7

ಮಾತೃಭಾಷೆ ಉಳಿದರೆ ಮಾತ್ರ ಸಂಸ್ಕೃತಿಯ ಉಳಿವು ಸಾಧ್ಯ

Published:
Updated:
ಮಾತೃಭಾಷೆ ಉಳಿದರೆ ಮಾತ್ರ ಸಂಸ್ಕೃತಿಯ ಉಳಿವು ಸಾಧ್ಯ

ಗುರುಮಠಕಲ್: ‘ಯಾವುದೇ ಸಂಸ್ಕೃತಿ ಮುಂದಿನ ತಲೆಮಾರಿಗೆ ಮುಂದುವರಿ ಯಬೇಕಾದರೆ ಆ ಸಂಸ್ಕೃತಿಯ ಮಾತೃ ಭಾಷೆ ಸೇತುವೆ ಇದ್ದಂತೆ. ಮಾತೃ ಭಾಷೆಯನ್ನು ಮರೆತರೆ ಅಲ್ಲಿನ ಮೂಲ ಸಂಸ್ಕೃತಿಯೂ ನಾಶವಾಗುತ್ತದೆ’ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಉತ್ತರ ಕರ್ನಾಟಕ ಅಧ್ಯಕ್ಷ ಶರಣು ಗದ್ದುಗೆ ಅಭಿಪ್ರಾಯಪಟ್ಟರು.

ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ಮಂಗಳವಾರ ಚರಬಸವೇಶ್ವರ ಸಂಗೀತ ಸೇವಾ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಗಡಿಕನ್ನಡೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕನ್ನಡ ನಾಡಿನ ಸಂಸ್ಕೃತಿಯ ಶ್ರೇಷ್ಠತೆಯನ್ನು ಮುಂದಿನ ತಲೆಮಾರಿಗೆ ಉಳಿಸಬೇಕಾದರೆ ಕನ್ನಡ ಭಾಷೆಯನ್ನೂ ಮುಂದುವರಿಸಬೇಕಿದೆ. ಹೈದರಾಬಾದ್ ಕರ್ನಾಟಕವು ಭಾಷಾವಾರು, ಶೈಕ್ಷಣಿಕವಾಗಿ, ಔದ್ಯೋಗಿಕವಾಗಿ ಹಿಂದುಳಿದ ಪ್ರದೇಶವಾಗಿದೆ. ಇಲ್ಲಿನ ಮಕ್ಕಳ ಮುಂದಿನ ಭವಿಷ್ಯವನ್ನು ರೂಪಿಸಲು ಸರ್ಕಾರದ ಮಟ್ಟದಿಂದ ಇನ್ನೂ ಹಲವಾರು ಕಾರ್ಯಕ್ರಮಗಳು ಆಯೋಜಿಸಬೇಕಿದೆ’ ಎಂದರು.

ಮುಖಂಡ ಸಾಯಿಬಣ್ಣ ಬೋರಬಂಡ ಮಾತನಾಡಿ, ‘ಗುರುಮಠ ಕಲ್ ತಾಲ್ಲೂಕು ರಚನೆ ವಿಷಯದಲ್ಲಿ ಸರ್ಕಾರವು ರಾಜಕೀಯ ಹಿತಾಸಕ್ತಿಗೆ ಹೆಚ್ಚಿನ ಒತ್ತು ನೀಡುತ್ತಿದೆ. ಯಾದಗಿರಿ ತಾಲ್ಲೂಕಿನ 101 ಗ್ರಾಮಗಳು, ಸೇಡಂ ತಾಲ್ಲೂಕಿನ 36 ಗ್ರಾಮಗಳು ಹಾಗೂ ಗುರುಮಠಕಲ್ ಪಟ್ಟಣ ಸೇರಿದಂತೆ ಒಟ್ಟು 138 ಗ್ರಾಮಗಳ ತಾಲ್ಲೂಕು ಆಗಬೇಕಿದ್ದ ಗುರುಮಠಕಲ್ ತಾಲ್ಲೂಕನ್ನು 58 ಹಳ್ಳಿಗಳಿಗೆ ಕಿರಿದಾಗಿಸುವ ಮೂಲಕ ರಾಜಕೀಯ ಮಾಡುತ್ತಿದೆ’ ಎಂದು ಆರೋಪಿಸಿದರು.

‘ತಾಲ್ಲೂಕು ರಚನೆಯ ವಿಷಯದಲ್ಲಿ ಯಾವುದೇ ರಾಜಿಯಿಲ್ಲದೆ, ಹೋರಾಟ ನಡೆಸಲಾಗುವುದು. ನಮ್ಮ ತಾಲ್ಲೂಕು ವ್ಯಾಪ್ತಿಯನ್ನು 138 ಹಳ್ಳಿಗಳಾಗೆ ವಿಸ್ತರಿಸುವ ಮೂಲಕ ಗುರುಮಠಕಲ್‌ಗೆ ಆಗಲಿರುವ ಅನ್ಯಾಯವನ್ನು ಸರಿಪಡಿಸಬೇಕು. ಇದಕ್ಕಾಗಿ ಎಲ್ಲರೂ ಒಗ್ಗಟ್ಟಿನಿಂದ ಹೋರಾಟ ಮಾಡೋಣ’ ಎಂದು ಕರೆ ನೀಡಿದರು.

ಖಾಸಾಮಠದ ಶ್ರೀ ಸಾನ್ನಿಧ್ಯ ವಹಿಸಿದ್ದರು. ಚಿತ್ರನಟಿ ದಿಶಾ ಪೂವಯ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು, ನರಸರೆಡ್ಡಿ ಪಾಟೀಲ್ ಗಡ್ಡೆಸೂಗುರು, ಶಿವಕುಮಾರ ಕಡೇಚೂರು, ಶರಣು ಆವಂಟಿ, ವೀರಣ್ಣ ಬೇಲಿ, ಸಿದ್ದಲಿಮಗರೆಡ್ಡಿ ಕಂದಕೂರು, ಬಸವರೆಡ್ಡಿ ಎಂಟಿಪಲ್ಲಿ ಇದ್ದರು.

ನರೇಂದ್ರಗೋಗ್ಲೆ ನಿರ್ವಹಿಸಿದರು. ನಾಗೇಶ ಸ್ವಾಗತಿಸಿ, ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry