7
ತುಮಕೂರು ಮಹಾನಗರ ಪಾಲಿಕೆ ಸದಸ್ಯರ ತೀವ್ರ ಆಕ್ಷೇಪದ ಬಳಿಕ ಸಾಮಾನ್ಯ ಸಭೆಯಲ್ಲಿ ಆಯುಕ್ತರ ನಿರ್ಧಾರ

₹ 4.5 ಕೋಟಿ ಮೊತ್ತದ ’ವಾಲ್ವಮನ್‌ ಟೆಂಡರ್’ ರದ್ದು

Published:
Updated:
₹ 4.5 ಕೋಟಿ ಮೊತ್ತದ ’ವಾಲ್ವಮನ್‌ ಟೆಂಡರ್’ ರದ್ದು

ತುಮಕೂರು: ನಗರದ ನೀರು ನಿರ್ವಹಣೆಯ ವಾಲ್ವ್ ಮನ್‌ಗಳ ಹೊರಗುತ್ತಿಗೆಯ ₹ 4.5 ಕೋಟಿ ಮೊತ್ತದ ಟೆಂಡರನ್ನು ರದ್ದುಪಡಿಸುವ ತೀರ್ಮಾನವನ್ನು ಬುಧವಾರ ನಡೆದ ಮಹಾನಗರ ಪಾಲಿಕೆ ಸಾಮಾನ್ಯ ಸಭೆ ಕೈಗೊಂಡಿತು.

ಸಭೆ ಆರಂಭದಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯ ಎನ್.ಮಹೇಶ್, ‘ನಿಯಮಾವಳಿ ಪ್ರಕಾರ ‘₹ 50 ಲಕ್ಷ ಮೇಲ್ಪಟ್ಟ ಕಾಮಗಾರಿ ಟೆಂಡರ್ ಗೆ ಸಾಮಾನ್ಯ ಸಭೆ, ಮೇಯರ್ ಒಪ್ಪಿಗೆ ಪಡೆಯಬೇಕು. ಆದರೆ, ನಿಯಮ ಉಲ್ಲಂಘನೆ ಮಾಡಿ ₹ 145 ಲಕ್ಷ, ₹ 102 ಲಕ್ಷ, ₹ 108 ಲಕ್ಷ, ₹ 101 ಲಕ್ಷ ಹೀಗೆ ನಾಲ್ಕುವರೆ ಕೋಟಿ ಮೊತ್ತದ ಟೆಂಡರ್ ಕರೆಯಲಾಗಿದೆ. ಈ ಲೋಪಕ್ಕೆ ಯಾರು ಹೊಣೆ’? ಎಂದು ಪ್ರಶ್ನಿಸಿದರು.

ಸಾಮಾನ್ಯ ಸಭೆ ಗಮನಕ್ಕೂ ಬರುವುದಿಲ್ಲ. ಮೇಯರ್‌ ಅವರಿಗೂ ಗೊತ್ತಿಲ್ಲ ಎಂದರೆ ಹೇಗೆ? ಚುನಾಯಿತ ಪ್ರತಿನಿಧಿಗಳ ಅವಶ್ಯಕತೆ ಇಲ್ಲವೇ? ಸರ್ಕಾರದ ನೀತಿ ನಿಯಮ ಪಾಲಿಸುವುದು ಬೇಡವೇ? ಅಧಿಕಾರಿಗಳು ಏನು ಮಾಡಿದರೂ ನಡೆಯುತ್ತದೆಯೇ? ಎಂದು ಸದಸ್ಯರು ಪ್ರಶ್ನೆಗಳ ಸುರಿಮಳೆಗೈದರು.

ಎಂಜಿನಿಯರ್ ಉದಯಕುಮಾರ್ ಅವರು ’ಸ್ಥಾಯಿ ಸಮಿತಿ ಅಧ್ಯಕ್ಷರ ಒಪ್ಪಿಗೆ ಪಡೆಯಲಾಗಿದೆ ’ಎಂದು ಹೇಳಿದಾಗ, ’ಟೆಂಡರ್ ಕರೆಯುವ ನಿಯಮಾವಳಿ ಗೊತ್ತಿಲ್ಲವೇ? ಸ್ಥಾಯಿ ಸಮಿತಿ ಅಧ್ಯಕ್ಷರ ಅಧಿಕಾರ ವ್ಯಾಪ್ತಿ, ನಿಮ್ಮ ಅಧಿಕಾರ ವ್ಯಾಪ್ತಿ ಏನು ಎಂಬುದು ಗೊತ್ತಿಲ್ಲವೇ? ಎಂದು ಸದಸ್ಯರು ಕೇಳಿದರು. ಆಯುಕ್ತರು  ಹೇಗೆ ಟೆಂಡರ್ ಕಡತಕ್ಕೆ ಸಹಿ ಹಾಕಿದರು ಎಂದು ಪ್ರಶ್ನಿಸಿದರು.

ಆಯುಕ್ತ ಮಂಜುನಾಥಸ್ವಾಮಿ ಮಾತನಾಡಿ, ‘ಈ ವಿಷಯದಲ್ಲಿ ನನಗೂ ತಪ್ಪು ಮಾಹಿತಿ ನೀಡಿ ದಿಕ್ಕು ತಪ್ಪಿಸಲಾಗಿದೆ. ಸಂಬಂಧಪಟ್ಟ ಅಧಿಕಾರಿಗೆ ನೋಟಿಸ್ ನೀಡಿ ವಿವರಣೆ ಪಡೆಯಲಾಗುವುದು. ಬಳಿಕ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಉತ್ತರಿಸಿದರು.

‘ಕಡತಗಳಿಗೆ ನೀವು ಸಹಿ ಹಾಕುವಾಗ ಒತ್ತಕ್ಷರ ಸರಿ ಇಲ್ಲ. ಆ ಅಕ್ಷರ ಸರಿ ಇಲ್ಲ. ಈ ಪದ ಸರಿ ಇಲ್ಲ ಎಂದು ಹೇಳಿ ಕಡತ ವಾಪಸ್ ಕಳಿಸುತ್ತೀರಿ. ಇಷ್ಟೊಂದು ದೊಡ್ಡ ಮೊತ್ತದ ಟೆಂಡರ್‌ಗೆ ಹೇಗೆ ಸಹಿ ಹಾಕಿದ್ದು’ ಎಂದು ಸದಸ್ಯರು ಪ್ರಶ್ನಿಸಿದರು.

ವಿಶೇಷ ಅಧಿಕಾರದಡಿ ಟೆಂಡರ್ ರದ್ದುಪಡಿಸಲು ಮಹಾನಗರ ಪಾಲಿಕೆಗೆ ಅಧಿಕಾರವಿದೆ. ಅದನ್ನು ಬಳಸಿ ಟೆಂಡರ್ ರದ್ದುಪಡಿಸಲಾಗುವುದು ಎಂದು ಆಯುಕ್ತರ ತೀರ್ಮಾಣಕ್ಕೆ ಸಭೆ ಒಪ್ಪಿಗೆ ಸೂಚಿಸಿತು.

ಕಸ ಸಂಗ್ರಹಣೆ ಆಟೊ ಇಲ್ಲ: ಕಸ ಸಂಗ್ರಹಣೆಗೆ 75 ಮತ್ತು 12 ಎರಡು ಪ್ಯಾಕೇಜ್ ಆಟೊಗಳನ್ನು ಮನೆ ಮನೆಗಳಿಂದ ಕಸ ಸಂಗ್ರಹಣೆಗೆ ಬಳಸಿಕೊಳ್ಳಲಾಗುತ್ತದೆ ಎಂದು ಹೇಳಲಾಗುತ್ತಿದೆ. ಆದರೆ, ಬಹುತೇಕ ಆಟೋಗಳಿಗೆ ಹೆಲ್ಪರ್ ಇಲ್ಲ. ನಮ್ಮ ವಾರ್ಡಿನಲ್ಲಿ ಲಗೇಜ್ ಆಟೊಗಳನ್ನು ಕೊಡಲಾಗಿದೆ. ಸಹಾಯಕರನ್ನೂ ಕೊಟ್ಟಿಲ್ಲ. ಕೂಡಲೇ ಈ ವ್ಯವಸ್ಥೆ ಪಡಿಸಬೇಕು ಎಂದು ಸದಸ್ಯೆ ಎಚ್.ಬಿ.ಮಂಜುಳಾ ನಿರಂಜನ್ ಪ್ರಶ್ನಿಸಿದರು.

ಹೊಸದಾಗಿ ಆಟೊ ಟೆಂಡರ್ ಕರೆಯಲಾಗುತ್ತಿದೆ. ಅದರಲ್ಲಿ  ಸಹಾಯಕರು ಕಡ್ಡಾಯವಾಗಿ ಇರಬೇಕು ಎಂಬ ಅಂಶ ಸೇರ್ಪಡೆ ಮಾಡಲಾಗಿದೆ. ಜಿಲ್ಲಾಧಿಕಾರಿ ಅವರೂ ಒಪ್ಪಿಗೆ ಸೂಚಿಸಿದ್ದಾರೆ. ಶೀಘ್ರದಲ್ಲಿಯೇ ಟೆಂಡರ್ ಕರೆಯಲಾಗುತ್ತದೆ ಎಂದು ಅಧಿಕಾರಿಗಳು ಉತ್ತರಿಸಿದರು.

ನಗರದಲ್ಲಿ ಪ್ರಮುಖ ರಸ್ತೆ, ವೃತ್ತಗಳಲ್ಲಿ ಭಿತ್ತಿ ಫಲಕ ಅಳವಡಿಸಿದ್ದು, ಅವುಗಳಿಗೆ ಮಹಾನಗರ ಪಾಲಿಕೆ ಸಂಖ್ಯೆ ಹಾಕಬೇಕು(ನಂಬರಿಂಗ್). ಇವುಗಳನ್ನು ಆದಾಯ ಸಂಪನ್ಮೂಲವನ್ನಾಗಿಸಬೇಕು. ಆದರೆ, ಈ ಬಗ್ಗೆ ಈವರೆಗೂ ಪಾಲಿಕೆ ಗಮನಹರಿಸಿಲ್ಲ. ಅಧಿಕಾರಿಗಳಿದ್ದರೂ ಕಟ್ಟುನಿಟ್ಟಿನ ಕ್ರಮ ಕೈಗೊಂಡಿಲ್ಲ ಎಂದು ಸದಸ್ಯ ಕರುಣಾರಾಧ್ಯ ಹೇಳಿದರು.

ಮಹಾನಗರ ಪಾಲಿಕೆಯ 111 ಭಿತ್ತಿ ಫಲಕಗಳಿದ್ದು, 28 ಮಂದಿ ಪರವಾನಗಿ ಪಡೆದಿದ್ದಾರೆ. ಉಳಿದವರಿಗೆ ನೋಟಿಸ್ ನೀಡಲಾಗುತ್ತಿದೆ. ಆದಾಯ ಸಂಪನ್ಮೂಲಕ ಕ್ರೋಢೀಕರಣಕ್ಕೆ ಪ್ರಯತ್ನಿಸಲಾಗುತ್ತಿದೆ ಎಂದು ಅಧಿಕಾರಿಗಳು ಉತ್ತರಿಸಿದರು.

ಅಜಗೊಂಡನಹಳ್ಳಿಯಲ್ಲಿ ಕಸ ಬೇರ್ಪಡಿಸುವ ಯಂತ್ರ ಅಳವಡಿಕೆ ಮತ್ತು ನಿರ್ವಹಣೆಗೆ ಟೆಂಡರ್ ಕರೆದಿದ್ದು, ಹಿಂದಿನವರಿಗೆ ಟೆಂಡರ್ ಕೊಡಲಾಗಿದೆ. ಪುನಾ ಟೆಂಡರ್ ಕರೆಯಬೇಕು. ಹಿಂದಿನವರು ಸರಿಯಾಗಿ ನಿರ್ವಹಣೆ ಮಾಡಿಲ್ಲ ಎಂದು ಸದಸ್ಯೆ ಮಂಜುಳಾ ನಿರಂಜನ್ ಒತ್ತಾಯಿಸಿದರು.

ಮೇಯರ್ ಎಚ್.ರವಿಕುಮಾರ್ ಮಾತನಾಡಿ ‘ಎರಡು ಬಾರಿ ಟೆಂಡರ್ ಕರೆದರೂ ಬೇರೆ ಯಾರೂ ಬಂದಿಲ್ಲ. ಹೀಗಾಗಿ, ಸಾಧನಾ ಎನ್ವಿರೋ ಕಂಪೆನಿಯವರಿಗೆ ಟೆಂಡರ್ ಕೊಡಲಾಗಿದೆ. ಜಿಲ್ಲಾಧಿಕಾರಿಯವರೂ ಇದಕ್ಕೆ ಒಪ್ಪಿಗೆ ನೀಡಿದ್ದಾರೆ’ ಎಂದು ವಿವರಿಸಿದರು.

ಸಮರ್ಪಕವಾಗಿ ನಿರ್ವಹಣೆ ಮಾಡದೇ ಇರುವವರಿಗೆ ಮತ್ತೆ ಕೊಡುವುದು ಸರಿಯಲ್ಲ. ಇದಕ್ಕೆ ನನ್ನ ವಿರೋಧವಿದೆ ಎಂದು ಸದಸ್ಯೆ ಹೇಳಿದರು.

ಸದಸ್ಯ ನಯಾಜ್ ಅಹಮ್ಮದ್ ಮಾತನಾಡಿ, ‘ಪ್ರತಿ ದಿನ ನಗರದಲ್ಲಿ 120 ಟನ್ ಕಸ ಸಂಗ್ರಹವಾಗುತ್ತಿದೆ. ವಿಲೇವಾರಿ ಕಷ್ಟದ ಜೊತೆಗೆ ನಿರ್ವಹಣೆ ಸಮಸ್ಯೆ ಇದೆ. ಈಗಾಗಲೇ ಎರಡು ಬಾರಿ ಟೆಂಡರ್ ಕರೆಯುವುದಕ್ಕೆ 7–8 ತಿಂಗಳು ಕಳೆದಿದೆ. ಈಗ ಮತ್ತೆ ಟೆಂಡರ್ ಎಂದರೆ ಇನ್ನಷ್ಟು ವಿಳಂಬವಾಗುತ್ತದೆ. ಹೀಗಾಗಿ ಪುನಾ ಟೆಂಡರ್ ಬೇಡ. ಈಗಿರುವಂತೆ ಮುಂದುವರಿಸಬೇಕು ಎಂದಾಗ ಅನೇಕ ಸದಸ್ಯರು ಧ್ವನಿಗೂಡಿಸಿದರು.

35 ವಾರ್ಡ್‌ಗಳಲ್ಲಿ ಶುದ್ಧ ನೀರಿನ ಘಟಕ: ವೈಶ ಪವರ್ ರಿನಿವೇಬಲ್ ಎನರ್ಜಿ ಫಾರೆವರ್ ಸಂಸ್ಥೆಯಿಂದ ನಗರದ 35 ವಾರ್ಡ್‌ಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ಕುರಿತ ಮೇಯರ್ ರವಿಕುಮಾರ್ ಪ್ರಸ್ತಾವನೆ ಸಂಬಂಧ ಚರ್ಚೆ ನಡೆಯಿತು.

30ನೇ ವಾರ್ಡಿನ ರಸ್ತೆಗಳಲ್ಲಿ ಸಿ.ಸಿ. ಕ್ಯಾಮೆರಾ ಅಳವಡಿಸುವುದು, 33ನೇ ವಾರ್ಡಿನಲ್ಲಿ ಕೆಟ್ಟು ನಿಂತಿರುವ ಕೊಳವೆ ಬಾವಿ ದುರಸ್ತಿಪಡಿಸಿ ಪಂಪ್ ಅಳವಡಡಿಸಿ ನೀರು ಪೂರೈಕೆ ವ್ಯವಸ್ಥೆ ಮಾಡುವುದು, 34ನೇ ವಾರ್ಡಿನಲ್ಲಿ ಬೀದಿ ದೀಪ ಅಳವಡಿಸುವುದು, 35ನೇ ವಾರ್ಡ್ ವ್ಯಾಪ್ತಿಯ ದೇವರಾಯ ಪಟ್ಟಣದಲ್ಲಿ ವಾಸಿಸುವ ತಿಗಳ ಮತ್ತು ಎಸ್‌.ಸಿ ಮತ್ತು ಎಸ್.ಟಿ. ಸಮುದಾಯದ 150 ಕುಟುಂಬಗಳಿಗೆ ಆಶ್ರಯ ಯೋಜನೆಯಡಿ ಹಕ್ಕು ಪತ್ರ ವಿತರಣೆ ಸೇರಿ ಅನೇಕ ಪ್ರಸ್ತಾವನೆಗಳ ಬಗ್ಗೆ ಚರ್ಚೆ ನಡೆದು ಒಪ್ಪಿಗೆ ಪಡೆಯಲಾಯಿತು.

ಕೈಗಾರಿಕೆಗಳ ರಾಸಾಯನಿಕ: ಕಳವಳ

23ನೇ ವಾರ್ಡಿನಲ್ಲಿ ಕೈಗಾರಿಕಾ ಪ್ರದೇಶಗಳಲ್ಲಿನ ಕೈಗಾರಿಕೆಗಳು ಹೊರ ಸೂಸುವ ರಾಸಾಯನಿಕ ಹೊಗೆ, ಅಕ್ಕಿ ಗಿರಣಿಗಳ ಹೊಟ್ಟು ಆರೋಗ್ಯ ಸಮಸ್ಯೆ ಸೃಷ್ಟಿಸಿದೆ. ಈವರೆಗೂ ಕಟ್ಟುನಿಟ್ಟಿನ ಕ್ರಮ ಕೈಗೊಂಡಿಲ್ಲ. ಪಾಲಿಕೆ ಅಧಿಕಾರಿಗಳು ಬರೀ ಭೇಟಿ ನೀಡಿ ಹೇಳಿದರೆ ಸಾಲದು, ಕಾನೂನು ಕ್ರಮ ಜರುಗಿಸಬೇಕು. ಶಾಲೆಗಳೂ ಇವೆ. ಏನಾದರೂ ಅನಾಹುತ ಆದರೆ ಯಾರು ಹೊಣೆ ಎಂದು ಸದಸ್ಯ ಮರಿಗಂಗಯ್ಯ ಪ್ರಶ್ನಿಸಿದರು.

ಎಂಜಿನಿಯರ ಉದಯಕುಮಾರ್ ಮಾತನಾಡಿ, ‘ಭೇಟಿ ನೀಡಿ ಎಚ್ಚರಿಕೆ ನೀಡಲಾಗಿದೆ. ಕೈಗಾರಿಕಾ ವ್ಯಾಪ್ತಿ ಪ್ರದೇಶ ನಮ್ಮ ಅಧಿಕಾರ ವ್ಯಾಪ್ತಿಗೆ ಬರುವುದಿಲ್ಲ. ಬರೀ ಸೂಚನೆ ಕೊಡಬಹುದಷ್ಟೇ’ ಎಂದು ಉತ್ತರಿಸಿದರು.

ಸಾಮಾನ್ಯ ಸಭೆಯ ತೀರ್ಮಾನ ಕೈಗಾರಿಕೆಗಳ ವಿರುದ್ಧ ಕ್ರಮ ಜರುಗಿಸಲು ಮಾಲಿನ್ಯ ನಿಯಂತ್ರಣ ಮಂಡಳಿಗೆ ಪತ್ರ ಬರೆಯಿರಿ ಎಂದು ಮೇಯರ್ ರವಿಕುಮಾರ್ ಸೂಚಿಸಿದರು.

ಕಸಕ್ಕೆ ಬೆಂಕಿ ಬೇಡ

‘ಕಸದ ರಾಶಿಗೆ ಬೆಂಕಿ ಹಚ್ಚುವುದು, ಹಂದಿ, ಬಿಡಾಡಿ ದನ, ನಾಯಿಗಳ ನಿಯಂತ್ರಣ ಮಾಡಲು ಪಾಲಿಕೆಗೆ ಸಾಧ್ಯವಾಗಿಲ್ಲ. ಎಲ್ಲೊ ಒಂದೆರಡು ಕಡೆ ನಾಯಿ ಹಿಡಿದಿದ್ದು ಬಿಟ್ಟರೆ ಬೇರೆ ವಾರ್ಡುಗಳಲ್ಲಿ ಆಗಿಲ್ಲ. ಪೌರ ಕಾರ್ಮಿಕರೇ ಕಸದ ರಾಶಿಗೆ ಬೆಂಕಿ ಹಚ್ಚುತ್ತಿದ್ದಾರೆ. ಯಾರಾದರೂ ಗಮನಿಸುತ್ತಿದ್ದೀರಾ? ಎಂದು ಸದಸ್ಯ ಟಿ.ಆರ್.ನಾಗರಜ್ ಪ್ರಶ್ನಿಸಿದರು.

ಆರೋಗ್ಯ ಸ್ಥಾಯಿ ಸಮಿತಿ ಸದಸ್ಯ ನಯಾಜ್ ಅಹಮ್ಮದ್ ಮಾತನಾಡಿ, ‘ಬೀದಿ ನಾಯಿಗಳನ್ನು ಹಿಡಿಯಲಾಗುತ್ತಿದೆ. ಕಸ ವಿಲೇವಾರಿಗೆ ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದು ಪ್ರತಿಕ್ರಿಯಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry