7
X

'ಪ್ರಜಾವಾಣಿ'ಯ ಜಾಲತಾಣವನ್ನು ಹೆಚ್ಚು ಓದುಗ ಸ್ನೇಹಿಯಾಗಿಸುವ ಉದ್ದೇಶದಿಂದ ಹೊಸ ವಿನ್ಯಾಸವನ್ನು ರೂಪಿಸಲಾಗಿದೆ.
ಈ ವಿನ್ಯಾಸದ ಕುರಿತ ನಿಮ್ಮ ಅಭಿಪ್ರಾಯಗಳನ್ನು ಇಲ್ಲಿರುವ ಲಿಂಕ್ ಕ್ಲಿಕ್ಕಿಸುವ ಮೂಲಕ ನಮಗೆ ತಿಳಿಸಬಹುದು

webfeedback@prajavani.co.in
ಬಿಜೆಪಿ ಕಾರ್ಯಕರ್ತರಿಂದ ಉಪವಿಭಾಗಾಧಿಕಾರಿ ಕಚೇರಿ ಎದುರು ಪ್ರತಿಭಟನೆ

ಅಮಾಯಕರ ಬಿಡುಗಡೆಗೆ ಒತ್ತಾಯ

Published:
Updated:
ಅಮಾಯಕರ ಬಿಡುಗಡೆಗೆ ಒತ್ತಾಯ

ಶಿರಸಿ: ಜಿಲ್ಲೆಯಲ್ಲಿ ಪೊಲೀಸರಿಂದ ದೌರ್ಜನ್ಯ ನಡೆಯುತ್ತಿದೆ ಮತ್ತು ಅಮಾಯಕರನ್ನು ಬಂಧಿಸಲಾಗುತ್ತಿದೆ ಎಂದು ಆರೋಪಿಸಿ ಬಿಜೆಪಿ ಹಾಗೂ ವಿವಿಧ ಸಂಘಟನೆಗಳ ಕಾರ್ಯಕರ್ತರು ಬುಧವಾರ ಇಲ್ಲಿನ ಉಪವಿಭಾಗಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ‘ಪೊಲೀಸರು ಹಗಲು ರಾತ್ರಿಯೆನ್ನದೇ ಅಮಾಯಕರನ್ನು ಹಿಡಿದುಕೊಂಡು ಬಂದು ವಿಚಾರಣೆ ನಡೆಸುತ್ತಿದ್ದಾರೆ. ಇದರ ಬಗ್ಗೆ ಇಷ್ಟೆಲ್ಲ ಕ್ರಮವಹಿಸುವ ಪೊಲೀಸರು ತಮ್ಮ ಶಕ್ತಿಯನ್ನು ತೋರಿಸಿ ಪರೇಶ್ ಮೇಸ್ತ ಸಾವಿಗೆ ಕಾರಣರಾದವರನ್ನು ಯಾಕೆ ಬಂಧಿಸಿಲ್ಲ. ಮೂಲ ಸಮಸ್ಯೆಗೆ ಪರಿಹಾರ ಕಂಡುಹಿಡಿಯದೇ ಇಲ್ಲದ ಅಶಾಂತಿ ನಿರ್ಮಾಣ ಮಾಡಲು ರಾಜ್ಯದ ಕಾಂಗ್ರೆಸ್‌ ಸರ್ಕಾರ ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿದೆ’ ಎಂದು ಅವರು ಆರೋಪಿಸಿದರು.

‘20 ಜನ ಹಿಂದೂಗಳ ಸಾವು ನಡೆದಿದೆ. ಅವರ ಸಾವಿನ ತನಿಖೆ, ಅಪರಾಧಿಗಳ ಬಂಧನ ಆಗುತ್ತಿಲ್ಲ. ನ್ಯಾಯಕ್ಕಾಗಿ ಹೋರಾಡುವವರನ್ನು ಬಂಧಿಸುವ ಕೆಲಸ ಆಗುತ್ತಿದೆ. ಸರ್ಕಾರ ಹಿಂಬಾಗಿಲಿನಿಂದ ಅಧಿಕಾರಿಗಳನ್ನು ಬಳಸಿಕೊಂಡು ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿದೆ. ರಾಷ್ಟ್ರದ್ರೋಹಿ ಸಂಘಟನೆಗಳ ಮೇಲೆ ಹಾಕಿರುವ ಪ್ರಕರಣ ವಾಪಸ್ ತೆಗೆದುಕೊಳ್ಳಲು ಮುಖ್ಯಮಂತ್ರಿಗೆ ನಾಚಿಕೆ ಯಾಗುವುದಿಲ್ಲವೇ ? ಮುಖ್ಯಮಂತ್ರಿಯ ದುರಹಂಕಾರದ ನಡವಳಿಕೆಯೇ ಪ್ರಸ್ತುತ ಸಮಸ್ಯೆಗಳಿಗೆ ಕಾರಣವಾಗಿದೆ. ಸರ್ಕಾರ ಸೇಡಿನ ರಾಜಕಾರಣ ಮಾಡಿ, ಜನರನ್ನು ಕೆರಳಿಸಿದರೆ ಇಡೀ ರಾಜ್ಯದಲ್ಲಿ ಇನ್ನಷ್ಟು ಉಗ್ರ ಹೋರಾಟ ಮಾಡಬೇಕಾಗುತ್ತದೆ’ ಎಂದು ಹೇಳಿದರು.

ನಮಗೆ ಪೊಲೀಸರ ಭಯ: ಶ್ಯಾಮಲಾ ಮಾತನಾಡಿ, ‘ನಮ್ಮ ಮನೆಗೆ ನಡುರಾತ್ರಿ ಬಂದಿದ್ದ ಪೊಲೀಸರು ಎರಡು ತಾಸು ಮನೆಯ ಬಾಗಿಲಿಗೆ ಒದ್ದು ಬಾಗಿಲು ತೆಗೆಯುವಂತೆ ಪೀಡಿಸಿದ್ದಾರೆ. ಇದರಿಂದ ಬಾಗಿಲು ಬಿರುಕು ಬಿಟ್ಟಿದೆ. ನನ್ನ ಪತಿ ಪ್ರತಿಭಟನೆಗೆ ಹೋಗಿದ್ದ ನಿಜ. ಆದರೆ ಅವರು ತಪ್ಪು ಮಾಡಿಲ್ಲ. ಪೊಲೀಸರ ಕಾಟದಿಂದ ನಾವು ಭಯಗೊಂಡಿದ್ದೇವೆ’ ಎಂದು ಬಿಕ್ಕುತ್ತ ಹೇಳಿದರು.

ಉಪವಿಭಾಗಾಧಿಕಾರಿ ಕೆ. ರಾಜು ಮೊಗವೀರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು. ಶಿರಸಿಯಲ್ಲಿ ನಡೆದ ಗಲಭೆ ಸಂಬಂಧ ಅಮಾಯಕರು, ವಿದ್ಯಾರ್ಥಿಗಳು, ಕೂಲಿ ಕೆಲಸಕ್ಕೆ ಬಂದವರ ಮೇಲೆ ಐಪಿಸಿ ಸೆಕ್ಷನ್ 307ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ನಗರ ಶಾಂತಗೊಂಡಿದ್ದರೂ, ಪೊಲೀಸರು ಅಮಾಯಕ ತಾಯಂದಿರು, ಮಹಿಳೆಯರನ್ನು ಬೆದರಿಸಿ ಯುವಕರನ್ನು ಬಂಧಿಸುವ ಕಾರ್ಯ ನಡೆಸುತ್ತಿದ್ದಾರೆ. ಪೊಲೀಸ್ ದೌರ್ಜನ್ಯ ತಕ್ಷಣ ನಿಲ್ಲಬೇಕು. ಅಮಾಯಕರ ಮೇಲೆ ದಾಖಲಿಸಿರುವ ಪ್ರಕರಣ ವಾಪಸ್ ಪಡೆಯಬೇಕು ಎಂದು ಮನವಿಯಲ್ಲಿ ವಿನಂತಿಸಲಾಗಿದೆ.

ವಿಶ್ವಹಿಂದೂ ಪರಿಷತ್ ಜಿಲ್ಲಾ ಕಾರ್ಯದರ್ಶಿ ಮಂಜುನಾಥ ಅರೆಕಟ್ಟಾ, ಆರ್‌ಎಸ್‌ಎಸ್ ಪ್ರಮುಖ ಸೀತಾರಾಮ ಭಟ್ಟ, ಬಿಜೆಪಿ ಪ್ರಮುಖರಾದ ಚಂದ್ರು ದೇವಾಡಿಗ, ಗಣಪತಿ ನಾಯ್ಕ, ಆರ್‌.ವಿ. ಹೆಗಡೆ, ರೇಖಾ ಹೆಗಡೆ, ವೀಣಾ ಭಟ್ಟ, ಸುವರ್ಣಾ ಸಜ್ಜನ, ಪ್ರಭಾವತಿ ಗೌಡ, ನಂದನ ಸಾಗರ ಇದ್ದರು.

*

ಮರ್ಯಾದೆಯಿಂದ ಬದುಕು ವವರನ್ನು ಸುಖಾಸುಮ್ಮನೆ ಬಂಧಿಸಿ ಒಳಗೆ ಹಾಕಬೇಡಿ. ತಪ್ಪಿತಸ್ಥರಿಗೆ ಶಿಕ್ಷೆ ನೀಡಿ, ಆದರೆ ಅಮಾಯಕರಿಗೆ ತೊಂದರೆ ಕೊಡಬೇಡಿ.

–ಜ್ಯೋತಿ ಬೈಂದೂರ,

ವಿಚಾರಣೆ ನಡೆಸಿದ ಯುವಕನ ತಾಯಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry