ್ರ ನೀಡುವ ನಿಟ್ಟಿನಲ್ಲಿ ಕೆಲಸ ಮಾಡದೆ, ಪೀಠದ ಉದ್ದೇಶ ಮತ್ತು ಗುರಿಯನ್ನು ಸಾಧಿಸುವ ನಿಟ್ಟಿನಲ್ಲಿ ಕೆಲಸ ಮಾಡಲಿದೆ ಎಂದು ಅವರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry